ಆನ್‌ಲೈನ್ ಪಾವತಿ ವಿಧಾನಗಳು ಈಗ ವಿಶ್ವಾದ್ಯಂತ ಲಕ್ಷಾಂತರ ಜನರಿಗೆ ಅತೀ ಅನುಕೂಲಕರವಾಗಿದೆ. ಭಾರತದಲ್ಲಿ ನಾವು ನೋಡಿದಾಗ ಆನ್‌ಲೈನ್ ಪಾವತಿ ವಿಧಾನ ಬಳಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಈ ಅನುಕೂಲದಲ್ಲಿಯೂ ವಂಚನೆಯ ಅಪಾಯಗಳಿದೆ. ಜನರು ಆ ಸ್ಕ್ಯಾಮ್‌ಗಳ ಬಗ್ಗೆ ತಿಳಿದಿರುವುದು ಅತೀ ಮುಖ್ಯ.
ನಾವು ಕಷ್ಟಪಟ್ಟು ದುಡಿದ ಹಣವನ್ನು ಬೀದಿ ಬದಿಯಲ್ಲಿ ದೋಚಲು ಕಾಯುತ್ತಿರುವ ಕಳ್ಳರಂತೆಯೇ ಈಗ ಆನ್‌ಲೈನ್ ಮೂಲಕವೇ ದೋಚಲು ಕಳ್ಳರು ಕಾಯುತ್ತಿರುತ್ತಾರೆ. ಸೈಬರ್ ಕ್ರಿಮಿನಲ್‌ಗಳು ಎಲ್ಲ ಜಾಲವನ್ನು ರೂಪಿಸುತ್ತಾರೆ. ಈ ಪೈಕಿ ನೀವು ತಿಳಿದಿರಬೇಕಾದ ಭಾರತದಲ್ಲಿನ ಐದು ಸಾಮಾನ್ಯ ಆನ್‌ಲೈನ್ ಪಾವತಿ ವಂಚನೆ ವಿಧಾನಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ ಮುಂದೆ ಓದಿ....

1) ಫಿಶಿಂಗ್ ದಾಳಿಗಳು
ಫಿಶಿಂಗ್ ದಾಳಿ ಎಂಬುವುದು ಹಲವಾರು ವರ್ಷಗಳಿಂದ ನಡೆಯುತ್ತಿರುವುದಾಗಿದೆ. ಅದಕ್ಕಾಗಿ ನೀವು ಯಾವುದೇ ಅನುಮಾನಾಸ್ಪದ ಲಿಂಕ್‌ಗಳು ಅಥವಾ ಸಾಲಗಳ ಆಫರ್ ಅಥವಾ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದ ಮೆಸೇಜ್ ಬಂದರೆ ಅದನ್ನು ಶೀಘ್ರವೇ ಸೈಬರ್‌ಕ್ರೈಮ್ ಇಲಾಖೆಯಂತಹ ಸೂಕ್ತ ಅಧಿಕಾರಿಗಳಿಗೆ ತಿಳಿಸಿ. ನೀವು ಫಿಶಿಂಗ್ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ಸಂಪೂರ್ಣವಾಗಿ ಹ್ಯಾಕರ್‌ಗಳ ಜಾಲಕ್ಕೆ ಒಳಗಾಗುತ್ತದೆ.
"ಸೈಬರ್ ಅಪರಾಧಿಗಳು ಲಾಗಿನ್ ರುಜುವಾತುಗಳು ಮತ್ತು ಹಣಕಾಸಿನ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಹೊಂಚು ಹಾಕುತ್ತಿರುತ್ತಾರೆ. ಅದಕ್ಕಾಗಿ ಮೋಸದ ಇಮೇಲ್‌ಗಳು ಅಥವಾ ವೆಬ್‌ಸೈಟ್‌ಗಳನ್ನು ಬಳಸುತ್ತಾರೆ," ಎಂದು ಈಸಿಬಜ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಅಮಿತ್ ಕುಮಾರ್ ಹೇಳಿದ್ದಾರೆ.
2) ಗುರುತಿನ ಕಳ್ಳತನ
ಇದು ಭಾರತದಲ್ಲಿ ಸೈಬರ್ ಪ್ರಕರಣಗಳಲ್ಲಿ ಸಾಮಾನ್ಯವಾಗಿಯೇ ನಡೆಯುತ್ತಿರುವ ವಂಚನೆಗಳಾಗಿದೆ. ಈ ವಂಚಕರು ತಾವು ಬ್ಯಾಂಕ್ ಅಧಿಕಾರಿ ಅಥವಾ ಇತರೆ ಅಧಿಕಾರಿ ಎಂಬಂತೆ ಬಿಂಬಿಸಿ ಕರೆ ಮಾಡಿ ವೈಯಕ್ತಿಕ ಮಾಹಿತಿ ಪಡೆದು ಅದನ್ನು ದುರುಪಯೋಗ ಮಾಡುತ್ತಾರೆ. ಹೆಚ್ಚಾಗಿ ವಯಸ್ಸಾದವರೇ ಇವರ ಗುರಿಯಾಗಿರುತ್ತಾರೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಬೇರೊಬ್ಬರ ಗುರುತನ್ನು ಕದ್ದು ಪ್ರೋಫೈಲ್ ಮಾಡಿಕೊಂಡು, ಅವರ ಫ್ರೆಂಡ್‌ಗಳ ಬಳಿ ಹಣ ಕೇಳುವ ಜಾಲವೂ ಕೂಡಾ ಇದೆ.
3) ನಕಲಿ ಡೆಲಿವರಿ ಒಟಿಪಿ ಸ್ಕ್ಯಾಮ್
ಸೈಬರ್ ಅಪರಾಧಗಳ ಹೆಚ್ಚಳವಾಗುತ್ತಿದ್ದಂತೆ, ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಗ್ರಾಹಕರ ಡೇಟಾದ ಬಗ್ಗೆ ಹೆಚ್ಚು ಜಾಗೃತವಾಗಿವೆ. ಗ್ರಾಹಕರಿಗೆ ಹೆಚ್ಚು ಸುರಕ್ಷಿತ ಡೆಲಿವರಿ ಸೇವೆಯನ್ನು ನೀಡಲು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಅನ್ನು ಪ್ರಾರಂಭಿಸಿದೆ. ಆದರೆ ಈ ಭದ್ರತೆಯನ್ನು ಕೂಡಾ ಕ್ರಾಸ್ ಮಾಡಿಕೊಂಡು ವಂಚಕರು ಗ್ರಾಹಕರ ಬ್ಯಾಂಕ್ ಖಾತೆಗಳಿಂದ ಹಣವನ್ನು ಎಗರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದಾಗಿ ಆನ್‌ಲೈನ್ ವಹಿವಾಟಿನಲ್ಲಿ ಎಚ್ಚರವಾಗಿರಿ.
"ಕುತಂತ್ರದ ತಂತ್ರಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ವಂಚಕರು ಡೆಲಿವರಿ ಪ್ರಕ್ರಿಯೆಗೆ ಅಗತ್ಯವಿರುವ ನೆಪದಲ್ಲಿ ಒಟಿಪಿ ಹೇಳುವಂತೆ ತಿಳಿಸುತ್ತಾರೆ. ಒಟಿಪಿ ಪಡೆದ ಬಳಿಕ ಸ್ಕ್ಯಾಮರ್‌ಗಳು ಸೂಕ್ಷ್ಮ ಮಾಹಿತಿ ಪಡೆಯಲು ಫೋನ್ ಕ್ಲೋನಿಂಗ್ ಅಥವಾ ಹ್ಯಾಕಿಂಗ್‌ನಂತಹ ಅಕ್ರಮ ತಂತ್ರಗಳನ್ನು ಬಳಸುತ್ತಾರೆ," ಎಂದು ಅಮಿತ್ ಕುಮಾರ್ ತಿಳಿಸಿದ್ದಾರೆ.
4) ನಕಲಿ ಕ್ಯೂಆರ್ ಕೋಡ್
ಕ್ಯೂಆರ್ ಕೋಡ್ ವಂಚನೆಗಳು ವಂಚಕರು ಜನರಿಂದ ಹಣವನ್ನು ಕದಿಯಲು ಬಳಸುತ್ತಿರುವ ಇತ್ತೀಚಿನ ವಿಧಾನಗಳಲ್ಲಿ ಒಂದಾಗಿದೆ. "ನಕಲಿ ವೆಬ್‌ಸೈಟ್‌ಗಳು ಆನ್‌ಲೈನ್ ಸ್ಟೋರ್‌ಗಳನ್ನು ಬಳಸಿಕೊಂಡು ಈ ವಂಚನೆ ಮಾಡಲಾಗುತ್ತದೆ. ನಕಲಿ ಕ್ಯೂಆರ್ ಕೋಡ್‌ಗಳೊಂದಿಗೆ ಬಳಕೆದಾರರಿಗೆ ನೀಡಲಾಗುತ್ತದೆ," ಎಂದು ಅಮಿತ್ ಕುಮಾರ್ ಹೇಳುತ್ತಾರೆ.
ಅಂದರೆ ನೀವು ಆನ್‌ಲೈನ್ ಪಾವತಿ ಮಾಡುವಾಗ ನಕಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತೆ ನಿಮಗೆ ತಿಳಿಸಲಾಗುತ್ತದೆ. ನೀವು ಹಣ ಪಾವತಿಯಾದ ಕಾರಣ ನೀವು ಆರ್ಡರ್ ಮಾಡಿದ ವಸ್ತು ಬರಲಿದೆ ಅಂದುಕೊಳ್ಳುತ್ತೀರಿ. ಆದರೆ ನಿಜವಾಗಿ ನೀವು ನಿಜವಾದ ಖಾತೆಗೆ ಹಣ ಜಮಾ ಮಾಡದ ಕಾರಣ ಆರ್ಡರ್ ಖಚಿತವಾಗಿರುವುದಿಲ್ಲ.
5) ಯುಪಿಐ ವಂಚನೆ
ಜನರು ಪ್ರಸ್ತುತ ಅಧಿಕವಾಗಿ ಯುಪಿಐ ಬಳಕೆ ಮಾಡುತ್ತಾರೆ. ಆದ್ದರಿಂದಾಗಿ ಈ ಯುಪಿಐ ವಂಚನೆಯ ಬಗ್ಗೆ ತಿಳಿದಿರುವುದು ಅತೀ ಮುಖ್ಯವಾಗುತ್ತದೆ. ಯುಪಿಐ ಮತ್ತು ಡಿಜಿಟಲ್ ವಹಿವಾಟು ವಿಧಾನಗಳು ಆನ್‌ಲೈನ್‌ನಲ್ಲಿ ಪಾವತಿ ವಿಧಾನವನ್ನು ಸುಲಭಗೊಳಿಸಿವೆ. ಆದರೆ ಈ ಮೂಲಕವು ವಂಚನೆಯನ್ನು ಮಾಡಲಾಗುತ್ತಿದೆ.
ಸ್ಕ್ಯಾಮರ್‌ಗಳು ಅನಧಿಕೃತ ಯುಪಿಐ ವಹಿವಾಟು ಮಾಡಲು ನಿಮ್ಮನ್ನು ಬಳಸಿಕೊಳ್ಳುತ್ತಾರೆ. ನಿಮ್ಮನ್ನು ಮಾತಿನ ಬಲೆಯಲ್ಲಿ ಬೀಳಿಸಿ ನಿಮ್ಮ ಪಿನ್ ಪಡೆದು ಮೋಸ ಮಾಡುತ್ತಾರೆ. ಹೀಗೆಯೇ ಆನ್‌ಲೈನ್ ವಂಚನೆಗಳನ್ನು ಬೇರೆ ಬೇರೆ ರೀತಿಯಲ್ಲಿ ಮಾಡಲಾಗುತ್ತದೆ. ಇದರಲ್ಲಿ ಅಮಾಯಕರು ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುವಂತಾಗುತ್ತದೆ.


Click it and Unblock the Notifications