ಈ ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್‌ಲೈನ್ ಮೂಲಕ ನಡೆಯುತ್ತದೆ. ನಾವು ನಗದು, ಎಟಿಎಂ ಬಳಕೆಗಿಂತ ಅಧಿಕವಾಗಿ ಯುಪಿಐ ಪಾವತಿ ವ್ಯವಸ್ಥೆಯನ್ನು ಬಳಕೆ ಮಾಡುತ್ತಿದ್ದೇವೆ. ಅದಕ್ಕಾಗಿ ಹಲವಾರು ಆಪ್‌ಗಳು ಕೂಡಾ ಇದೆ. ಆದರೆ ಈ ಯುಪಿಐ ಮೂಲಕವೇ ಹಲವಾರು ವಂಚನೆಗಳು ನಡೆಯುತ್ತಿದೆ.
ಈ ಡಿಜಿಟಲ್ ಯುಗದಲ್ಲಿ ಇಂಟರ್‌ನೆಟ್ ಎಲ್ಲವನ್ನೂ ಕೂಡಾ ಸುಲಭವನ್ನಾಗಿಸಿದೆ. ಆದರೆ ಹಲವಾರು ಆನ್‌ಲೈನ್ ಸ್ಕ್ಯಾಮ್‌ಗಳಿಗೆ ದಾರಿ ಮಾಡಿಕೊಟ್ಟಿದೆ. ಹಲವಾರು ಮಂದಿ ಆನ್‌ಲೈನ್ ವಂಚನೆಗೆ ಒಳಗಾಗುತ್ತಿದ್ದಾರೆ. ಯಾವುದೋ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೂಲಕ ವಂಚನೆಗೆ ಒಳಗಾಗುತ್ತಿದ್ದಾರೆ.
ಇನ್ನು ಕೆಲವರು ವಿದ್ಯಾವಂತರಾದರೂ ಆನ್‌ಲೈನ್ ವಂಚನೆಗೆ ಒಳಗಾಗುತ್ತಿದ್ದಾರೆ. ಈಗಾಗಲೇ ಕೆಲವು ಬ್ಯಾಂಕ್‌ಗಳು ಆನ್‌ಲೈನ್ ವಂಚನೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಆದರೆ ನಾವು ಕೆಲವೊಂದು ಸುರಕ್ಷಿತ ಕ್ರಮಗಳನ್ನು ಕೈಗೊಂಡರೆ ಈ ವಂಚನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿದೆ. ಆ ಮುಂಜಾಗ್ರತಾ ಕ್ರಮಗಳು ಯಾವುದು, ನೀವು ಆನ್‌ಲೈನ್ ವಂಚನೆಗೆ ಒಳಗಾಗದಿರಲು ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಸ್ಕ್ಯಾಮರ್‌ಗಳ ಬಗ್ಗೆ ಇರಲಿ ಎಚ್ಚರ
ಹಲವಾರು ಮಂದಿ ಮುಖ್ಯವಾಗಿ ಹಿರಿಯ ನಾಗರಿಕರು ತಮಗೆ ಬ್ಯಾಂಕ್ ಸಿಬ್ಬಂದಿಗಳು ಕರೆ ಮಾಡಿದ್ದಾರೆ ಎಂಬ ಕಾರಣಕ್ಕೆ ತಮ್ಮ ಯುಪಿಐ ಐಡಿ, ಪಿನ್, ಎಟಿಎಂ ಪಿನ್ ಮೊದಲಾದವುಗಳನ್ನು ಹೇಳಿಬಿಡುತ್ತಾರೆ. ಆದರೆ ನಾವು ಈ ವಂಚನೆಯಿಂದ ತಪ್ಪಿಸಿಕೊಳ್ಳಬೇಕಾದರೆ ಯಾವುದೇ ಸರ್ಕಾರಿ ಸಂಸ್ಥೆ, ಬ್ಯಾಂಕ್ ಅಥವಾ ಹೆಚ್ಚಾಗಿ ತಿಳಿದಿರುವ ಸಂಸ್ಥೆಯ ಹೆಸರಿನಲ್ಲಿ ಬರುವ ಕರೆಗೆ ಪಿನ್ ತಿಳಿಸಬಾರದು. ಯಾವುದೇ ಕರೆಯಲ್ಲಿ ನಿಮ್ಮ ಪ್ರಮುಖ ಮಾಹಿತಿಯನ್ನು ಕೇಳಿದಾಗ ನೀವು ಆ ಸಂಖ್ಯೆಯನ್ನು ಪರಿಶೀಲನೆ ಮಾಡಿ. ಸಾಮಾನ್ಯವಾಗಿ ಯಾವುದೇ ಬ್ಯಾಂಕ್, ಸರ್ಕಾರಿ ಸಿಬ್ಬಂದಿಗಳು ಕರೆಯ ಮೂಲಕ ನಿಮ್ಮ ಒಟಿಪಿ ತಿಳಿಸುವಂತೆ ಕೇಳುವುದಿಲ್ಲ ಎಂಬುವುದು ನೆನಪಿರಲಿ.
ಮೊಬೈಲ್, ಕಂಪ್ಯೂಟರ್ ಆಕ್ಸಸ್
ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಯಾವುದೋ ಅಪ್‌ಡೇಟ್ ಇದೆ ಅಥವಾ ಯಾವುದೋ ಕೆವೈಸಿ ಮಾಡುಲಿದೆ ಎಂದು ನಿಮಗೆ ಕರೆಗಳು ಬರಬಹುದು. ಹಾಗೆಯೇ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಆಕ್ಸಸ್ ಅನ್ನು ನೀಡುವಂತೆ ನಿಮ್ಮ ಮೊಬೈಲ್‌ನಲ್ಲಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ನಾವೇ ಆ ಕಾರ್ಯವನ್ನು ಮಾಡುತ್ತೇವೆ ಎಂದು ಹೇಳಬಹುದು. ಅದಕ್ಕಾಗಿ ಆಪ್‌ಗಳನ್ನು ಕೂಡಾ ಡೌನ್‌ಲೋಡ್ ಮಾಡುವಂತೆ ಒತ್ತಾಯ ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಅಲ್ಲಿ ಯಾವುದೇ ಅನಧಿಕೃತ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿ.
ಎಲ್ಲಾ ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡುವುದು ಅಪಾಯ!
ನಮಗೆ ಸಾಮಾನ್ಯವಾಗಿ ಟೈಟಲ್ ಅಥವಾ ಹೆಡ್‌ಲೈನ್ ಆಕರ್ಷಿತವಾಗಿ ಕಂಡರೆ ಅದರ ಲಿಂಕ್ ಅನ್ನು ಕ್ಲಿಕ್ ಮಾಡುತ್ತೇವೆ. ಇದು ಕೂಡಾ ಬಹಳ ಅಪಾಯಕಾರಿ ಆಗಬಹುದು. ಒಂದು ಕ್ಲಿಕ್ ಮೂಲಕವೇ ವಂಚಕರು ನಮ್ಮ ಖಾತೆಯನ್ನು ಹ್ಯಾಕ್ ಮಾಡಬಹುದು. ಕ್ಯಾಷ್ ಬ್ಯಾಂಕ್, ಕೊಡುಗೆ ನೆಪದಲ್ಲಿ ಯಾವುದೇ ಅನಧಿಕೃತ ವೆಬ್‌ಸೈಟ್ ಅನ್ನು ಕ್ಲಿಕ್ ಮಾಡಬೇಡಿ. ನೀವು ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿದ ಕೂಡಲೇ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವು ಮಂಗಮಾಯಾವಾಗಬಹುದು.
ಯುಪಿಐ ಪಿನ್ ಬದಲಾವಣೆ ಮಾಡುತ್ತಿರಿ
ನಾವು ಸಾಮಾನ್ಯವಾಗಿ ಹ್ಯಾಕಿಂಗ್‌ನಿಂದ ತಪ್ಪಿಸಿಕೊಳ್ಳಲು ನಮ್ಮ ಯುಪಿಐ ಪಿನ್ ಅನ್ನು ಬದಲಾವಣೆ ಮಾಡುತ್ತಿರುವುದು ಉತ್ತಮವಾಗಿದೆ. ತಿಂಗಳಿಗೆ ಒಂದು ಬಾರಿಯಾದರೂ ನಮ್ಮ ಯುಪಿಐ ಪಿನ್ ಅನ್ನು ಬದಲಾವಣೆ ಮಾಡಬೇಕು. ಕೆಲವು ಬ್ಯಾಂಕ್‌ಗಳ ಆಪ್‌ಗಳಲ್ಲಿ ಆರು ತಿಂಗಳಿಗೊಮ್ಮೆ ಪಾಸ್‌ವರ್ಡ್ ಅನ್ನು ಬದಲಾವಣೆ ಮಾಡುವುದು ಕಡ್ಡಾಯವಾಗಿದೆ.
ಯುಪಿಐ ಪಾವತಿಗೆ ಮಿತಿ ಇರಿಸಿ
ನಾವು ಯುಪಿಐ ಪಾವತಿಗೆ ಮಿತಿಯನ್ನು ಇರಿಸುವುದು ಕೂಡಾ ಆನ್‌ಲೈನ್ ಹ್ಯಾಂಕಿಂಗ್‌ನಿಂದ ತಪ್ಪಿಸಿಕೊಳ್ಳಲು ಒಂದು ತಂತ್ರವಾಗಿದೆ. ಹಾಗೆಯೇ ನಾವು ಪ್ರತಿ ವಹಿವಾಟಿನ ಸಂದರ್ಭದಲ್ಲೂ ನಾವು ಸರಿಯಾದ ವ್ಯಕ್ತಿಗೆ ಪಾವತಿ ಮಾಡುತ್ತಿದ್ದೇವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಯುಪಿಐ ಪಿನ್, ಹೆಸರು ಸರಿಯಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಬೇಕು.


Click it and Unblock the Notifications