ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸತತ ಆರನೇ ಬಾರಿಗೆ ರೆಪೋ ದರವನ್ನು ಏರಿಕೆ ಮಾಡಿದೆ. ಬುಧವಾರ ಆರ್‌ಬಿಐ ತನ್ನ ಬೆಂಚ್‌ಮಾರ್ಕ್ ರೆಪೋ ದರವನ್ನು 25 ಮೂಲಾಂಕ ಏರಿಸಿದ್ದು ಪ್ರಸ್ತುತ ರೆಪೋ ದರವು ಶೇಕಡ 6.50 ಆಗಿದೆ. ಮುಖ್ಯವಾಗಿ ಹಣದುಬ್ಬರದವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ತನ್ನ ರೆಪೋ ದರವನ್ನು ಏರಿಸಿದೆ.
ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ. ಈಗ ಕೇಂದ್ರ ಬ್ಯಾಂಕ್ ರೆಪೋ ದರವನ್ನು ಏರಿಸಿರುವುದರಿಂದಾಗಿ ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ತನ್ನ ಬಡ್ಡಿದರವನ್ನು ಏರಿಸುವ ಸಾಧ್ಯತೆಯಿದೆ.
ಸಾಮಾನ್ಯವಾಗಿ ಆರ್‌ಬಿಐ ರೆಪೋ ದರವನ್ನು ಏರಿಸಿದರೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಸಾಲದ ಬಡ್ಡಿದರವನ್ನು ಹೆಚ್ಚಿಸುತ್ತದೆ. ಈ ಬ್ಯಾಂಕ್‌ಗಳು ಸಾಲದ ಬಡ್ಡಿದರ ಹೆಚ್ಚಿಸಿದಾಗ ಅದರ ನೇರ ಪರಿಣಾಮವು ಪ್ರಸ್ತುತ ಸಾಲವನ್ನು ಪಡೆದಿರುವವರಿಗೆ ಮತ್ತು ಇನ್ನು ಮುಂದೆ ಸಾಲ ಪಡೆಯುವವರ ಇಎಂಐ ಮೇಲೆ ಬೀಳುತ್ತದೆ. ಆರ್‌ಬಿಐ ಪ್ರಸ್ತುತ 25 ಮೂಲಾಂಕ ರೆಪೋ ದರ ಏರಿಸಿದ್ದರಿಂದ ಯಾವೆಲ್ಲ ಪರಿಣಾಮ ಉಂಟಾಗಲಿದೆ ತಿಳಿಯೋಣ ಮುಂದೆ ಓದಿ...
ಗೃಹ ಸಾಲದ ಬಡ್ಡಿದರ
ನೀವು ಸುಮಾರು 25 ಲಕ್ಷ ರೂಪಾಯಿ ಗೃಹ ಸಾಲವನ್ನು ಪಡೆದಿದ್ದರೆ ವಾರ್ಷಿಕ ಬಡ್ಡಿದರ 8.25 ಆಗಿದ್ದು, 20 ವರ್ಷ ಸಾಲ ಮರುಪಾವತಿ ಅವಧಿ ಎಂದುಕೊಳ್ಳಿ. ಬಡ್ಡಿದರವು 25 ಮೂಲಾಂಕ ಹೆಚ್ಚಾಗಿ ಶೇಕಡ 8.50ಕ್ಕೆ ತಲುಪಿದಾಗ, ನಿಮ್ಮ ಇಎಂಐ ಸರಿಸುಮಾರು 394 ರೂಪಾಯಿ ಏರಿಕೆಯಾಗಲಿದೆ. ಅಂದರೆ ಇಎಂಐ 21,302 ರೂಪಾಯಿಯಿಂದ 21,696 ರೂಪಾಯಿಗೆ ತಲುಪಲಿದೆ. 50 ಲಕ್ಷ ರೂಪಾಯಿ ಸಾಲವನ್ನು ನೀವು ಪಡೆದಾಗ ಇಎಂಐ 788 ರೂಪಾಯಿ ಆಗಿರಲಿದೆ. ಅಂದರೆ ಇಎಂಐ 42,603 ರೂಪಾಯಿಯಿಂದ 43,391 ರೂಪಾಯಿಗೆ ಏರಿಕೆಯಾಗಲಿದೆ.
ಕಾರು & ಬೈಕ್ ಸಾಲ
ಈ ಮೇಲೆ ತಿಳಿಸಿದಂತೆ ಬಡ್ಡಿದರವು ಏರಿಕೆಯಾದಾಗ ಆಟೋ ಸಾಲದ ಬಡ್ಡಿದರವು ಶೇಕಡ 9ರಿಂದ ಶೇಕಡ 10ರಷ್ಟಾಗಲಿದೆ. ಅಂದರೆ ನೀವು 7.50 ಲಕ್ಷ ರೂಪಾಯಿ ಸಾಲವನ್ನು 7 ವರ್ಷಗಳ ಅವಧಿಗೆ ಪಡೆದಿದ್ದರೆ, ಇಎಂಐ 400 ರೂಪಾಯಿ ಹೆಚ್ಚಳವಾಗಲಿದೆ. ಅಂದರೆ ಪ್ರತಿ ತಿಂಗಳು ನೀವು ಅಧಿಕ 400 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ವೈಯಕ್ತಿಕ ಸಾಲದ ಬಡ್ಡಿದರ
ಸಾಮಾನ್ಯವಾಗಿ ಬಡ್ಡಿದರ ಏರಿಕೆಯು ಸ್ಥಿರವಾದ ಬಡ್ಡಿದರದಲ್ಲಿ ಸಾಲ ಪಡೆದವರಿಗೆ ಯಾವುದೇ ಪರಿಣಾಮ ಉಂಟು ಮಾಡಲಾರದು. ಆದರೆ ರೆಪೋ ಆಧಾರಿತ ಬಡ್ಡಿದರದಲ್ಲಿ ಸಾಲ ಪಡೆದಿದ್ದರೆ, ರೆಪೋ ದರ ಪರಿಷ್ಕರಣೆ ಪರಿಣಾಮ ಬೀರಲಿದೆ. ನೀವು 5 ಲಕ್ಷ ರೂಪಾಯಿ ವೈಯಕ್ತಿಕ ಸಾಲವನ್ನು ಶೇಕಡ 13ರಷ್ಟು ಬಡ್ಡಿದರದಲ್ಲಿ 5 ವರ್ಷದ ಅವಧಿಗೆ ಪಡೆದಿದ್ದೀರಿ ಅಂದುಕೊಳ್ಳಿ. ಒಂದು ವೇಳೆ ಬಡ್ಡಿದರವು ಶೇಕಡ 13ರಿಂದ ಶೇಕಡ 15ಕ್ಕೆ ಏರಿಕೆಯಾದರೆ ಇಎಂಐ 518 ರೂಪಾಯಿ ಹೆಚ್ಚಾಗಲಿದೆ. ಅಂದರೆ ಪ್ರತಿ ತಿಂಗಳ ಇಎಂಐ 11,377 ರೂಪಾಯಿಯಿಂದ 11,895 ರೂಪಾಯಿಗೆ ಹೆಚ್ಚಳವಾಗಲಿದೆ.


Click it and Unblock the Notifications