ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಾಲ್ಕನೇ (IV) ಸೀರೀಸ್‌ನ ಸವರನ್ ಗೋಲ್ಡ್ ಬಾಂಡ್ ಯೋಜನೆ 2022-23 ಚಂದಾದಾರಿಕೆಯನ್ನು ಮಾರ್ಚ್ 6ರಂದು (ಸೋಮವಾರ) ಆರಂಭಿಸಿದೆ. ಹೂಡಿಕೆ ಮಾಡಲು ಬಯಸುವವರು ಇಂದಿನಿಂದ ಹೂಡಿಕೆ ಮಾಡಬಹುದಾಗಿದೆ. ಈ ಹಣಕಾಸು ವರ್ಷದ ಕೊನೆಯ ಬಾಂಡ್ ಇದಾಗಿರಲಿದೆ. ಮಾರ್ಚ್ 10ರವರೆಗೆ ಸವರನ್ ಗೋಲ್ಡ್ ಬಾಂಡ್ ಚಂದಾದಾರಿಕೆಯನ್ನು ಮಾಡುವ ಅವಕಾಶವಿದೆ.
ಸವರನ್ ಗೋಲ್ಡ್ ಬಾಂಡ್ ಚಿನ್ನದ ಖರೀದಿಗೆ ಆರ್‌ಬಿಐ ಮೂಲ ದರವಾಗಿ ಪ್ರತಿ ಗ್ರಾಮ್‌ಗೆ 5,611 ರೂಪಾಯಿ ನಿಗದಿಪಡಿಸಿದೆ. ಡಿಸೆಂಬರ್ 2022ರಂದು ಜಾರಿ ಮಾಡಿದ ಯೋಜನೆಯಲ್ಲಿ ಆರ್‌ಬಿಐ ಪ್ರತಿ ಗ್ರಾಮ್‌ಗೆ 5,409 ರೂಪಾಯಿ ನಿಗದಿ ಮಾಡಿತ್ತು. ಅದಕ್ಕೂ ಮುಂಚಿನ ಸಂಚಿಕೆಯಲ್ಲಿ 5,197 ರೂಪಾಯಿ ನಿಗದಿಪಡಿಸಲಾಗಿತ್ತು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪಾವತಿಸಿದರೆ ಪ್ರತಿ ಗ್ರಾಮ್‌ಗೆ 50 ರೂಪಾಯಿ ರಿಯಾಯಿತಿ ಲಭ್ಯವಾಗಲಿದೆ. ಈ ಯೋಜನೆಯ ಬಗ್ಗೆ ಪ್ರಮಿಖ ಮಾಹಿತಿಯನ್ನು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...
ಗರಿಷ್ಠ, ಕನಿಷ್ಠ ಹೂಡಿಕೆ, ಮೆಚ್ಯೂರಿಟಿ
ಓರ್ವ ವ್ಯಕ್ತಿ ಕನಿಷ್ಠವಾಗಿ 1 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡುವ, ಗರಿಷ್ಠವಾಗಿ 4 ಕೆಜಿ ಚಿನ್ನದ ಮೇಲೆ ಹೂಡಿಕೆ ಮಾಡುವ ಅವಕಾಶವಿದೆ. ಹಿಂದೂ ಅವಿಭಜಿತ ಕುಟುಂಬವಾದಲ್ಲಿ 4 ಕೆಜಿ, ಟ್ರಸ್ಟ್ ಆದಲ್ಲಿ 20 ಕೆಜಿ ಚಿನ್ನಕ್ಕೆ ಹೂಡಿಕೆ ಮಾಡಬಹುದು. ಬ್ಯಾಂಕ್, ಸ್ಟಾಕ್ ಹೋಲ್ಡಿಂಗ್ಸ್ ಕಾಪೋರೇಷನ್, ಪೋಸ್ಟ್ ಆಫೀಸ್‌ನಿಂದ ಈ ಬಾಂಡ್ ಖರೀದಿಸಬಹುದು. 8 ವರ್ಷಗಳ ಮೆಚ್ಯೂರಿಟಿ ಅವಧಿಯಿದೆ. 5ನೇ ವರ್ಷದ ಬಳಿಕ ಎಕ್ಸಿಟ್ ಆಯ್ಕೆಯಿದೆ. ಲಾಕಿನ್ ಅವಧಿ 5 ವರ್ಷಕ್ಕಿಂತ ಮುನ್ನ ಬಾಂಡ್ ಹಿಂಪಡೆಯಬೇಕಾದರೆ ಸ್ಟಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.
ಎಸ್‌ಜಿಬಿ ಮೇಲೆ ಯಾರು ಹೂಡಿಕೆ ಮಾಡಬಹುದು?
ಫಾರಿನ್ ಎಕ್ಸ್‌ಚೇಂಜ್ ಮಾನೆಜ್‌ಮೆಂಟ್ ಆಕ್ಟ್ (ಎಫ್‌ಇಎಂಎ) ಪ್ರಕಾರವಾಗಿ ಭಾರತದ ಯಾವುದೇ ಪ್ರಜೆಗಳು ಸವರನ್ ಗೋಲ್ಡ್ ಬಾಂಡ್ (ಎಸ್‌ಜಿಬಿ) ಮೇಲೆ ಹೂಡಿಕೆ ಮಾಡುವ ಅವಕಾಶ ಹೊಂದಿದ್ದಾರೆ. ಓರ್ವ ವೈಕ್ತಿ, ಹಿಂದೂ ಅವಿಭಜಿತ ಕಟುಂಬ, ಖಾಸಗಿ ಅಥವಾ ಸರ್ಕಾರಿ ಟ್ರಸ್ಟ್‌ಗಳು, ಯೂನಿವರ್ಸಿಟಿಗಳು ಹೂಡಿಕೆ ಮಾಡಬಹುದು. ಅಪ್ರಾಪ್ತರ ಪರವಾಗಿ ಅವರ ಪೋಷಕರು ಕೂಡಾ ಬಾಂಡ್‌ಗೆ ಹೂಡಿಕೆ ಮಾಡಬಹುದಾಗಿದೆ. ಆದರೆ ಎನ್‌ಆರ್‌ಐ (ನಾನ್ ರೆಸಿಡೆಂಟ್ ಆಫ್ ಇಂಡಿಯಾ) ಬಾಂಡ್ ಖರೀದಿ ಮಾಡುವಂತಿಲ್ಲ. ಆದರೆ ನಾಮಿನಿ ಆಗಿರಬಹುದು.
ಎಸ್‌ಜಿಬಿ ಪ್ರಯೋಜನಗಳು ಹಲವು
ಫಿಸಿಕಲ್ ಚಿನ್ನದಂತೆ ಚಿನ್ನದ ಬಾಂಡ್ ಸುರಕ್ಷತೆಯ ಚಿಂತೆ ಇಲ್ಲ. ಸವರನ್ ಗೋಲ್ಡ್ ಬಾಂಡ್ ಸುರಕ್ಷತೆಗೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಅದು ಸುರಕ್ಷಿತವಾಗಿರುತ್ತದೆ. ಹಾಗೆಯೇ ಯಾವುದೇ ಜಿಎಸ್‌ಟಿ, ಮೇಕಿಂಗ್ ಶುಲ್ಕಗಳು ಇಲ್ಲ. ಚಿನ್ನದ ಕಾಯಿನ್, ಬಾರ್, ಆಭರಣಗಳಾದರೆ ಜಿಎಸ್‌ಟಿ, ಮೇಕಿಂಗ್ ಚಾರ್ಜ್ ಇರಲಿದೆ. ಡಿಜಿಟಲ್ ಚಿನ್ನ ಖರೀದಿ ಮಾಡುವಾಗಲೂ ನೀವು ಶೇಕಡ 3ರಷ್ಟು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಸವರನ್ ಗೋಲ್ಡ್ ಬಾಂಡ್‌ನಲ್ಲಿ ಮೇಕಿಂಗ್ ಚಾರ್ಜ್ ತಲೆಬಿಸಿಯಿಲ್ಲ.
ಸಾಲಕ್ಕೆ ಮೇಲಾಧಾರ
ಸವರನ್ ಗೋಲ್ಡ್ ಬಾಂಡ್ ಅನ್ನು ನೀವು ಸಾಲಕ್ಕೆ ಮೇಲಾಧಾರವನ್ನಾಗಿಸಬಹುದು. ಆರ್‌ಬಿಐ ನಿರ್ಧಾರ ಮಾಡಿದಂತೆ ಇತರೆ ಚಿನ್ನದ ಸಾಲದಂತೆ ಸಾಲದ ಮೌಲ್ಯವಿರಲಿದೆ. ಸರ್ಕಾರವು 2015ರ ನವೆಂಬರ್‌ನಲ್ಲಿ ಸವರನ್ ಗೋಲ್ಡ್ ಬಾಂಡ್ ಆರಂಭಿಸಲಾಗಿದೆ. ಆರ್‌ಬಿಐ ಅಡಿಯಲ್ಲಿ ಚಂದಾದಾರಿಕೆ ಇರಲಿದೆ. ಸವರನ್ ಗೋಲ್ಡ್ ಬಾಂಡ್ ಹೂಡಿಕೆ ಮಾಡಬೇಕಾದರೆ, ಕೆಲವು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಇತರೆ ಯೋಜನೆಗಳಲ್ಲಿ ಕೂಡಾ ಅಗತ್ಯವಾದ ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್, ಟಿಎಎಸ್/ಪಾಸ್‌ಪೋರ್ಟ್, ವೋಟರ್ ಐಡಿ ಹೊಂದಿರಬೇಕಾಗುತ್ತದೆ.
ನೀವು ಹೂಡಿಕೆ ಮಾಡಬಹುದೇ?
ಸಾಂಪ್ರದಾಯಿಕವಾಗಿ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಪ್ರಮುಖವಾಗಿ ಮಾರುಕಟ್ಟಯಲ್ಲಿ ಏರಿಳಿತ ಮತ್ತು ನಷ್ಟ ಉಂಟಾದ ಸಂದರ್ಭದಲ್ಲಿ ಚಿನ್ನದ ಹೂಡಿಕೆ ಸುರಕ್ಷಿತ. ಯಾವುದೇ ಸಂದರ್ಭದಲ್ಲಿ ಸಹಾಯಕವಾಗಲಿದೆ. ಆದ್ದರಿಂದಾಗಿ ನಿಮ್ಮ ವಿವಿಧ ಹೂಡಿಕೆಗಳಲ್ಲಿ ಎಸ್‌ಜಿಬಿ ಕೂಡಾ ಒಂದಾಗಿದ್ದರೆ ಉತ್ತಮವಾಗಿರಲಿದೆ. ಹಣಕಾಸು ಹೂಡಿಕೆ ಬಗ್ಗೆ ಮಾಹಿತಿ ನೀಡುವ ತಜ್ಞರ ಪ್ರಕಾರ ನಾವು ಹೂಡಿಕೆ ಮಾಡುವ ಮೊತ್ತದ ಶೇಕಡ 10-15ರಷ್ಟು ಭಾಗವನ್ನು ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಉತ್ತಮ. ವಾರ್ಷಿಕವಾಗಿ ಶೇಕಡ 2.5ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ.


Click it and Unblock the Notifications