ಸಾಮಾನ್ಯವಾಗಿ ನಾವು ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ಎಲ್ಲಿ ಹೂಡಿಕೆ ಮಾಡಿದರೆ ಸುರಕ್ಷಿತ ಎಂದು ನೋಡುತ್ತೇವೆ. ಹಾಗೆಯೇ ಎಲ್ಲಿ ಹೂಡಿಕೆ ಮಾಡಿದರೆ ನಮಗೆ ಉತ್ತಮ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನೋಡುತ್ತೇವೆ. ಹಾಗಿರುವಾಗ ನಮ್ಮ ಮುಂದೆ ಇರುವ ಆಯ್ಕೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಅಂಚೆ ಕಚೇರಿ ಯೋಜನೆಗಳು ಆಗಿದೆ. ಅದರಲ್ಲಿಯೂ ಅಂಚೆ ಕಚೇರಿಯು ಹಲವಾರು ಉಳಿತಾಯ ಯೋಜನೆಗಳನ್ನು ಹೊಂದಿದೆ. ಆ ಪೈಕಿ ಕೆಲವು ಯೋಜನೆಗಳು ಈ ತಿಂಗಳ ಬಳಿಕ ಬದಲಾವಣೆಯಾಗಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2023ರಂದು ಹಣಕಾಸು ವರ್ಷ 2023-2024ರ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಎರಡು ಜನಪ್ರಿಯ ಅಂಚೆ ಕಛೇರಿ ಯೋಜನೆಗಳಿಗೆ ಹಲವಾರು ಬದಲಾವಣೆಗಳನ್ನು ಕೂಡಾ ಮಾಡಲಾಗಿದೆ. ಕೇಂದ್ರ ಬಜೆಟ್ 2023 ರಲ್ಲಿ ಮಹಿಳಾ ಹೂಡಿಕೆದಾರರಿಗೆ ಹೊಸ ಯೋಜನೆಯನ್ನು ಸಹ ಘೋಷಿಸಲಾಗಿದೆ. ಪ್ರಮುಖವಾಗಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಮತ್ತು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ (ಪಿಒಎಂಐಎಸ್) ಬದಲಾವಣೆ ಮಾಡಲಾಗಿದೆ. ಇಲ್ಲಿದೆ ವಿವರ ಮುಂದೆ ಓದಿ...

ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್)
ಕೇಂದ್ರ ಬಜೆಟ್ 2023ರಲ್ಲಿ ಎಸ್‌ಸಿಎಸ್‌ಎಸ್‌ಗೆ ಹೂಡಿಕೆ ಮಿತಿಯನ್ನು 15 ಲಕ್ಷ ರೂಪಾಯಿಯಿಂದ 30 ಲಕ್ಷ ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ನಿವೃತ್ತಿಯ ನಂತರದ ಅವಧಿಗೆ ವಿಶ್ವಾಸಾರ್ಹ ಮತ್ತು ಸುರಕ್ಷಿತ ಆದಾಯದ ಮೂಲವನ್ನು ನೀಡುವ ಗುರಿಯೊಂದಿಗೆ 2004 ರಲ್ಲಿ ಸರ್ಕಾರದ ಬೆಂಬಲಿತ ಯೋಜನೆಯನ್ನು ಸ್ಥಾಪಿಸಲಾಗಿದೆ. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಎಸ್‌ಸಿಎಸ್‌ಎಸ್ ಬಡ್ಡಿದರವು ಶೇಕಡ 8ರಷ್ಟಿದೆ. 5 ವರ್ಷಗಳ ಅವಧಿಯ ಯೋಜನೆಯಲ್ಲಿ ನಾವು ಕನಿಷ್ಠ 1 ಸಾವಿರ ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಆದರೆ ಈ ಯೋಜನೆಯಲ್ಲಿನ ಬಡ್ಡಿದರವು ತೆರಿಗೆ ಮುಕ್ತವಾಗಿರುವುದಿಲ್ಲ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್)
ಕೇಂದ್ರ ಬಜೆಟ್ 2023ರಲ್ಲಿ ಮಾಡಲಾದ ಘೋಷಣೆ ಪ್ರಕಾರ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿನ (ಪಿಒಎಂಐಎಸ್) ಸಿಂಗಲ್ ಅಕೌಂಟ್ ಹೋಲ್ಡರ್ ಲಿಮಿಟ್ ಅನ್ನು 4 ಲಕ್ಷ ರೂಪಾಯಿಯಿಂದ 9 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಜಾಯಿಂಟ್ ಅಕೌಂಟ್ ಆದ್ದಲ್ಲಿ ಹೂಡಿಕೆ ಮೊತ್ತವನ್ನು 9 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಸರ್ಕಾರವು ನಿಯಮಿತವಾಗಿ ಅಪ್‌ಡೇಟ್ ಮಾಡಿದ ದರದ ಪ್ರಕಾರವಾಗಿ ಪಿಒಎಂಐಎಸ್ ಹೂಡಿಕೆದಾರರು ಪ್ರತಿ ತಿಂಗಳು ಬಡ್ಡಿ ಪಾವತಿಗಳನ್ನು ಪಡೆಯುತ್ತಾರೆ. ಈಗಿನಂತೆ ಬಡ್ಡಿ ದರವು ಜನವರಿ ಮತ್ತು ಮಾರ್ಚ್ 2023 ರ ನಡುವಿನ ಅವಧಿಗೆ ಶೇಕಡ 7.1 ಆಗಿದೆ. ಎಂಐಎಸ್ ಖಾತೆಯು ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. 3 ವರ್ಷಗಳ ನಂತರ ಆದರೆ ತೆರೆದ ದಿನಾಂಕದಿಂದ 5 ವರ್ಷಗಳ ಮೊದಲು ಖಾತೆಯನ್ನು ಮುಚ್ಚಿದರೆ ಅಸಲು ಶೇ.1 ರಷ್ಟು ದಂಡ ವಿಧಿಸಲಾಗುತ್ತದೆ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ
ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯು ಕೇಂದ್ರ ಸರ್ಕಾರದ ಹೊಸ ಯೋಜನೆಯಾಗಿದೆ. ಇದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಘೋಷಣೆ ಮಾಡಿದ ಯೋಜನೆಗಳಲ್ಲಿ ಒಂದಾಗಿದೆ. ಈ ಹೊಸ ಹಣ ಉಳಿತಾಯ ಯೋಜನೆಯು ಏಪ್ರಿಲ್ 1, 2023ರಿಂದ ಜಾರಿಗೆ ಬರಲಿದೆ. ಈ ಯೋಜನೆಯಲ್ಲಿ ದೇಶದಲ್ಲಿನ ಅಂಚೆ ಕಚೇರಿ ಮತ್ತು ಬ್ಯಾಂಕುಗಳಲ್ಲಿ ಜಾರಿಗೊಳಿಸಲಾಗುತ್ತದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಈ ನೂತನ ಯೋಜನೆಯನ್ನು ಜನರಿಗೆ ಪರಿಚಯಿಸಬೇಕು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.


Click it and Unblock the Notifications