ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಈ ಹೊಸ ನಿಯಮವು ಜುಲೈ 1, 2022ರಿಂದ ಜಾರಿಗೆ ಬರಲಿದೆ. ಇದು ಗ್ರಾಹಕರಿಗೆ ಸಿಹಿ ವಿಚಾರವೇ, ಕಹಿ ವಿಚಾರವಾಗಲಿದೆಯೇ ಎಂದು ತಿಳಿಯೋಣ ಬನ್ನಿ...
ಈ ನಿಯಮ ಬದಲಾವಣೆಯ ಪ್ರಮುಖ ಉದ್ದೇಶವೇನೆಂದರೆ, ಕಾರ್ಡ್‌ನ ಬಳಕೆಯನ್ನು ಇನ್ನಷ್ಟು ಪ್ರಯೋಜನಕಾರಿಯನ್ನಾಗಿ ಮಾಡುವುದು ಆಗಿದೆ. ಆರ್‌ಬಿಐ ನಿರ್ದೇಶನಗಳ ಅಡಿಯಲ್ಲಿ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಬಂಧನೆಗಳು ಬ್ಯಾಂಕ್‌ಗಳಿಗೆ (ಪೇಮೆಂಟ್ ಬ್ಯಾಂಕ್‌ಗಳು, ರಾಜ್ಯ ಸಹಕಾರ ಬ್ಯಾಂಕ್‌ಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳನ್ನು ಹೊರತುಪಡಿಸಿ) ಮತ್ತು ಎಲ್ಲಾ ಬ್ಯಾಂಕಿಂಗ್ ಅಲ್ಲದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಣಕಾಸು ಕಂಪನಿಗಳಿಗೆ ಸಂಬಂಧಿಸಿದೆ.
ಹೊಸ ಕ್ರೆಡಿಟ್ ಕಾರ್ಡ್ ನಿಯಮವು ಈಗ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ವಿತರಿಸುವ ಬ್ಯಾಂಕ್‌ಗಳು ಗ್ರಾಹಕರೊಂದಿಗೆ ತಮಗೆ ಇಷ್ಟ ಬಂದಂತೆ ವರ್ತಿಸಲು ಅವಕಾಶ ನೀಡಲ್ಲ. ಹೊಸ ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆಗೆ ಸಂಬಂಧಿಸಿದಂತೆ ನಾವು ನಿಮಗೆ 10 ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಿದ್ದೇವೆ ಮುಂದೆ ಓದಿ...
ಒಪ್ಪಿಗೆ ಇಲ್ಲದೆ ಕ್ರೆಡಿಟ್ ಕಾರ್ಡ್ ವಿತರಣೆಗೆ ಬ್ರೇಕ್
1. ಹೊಸ ನಿಯಮಗಳ ಪ್ರಕಾರ, ಒಪ್ಪಿಗೆಯಿಲ್ಲದೆ ಕಾರ್ಡ್‌ಗಳ ವಿತರಣೆ ಅಥವಾ ಅಪ್‌ಡೇಟ್ ಮಾಡಲು ಅವಕಾಶವಿಲ್ಲ. ಸಮ್ಮತಿಯಿಲ್ಲದೆ ಕಾರ್ಡ್ ನೀಡಿದರೆ ಅಥವಾ ಸ್ವೀಕರಿಸುವವರ ಅನುಮೋದನೆಯಿಲ್ಲದೆ ಅಸ್ತಿತ್ವದಲ್ಲಿರುವ ಕಾರ್ಡ್ ಅನ್ನು ಅಪ್‌ಗ್ರೇಡ್ ಮಾಡಿ ಮತ್ತು ಸಕ್ರಿಯಗೊಳಿಸಿದರೆ, ಅದಕ್ಕೆ ಬಿಲ್ ಮಾಡಿದ್ದರೆ, ಕಾರ್ಡ್ ನೀಡುವವರು ಹಣವನ್ನು ಮರುಪಾವತಿ ಮಾಡುವುದು ಮಾತ್ರವಲ್ಲದೇ ಕಾರ್ಡ್ ಸ್ವೀಕರಿಸುವವರು ಕೂಡಾ ಯಾವುದೇ ವಿಳಂಬವಿಲ್ಲದೆ ಮರುಪಾವತಿ ಮಾಡಬೇಕಾಗುತ್ತದೆ. ಇನ್ನು ಒಪ್ಪಿಗೆಯಿಲ್ಲದೆ ಕಾರ್ಡ್ ಅಪ್‌ಗ್ರೇಡ್ ಮಾಡಿದವರು, ಮರುಪಾವತಿ ಮಾಡಿದ ಶುಲ್ಕದ ಎರಡು ಪಟ್ಟು ದಂಡವನ್ನು ಸಹ ಪಾವತಿಸಬೇಕಾಗುತ್ತದೆ.
2. ಯಾರ ಹೆಸರಿನಲ್ಲಿ ಕಾರ್ಡ್ ನೀಡಲಾಗಿದೆಯೋ ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಒಂಬುಡ್ಸ್‌ಮನ್ ಅನ್ನು ಸಹ ಸಂಪರ್ಕಿಸಬಹುದು. ಯೋಜನೆಯ ನಿಬಂಧನೆಗಳ ಪ್ರಕಾರ ದಂಡದ ಮೊತ್ತವನ್ನು ಒಂಬುಡ್ಸ್‌ಮನ್ ನಿರ್ಧರಿಸುತ್ತಾರೆ.
ಲಿಖಿತ ಒಪ್ಪಿಗೆ ಕಡ್ಡಾಯ: ಕಾರ್ಡ್ ದುರುಪಯೋಗಕ್ಕೆ ಯಾರು ಹೊಣೆ
3. ನೀಡಿದ ಕಾರ್ಡ್ ಅಥವಾ ಕಾರ್ಡ್‌ನೊಂದಿಗೆ ನೀಡಲಾಗುವ ಇತರ ವಸ್ತುಗಳು/ಸೇವೆಗಳಿಗೆ ಗ್ರಾಹಕರ ಲಿಖಿತ ಒಪ್ಪಿಗೆಯ ಅಗತ್ಯವಿದೆ. ಕಾರ್ಡ್-ವಿತರಕರು ಗ್ರಾಹಕರ ಒಪ್ಪಿಗೆಗಾಗಿ ಕೆಲವು ದೃಢೀಕರಣ ವಿಧಾನ ಪಾಲಿಸಬೇಕು ಹಾಗೂ ಡಿಜಿಟಲ್ ಮೋಡ್‌ಗಳನ್ನು ಬಳಸಬಹುದು.
4. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನೀಡಲಾದ ಕಾರ್ಡ್ ಅವರಿಗೆ ತಲುಪದೆ ದುರ್ಬಳಕೆಯಾದ ಪ್ರಕರಣಗಳಿವೆ. ಸಮ್ಮತಿಯಿಲ್ಲದೆ ಅಂತಹ ಕಾರ್ಡ್‌ಗಳ ದುರುಪಯೋಗದಿಂದ ಉಂಟಾದಾಗ ನಷ್ಟವನ್ನು ಕಾರ್ಡ್ ನೀಡುವವರು ತುಂಬಬೇಕಾಗುತ್ತದೆ. ಇದು ಅವರ ಜವಾಬ್ದಾರಿಯಾಗಿದೆ. ಯಾರ ಹೆಸರಿನಲ್ಲಿ ಕಾರ್ಡ್ ನೀಡಲಾಗಿದೆಯೋ ಅವರು ಅದಕ್ಕೆ ಜವಾಬ್ದಾರರಾಗಿರುವುದಿಲ್ಲ.
ಕಾರ್ಡ್ ತಿರಸ್ಕರಿಸಿದರೆ ಲಿಖಿತ ಕಾರಣ
5. ವಿತರಿಸಿದ ದಿನಾಂಕದಿಂದ 30 ದಿನಗಳಿಗಿಂತ ಹೆಚ್ಚು ಕಾಲ ಗ್ರಾಹಕರು ಕಾರ್ಡ್ ಅನ್ನು ಸಕ್ರಿಯಗೊಳಿಸದಿದ್ದರೆ, ಕಾರ್ಡ್-ವಿತರಕರು ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಕಾರ್ಡ್ ಹೋಲ್ಡರ್‌ನಿಂದ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಆಧಾರಿತ ಒಪ್ಪಿಗೆಯನ್ನು ಪಡೆಯುತ್ತಾರೆ. ಕಾರ್ಡ್ ಅನ್ನು ಸಕ್ರಿಯಗೊಳಿಸಲು ಯಾವುದೇ ಸಮ್ಮತಿ ಇಲ್ಲವಾದರೆ ಸ್ವೀಕರಿಸಿದ ದಿನಾಂಕದಿಂದ ಏಳು ವರ್ಕಿಂಗ್ ಡೇಯಲ್ಲಿ ಯಾವುದೇ ವೆಚ್ಚವಿಲ್ಲದೆ ಕಾರ್ಡ್ ನೀಡುವವರು ಕ್ರೆಡಿಟ್ ಕಾರ್ಡ್ ಖಾತೆಯನ್ನು ಮುಚ್ಚಬೇಕಾಗುತ್ತದೆ.
6. ಕಾರ್ಡ್-ವಿತರಕರು ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್‌ನೊಂದಿಗೆ ಒಂದು ಹೇಳಿಕೆಯನ್ನು ಕೂಡಾ ನೀಡಬೇಕಾಗುತ್ತದೆ. ಇದರಲ್ಲಿ ಬಡ್ಡಿ ದರ, ಶುಲ್ಕಗಳು ಮತ್ತು ಇತರ ಮಾಹಿತಿಯಂತಹ ಪ್ರಮುಖ ವಿಚಾರಗಳು ಇರಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಅರ್ಜಿಯನ್ನು ತಿರಸ್ಕರಿಸಿದರೆ, ಏಕೆ ತಿರಸ್ಕರಿಸಲಾಗಿದೆ ಎಂಬುದನ್ನು ಕಾರ್ಡ್ ನೀಡುವವರು ಲಿಖಿತವಾಗಿ ವಿವರಿಸಬೇಕಾಗುತ್ತದೆ.
ಪ್ರಮುಖ ನಿಯಮ, ಷರತ್ತು ಹೈಲೆಟ್
7. ಪ್ರಮುಖವಾದ ನಿಯಮಗಳು ಮತ್ತು ಷರತ್ತುಗಳನ್ನು ಹೈಲೈಟ್ ಮಾಡಬೇಕು. ಗ್ರಾಹಕರಿಗೆ ಪ್ರತ್ಯೇಕವಾಗಿ ಕಳುಹಿಸಬೇಕು. ಈ ಬಗ್ಗೆ ಗ್ರಾಹಕರಿಗೆ ಸರಿಯಾದ ಮಾಹಿತಿಯನ್ನು ಆರಂಭದಲ್ಲೇ ನೀಡಬೇಕು.
8. ಕಾರ್ಡ್-ವಿತರಕರು ಕಳೆದುಹೋದ ಕಾರ್ಡ್‌ಗಳು, ಕಾರ್ಡ್ ವಂಚನೆಯಿಂದ ಉಂಟಾಗುವ ನಷ್ಟದಿಂದ ತಪ್ಪಿಸಲು ಸಹಕಾರಿಯಾದ ವಿಮಾ ರಕ್ಷಣೆಯ ಬಗ್ಗೆ ಕಾರ್ಡ್ ಪಡೆಯುವ ಗ್ರಾಹಕರಿಗೆ ಮಾಹಿತಿ ನೀಡಬೇಕು.
ಬೇರೇನು ನಿಯಮವಿದೆ ನೋಡಿ
9. ಯಾವುದೇ ಕಾರ್ಡ್ ವಿತರಕರು ಹೊಸ ಕ್ರೆಡಿಟ್ ಕಾರ್ಡ್ ಖಾತೆಗೆ ಸಂಬಂಧಿಸಿದ ಯಾವುದೇ ಕ್ರೆಡಿಟ್ ಮಾಹಿತಿಯನ್ನು ಕಾರ್ಡ್ ಅನ್ನು ಸಕ್ರಿಯಗೊಳಿಸುವ ಮೊದಲು ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ ತಿಳಿಸಬೇಕು.
10. ಕಾರ್ಡ್ ವಿತರಕರು ತಾವು ನೇಮಿಸಿಕೊಳ್ಳುವ ಟೆಲಿಮಾರ್ಕೆಟರ್‌ಗಳು ಕಾಲಕಾಲಕ್ಕೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ನೀಡಿದ ಸೂಚನೆಗಳನ್ನು ಅನುಸರಿಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಕಾರ್ಡ್ ವಿತರಕರ ಪ್ರತಿನಿಧಿಯು ಗ್ರಾಹಕರನ್ನು ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಮಾತ್ರ ಸಂಪರ್ಕಿಸಬೇಕು.


Click it and Unblock the Notifications