ಬಹುತೇಕ ಎಲ್ಲ ತಜ್ಞರುಗಳು ಆರ್‌ಬಿಐ ಏಪ್ರಿಲ್‌ನ ಎಂಪಿಸಿ ಸಭೆಯ ಬಳಿಕ ರೆಪೋ ದರವನ್ನು ಏರಿಕೆ ಮಾಡಲಿದೆ ಎಂಬ ಅಭಿಪ್ರಾಯವನ್ನು ಹೊಂದಿದ್ದರು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಆಶ್ಚರ್ಯಕರ ನಿರ್ಧಾರವನ್ನು ಕೈಗೊಂಡಿದೆ. ಆರ್‌ಬಿಐ ರೆಪೋ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು ದರ ಶೇಕಡ 6.50 ಆಗಿದೆ. ಆಬಿಐನ ಈ ನಿರ್ಧಾರ ಸಾಲ ಪಡೆದು ಇಎಂಐ ಪಾವತಿಸುತ್ತಿರುವವರಿಗೆ ರಿಲೀಫ್ ಅನ್ನು ನೀಡಿದೆಯಾದರೂ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಹೂಡಿಕೆದಾರರಿಗೆ ನಿರಾಶೆಯನ್ನು ಉಂಟು ಮಾಡಿದೆ. ಸಾಮಾನ್ಯವಾಗಿ ರೆಪೋ ದರ ಏರಿಕೆಯಾದರೆ, ಬ್ಯಾಂಕ್ ಬಡ್ಡಿದರವನ್ನು ಕೂಡಾ ಹೆಚ್ಚಿಸುತ್ತದೆ.
ಆರ್‌ಬಿಐ ಈ ಬಾರಿ ರೆಪೋ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೂ ಕೂಡಾ ಕಳೆದ 11 ತಿಂಗಳುಗಳಲ್ಲಿ ಒಟ್ಟಾಗಿ 6 ಬಾರಿ ಆರ್‌ಬಿಐ ಸುಮಾರು 250 ಬಿಪಿಎಸ್ ರೆಪೋ ದರ ಹೆಚ್ಚಿಸಿದೆ ಇಷ್ಟು ಬಾರಿಯೂ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಎಫ್‌ಡಿ ಬಡ್ಡಿದರವನ್ನು ಏರಿಕೆ ಮಾಡಿದೆ. ಆದ್ದರಿಂದಾಗಿ ಪ್ರಸ್ತುತ ಎಫ್‌ಡಿಯಿಂದ ಉತ್ತಮ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಒಂದು ವರ್ಷದ ಹಿಂದೆ ಅತೀ ಕಡಿಮೆ ಬಡ್ಡಿದರವನ್ನು ಹೊಂದಿದ್ದ ಎಫ್‌ಡಿ ಹೂಡಿಕೆದಾರರಿಗೆ ಈ ವರ್ಷದ ಬಡ್ಡಿದರ ಅತೀ ಉತ್ತಮವಾಗಿದೆ. ಕಳೆದ ಎರಡು ದಶಕಗಳಲ್ಲಿ ಕಾಣದ ದರ ಏರಿಕೆ ಈ ವರ್ಷದಲ್ಲಿ ಆಗಿದೆ.

ಈ ಸಂದರ್ಭದಲ್ಲಿ ಹಲವಾರು ಎಫ್‌ಡಿ ಹೂಡಿಕೆದಾರರಿಗೆ ಗೊಂದಲಗಳು ಇದೆ. ಎಫ್‌ಡಿ ಬಡ್ಡಿದರವು ತೀರಾ ಉತ್ತುಂಗಕ್ಕೆ ಏರಿಕೆಯಾಗಿ ಆಗಿದೆಯೇ? ಅಥವಾ ಇನ್ನು ಕೂಡಾ ದರ ಏರಿಕೆಯಾಗಬಹುದೇ?. ದೀರ್ಘಕಾಲದ ಎಫ್‌ಡಿ ಮೇಲೆ ಹೂಡಿಕೆ ಮಾಡಲು ಯಾವುದು ಉತ್ತಮ ಸಮಯ? ಎಂಬ ಪ್ರಶ್ನೆಗಳು ಇದೆ. ಗರಿಷ್ಠ ಬಡ್ಡಿದರ ಬದಲಾಗಬಹುದು. ಎಫ್‌ಡಿ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಮರುಹೊಂದಿಸಲು ಇದು ಅತ್ಯುತ್ತಮ ಸಮಯ ಎಂದು ಖಚಿತವಾಗಿದೆ. ಎಫ್‌ಡಿ ಹೂಡಿಕೆಗೆ ಯಾವ ಅವಧಿ ಉತ್ತಮ, ಇಲ್ಲಿದೆ ವಿವರ.
ಬಡ್ಡಿದರದ ಏರಿಕೆಯು ಉತ್ತುಂಗವನ್ನು ತಲುಪಿದೆಯೇ?
ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಲು ರಿಟೇಲ್ ಹಣದುಬ್ಬರ ಏರಿಕೆಯು ಪ್ರಮುಖ ಕಾರಣವಾಗಿದೆ. ಡಿಸೆಂಬರ್ 2022ರಲ್ಲಿ ಶೇಕಡ 6ಕ್ಕಿಂತ ಕೆಳಕ್ಕೆ ಇಳಿದಿದ್ದ ರಿಟೇಲ್ ಹಣದುಬ್ಬರವು ಫೆಬ್ರವರಿ 2023 ರಲ್ಲಿ ಮತ್ತೆ ಶೇಕಡ 6.44ಕ್ಕೆ ಏರಿಕೆ ಕಂಡಿದೆ. ಆದರೆ ಆರ್‌ಬಿಐ ಹಣದುಬ್ಬರವು ಶೇಕಡ 6ಕ್ಕಿಂತ ಕಡಿಮೆಯಾಗುವ ನಿರೀಕ್ಷೆಯನ್ನು ಹೊಂದಿದೆ. ಇದರಿಂದಾಗಿ ಪ್ರಸ್ತುತ ರೆಪೋ ದರ ಏರಿಕೆಗೆ ಅಂತ್ಯ ಹಾಡಿದೆ. ಆದರೂ ಹಣದುಬ್ಬರವು ಕಡಿಮೆಯಾಗುವವರೆಗೂ ಆರ್‌ಬಿಐ ಮತ್ತೆ ರೆಪೋ ದರ ಸ್ಥಿರವಾಗಿರಿಸದು. ಈಗಾಗಲೇ ಈ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿಕೊಂಡಿದ್ದು, "ಅಗತ್ಯ ಬಂದಾಗ ಮತ್ತೆ ಹಣದುಬ್ಬರ ನಿಯಂತ್ರಣಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ," ಎಂದು ತಿಳಿಸಿದ್ದಾರೆ.
ರೆಪೋ ದರದ ಪ್ರಯೋಜನ ಇನ್ನು ಗ್ರಾಹಕರಿಗೆ ಲಭಿಸಿಲ್ಲ!
ಸಾಮಾನ್ಯವಾಗಿ ರೆಪೋ ದರ ಏರಿಕೆಯಾದಾಗ ಬ್ಯಾಂಕುಗಳು ರೆಪೋ ಆಧಾರಿತ ಸಾಲದ ಬಡ್ಡಿದರವನ್ನು ಏರಿಕೆ ಮಾಡುತ್ತದೆ. ಇದನ್ನು ನಾವು ಸಾಮಾನ್ಯವಾಗಿ ನೋಡುತ್ತಾ ಬಂದಿದ್ದೇವೆ. ಆದರೆ ರೆಪೋ ದರ ಏರಿಕೆಯಾದಾಗ ಬ್ಯಾಂಕುಗಳು ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಸಲು ಕೊಂಚ ಅಧಿಕ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಹಿಂದೆ ಒಟ್ಟು 6 ಬಾರಿ ರೆಪೋ ದರ ಏರಿಕೆ ಮಾಡಲಾಗಿದ್ದರೂ ಕೂಡಾ ಈವರೆಗೂ ಎಲ್ಲ ಬ್ಯಾಂಕುಗಳು ಅದಕ್ಕೆ ತಕ್ಕುದಾಗಿ ಎಫ್‌ಡಿ ಬಡ್ಡಿದರವನ್ನು ಏರಿಕೆ ಮಾಡಿಲ್ಲ.
2022ರ ಏಪ್ರಿಲ್‌ನಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿ ಮೇಲೆ ಕನಿಷ್ಠ ಮತ್ತು ಗರಿಷ್ಠ ಬಡ್ಡಿ ದರಗಳು ಕ್ರಮವಾಗಿ ಶೇಕಡ 5 ಮತ್ತು ಶೇಕಡ 5.60 ಎಂದು ಆರ್‌ಬಿಐ ಡೇಟಾ ತೋರಿಸುತ್ತದೆ. ಅದಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದ ಏಪ್ರಿಲ್‌ನಲ್ಲಿ ಕನಿಷ್ಠ ಎಫ್‌ಡಿ ಬಡ್ಡಿದರವು ಶೇಕಡ 1ರಷ್ಟು ಏರಿಕೆಯಾಗಿ, ಶೇಕಡ 6ಕ್ಕೆ ತಲುಪಿದೆ. ಮಾರ್ಚ್ 24, 2023 ರಂತೆ ಗರಿಷ್ಠ ಬಡ್ಡಿದರವು ಶೇಕಡ 1.65ರಷ್ಟು ಏರಿಕೆಯಾಗಿ ಶೇಕಡ 7.25ಕ್ಕೆ ತಲುಪಿದೆ. ಆರು ಬಾರಿ ಒಟ್ಟಾಗಿ ಶೇಕಡ 2.50 ಅಥವಾ 250 ಮೂಲಾಂಕ ರೆಪೋ ದರ ಏರಿಸಲಾಗಿದೆ. ಆದರೆ ಇದಕ್ಕೆ ತಕ್ಕುದಾಗಿ ಎಫ್‌ಡಿ ಬಡ್ಡಿದರ ಇಲ್ಲ.
ಎಫ್‌ಡಿ ಹೂಡಿಕೆಗೆ ಇದು ಉತ್ತಮ ಸಮಯವೇ?
ನಾವು ಪ್ರಸ್ತುತ ರೆಪೋ ದರ ಏರಿಕೆಯ ಉತ್ತುಂಗದ ಸಮೀಪದಲ್ಲಿದ್ದೇವೆ ಎಂದು ಹೆಚ್ಚಿನ ಪ್ರಮುಖ ಅಂಶಗಳು ಸೂಚಿಸುತ್ತವೆ. ಇತ್ತೀಚೆಗೆ ರೆಪೋ ದರ ಏರಿಕೆ ಮಾಡಿದಾಗ ಎಫ್‌ಡಿ ಬಡ್ಡಿದರ ಹೆಚ್ಚಳ ಮಾಡಲಾಗಿದೆ. ಕೊಂಚ ಸಮಯ ಆರ್‌ಬಿಐ ರೆಪೋ ದರ ಏರಿಕೆ ಮಾಡದೆ ಇರಬಹುದು. ಆದರೆ ಎಫ್‌ಡಿ ಬಡ್ಡಿದರ ಏರಿಕೆಯ ಸಮಯ ಇನ್ನು ಕೂಡಾ ಮುಗಿದಿಲ್ಲ. ಯಾಕೆಂದರೆ ಈವರೆಗೂ ಎಲ್ಲ ಬ್ಯಾಂಕುಗಳು ರೆಪೋ ದರ ಆಧಾರವಾಗಿ ಎಫ್‌ಡಿ ಬಡ್ಡಿದರವನ್ನು ಏರಿಕೆ ಮಾಡಿಲ್ಲ, ಅದರಲ್ಲೂ ಮುಖ್ಯವಾಗಿ ದೀರ್ಘಾವಧಿಯ ಎಫ್‌ಡಿ ಬಡ್ಡಿದರ ಏರಿಸಲಾಗಿಲ್ಲ. ಬ್ಯಾಂಕ್‌ಗಳ ಬಡ್ಡಿದರ ಏರಿಕೆ ಪ್ರಕ್ರಿಯೆ ಇನ್ನು ಕೊಂಚ ಸಮಯ ಇರಬಹುದು. ಆದರಿಂದ ಹೂಡಿಕೆ ಮಾಡಬಹುದು ಎಂಬವುದು ತಜ್ಞರ ಅಭಿಪ್ರಾಯವಾಗಿದೆ.


Click it and Unblock the Notifications