ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಳೆದ ವಾರ 2000 ರೂಪಾಯಿ ನೋಟನ್ನು ಚಲಾವಣೆಯಿಂದ ಹಿಂಪಡೆದಿದೆ. ಇದೇ ಸಂದರ್ಭದಲ್ಲಿ ನೋಟು ಕಾನೂನಾತ್ಮಕವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಣೆಯನ್ನು ಕೂಡಾ ನೀಡಿದೆ. ಹಾಗೆಯೇ ಈ ನೋಟು ಬದಲಾವಣೆಗಾಗಿ ಆರ್‌ಬಿಐ ಸೆಪ್ಟೆಂಬರ್ 30, 2023ರವರೆಗೆ ಸಮಯವನ್ನು ಕೂಡಾ ನೀಡಿದೆ.
ನಿಮ್ಮಲ್ಲಿ 2000 ರೂಪಾಯಿ ನೋಟುಗಳು ಇದ್ದರೆ ಆ ನೋಟುಗಳನ್ನು ಬ್ಯಾಂಕುಗಳಲ್ಲಿ ಮತ್ತು ಆರ್‌ಬಿಐ ಕಚೇರಿಗಳಲ್ಲಿ ನೀವು ಈ ಗಡುವಿಗೂ ಮುನ್ನ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಬ್ಯಾಂಕುಗಳಲ್ಲಿ ನೀವು ಈ ನೋಟುಗಳನ್ನು ನೇರವಾಗಿ ನಿಮ್ಮ ಖಾತೆಗೆ ಡೆಪಾಸಿಟ್ ಕೂಡಾ ಮಾಡಬಹುದಾಗಿದೆ.

ನೀವು ಬ್ಯಾಂಕುಗಳಲ್ಲಿ ಈ 2000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡಲು ಹಾಗೂ ಡೆಪಾಸಿಟ್ ಮಾಡಲು ಯಾವುದೇ ಪುರಾವೆಗಳ ಅಥವಾ ದಾಖಲೆಗಳನ್ನು ನೀಡುವ ಬಗ್ಗೆ ಆರ್‌ಬಿಐ ಯಾವುದೇ ಉಲ್ಲೇಖವನ್ನು ಮಾಡಿಲ್ಲ. ಆದರೆ ಕೆಲವೊಂದು ಬ್ಯಾಂಕುಗಳಲ್ಲಿ ಹಣವನ್ನು ಡೆಪಾಸಿಟ್ ಮಾಡುವ ಸಂದರ್ಭದಲ್ಲಿ ದಾಖಲೆಗಳನ್ನು ಕೇಳಲಾಗುತ್ತಿದೆ ಎಂಬ ದೂರುಗಳು ಇದೆ.
ಕೆಲವು ಬ್ಯಾಂಕುಗಳು ಎಲೆಕ್ಟ್ರಾನಿಕ್ ಅಂದರೆ ಕಂಪ್ಯೂಟರ್‌ಗಳಲ್ಲಿ ಎಂಟ್ರಿ ಮಾಡಿಸಿಕೊಂಡು ನೋಟನ್ನು ಬದಲಾವಣೆ ಮಾಡಿಕೊಂಡರೆ, ಕೆಲವು ಬ್ಯಾಂಕುಗಳಲ್ಲಿ ಗ್ರಾಹಕರು ರಿಜಿಸ್ಟಾರ್ ಬುಕ್‌ನಲ್ಲಿ ತಮ್ಮ ಹೆಸರು, ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಹೇಳುತ್ತಿದೆ. ಯಾವುದೇ ಗುರುತಿನ ಪುರಾವೆಗಳನ್ನು ಕೇಳಲಾಗುತ್ತಿಲ್ಲ. ಆದರೆ ನೀವು ಖಾತೆಯನ್ನು ಹೊಂದಿರುವ ಬ್ಯಾಂಕ್‌ನಲ್ಲಿ ಏನು ನಿಯಮವಿದೆ ಎಂದು ನಿಮಗೆ ತಿಳಿದಿದೆಯ?, ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ವಿವಿಧ ಬ್ಯಾಂಕ್‌ಗಳಲ್ಲಿ 2000 ರೂಪಾಯಿ ನೋಟು ಬದಲಾವಣೆ ನಿಯಮ
ಎಸ್‌ಬಿಐ: ದೇಶದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 2000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಗ್ರಾಹಕರಿಂದ ಯಾವುದೇ ಮೆಮೋ ಅಥವಾ ಗುರುತಿನ ಪುರಾವೆಯನ್ನು ಪಡೆಯುವ ಅಗತ್ಯವಿಲ್ಲ ಎಂದು ಎಲ್ಲ ಬ್ರ್ಯಾಂಚ್‌ಗಳಿಗೆ ತಿಳಿಸಿದೆ.
ಪಿಎನ್‌ಬಿ: 2000 ರೂಪಾಯಿ ನೋಟು ಬದಲಾವಣೆ ಮಾಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಅಥವಾ ಅಧಿಕೃತ ಪರಿಶೀಲಿತಾ ದಾಖಲೆ (ಒವಿಡಿ) ಸಲ್ಲಿಸಬೇಕು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತಿಳಿಸಿದೆ. ಆದರೆ ಗ್ರಾಹಕರು ಯಾವುದೇ ಫಾರ್ಮ್ ಭರ್ತಿ ಮಾಡಬೇಕಾಗಿಲ್ಲ ಎಂದು ಹೇಳಿದೆ. ಪಿಎನ್‌ಬಿಯಲ್ಲಿ 2000 ರೂಪಾಯಿ ನೋಟು ಬದಲಾವಣೆಗೆ ಹೆಚ್ಚುವರಿ ಮಾಹಿತಿ ಪಡೆಯಲಾಗುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಬ್ಯಾಂಕ್ ನಿಯಮದ ಬಗ್ಗೆ ತಿಳಿಸಿದೆ.
ಇತರೆ ಪ್ರಮುಖ ಖಾಸಗಿ ಬ್ಯಾಂಕುಗಳು: ಖಾಸಗಿ ಬ್ಯಾಂಕುಗಳಾದ ಕೋಟಕ್ ಹಾಗೂ ಎಚ್‌ಎಸ್‌ಬಿಸಿ ತಮ್ಮ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿಲ್ಲದವರಿಂದ ನಾವು ಫಾರ್ಮ್ ಅಥವಾ ಗುರುತಿನ ಪುರಾವೆಯನ್ನು ಪಡೆಯುತ್ತಿದ್ದೇವೆ ಎಂದು ಹೇಳಿದೆ. ಇನ್ನು ಆಕ್ಸಿಸ್ ಬ್ಯಾಂಕ್, ಸ್ಟಾಡರ್ಡ್ ಚಾರ್ಟೆಡ್, ಯೆಸ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ತಮ್ಮ ಬ್ಯಾಂಕ್‌ನಲ್ಲಿ ಯಾವುದೇ ಫಾರ್ಮ್ ಅಥವಾ ಗುರುತಿನ ಪುರಾವೆ ಕಡ್ಡಾಯಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ನಮ್ಮ ಬ್ಯಾಂಕ್‌ನಲ್ಲಿ ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿಲ್ಲ. ಆದರೆ ಬ್ಯಾಂಕ್‌ನಲ್ಲಿ ಯಾವುದೇ ಖಾತೆಯನ್ನು ಹೊಂದಿರದ ಗ್ರಾಹಕರು ಗುರುತಿನ ಪುರಾವೆಯನ್ನು ನೀಡಬೇಕಾಗುತ್ತದೆ ಎಂದು ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ. ಇನ್ನು ಎಲ್ಲ ಗ್ರಾಹಕರುಗಳು ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ, ಆದರೆ ಎಲ್ಲ ಗುರುತಿನ ಪುರಾವೆ ನೀಡಬೇಕಾಗಿಲ್ಲ. ಬರೀ ನಮ್ಮಲ್ಲಿ ಖಾತೆಯನ್ನು ಹೊಂದಿರದ ಗ್ರಾಹಕರು ಗುರುತಿನ ಪುರಾವೆ ನೀಡಬೇಕಾಗುತ್ತದೆ ಎಂದು ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಹೇಳಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್: ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಮುಖವಾಗಿ ಮೂರು ವಿಚಾರಗಳನ್ನು ತಿಳಿಸಿದೆ. ಮೊದಲನೆಯಾಗಿ ಕಾನೂನಾತ್ಮಕ ನೋಟು ಇರಲಿದೆ ಎಂಬ ಭರವಸೆಯಾಗಿದೆ. 2,000 ರೂಪಾಯಿ ನೋಟು ಕಾನೂನುಬದ್ಧವಾಗಿ ಉಳಿಯುತ್ತದೆ. ನಿಮ್ಮ ಎಲ್ಲಾ ವಹಿವಾಟುಗಳಿಗೆ ನೀವು ಇದನ್ನು ಬಳಸಬಹುದು ಮತ್ತು ಪಾವತಿಯ ರೂಪವಾಗಿ ಸ್ವೀಕರಿಸಬಹುದು ಎಂದು ಬ್ಯಾಂಕ್ ಹೇಳಿದೆ.
ಎರಡನೇಯದಾಗಿ ಯಾವುದೇ ತೊಂದರೆ ಇಲ್ಲದೆ ಡೆಪಾಸಿಟ್ ಮಾಡಬಹುದು ಎಂದು ಬ್ಯಾಂಕ್ ತಿಳಿಸಿದೆ. ಸೆಪ್ಟೆಂಬರ್ 30, 2023 ರವರೆಗೆ ಯಾವುದೇ ಶಾಖೆಯಲ್ಲಿ ನಿಮ್ಮ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ ಯಾವುದೇ ಪ್ರಮಾಣದ 2000 ರೂಪಾಯಿ ನೋಟುಗಳನ್ನು ನೀವು ಅನುಕೂಲಕರವಾಗಿ ಠೇವಣಿ ಮಾಡಬಹುದು.
ಮೂರನೇಯದಾಗಿ ಸುಲಭ ಬದಲಾವಣೆಯಾಗಿದೆ. ನಾವು ಯಾವುದೇ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಲ್ಲಿ ಮೇ 23, 2023 ರಿಂದ ಸೆಪ್ಟೆಂಬರ್ 30, 2023 ರವರೆಗೆ ಸುಲಭವಾದ ವಿನಿಮಯ ಸೇವೆಯನ್ನು ನೀಡುತ್ತೇವೆ. ನಿಮ್ಮಲ್ಲಿರುವ 2000 ರೂಪಾಯಿ ನೋಟುಗಳನ್ನು ಪ್ರತಿ ದಿನದ 20,000 ರೂಪಾಯಿ ಮಿತಿಯೊಂದಿಗೆ ವಿನಿಮಯ ಮಾಡಿಕೊಳ್ಳಲು ನಿಮಗೆ ಅವಕಾಶ ನೀಡಲಾಗುತ್ತದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಹೇಳಿದೆ.
ಇನ್ನು 2000 ರೂಪಾಯಿ ನೋಟಿನ 50 ಸಾವಿರ ರೂಪಾಯಿಗಿಂತ ಅಧಿಕ ಮೊತ್ತವನ್ನು ತಮ್ಮ ಖಾತೆಯಲ್ಲಿ ಡೆಪಾಸಿಟ್ ಮಾಡುವ ಗ್ರಾಹಕರು ಪ್ಯಾನ್ ಕಾರ್ಡ್ ಅಥವಾ ನಂಬರ್ ಅನ್ನು ಹೊಂದಿರಬೇಕು ಎಂದು ಗ್ರಾಹಕರಿಗೆ ಬ್ಯಾಂಕ್ ತಿಳಿಸುತ್ತದೆ.


Click it and Unblock the Notifications