ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರೆಪೋ ದರವನ್ನು ಮತ್ತೆ ಏರಿಕೆ ಮಾಡಿದೆ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 5.4ಕ್ಕೆ ತಲುಪಿದೆ. ಈ ಬೆನ್ನಲ್ಲೇ ಬ್ಯಾಂಕ್‌ನಲ್ಲಿ ಗೃಹ ಸಾಲದ ಮೇಲಿನ ಇಎಂಐ ಏರಿಕೆಯಾಗಲಿದೆ. ಆದರೆ ನಮ್ಮ ಇಎಂಐ ಎಷ್ಟು ಏರಿಕೆಯಾಗಲಿದೆ ಎಂದು ನಮಗೆ ಗೊಂದಲವಿರಬಹುದು. ಈ ಬಗ್ಗೆ ನಾವಿಲ್ಲಿ ವಿವರ ನೀಡಿದ್ದೇವೆ.
ಕಳೆದ ನಾಲ್ಕು ತಿಂಗಳಿನಲ್ಲಿ ಮೂರು ಬಾರಿ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದೆ. ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ ರೆಪೋ ದರ ಎಷ್ಟಿತ್ತೋ ಅಷ್ಟಕ್ಕೆ ರೆಪೋ ದರ ಏರಿಕೆಯಾಗಿದೆ. ಹಣದುಬ್ಬರವು ಇನ್ನೂ ಕೂಡಾ ಅಧಿಕವಾಗಿಯೇ ಇದೆ. ಆ ನಿಟ್ಟಿನಲ್ಲಿ ಈ ವಿತ್ತೀಯ ನಿಯಮ ಬದಲಾವಣೆ ಮಾಡಬೇಕಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರೆಪೋ ದರ ಏರಿಕೆ ಘೋಷಣೆ ಮಾಡುವ ಸಂದರ್ಭದಲ್ಲಿ ಹೇಳಿದ್ದಾರೆ.
ಜಾಗತಿಕ ಕಚ್ಚಾ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 105 ಡಾಲರ್‌ಗಳನ್ನು ದಾಟದಿದ್ದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಹಣದುಬ್ಬರ ಶೇಕಡ 6.7 ರಷ್ಟಿರುತ್ತದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ. ಇನ್ನು ರೆಪೋ ದರ ಏರಿಕೆ ಬೆನ್ನಲ್ಲೇ ಗೃಹ ಸಾಲದ ಬಡ್ಡಿದರವನ್ನು ಕೂಡಾ ಬ್ಯಾಂಕ್‌ಗಳು ಏರಿಕೆ ಮಾಡಲಿದೆ. 30 ಲಕ್ಷ ಗೃಹ ಸಾಲದ ಮೇಲೆ ಎಷ್ಟು ಇಎಂಐ ಇರಲಿದೆ ಎಂಬ ಬಗ್ಗೆ ನಾವು ತಿಳಿಯೋಣ ಮುಂದೆ ಓದಿ....
ರೆಪೋ ದರ ಎಂದರೇನು?
ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ನೀಡುವ ಬಡ್ಡಿ ದರ ಇದಾಗಿದೆ. ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದರೆ ಸಾಮಾನ್ಯವಾಗಿಯೇ ಬ್ಯಾಂಕುಗಳು ಗೃಹ ಸಾಲ ಹಾಗೂ ಕಾರು ಸಾಲದ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಲಿದೆ. ಇದರಿಂದಾಗಿ ಕಾರು ಸಾಲ ಹಾಗೂ ಗೃಹ ಸಾಲದ ಮೇಲಿನ ಇಎಂಐ ಅಧಿಕವಾಗಲಿದೆ. ಅದು ಕೂಡಾ ಕಳೆದ ನಾಲ್ಕು ತಿಂಗಳಿನಲ್ಲಿ ಇದು ಮೂರನೇ ಬಾರಿ ಇಎಂಐ ಏರಿಕೆಯಾಗುತ್ತಿದೆ.
30 ಲಕ್ಷ ಸಾಲ ಪಡೆದಿದ್ದರೆ ಎಷ್ಟು ಇಎಂಐ ಆಗಲಿದೆ?
ನಾವು 20 ವರ್ಷ ಅವಧಿಗೆ 30 ಲಕ್ಷ ಗೃಹ ಸಾಲವನ್ನು ಪಡೆದಿದ್ದರೆ, ನಮ್ಮ ಗೃಹ ಸಾಲದ ಬಡ್ಡಿದರವು ಶೇಕಡ 7.55ರಿಂದ ಶೇಕಡ 8.05ಕ್ಕೆ ಏರಿಕೆಯಾಗಲಿದೆ. ಇದರಿಂದಾಗಿ ನಿಮ್ಮ ಇಎಂಐ 24,200 ರೂಪಾಯಿಯಿಂದ 25,100 ರೂಪಾಯಿಗೆ ಏರಿಕೆಯಾಗಲಿದೆ. ಅಂದರೆ ಸುಮಾರು 900 ರೂಪಾಯಿ ಇಎಂಐ ಅಧಿಕವಾಗಲಿದೆ.
40 ಲಕ್ಷ ಸಾಲಕ್ಕೆ ಎಷ್ಟು ಇಎಂಐ?
ನೀವು 40 ಲಕ್ಷ ರೂಪಾಯಿ ಗೃಹ ಸಾಲವನ್ನು ಪಡೆದಿದ್ದರೆ, ಅದರ ಇಎಂಐ ಕೂಡಾ ಅಧಿಕವಾಗಲಿದೆ. ನೀವು 20 ವರ್ಷ ಅವಧಿಗೆ 40 ಲಕ್ಷ ರೂಪಾಯಿ ಗೃಹ ಸಾಲ ಪಡೆದಿದ್ದೀರಿ ಎಂದುಕೊಳ್ಳಿ, ಆಗ ನಿಮ್ಮ ಇಎಂಐ 1,200 ರೂಪಾಯಿ ಏರಿಕೆಯಾಗುವ ಸಾಧ್ಯವಿದೆ. ಇನ್ನು 50 ಲಕ್ಷ ರೂಪಾಯಿ ಗೃಹ ಸಾಲವನ್ನು ಹೊಂದಿದ್ದರೆ ನಿಮ್ಮ ಇಎಂಐನಲ್ಲಿ ರೂಪಾಯಿ 1,500ರಷ್ಟು ಅಧಿಕ ಕಟ್ಟಬೇಕಾಗುತ್ತದೆ.


Click it and Unblock the Notifications