ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ನಮಗೆ ಎಷ್ಟು ರಿಟರ್ನ್ ಲಭ್ಯವಾಗುತ್ತದೆ ಎಂದು ನೋಡುತ್ತೇವೆ. ಯಾವುದೇ ಹೂಡಿಕೆದಾರರು ತಾವು ಮಾಡಿದ ಹೂಡಿಕೆಯು ಎಷ್ಟು ಕಡಿಮೆ ಅವಧಿಯಲ್ಲಿ ಹೆಚ್ಚು ಬೆಳವಣಿಗೆ ಹೊಂದುತ್ತದೆ ಎಂದು ನೋಡಿಕೊಂಡು ಹೂಡಿಕೆಯನ್ನು ಮಾಡುತ್ತಾರೆ.
ನಿಮ್ಮ ಹಣವು ಡಬಲ್ ಆಗಲು ಬೇಕಾದ ಸಮಯವು ನಿಮ್ಮ ಪೋರ್ಟ್‌ಫೋಲಿಯದಲ್ಲಿ ಹೂಡಿಕೆ ಮಾಡಲಾಗುವ ಆದಾಯವನ್ನು ಅವಲಂಬಿಸಿರುತ್ತದೆ. ನೀವು ಹೂಡಿಕೆ ಮಾಡಿದ ಮೊತ್ತವು ಡಬಲ್ ಆಗಲು ಎಷ್ಟು ಸಮಯ ಬೇಕಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?. ಆದಾಯದ ಆಧಾರದ ಮೇಲೆ ನಿಮ್ಮ ಹಣವು ಡಬಲ್ ಆಗುವ ಸಮಯವನ್ನು ಅಳೆಯಲು ಒಂದು ಸರಳ ವಿಧಾನವಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ನಿಯಮ 72 ಎಂದರೇನು?
ನಿಯಮ 72 ಎಂಬುದು ನಿಮ್ಮ ಹೂಡಿಕೆಯ ಮೇಲೆ ಗಳಿಸಿದ ವಾರ್ಷಿಕ ಬಡ್ಡಿದರದಿಂದ ಸಂಖ್ಯೆ 72 ಅನ್ನು ಭಾಗಿಸುವುದು ಆಗಿದೆ. ಇದು ಅತೀ ಸರಳವಾದ ಲೆಕ್ಕಾಚಾರವಾಗಿದೆ. ಈ ಸೂತ್ರವು ನಿಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸಲು ಅಗತ್ಯವಿರುವ ವರ್ಷಗಳ ಸಂಖ್ಯೆಯನ್ನು ನಿಮಗೆ ನೀಡುತ್ತದೆ. ನಿಯಮ 72 ನಿಖರವಾದ ಲೆಕ್ಕಾಚಾರವನ್ನು ನೀಡಲಾರದು, ಬದಲಾಗಿ ಅಂದಾಜು ಲೆಕ್ಕಾಚಾರವನ್ನು ನೀಡಲಿದೆ.
ಮೈಕ್ರೋಸಾಫ್ಟ್ ಎಕ್ಸೆಲ್‌ನಂತಹ ಕ್ಯಾಲ್ಕುಲೇಟರ್‌ಗಳು ಮತ್ತು ಸ್ಪ್ರೆಡ್‌ಶೀಟ್ ಅಪ್ಲಿಕೇಶನ್‌ಗಳು ಹೂಡಿಕೆಯನ್ನು ಡಬಲ್ ಮಾಡುವ ನಿಖರವಾದ ಸಮಯವನ್ನು ನಿರ್ಧರಿಸಲು ಸರಿಯಾದ ಲೆಕ್ಕಾಚಾರವನ್ನು ಒದಗಿಸಲಾಗುತ್ತದೆ. ಆದರೂ ಕೂಡಾ ನಿಯಮ 72 ನಿಮ್ಮ ಹಣವನ್ನು ಡಬಲ್ ಮಾಡಲು ತೆಗೆದುಕೊಳ್ಳುವ ಅಂದಾಜು ವರ್ಷಗಳ ಸಂಖ್ಯೆಯನ್ನು ಒದಗಿಸುತ್ತದೆ.
ನಿಯಮ 72 ಹೇಗೆ ಕಾರ್ಯನಿರ್ವಹಣೆಯಾಗುತ್ತದೆ?
ನಿಮ್ಮ ಹೂಡಿಕೆಯು ದ್ವಿಗುಣಗೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನಿರ್ಧರಿಸಲು, ನೀವು 72 ಸಂಖ್ಯೆಯಲ್ಲಿ ನಿರೀಕ್ಷಿತ ಬಡ್ಡಿದರವನ್ನು ಭಾಗಾಕಾರ ಮಾಡಬಹುದಾಗಿದೆ. ನೀವು ಫಿಕ್ಸಿಡ್ ಡೆಪಾಸಿಟ್ ಮೇಲೆ ವಾರ್ಷಿಕವಾಗಿ ಶೇಕಡ 6.2ರಷ್ಟು ಬಡ್ಡಿದರದೊಂದಿಗೆ ಹೂಡಿಕೆ ಮಾಡಿದ್ದೀರಿ ಎಂದುಕೊಳ್ಳಿ. ನೀವು ಮಾಡಿದ ಹೂಡಿಕೆಯು ಡಬಲ್ ಆಗಲು ಸುಮಾರು 11 ವರ್ಷಗಳಾದರೂ ಬೇಕಾಗುತ್ತದೆ.
ಹೌದು, ಈ ನಿಯಮ 72ರ ಪ್ರಕಾರವಾಗಿ ನೀವು ಹೂಡಿಕೆ ಮಾಡಿದ ಮೊತ್ತವು ಡಬಲ್ ಆಗಲು 11 ವರ್ಷಗಳು ಬೇಕಾಗುತ್ತದೆ. ಬಡ್ಡಿದರ ಶೇಕಡ 6.25 (11.52) ಅನ್ನು 72ರಿಂದ ಭಾಗಾಕಾರ ಮಾಡಿದರೆ ಹಣ ಡಬಲ್ ಆಗಲು ಎಷ್ಟು ಸಮಯ ಬೇಕಾಗುತ್ತದೆ ಎಂಬ ಮಾಹಿತಿ ಲಭ್ಯವಾಗುತ್ತದೆ.
ನೀವು ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ?
ನಿಮ್ಮ ಹಣವನ್ನು ದ್ವಿಗುಣಗೊಳಿಸಲು, ಅಗತ್ಯವಿರುವ ಹೂಡಿಕೆಯ ಮೊತ್ತವನ್ನು ನಿರ್ಧರಿಸುವುದು ಬಹಳ ಮುಖ್ಯ. ಸೂತ್ರದಲ್ಲಿ ಸ್ವಲ್ಪ ಹೊಂದಾಣಿಕೆಗಳನ್ನು ಮಾಡುವ ಮೂಲಕ, ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ನೀವು ಅಗತ್ಯ ಹೂಡಿಕೆಯನ್ನು ಲೆಕ್ಕ ಹಾಕಬಹುದು. ಉದಾಹರಣೆಗೆ, ನೀವು 3 ವರ್ಷಗಳಲ್ಲಿ ನಿಮ್ಮ ಹಣವನ್ನು ಡಬಲ್ ಮಾಡಲು ಗುರಿಯನ್ನು ಹೊಂದಿದ್ದರೆ ನೀವು ಶೇಕಡ 21 ರಿಂದ 24ರಷ್ಟು ವಾರ್ಷಿಕ ಆದಾಯವನ್ನು ಹೊಂದುವ ಅಗತ್ಯವಿದೆ.
ಅದೇ ರೀತಿ, ನೀವು 5 ವರ್ಷಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಬಯಸಿದರೆ, ನೀವು ವರ್ಷಕ್ಕೆ ಕನಿಷ್ಠ ಶೇಕಡ 14.4 (72/5) ಬಡ್ಡಿ ದರವನ್ನು ಹೊಂದಿರಬೇಕಾಗುತ್ತದೆ. 10 ವರ್ಷಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಿ, ವರ್ಷಕ್ಕೆ ಸುಮಾರು ಶೇಕಡ 7.2ರಷ್ಟು ಬಡ್ಡಿ ದರವು ಅಗತ್ಯವಾಗಿರುತ್ತದೆ.
ಯುವಕರಿಗೆ ಇರುವ ಹೂಡಿಕೆ ಆಯ್ಕೆಗಳು
ನಿಮ್ಮ ಹೂಡಿಕೆಯಿಂದ ನೀವು ನಿಗದಿತ ಪ್ರಮಾಣದ ರಿಟರ್ನ್ ಅನ್ನು ಪಡೆಯಲು ಬಯಸಿದರೆ, ಅದಕ್ಕೆ ಉತ್ತಮ ಆಯ್ಕೆ ಫಿಕ್ಸಿಡ್ ಡೆಪಾಸಿಟ್ ಆಗಿದೆ. ಮಾರುಕಟ್ಟೆಯ ಸ್ಥಿತಿ ಹೇಗಿದ್ದರೂ ಕೂಡಾ ನೀವು ಹೂಡಿಕೆ ಮಾಡಬಹುದಾದ ಉತ್ತಮ ಆಯ್ಕೆಯೇ ಫಿಕ್ಸಿಡ್ ಡೆಪಾಸಿಟ್ ಆಗಿದೆ. ಇದರಿಂದ ನೀವು ಉತ್ತಮ ರಿಟರ್ನ್ ಪಡೆಯಲು ಸಾಧ್ಯವಾಗುತ್ತದೆ.
ರೆಕ್ಯೂರಿಂಗ್ ಡೆಪಾಸಿಟ್ ಅಥವಾ ಆರ್‌ಡಿ ಕೊಂಚ ಫಿಕ್ಸಿಡ್ ಡೆಪಾಸಿಟ್‌ನಂತೆಯೇ ಆಗಿದೆ. ಆದರೆ ಫಿಕ್ಸಿಡ್ ಡೆಪಾಸಿಟ್‌ನಂತೆ ಒಂದೇ ಬಾರಿಗೆ ಹೂಡಿಕೆ ಮಾಡುವ ಆಯ್ಕೆ ರೆಕ್ಯೂರಿಂಗ್ ಡೆಪಾಸಿಟ್‌ನಲ್ಲಿ ಇಲ್ಲ. ನೀವು ಮಾಸಿಕವಾಗಿ ಫಿಕ್ಸಿಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಇನ್ನು ಎಸ್‌ಐಪಿ, ಚಿನ್ನದ ಮೇಲೆ ಹೂಡಿಕೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹೂಡಿಕೆಯನ್ನು ಕೂಡಾ ಮಾಡಬಹುದಾಗಿದೆ.


Click it and Unblock the Notifications