ಬೆಂಗಳೂರು ನಿವಾಸಿಗಳಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ಈಗ ಡಿಸೆಂಬರ್ 11ರ ಸೋಮವಾರದಿಂದ ಎಲೆಕ್ಟ್ರಿಕ್ ರೈಲು ಆರಂಭವಾಗುತ್ತಿದೆ. ಬೆಂಗಳೂರಿಗರು ಈ ಎಲೆಕ್ಟ್ರಿಕ್ ರೈಲಿನ ಮೂಲಕ ನಗರದಿಂದ 60 ಕಿಮೀ ದೂರದಲ್ಲಿರುವ ಜನಪ್ರಿಯ ಪ್ರವಾಸ ತಾಣವಾದ ನಂದಿ ಹಿಲ್ಸ್‌ಗೆ ಪ್ರಯಾಣಿಸಬಹುದು.
ಮನಿ ಕಂಟ್ರೋಲ್ ಪ್ರಕಟಿಸಿದ ವರದಿಯ ಪ್ರಕಾರ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಮೆಮು) ರೈಲುಗಳನ್ನು ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಈ ರೈಲಿನ ಮಾರ್ಗ, ಟಿಕೆಟ್ ದರ, ಇತರೆ ಮಾಹಿತಿ ಇಲ್ಲಿದೆ ಮುಂದೆ ಓದಿ...

ರೈಲು ಸಂಖ್ಯೆ, ಸ್ಥಳ
ಮೆಮು ರೈಲುಗಳಲ್ಲಿ 06593/06594 ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ, 06531/06532 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ-ಕಂಟೋನ್ಮೆಂಟ್ ಮತ್ತು 06535/06538 ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ ರೈಲುಗಳು ಸೇರಿದೆ.
ಪ್ರಸ್ತುತ, 16549/16550 ಕೆಎಸ್‌ಆರ್ ಬೆಂಗಳೂರು - ಕೋಲಾರ- ಕೆಎಸ್‌ಆರ್ ಬೆಂಗಳೂರು ಡೆಮು ಮತ್ತು 06387/06388 ಕೆಎಸ್‌ಆರ್ ಬೆಂಗಳೂರು-ಕೋಲಾರ-ಕಂಟೋನ್ಮೆಂಟ್ ಡೀಸೆಲ್ ಮಲ್ಟಿಪಲ್ ಯುನಿಟ್ (ಡೆಮು) ನಂದಿ ಹಿಲ್ ಸ್ಟೇಟಷ್‌ನಲ್ಲಿ ನಿಲುಗಡೆ ಹೊಂದಿದೆ. ಮನಿ ಕಂಟ್ರೋಲ್‌ಗೆ ನಂದಿ ಬೆಟ್ಟದಲ್ಲಿ ನೆಲೆಸಿರುವ ಇತಿಹಾಸ ಪ್ರೇಮಿ ಸಿದ್ಧಾರ್ಥ್ ರಾಜಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಥಳೀಯ ನಿವಾಸಿಗಳು, ಪ್ರಯಾಣಿಕರು ಹೇಳುವುದೇನು?
"ನಂದಿ ಬೆಟ್ಟದ ತಳದಲ್ಲಿರುವ ಭೋಗನಂದೀಶ್ವರ ದೇವಸ್ಥಾನವು ನಂದಿ ಸ್ಟೇಷನ್‌ನಿಂದ ಸರಿಸುಮಾರು 1.4 ಕಿಮೀ ದೂರದಲ್ಲಿದೆ. ನಂದಿ ಬೆಟ್ಟದ ತುದಿಯನ್ನು ತಲುಪಲು ನೀವು ಹೆಚ್ಚುವರಿ 15-18 ಕಿಮೀ ಪ್ರಯಾಣಿಸಬೇಕಾಗಿದೆ," ಎಂದು ಸಿದ್ಧಾರ್ಥ್ ರಾಜಾ ಹೇಳಿದರು. ನೈರುತ್ಯ ರೈಲ್ವೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವತ್ತ ಗಮನಹರಿಸಬೇಕು ಎಂದು ಕೂಡಾ ಸಲಹೆ ನೀಡಿದರು.
"ನಂದಿ ಹಿಲ್ಸ್‌ನಲ್ಲಿ ಸೂರ್ಯೋದಯವನ್ನು ವೀಕ್ಷಿಸಲು ಬಯಸುವವರಿಗೆ ನಗರದಿಂದ 6:37 ಕ್ಕೆ ನಂದಿ ಹಿಲ್ಸ್‌ಗೆ ತಲುಪುವ ಮೆಮು ರೈಲು ತುಂಬಾ ತಡವಾಗಿ ತಲುಪಿದಂತೆ ಆಗುತ್ತದೆ," ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಈ ವಿಸ್ತೃತ ರೈಲು ಸೇವೆಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಚಿಕ್ಕಬಳ್ಳಾಪುರದ ಇಶಾ ಫೌಂಡೇಶನ್‌ನಲ್ಲಿರುವ 112 ಅಡಿ ಆದಿಯೋಗಿ ಬಸ್ಟ್‌ಗೆ ಹೋಗುವ ರೈತರು ಮತ್ತು ಸಂದರ್ಶಕರಿಗೂ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಟಿಕೆಟ್ ದರ ಎಷ್ಟಿರಲಿದೆ?
ನಂದಿ ಹಿಲ್ಸ್ ಸ್ಟೇಷನ್‌ಗೆ ಪ್ರಯಾಣಿಸಲು ಕೇವಲ 40 ರೂಪಾಯಿ ನೀಡಬೇಕಾಗುತ್ತದೆ. ಬೆಂಗಳೂರು ಕಂಟೋನ್ಮೆಂಟ್ (ಎರಡು ರೈಲುಗಳು -06531 ಮತ್ತು 06538) ಮತ್ತು ಯಶವಂತಪುರದಿಂದ ಒಂದು (06593) ರೈಲು ಆರಮಭವಾಗುತ್ತದೆ. ಕೆಎಸ್‌ಆರ್‌ಟಿಸಿ ಬಸ್ ದರ 70 ರೂಪಾಯಿ ಆಗಿದೆ. ಇದರ ಜೊತೆಗೆ ಬೆಂಗಳೂರು- ಚಿಕ್ಕಬಳ್ಳಾಪುರ ನಡುವೆ ಬಿಎಂಟಿಸಿ ಎಸಿ ಬಸ್‌ಗಳಿವೆ.


Click it and Unblock the Notifications