ಕರ್ನಾಟಕದ ಸರ್ಕಾರಿ ಉದ್ಯೋಗಿಗಳು ವೇತನ ಪರಿಷ್ಕರಣೆಗಾಗಿ ಕಾಯುತ್ತಿದ್ದಾರೆ. ಆದರೆ ಈ ಉದ್ಯೋಗಿಗಳಿಗೆ ಇಲ್ಲೊಂದು ನಿರಾಸೆಯ ಸುದ್ದಿಯಿದೆ. 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ ಆರು ತಿಂಗಳ ಕಾಲ ವಿಸ್ತರಣೆ ಮಾಡುವ ನಿರೀಕ್ಷೆಯಿದೆ.
ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರ ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿದೆ. ಈ ಆಯೋಗದ ಅವಧಿ ನವೆಂಬರ್ 19ಕ್ಕೆ ಅಂತ್ಯಗೊಳ್ಳಲಿದೆ. ಹಾಗೆಯೇ ಈ ಆಯೋಗವು ನವೆಂಬರ್‌ನಲ್ಲೇ ವರದಿಯನ್ನು ನೀಡುವ ಅಂದಾಜು ಮಾಡಲಾಗಿತ್ತು. ಆದರೆ ಈಗ ಈ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ ಆರು ತಿಂಗಳುಗಳ ಕಾಲ ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎಂಬ ಸುದ್ದಿಯಿದೆ.

ಸೆಪ್ಟೆಂಬರ್ 29ರಂದು ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಹಾಗೂ ಸದಸ್ಯರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿದೆ. ಅಲ್ಲಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ. ಹಣಕಾಸು ಖಾತೆ ಸಚಿವರೂ ಸಹ ಮುಖ್ಯಮಂತ್ರಿಗಳೇ ಆಗಿರುವುದರಿಂದ ಆಯೋಗ ವರದಿ ನೀಡುವ ಕುರಿತು ಚರ್ಚೆ ಮಾಡಲಾಗಿತ್ತು. ಈಗ ಆರು ತಿಂಗಳು ಅವಧಿ ವಿಸ್ತರಣೆ ಮಾಡಲಾಗುತ್ತದೆಯೇ?
ಆರು ತಿಂಗಳು ಆಯೋಗದ ಅವಧಿ ವಿಸ್ತರಿಸಲಾಗುತ್ತಾ?
ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ತ್ರಿಸದಸ್ಯರ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಲಾಗಿತ್ತು. ಹಾಗೆಯೇ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಿ 6 ತಿಂಗಳ ಕಾಲಮಿತಿಯಲ್ಲಿ ವರದಿಯನ್ನು ಸಲ್ಲಿಸಿದೆ. ಈ ಬಗ್ಗೆ ದಿನಾಂಕ 19/11/2022ರಂದು ಈ ಕುರಿತು ಆದೇಶ ಹೊರಡಿಸಲಾಗಿತ್ತು.
ಮೇ ತಿಂಗಳಿನಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಹೊಸ ಸರ್ಕಾರ ಆಯೋಗ ವರದಿ ನೀಡಲು ನಿಗದಿಪಡಿಸಿರುವ ಕಾಲಾವಧಿಯನ್ನು ದಿನಾಂಕ 19/5/2023ರಿಂದ 6 ತಿಂಗಳು ವಿಸ್ತರಣೆ ಮಾಡಿ ಆದೇಶ ಹೊರಡಿಸಿತ್ತು. ಈ ಆದೇಶ ನವೆಂಬರ್ 19ರ ತನಕ ಜಾರಿಯಲ್ಲಿರುತ್ತದೆ. ಆದರೆ ಈಗ ಮತ್ತೆ ಆರು ತಿಂಗಳುಗಳ ಅವಧಿ ವಿಸ್ತರಣೆ ಮಾಡಲಾಗುವ ಸಾಧ್ಯತೆಯಿದೆ.
ಕರ್ನಾಟಕ ಸರ್ಕಾರ ರಚನೆ ಮಾಡಿರುವ ಈ 7ನೇ ರಾಜ್ಯ ವೇತನ ಆಯೋಗಕ್ಕೆ ಸುಧಾಕರ್ ರಾವ್ ಅಧ್ಯಕ್ಷರು ಆಗಿದ್ದಾರೆ. ಪಿ. ಬಿ. ರಾಮಮೂರ್ತಿ, ಶ್ರೀಕಾಂತ್ ಬಿ. ವನಹಳ್ಳಿ, ಹೆಪ್ಸಿಬಾ ರಾಣಿ ಕೊರ್ಲಪಾಟಿ ಆಯೋಗದಲ್ಲಿದ್ದಾರೆ. ಈ ಆಯೋಗದ ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಣೆ ಮಾಡಿದರೆ, 2024 ರಲ್ಲಿ ವರದಿಯನ್ನು ಸ್ವೀಕರಿಸುವ ನಿರೀಕ್ಷೆಯಿದೆ.
"6ನೇ ವೇತನ ಪರಿಷ್ಕರಣೆಯನ್ನು ತ್ವರಿತವಾಗಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ತಿಂಗಳು ವರದಿ ಪಡೆದು, ಶೀಘ್ರ ಜಾರಿಗೊಳಿಸುವ ಭರವಸೆಯಿದೆ," ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಮಾಡಿದ ಬಳಿಕ ಅಂತಿಮವಾಗಿ ಆದೇಶ ಪ್ರಕಟವಾಗಲಿದೆ. ಆಯೋಗದ ಅವಧಿಯನ್ನು ಮತ್ತೆ ಆರು ತಿಂಗಳು ವಿಸ್ತರಣೆ ಮಾಡುವ ನಿರೀಕ್ಷೆ ಇದೆ.


Click it and Unblock the Notifications