ಮೇ 11, 2020ರಿಂದ ಮೇ 15, 2020ರ ಮಧ್ಯೆ ವಿತರಿಸುವ ಸವರನ್ ಗೋಲ್ಡ್ ಬಾಂಡ್ ಬೆಲೆಯನ್ನು ಪ್ರತಿ ಗ್ರಾಮ್ ಗೆ 4,590 ರುಪಾಯಿಗೆ ನಿಗದಿ ಮಾಡಲಾಗಿದೆ ಎಂದು ಶುಕ್ರವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸವರನ್ ಗೋಲ್ಡ್ ಬಾಂಡ್ 2020- 21ರ ಸರಣಿ || ಇದೇ ತಿಂಗಳ 11ರಿಂದ 15ರ ಮಧ್ಯೆ ಲಭ್ಯವಿದೆ.
ಏಪ್ರಿಲ್ 20ರಿಂದ ಏಪ್ರಿಲ್ 24, 2020ರ ಮಧ್ಯೆ ಸರಣಿ | ಪ್ರತಿ ಗ್ರಾಮ್ ಗೆ 4,639ರಂತೆ ದರವನ್ನು ನಿಗದಿ ಮಾಡಲಾಗಿತ್ತು. ಕಳೆದ ತಿಂಗಳು ಕೇಂದ್ರ ಬ್ಯಾಂಕ್ ಹೇಳಿದ ಪ್ರಕಾರ, ಏಪ್ರಿಲ್ 20ರಿಂದ ಸೆಪ್ಟೆಂಬರ್ ತನಕ ಆರು ಬಾರಿ ಸವರನ್ ಗೋಲ್ಡ್ ಬಾಂಡ್ ವಿತರಣೆ ಮಾಡಲಾಗುತ್ತದೆ.
ಪ್ರತಿ ಗ್ರಾಮ್ ಗೆ 50 ರುಪಾಯಿ ರಿಯಾಯಿತಿ
2020-21ನೇ ಸಾಲಿಗೆ ಕೇಂದ್ರ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸವರನ್ ಗೋಲ್ಡ್ ಬಾಂಡ್ ವಿತರಣೆ ಮಾಡುತ್ತದೆ. "ಸವರನ್ ಗೋಲ್ಡ್ ಬಾಂಡ್ ವಿತರಿಸುವ ಹಿಂದಿನ ವಾರದಲ್ಲಿ 999 ಶುದ್ಧತೆಯ ಚಿನ್ನದ ಮೂರು ದಿನಗಳ ಸರಾಸರಿ ದಿನಾಂತ್ಯದ ಬೆಲೆಯನ್ನು ಗಣನೆಗೆ ತೆಗೆದುಕೊಂಡು, ಸಾಮಾನ್ಯವಾಗಿ ಬಾಂಡ್ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಹಾಗೆ ಲೆಕ್ಕ ಹಾಕಿದಾಗ ಗ್ರಾಮ್ ಗೆ 4590 ರುಪಾಯಿ ಬರುತ್ತದೆ" ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಡಿಜಿಟಲ್ ವಿಧಾನದಲ್ಲಿ ಹಾಗೂ ಆನ್ ಲೈನ್ ನಲ್ಲಿ ಅಪ್ಲೈ ಮಾಡುವವರಿಗೆ ಪ್ರತಿ ಗ್ರಾಮ್ ಗೆ 50 ರುಪಾಯಿ ರಿಯಾಯಿತಿ ಸಿಗುತ್ತದೆ. ಅಂಥ ಹೂಡಿಕೆದಾರರಿಗೆ ಪ್ರತಿ ಗ್ರಾಮ್ ಗೆ 4540 ರುಪಾಯಿ ಆಗುತ್ತದೆ.
ಕನಿಷ್ಠ 1 ಗ್ರಾಮ್ ನಿಂದ ಆರಂಭ
ಕನಿಷ್ಠ 1 ಗ್ರಾಮ್ ನಿಂದ ಆರಂಭವಾಗುತ್ತದೆ. ಸವರನ್ ಗೋಲ್ಡ್ ಬಾಂಡ್ ಎಂಟು ವರ್ಷಗಳ ಅವಧಿಗೆ ಇರುತ್ತದೆ. ಐದು ವರ್ಷದ ನಂತರ ಅದರಿಂದ ಹೊರಬರಬಹುದು. ವೈಯಕ್ತಿಕ ಹೂಡಿಕೆದಾರರು ಕನಿಷ್ಠ 1 ಗ್ರಾಮ್ ನಿಂದ ಗರಿಷ್ಠ ಮಿತಿ 4 ಕೇಜಿ ತನಕ ಸಬ್ ಸ್ಕೈಬ್ ಮಾಡಬಹುದು. ಹಿಂದೂ ಅವಿಭಕ್ತ ಕುಟುಂಬಗಳು ಆರ್ಥಿಕ ವರ್ಷದಲ್ಲಿ 20 ಕೇಜಿವರೆಗೆ ಹೂಡಿಕೆ ಮಾಡಬಹುದು. ಬ್ಯಾಂಕ್ ಗಳ ಮೂಲಕ ಗೋಲ್ಡ್ ಬಾಂಡ್ ಮಾರಾಟ ಮಾಡಲಾಗುತ್ತದೆ.
ನವೆಂಬರ್ 2015ರಿಂದ ಸವರನ್ ಗೋಲ್ಡ್ ಬಾಂಡ್ ಯೋಜನೆ
ಜತೆಗೆ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ನಿರ್ದಿಷ್ಟ ಪೋಸ್ಟ್ ಆಫೀಸ್ ಮತ್ತು ಎನ್ ಎಸ್ ಇ ಹಾಗೂ ಬಿಎಸ್ ಇ ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ಕೂಡ ಮಾರಾಟ ಮಾಡಲಾಗುತ್ತದೆ. ನವೆಂಬರ್ 2015ರಲ್ಲಿ ಸವರನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪರಿಚಯಿಸಲಾಯಿತು. ದೇಶೀಯ ಉಳಿತಾಯವನ್ನು ಹೆಚ್ಚಿಸಲು, ಫಿಸಿಕಲ್ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುವುದು ಸೇರಿದಂತೆ ಇತರ ಉದ್ದೇಶಗಳು ಈ ವಿತರಣೆಯ ಹಿಂದಿತ್ತು.


Click it and Unblock the Notifications