ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಮತ್ತೆ ಏರಿಕೆ ಮಾಡಲಾಗಿದೆ. ಜೂನ್ 8ರಂದು ಸುದ್ದಿಗೋಷ್ಠಿ ನಡೆಸಿದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಮತ್ತೊಮ್ಮೆ ರೆಪೋ ದರ ಏರಿಕೆ ಬಗ್ಗೆ ಘೋಷಿಸಿದರು. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿದೆ.
ನಾಲ್ಕು ವರ್ಷಗಳ ಬಳಿಕ ಮೇ 4ರಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ನಡೆಸಿ ಆರ್‌ಬಿಐ ರೆಪೋ ದರವನ್ನು ಶೇಕಡ 4.40ಕ್ಕೆ ಹೆಚ್ಚಿಸುವ ಬಗ್ಗೆ ಘೋಷಿಸಿದ್ದರು. ಈ ಹಿನ್ನೆಲೆಯಿಂದಾಗಿ ಜನರಿಗೆ ಸಾಲದ ಇಎಂಐ ಹೊರೆ ಅಧಿಕವಾಗಿತ್ತು. ಈಗ ಮತ್ತೆ ಆರ್‌ಬಿಐ ರೆಪೋ ದರ ಹೆಚ್ಚಿಸಿರುವ ಕಾರಣ ಇಎಂಐ ಹೊರೆ ಮತ್ತೆ ಅಧಿಕವಾಗಲಿದೆ.
ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಈಗ ಮತ್ತೆ ಏರಿಕೆ ಮಾಡಿದೆ. ಇದರಿಂದಾಗಿ ಇಎಂಐ ಎಷ್ಟು ಹೆಚ್ಚಳವಾಗಲಿದೆ ಎಂದು ತಿಳಿಯಲು ಮುಂದೆ ಓದಿ..
ಇಎಂಎಂ ಹೆಚ್ಚಳವಾಗುವ ಸಾಧ್ಯತೆ
ರೆಪೋ ದರ ಏರಿಕೆ ನಂತರ ಸಾಲದ ಮೇಲಿನ ಇಎಂಎಂ ಹೆಚ್ಚಳವಾಗುವ ಸಾಧ್ಯತೆಯಿದೆ. ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಿದರೆ ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲದ ವೆಚ್ಚವು ಕಡಿಮೆ ಇರುತ್ತದೆ. ಆದ್ದರಿಂದ, ಬ್ಯಾಂಕುಗಳು ಸಾಮಾನ್ಯವಾಗಿ ಸಾಲಗಳಿಗೆ ಕಡಿಮೆ ಬಡ್ಡಿದರವನ್ನು ಹಾಕುತ್ತವೆ. ಆದರೆ, ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದರೆ ಬಹುತೇಕ ಬ್ಯಾಂಕ್‌ಗಳು ಗೃಹ ಸಾಲ, ಕಾರು ಸಾಲ ಮತ್ತಿತರ ಬಡ್ಡಿದರವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸಿದರೆ, ಸಮಾನ ಮಾಸಿಕ ಕಂತುಗಳು (ಇಎಂಐಗಳು) ಸಹ ಹೆಚ್ಚಾಗುತ್ತವೆ.
ರೆಪೋ ದರ ಎಂದರೇನು?
ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ
ಇಎಂಐ ಲೆಕ್ಕಾಚಾರ ಹೇಗೆ?
30 ಲಕ್ಷ ರು ಗೃಹ ಸಾಲ ಪಡೆದುಕೊಂಡಿದ್ದೀರಿ ಎಂದುಕೊಳ್ಳೋಣ. 20 ವರ್ಷಗಳ ಅವಧಿಯ ಈ ಸಾಲಕ್ಕೆ ಶೇ 7ರಷ್ಟು ವಾರ್ಷಿಕ ಬಡ್ಡಿ ಇದ್ದರೆ, ಇಎಂಐ ಸುಮಾರು 1,648 ರು ಏರಿಕೆಯಾಗಲಿದೆ. ಅಂದರೆ 23,259 ರು ಇಂದ 24,90 ರು ಗೇರಲಿದೆ. ಪ್ರತಿ ಒಂದು ಲಕ್ಷ ರು ಸಾಲದ ಮೊತ್ತಕ್ಕೆ ನೀವು 55 ರು ಅಧಿಕವಾಗಿ ಇಎಂಐ ಕಟ್ಟಬೇಕಾಗುತ್ತದೆ. ಇದೇ ರೀತಿ 8 ಲಕ್ಷ ರು ಗಳ ಆಟೋಮೊಬೈಲ್(ವಾಹನ) ಮೇಲಿನ ಸಾಲ ಪಡೆದಿದ್ದರೆ, 7 ವರ್ಷಗಳ ಅವಧಿಗೆ ಬಡ್ಡಿದರ ಶೇ 10 ರಿಂದ ಶೇ 10.9ಕ್ಕೇರಲಿದೆ. ಇದರ ಜೊತೆಗೆ ಇಎಂಐ ಕೂಡಾ 375 ರು ಹೆಚ್ಚಳವಾಗಲಿದ್ದು, 13,281 ರು ನಿಂದ 13,656 ರು ಆಗಲಿದೆ.
ವೈಯಕ್ತಿಕ ಸಾಲದ ಇಎಂಐ
ಇನ್ನು ವೈಯಕ್ತಿಕ ಸಾಲದ ವಿಷಯಕ್ಕೆ ಬಂದರೆ, 5 ಲಕ್ಷ ರು ಗಳ ಸಾಲ ಪಡೆದಿದ್ದರೆ, 5 ವರ್ಷಗಳ ಅವಧಿಗೆ ಬಡ್ಡಿದರ ಶೇ 14 ರಿಂದ ಶೇ 14.9ಕ್ಕೇರಲಿದೆ. ಇಎಂಐ 235 ಅಧಿಕವಾಗಲಿದ್ದು, 11,634 ರು ನಿಂದ 11.869 ರು ಗೇರಲಿದೆ.
ರೆಪೋ ದರವನ್ನು ಹೆಚ್ಚಿಸುವ ಆರ್‌ಬಿಐ ಕ್ರಮವು ಉಳಿತಾಯ ಖಾತೆಗಳಲ್ಲಿ ಮತ್ತು ಸ್ಥಿರ ಠೇವಣಿಗಳ ಮೂಲಕ (ಎಫ್‌ಡಿ) ಹಣವನ್ನು ಇಡುವ ಠೇವಣಿದಾರರಿಗೆ ಉತ್ತಮವಾಗಿದೆ. ಬ್ಯಾಂಕುಗಳು ಎಫ್‌ಡಿಗಳಿಗೆ ಹೆಚ್ಚಿನ ಬಡ್ಡಿಯನ್ನು ನೀಡುವ ಸಾಧ್ಯತೆಯಿದೆ. ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ವಾಣಿಜ್ಯ ಹಾಗೂ ಇತರೆ ಬ್ಯಾಂಕುಗಳು ತಾವು ಇರಿಸುವ ಹಣದ ಮೇಲೆ ಪಡೆಯುವ ಬಡ್ಡಿದರವನ್ನು ರಿವರ್ಸ್ ರೆಪೋ ದರ ಎಂದು ಕರೆಯಲಾಗುತ್ತದೆ.


Click it and Unblock the Notifications