ಭಾರತೀಯ ಅಂಚೆ ಇಲಾಖೆಯು ಗ್ರಾಹಕರ ಬೇಡಿಕೆಯಂತೆ ಅನೇಕ ವಿಧದ ಹಣ ಉಳಿತಾಯ ಯೋಜನೆಗಳನ್ನು ಪರಿಚಯಿಸಿದ್ದು, ಕೆಲವೊಂದು ಬಹಳ ಆಕರ್ಷಕವಾದ ಬಡ್ಡಿ ದರವನ್ನು ನೀಡುತ್ತವೆ. ಆ ಪೈಕಿ ತೆರಿಗೆ ಉಳಿತಾಯ ಯೋಜನೆಗಳು ಕೂಡ ಇದ್ದು, ಇಲ್ಲಿ ತೆರಿಗೆದಾರರಿಗೆ ಹೂಡಿಕೆ ಮಾಡುವುದರಿಂದ ತೆರಿಗೆ ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದು.
ಅಂತಹ ಅಂಚೆ ಇಲಾಖೆಗಳ ಸ್ಕೀಮ್‌ಗಳಲ್ಲಿ ಪಬ್ಲಿಕ್ ಫ್ರಾವಿಡೆಂಟ್ ಫಂಡ್ ಒಂದು ಸಣ್ಣ ರೀತಿಯ ಉಳಿತಾಯ ಯೋಜನೆಯಾಗಿದ್ದು, ಇದು ಶೇ.7.1ರಷ್ಟು ಬಡ್ಡಿ ದರವನ್ನು ನೀಡುವ ಜತೆಗೆ ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 80ಸಿ ಪ್ರಕಾರ 1.5 ಲಕ್ಷ ರೂ.ವರೆಗೆ ತೆರಿಗೆ ರಿಬೇಟ್ ಅನ್ನು ಕೂಡ ಒದಗಿಸುತ್ತದೆ. ಈ ಯೋಜನೆಯಲ್ಲಿ ನೀವು 15 ವರ್ಷಗಳವರೆಗೆ ಹೂಡಿಕೆ ಮಾಡಬಹುದಾಗಿದೆ.
ಅದೇ ರೀತಿ "ನ್ಯಾಷನಲ್ ಸೇವಿಂಗ್ಸ್ ಸ್ಕೀಮ್", ಮತ್ತೊಂದು 5 ವರ್ಷಗಳ ಉಳಿತಾಯ ಕಾರ್ಯಕ್ರಮವಾಗಿದ್ದು, ಇದು 1000ರೂ.ವಿನಿಂದ ಆರಂಭಗೊಂಡು ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಷ್ಟೇ ಮೊತ್ತದ ಹಣವನ್ನು ಒಂದು ಬಾರಿಗೆ ಹೂಡಿಕೆ ಮಾಡುವ ಸ್ಕೀಮ್ ಆಗಿದೆ. ಇದು ಕೂಡ ಶೇ.7ರಷ್ಟು ಬಡ್ಡಿ ಲಾಭವನ್ನು ನೀಡುವ ಜತೆಗೆ ಆದಾಯ ತೆರಿಗೆಯ ಸೆಕ್ಷನ್ 80ಸಿ ನಡಿ 1.5 ಲಕ್ಷ ರೂ. ತೆರಿಗೆ ರಿಯಾಯಿತಿ ಸೌಲಭ್ಯವನ್ನು ಒದಗಿಸುತ್ತದೆ.

ಇನ್ನು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟಿ ಸ್ಕೀಮ್ ಕೂಡಾ ಒಂದು, ಎರಡು, ಮೂರು ಅಥವಾ ಐದು ವರ್ಷಗಳ ಮೇಲಿನ ಅವಧಿಯ ಹೂಡಿಕೆಗೆ ಅವಕಾಶ ಕಲ್ಪಿಸುವ ಮೂಲಕ 5 ವರ್ಷಗಳಲ್ಲಿ ಶೇ.7ರಷ್ಟು ಬಡ್ಡಿಯನ್ನು ಒದಗಿಸುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ
ಹಾಗೆಯೇ ಹೂಡಿಕೆದಾರರು "ಸುಕನ್ಯಾ ಸಮೃದ್ಧಿ ಯೋಜನೆ"ಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಇದು ಶೇ.7.6ರಷ್ಟು ಬಡ್ಡಿ ದರವನ್ನು ನೀಡುವ ಜತೆಗೆ ಹೆಣ್ಣು ಮಗುವಿಗೆ 21 ವರ್ಷ ವಯಸ್ಸು ಆಗುವವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿಯೂ ಆದಾಯ ತೆರಿಗೆಯ ಸೆಕ್ಷನ್ 80ಸಿನಡಿ 1.5 ಲಕ್ಷ ರೂ.ಗಳ ತೆರಿಗೆ ಕಡಿತದ ಲಾಭ ಪಡೆಯಬಹುದು.
"ಹಿರಿಯ ನಾಗರಿಕರ ಉಳಿತಾಯ ಯೋಜನೆ"(ಎಸ್‌ಸಿಎಸ್‌ಎಸ್) ಹಿರಿಯ ನಾಗರಿಕರಿಗೆ ಪರಿಚಯಿಸಿರುವ ಜನಪ್ರಿಯ ಯೋಜನೆಯಾಗಿದೆ. ಇದು ಕೂಡ ಶೇ.8ರಷ್ಟು ಬಡ್ಡಿ ದರವನ್ನು ನೀಡುವ ಜತೆಗೆ 1.5 ಲಕ್ಷ ರೂ.ಗಳ ತೆರಿಗೆ ರಿಯಾಯಿತಿ ಕೂಡ ಒದಗಿಸುತ್ತದೆ. ಗ್ರಾಹಕರು ಈ ಯೋಜನೆಯಲ್ಲಿ 1000 ರೂ.ನಿಂದ ಪ್ರಾರಂಭಗೊಂಡು 30 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದಾಗಿದೆ.


Click it and Unblock the Notifications