ರಿಸರ್ವ್ ಬ್ಯಾಂಪ್ ಆಫ್ ಇಂಡಿಯಾ (ಆರ್‌ಬಿಐ) ಮೇ 19 ರಂದು 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ನೋಟುಗಳನ್ನು ಬದಲಾಯಿಸಿಕೊಳ್ಳಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಗಡುವು ಮುಗಿಯಲು ಕೆಲವೇ ದಿನಗಳು ಮಾತ್ರ ಉಳಿದಿವೆ. ಈ ಗಡುವಿಗೂ ಮುನ್ನವೇ ನೀವು ನೋಟುಗಳನ್ನು ಬದಲಾವಣೆ ಮಾಡಬೇಕಾಗುತ್ತದೆ.
2000 ರೂಪಾಯಿ ನೋಟುಗಳನ್ನು ಜನರು ಸೆಪ್ಟೆಂಬರ್ 30 ರೊಳಗೆ ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡುವಂತೆ ಅಥವಾ ಬದಲಾವಣೆ ಮಾಡಿಕೊಳ್ಳುವಂತೆ ಕೇಂದ್ರ ಬ್ಯಾಂಕ್ ವಿನಂತಿ ಮಾಡಿದೆ. 2000 ರೂಪಾಯಿ ನೋಟುಗಳನ್ನು ಹೇಗೆ ಬದಲಾವಣೆ ಮಾಡುವುದು ಎಂಬ ವಿವರ ಇಲ್ಲಿದೆ ಮುಂದೆ ಓದಿ....

ನೋಟು ಹೀಗೆ ಬದಲಾಯಿಸಿ
ಜನರು ಸೆಪ್ಟೆಂಬರ್ 30 ರವರೆಗೆ ತಮ್ಮ ಬ್ಯಾಂಕ್ ಖಾತೆಗಳಲ್ಲಿ 2,000 ರೂಪಾಯಿ ನೋಟುಗಳನ್ನು ಡೆಪಾಸಿಟ್ ಮಾಡಬಹುದು ಅಥವಾ ಬದಲಾವಣೆ ಮಾಡಿಕೊಳ್ಳಬಹುದು. ಮೇ 23 ಯಾರಲ್ಲಿ 2000 ರೂಪಾಯಿ ನೋಟು ಇದೆಯೋ ಅವರು ದೇಶಾದ್ಯಂತ ಎಲ್ಲ ಬ್ಯಾಂಕ್‌ಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ಬ್ಯಾಂಕ್ ಶಾಖೆಗಳ ನಿಯಮಿತ ಕಾರ್ಯನಿರ್ವಹಣೆಯಲ್ಲಿ ಅಡಚಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದು ಬಾರಿಗೆ 20,000 ರೂಪಾಯಿ ಮೌಲ್ಯದ 2000 ರೂಪಾಯಿಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ಕೆವೈಸಿ ಮಾನದಂಡಗಳು ಹಾಗೂ ಇತರೆ ಕಾನೂನು ಪ್ರಕ್ರಿಯೆಗಳು ಅವಶ್ಯಕವಾಗಿದೆ.
ಸೆಪ್ಟೆಂಬರ್ ಆರಂಭದಲ್ಲಿ ಆರ್‌ಬಿಐ ಹಂಚಿಕೊಂಡ ಮಾಹಿತಿಯ ಪ್ರಕಾರ, ಚಲಾವಣೆಯಿಂದ ತೆಗೆದುಹಾಕಲಾದ ಒಟ್ಟು 2,000 ರೂಪಾಯಿ ಮೌಲ್ಯದ ನೋಟುಗಳಲ್ಲಿ ಶೇಕಡ 93 ರಷ್ಟು ನೋಟುಗಳನ್ನು ಬ್ಯಾಂಕ್‌ಗೆ ವಾಪಾಸ್ ನೀಡಲಾಗಿದೆ.
ಆರ್‌ಬಿಐ ಹೇಳಿಕೆಯ ಪ್ರಕಾರ, ಆಗಸ್ಟ್ 31, 2023 ರಂತೆ ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡಲಾದ 2000 ರೂಪಾಯಿ ನೋಟುಗಳ ಒಟ್ಟು ಮೌಲ್ಯವು 3.32 ಲಕ್ಷ ಕೋಟಿ ರೂಪಾಯಿ ಎಂದು ಬ್ಯಾಂಕ್‌ಗಳಿಂದ ಸಂಗ್ರಹಿಸಿದ ಡೇಟಾ ಹೇಳಿದೆ. ಅಂದರೆ ಆಗಸ್ಟ್ 31 ರಂದು ಕೇವಲ 0.24 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳು ಚಲಾವಣೆಯಲ್ಲಿತ್ತು.
ಪ್ರಮುಖ ಬ್ಯಾಂಕ್‌ಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ 2,000 ರೂಪಾಯಿಗಳ ಸರಿಸುಮಾರು ಶೇಕಡ 87 ರಷ್ಟು ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡಲಾಗಿದೆ. ಆದರೆ ಶೇಕಡ 13 ರಷ್ಟು ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಿಗೆ ಬದಲಾವಣೆ ಮಾಡಲಾಗಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಸೌತ್ ಇಂಡಿಯನ್ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು, "ವಿದೇಶದಲ್ಲಿದ್ದವರು, ಆರೋಗ್ಯ ಸಮಸ್ಯೆ ಇದ್ದವರು ಗಡುವಿಗೂ ಮುನ್ನ 2000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅವರಿಗೆ ವಿಶೇಷ ಅವಕಾಶ ನೀಡಲಾಗುತ್ತದೆ," ಎಂದು ಮಾಹಿತಿ ನೀಡಿದ್ದಾರೆ.


Click it and Unblock the Notifications