ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹೊಸದಾಗಿ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಆರಂಭ ಮಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಆಗಾಗೇ ಆರಂಭ ಮಾಡುತ್ತಾ ಬರುತ್ತಿದೆ. ನಾವು ಬೆಂಗಳೂರಿನಲ್ಲಿರುವವರಾದರೆ ಇಲ್ಲಿಂದಲೇ ಪ್ರವಾಸ ಮಾಡುವ ಅವಕಾಶ ನಮಗಿದೆ.
ಆ ಪೈಕಿ ಬೆಂಗಳೂರು - ಕನ್ಯಾಕುಮಾರಿ - ರಾಮೇಶ್ವರಂ ಮದುರೈ ಪ್ರವಾಸ ಪ್ಯಾಕೇಜ್ ಕೂಡಾ ಒಂದಾಗಿದೆ. ನೀವು ಕನ್ಯಾಕುಮಾರಿಗೆ ಭೇಟಿ ನೀಡಲು ಬಯಸುವುದಾದರೆ ನೀವು ಈ ಪ್ಯಾಕೇಜ್ ಅನ್ನು ಖರೀದಿ ಮಾಡಬಹುದಾಗಿದೆ. ಇದು 4 ರಾತ್ರಿಗಳು ಮತ್ತು 5 ದಿನಗಳ ಪ್ರವಾಸ ಪ್ಯಾಕೇಜ್ ಆಗಿದ್ದು, ಹೆಸರೇ ಹೇಳುವಂತೆ ಕನ್ಯಾಕುಮಾರಿ, ರಾಮೇಶ್ವರಂ, ಮದುರೈಗೆ ಭೇಟಿ ನೀಡಬಹುದಾಗಿದೆ. ಈ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಪ್ರವಾಸ ಪ್ಯಾಕೇಜ್‌ನ ವಿವರ
ಪ್ಯಾಕೇಜ್ ಹೆಸರು: ಡಿವೈನ್ ತಮಿಳುನಾಡು ಪ್ಯಾಕೇಜ್ ಎಕ್ಸ್ ಬೆಂಗಳೂರು
ಯಾವೆಲ್ಲ ಸ್ಥಳಕ್ಕೆ ಭೇಟಿ: ಬೆಂಗಳೂರು, ಕನ್ಯಾಕುಮಾರಿ, ರಾಮೇಶ್ವರಂ, ಮದುರೈ
ಪ್ರವಾಸ ಯಾವುದರಲ್ಲಿ?: ರೈಲಿನಲ್ಲಿ ಪ್ರಯಾಣ
ಸಮಯ ಹಾಗೂ ದಿನಾಂಕ: ಬೆಂಗಳೂರು ನಗರದಿಂದ ಪ್ರತಿ ಗುರುವಾರ ಸಂಜೆ 5 ಗಂಟೆಗೆ ಸರಿಯಾಗಿ ಪ್ರಯಾಣ ಆರಂಭವಾಗಲಿದೆ.
ಯಾವ ದಿನ ಎಲ್ಲಿ ಪ್ರವಾಸ?
ದಿನ 1 (ಗುರುವಾರ): ಸಂಜೆ 5 ಗಂಟೆಗೆ ಪ್ರಯಾಣ ಆರಂಭವಾಗಲಿದೆ. ರಾತ್ರಿ ಪ್ರಯಾಣ ಇರಲಿದೆ.
ದಿನ 2 (ಶುಕ್ರವಾರ): 08:15 ಗಂಟೆಗೆ ನಾಗರಕೋಯಿಲ್ ಜಂಕ್ಷನ್‌ಗೆ ರೈಲು ತಲುಪಲಿದೆ. ಕಾಯ್ದಿರಿಸಿದ ವಾಹನದ ಮೂಲಕ ಹೊಟೇಲ್‌ಗೆ ಭೇಟಿ. ಅಲ್ಲಿಂದ ಕುಮಾರಿ ಅಮ್ಮನ ದೇವಸ್ಥಾನ, ವಿವೇಕಾನಂದ ರಾಕ್ ಸ್ಮಾರಕ, ತಿರುವಳ್ಳುವರ್ ಪ್ರತಿಮೆ, ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಲಾಗುತ್ತದೆ. (ಈ ಎಲ್ಲಾ ಸ್ಥಳಗಳು ಹೋಟೆಲ್‌ನಿಂದ ನಡೆದುಕೊಂಡು ಹೋಗುವ ದೂರದಲ್ಲಿದ್ದು, ಪ್ರಯಾಣಿಕರು ಈ ಸ್ಥಳಗಳಿಗೆ ತಾವಾಗಿಯೇ ಭೇಟಿ ನೀಡಬೇಕು). ಸಂಜೆ ಸನ್ಸೆಟ್ ಪಾಯಿಂಟ್ ಮತ್ತು ವ್ಯಾಕ್ಸ್ ಮ್ಯೂಸಿಯಂಗೆ ಭೇಟಿ ನೀಡಲಾಗುತ್ತದೆ. ಕನ್ಯಾಕುಮಾರಿಯಲ್ಲಿ ರಾತ್ರಿ ಉಳಿಯಲಾಗುತ್ತದೆ.
ದಿನ 3 (ಶನಿವಾರ): ಸಮುದ್ರ ತೀರದಲ್ಲಿ ಮುಂಜಾನೆಯ ಸೂರ್ಯೋದಯವನ್ನು ವೀಕ್ಷಿಸಬಹುದು. ತಿರುಚೆಂದೂರ್ ಮಾರ್ಗ ಮೂಲಕ ರಾಮೇಶ್ವರಂಗೆ ಭೇಟಿ. ಹೊಟೇಲ್‌ನಲ್ಲಿ ಚೆಕ್ ಇನ್ ಆದ ಬಳಿಕ ಸಂಜೆಯವರೆಗೆ ನಿಮಗೆ ಸಮಯವಕಾಶ ನೀಡಲಾಗುತ್ತದೆ. ರಾಮೇಶ್ವರಂನಲ್ಲಿ ರಾತ್ರಿ ತಂಗಲಾಗುತ್ತದೆ.
ದಿನ 4 (ಭಾನುವಾರ): ಮುಂಜಾನೆ ರಾಮನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ. ನಂತರ ರಾಮರ್ಪಾದಂ ದೇವಸ್ಥಾನ, ಐದು ಮುಖದ ಹನುಮಾನ್ ದೇವಸ್ಥಾನಕ್ಕೆ ಭೇಟಿ. ಅಲ್ಲಿಂದ ಮಧುರೈಗೆ ನಿರ್ಗಮನ. ತಿರುಪುರನ್-ಕುಂದ್ರಂ ಮುರುಗನ್ ದೇವಸ್ಥಾನ, ತಿರುಮಲೈ ನಾಯಕರ್ ಮಹಲ್ ಮತ್ತು ಮೀನಾಕ್ಷಿ ಅಮ್ಮನ ದೇವಸ್ಥಾನಕ್ಕೆ ಭೇಟಿ. ರಾತ್ರಿ 8 ಗಂಟೆಗೆ ಮಧುರೈ ನಿಲ್ದಾಣಕ್ಕೆ ತಲುಪಲಿದ್ದೀರಿ. ರೈಲು ಸಂಖ್ಯೆ 17236 ಮೂಲಕ ಬೆಂಗಳೂರಿಗೆ 23:50 ಗಂಟೆಗೆ ನಿರ್ಗಮಿಸಲಿದ್ದಾರೆ.
ದಿನ 5: ಬೆಂಗಳೂರಿಗೆ ಬೆಳಿಗ್ಗೆ 9:20 ಕ್ಕೆ ರೈಲು ತಲುಪಲಿದೆ. ಇಲ್ಲಿಗೆ ಪ್ರಯಾಣ ಕೊನೆಯಾಗಲಿದೆ.
ಪ್ಯಾಕೇಜ್ ದರ ಎಷ್ಟಿದೆ ನೋಡಿ
ಕನ್ಫರ್ಟ್ ಕ್ಯಾಟಗರಿಯಲ್ಲಿ ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 26280 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 14360 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 11210 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 8380 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 6820 ರೂಪಾಯಿ ಆಗಿದೆ.
ಸ್ಟಾಡರ್ಡ್ ಕ್ಯಾಟಗರಿಯಲ್ಲಿ ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 24750 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 12830 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 9680 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 6850 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 5290 ರೂಪಾಯಿ ಆಗಿದೆ.


Click it and Unblock the Notifications