ನಮ್ಮ ಜೀವನದ ಭದ್ರತೆಗೆ ಹಣ ಅಗತ್ಯ ಬಹಳ ಉಂಟು. ನಮ್ಮ ಸಂಪಾದನೆಯಲ್ಲಿ ಭವಿಷ್ಯಕ್ಕಾಗಿ ಹಣ ಉಳಿತಾಯ ಅಗತ್ಯ. ಉಳಿತಾಯಕ್ಕೆ ನೂರಾರು ಮಾರ್ಗಗಳುಂಟು. ಷೇರು, ಮ್ಯೂಚುಯಲ್ ಫಂಡ್ ಇತ್ಯಾದಿ ಕಡೆ ಹೂಡಿಕೆ ಮಾಡುತ್ತಾರೆ. ಕೆಲವರು ಸೈಟು, ಚಿನ್ನ ಖರೀದಿಸಿಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರು ಕ್ರಿಪ್ಟೋಕರೆನ್ಸಿಗಳ ಹಿಂದೆ ಹೋಗುತ್ತಾರೆ. ಆದರೆ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸದ ಜನರು ಎಫ್‌ಡಿ, ಆರ್‌ಡಿಯಂತಹ ಸುರಕ್ಷಿತ ಹೂಡಿಕೆ ಯೋಜನೆಗಳ ಮೊರೆ ಹೋಗುತ್ತಾರೆ.
ಫಿಕ್ಸೆಡ್ ಡೆಪಾಸಿಟ್ ಸ್ಕೀಮ್‌ಗಳು ಕೊಟ್ಟ ಹಣಕ್ಕೆ ಮೋಸ ಮಾಡುವುದಿಲ್ಲ. ನಮ್ಮ ದುಡ್ಡು ನಿಗದಿತ ಅವಧಿಯವರೆಗೆ ಸುರಕ್ಷಿತವಾಗಿರುತ್ತದೆ. ನಿಮ್ಮ ಉಳಿತಾಯದ ಹಣವನ್ನು ಸ್ವಲ್ಪಮಟ್ಟಿಗಾದರೂ ಬೆಳೆಸಲು ಎಫ್‌ಡಿ ಸಹಾಯಕವಾಗುತ್ತದೆ. ಸೇವಿಂಗ್ಸ್ ಅಕೌಂಟ್‌ನಲ್ಲಿ ನಿಮ್ಮ ಹಣಕ್ಕೆ ಸಿಗುವುದಕ್ಕಿಂತ ಹೆಚ್ಚು ಬಡ್ಡಿಯನ್ನು ಎಫ್‌ಡಿ ಸ್ಕೀಮ್‌ನಲ್ಲಿ ಕೊಡಲಾಗುತ್ತದೆ.
ಫಿಕ್ಸೆಡ್ ಡೆಪಾಸಿಟ್ ಪ್ಲಾನ್‌ಗಳು ಹಲವಾರು ಇವೆ. ಬ್ಯಾಂಕ್‌ಗಳಲ್ಲಿ ಎಫ್‌ಡಿ ಇಡಬಹುದು. ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಕೂಡ ಎಫ್‌ಡಿ ಪ್ಲಾನ್ ಹೊಂದಿವೆ. ಪೋಸ್ಟ್ ಆಫೀಸ್‌ನ ಹಲವು ಸ್ಕೀಮ್‌ಗಳಲ್ಲಿ ಎಫ್‌ಡಿ ಪ್ಲಾನ್‌ಗಳೂ ಇವೆ. ಕನಿಷ್ಠ ಒಂದು ಸಾವಿರ ರೂನಿಂದ ಎಫ್‌ಡಿ ಸ್ಕೀಮ್‌ಗಳು ಆರಂಭವಾಗುತ್ತವೆ.

ಹೆಚ್ಚು ಆಯ್ಕೆಗಳಿರುವ ಹಿನ್ನೆಲೆಯಲ್ಲಿ ಜನರಿಗೆ ಎಲ್ಲಿ ಎಫ್‌ಡಿ ಇಡಬಹುದು ಎಂಬ ಜಂಜಾಟವಾಗಬಹುದು. ಬ್ಯಾಂಕ್‌ನಲ್ಲಿ ಎಫ್‌ಡಿ ಇಡುವುದೋ ಅಥವಾ ಪೋಸ್ಟ್ ಆಫೀಸ್ ಎಫ್‌ಡಿ ಒಳ್ಳೆಯದೋ ಎಂಬ ಗೊಂದಲವಾಗಬಹುದು. ಎರಡೂ ಕೂಡ ಉತ್ತಮ ಆಯ್ಕೆಯೇ. ಆದರೆ, ಇವೆರೆಡರ ಮಧ್ಯೆ ಕೆಲ ವ್ಯತ್ಯಾಸಗಳ ಬಗ್ಗೆ ಹೋಲಿಕೆ ಇಲ್ಲಿದೆ:
* ಬ್ಯಾಂಕ್‌ಗಳಲ್ಲಿ ಖಾಸಗಿ ಬ್ಯಾಂಕ್‌ಗಳೂ ಇರುತ್ತವೆ. ಅಂಚೆ ಕಚೇರಿ ಸಂಪೂರ್ಣ ಸರ್ಕಾರಿ ಸ್ವಾಮ್ಯದ್ದು
* ಬ್ಯಾಂಕ್‌ನ ಬಡ್ಡಿ ದರಗಳು ಮಾರುಕಟ್ಟೆ ಪರಿಣಾಮಗಳಿಗೆ ತಕ್ಕಂತೆ ಬದಲಾಗುತ್ತವೆ. ಆದರೆ, ಪೋಸ್ಟ್ ಆಫೀಸ್‌ನಲ್ಲಿ ಎಫ್‌ಡಿ ಬಡ್ಡಿದರಗಳು ಬಹುತೇಕ ನಿಶ್ಚಿತವಾಗಿರುತ್ತವೆ.
* ಬ್ಯಾಂಕ್‌ನಲ್ಲಿ ಎಫ್‌ಡಿ ಅವಧಿಯ ಆಯ್ಕೆ ಹೆಚ್ಚು ಇರುತ್ತದೆ. ಏಳು ದಿನಗಳಿಂದ ಹಿಡಿದು 10 ವರ್ಷಗಳವರೆಗೆ ಯಾವುದಾದರೂ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಪೋಸ್ಟ್ ಆಫೀಸ್‌ನಲ್ಲಿ ಎಫ್‌ಡಿಯನ್ನು ಗರಿಷ್ಠ 5 ವರ್ಷಗಳವರೆಗೆ ಮಾತ್ರ ಇಡಬಹುದು.

* ಬ್ಯಾಂಕ್‌ನಲ್ಲಿ ಎಫ್‌ಡಿಯ ಅವಧಿ ಮತ್ತು ಮೊತ್ತದ ಮೇಲೆ ಬಡ್ಡಿ ದರ ನಿಗದಿಯಾಗುತ್ತದೆ. ಆದರೆ, ಪೋಸ್ಟ್ ಆಫೀಸ್‌ನಲ್ಲಿ ಎಫ್‌ಡಿ ಅವಧಿಯ ಮೇಲೆ ದರದಲ್ಲಿ ವ್ಯತ್ಯಾಸವಾಗುತ್ತದೆ.
* ಬ್ಯಾಂಕ್‌ನಲ್ಲಿ ನೀವು ಯಾವಾಗ ಬೇಕಾದರೂ ಎಫ್‌ಡಿ ಹಣ ಹಿಂಪಡೆಯಬಹುದು. ಅವಧಿಗೆ ಮುಂಚೆ ವಿತ್‌ಡ್ರಾ ಮಾಡಿದರೆ ಬಡ್ಡಿದರದ ಶೇ. ೦.೫ರಿಂದ ಶೇ. ೧ರಷ್ಟು ಹಣವನ್ನು ದಂಡವಾಗಿ ಮುರಿದುಕೊಳ್ಳಲಾಗುತ್ತದೆ. ಆದರೆ, ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ ಆರು ತಿಂಗಳೊಳಗೆ ಹಣ ವಿತ್‌ಡ್ರಾ ಮಾಡಿಕೊಳ್ಳಲು ಆಗಲ್ಲ.


Click it and Unblock the Notifications