ದೇಶದ ಷೇರು ಮಾರುಕಟ್ಟೆಯಲ್ಲಿ ನಡೆದ ಅತಿದೊಡ್ಡ ಹಗರಣದಲ್ಲಿ ಭಾಗಿಯಾದವರ ಪೈಕಿ ಹರ್ಷದ್ ಮೆಹ್ತಾ ಅವರು ಕುಖ್ಯಾತರಾಗಿದ್ದಾರೆ. ಈ ಹಗರಣದ ಬಳಿಕ 2001ರಲ್ಲಿ ನಡೆದ ಮತ್ತೊಂದು ದೊಡ್ಡ ಸ್ಕ್ಯಾಮ್‌ನಲ್ಲಿ ಕೇತನ್ ಪರೇಖ್ ಅವರು ಸಿಲುಕಿಕೊಂಡಿದ್ದರು.
ಹರ್ಷದ್ ಮೆಹ್ತಾ ಮಾಡಿದ ರೀತಿಯಲ್ಲೇ ಕೇತನ್ ಕೂಡ ಮುಂಬೈ ಷೇರು ಮಾರುಕಟ್ಟೆಯನ್ನು ಲೂಟಿ ಹೊಡೆಯುವಲ್ಲಿ ಕುಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಹರ್ಷದ್ ಮೆಹ್ತಾ ಒಂದು ದಶಕ ಅಥವಾ ಅದಕ್ಕಿಂತಲೂ ಮೊದಲು ಬಳಸಿದ ತಂತ್ರಗಳನ್ನೇ ಉಪಯೋಗಿಸಿಕೊಂಡು ಅತಿದೊಡ್ಡ ಈ ವಂಚನೆಯನ್ನು ಮಾಡಿದ್ದಾರೆ. ಹರ್ಷದ್ ಮೆಹ್ತಾಗೆ ಎದುರಾದ ಸ್ಥಿತಿಯೇ ಪರೇಖ್‌ಗೂ ಬಂದು ಎನ್ನುವುದು ಗಮನಾರ್ಹ.

ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಕೇತನ್ ಪರೇಖ್ ಅವರು ತಮ್ಮ ಕುಟುಂಬದ ಬ್ರೋಕರೇಜ್ ವ್ಯವಹಾರದ ನಿಯಂತ್ರಣದ ಹೊಣೆಯನ್ನು ವಹಿಸಿಕೊಂಡಿದ್ದರು. ಹರ್ಷದ್ ಮೆಹ್ತಾ ಅವರಂತೆಯೇ ಪರೇಖ್ ಕೂಡ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಭಾವಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಜತೆಗೆ ಪ್ರಮುಖ ಉದ್ಯಮಿಗಳು ಹಾಗೂ ಲೀಡರ್‌ಗಳೊಂದಿಗೆ ಒಡನಾಟವನ್ನು ಹೊಂದಿದ್ದರು.
1200 ಭಾರತೀಯರಿಗೆ 9 ದಿನದಲ್ಲಿ 1,400 ಕೋಟಿ ರೂಪಾಯಿ ವಂಚಸಿದ ಚೀನೀ ವಂಚಕ!
ಹರ್ಷದ್ ಮೆಹ್ತಾ ಅವರು ಬಳಸಿದ್ದ ʼಪಂಪ್ ಅಂಡ್ ಡಂಪ್ʼ ಕಾರ್ಯ ತಂತ್ರದ ಬಗ್ಗೆ ಆಳವಾದ ಜ್ಞಾನ-ತಂತ್ರಗಾರಿಕೆಯನ್ನು ಪರೇಖ್ ಕೂಡ ಹೊಂದಿದ್ದರು. ಆದರೆ ಅದಕ್ಕೆ ಹೊಸ ರೀತಿಯ ತಿರುವನ್ನು ನೀಡುವುದಕ್ಕೆ ಪರೇಖ್ ಪ್ರಯತ್ನಿಸಿದ್ದರು. ಪ್ರಮುಖವಾಗಿ ʼಪಂಪ್ ಅಂಡ್ ಡಂಪ್ʼ ಎನ್ನುವುದು ಷೇರು ಮಾರುಕಟ್ಟೆಯ ಒಂದು ಪ್ರಮುಖ ಮೋಸದ ಯೋಜನೆಯಾಗಿದೆ.
ಇದರಡಿ ಸಾಮಾನ್ಯವಾಗಿ ಹೂಡಿಕೆದಾರರು ಆರಂಭದಲ್ಲಿ ಷೇರುಗಳ ಬೆಲೆಯನ್ನು ಏರಿಸುತ್ತಾರೆ ಹಾಗೂ ನಂತರ ಸ್ಟಾಕ್ ಉತ್ತುಂಗಕ್ಕೆ ತಲುಪಿದಾಗ ಎಲ್ಲ ಷೇರುಗಳನ್ನು ಮಾರಾಟ ಮಾಡುವ ಮೂಲಕ ಕೈತೊಳೆದುಕೊಳ್ಳುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೈಗೆಟಕುವ ಕಡಿಮೆ ಬೆಲೆಯ ಷೇರುಗಳ ಮೂಲಕ ಹೂಡಿಕೆದಾರರನ್ನು ಆಕರ್ಷಿಸುವುದಕ್ಕೆ ಕೇತನ್ ಪರೇಖ್ ಹೆಸರುವಾಸಿಯಾಗಿದ್ದರು.
2000 ದಶಕದ ಆರಂಭದಲ್ಲಿ ಪರೇಖ್ ಅವರು ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ದೊಡ್ಡ ಉದ್ಯಮವಾಗಿ ಬೆಳೆಯುತ್ತಿತ್ತು. ಇದು ಜನರನ್ನು ಐಟಿ ಷೇರುಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುವುದಕ್ಕೆ ಉತ್ತೇಜಿಸಿತ್ತು. ಈ ಅವಕಾಶವನ್ನು ಬಳಸಿಕೊಂಡ ಪರೇಖ್ ಸಣ್ಣ ಐಟಿ ಕಂಪನಿಗಳನ್ನು ಗುರಿಯಾಗಿಸಿಕೊಂಡು ʼಪಂಪ್ ಅಂಡ್ ಡಂಪ್ʼವಿಧಾನದಡಿ ಗಣನೀಯವಾದ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾದರು.
ಅದಾದ ಬಳಿಕವೂ ಕೇತನ್ ಪರೇಖ್ ಅವರು ಕಡಿಮೆ ಮಾರುಕಟ್ಟೆ ಬಂಡವಾಳ ಹಾಗೂ ಲಿಮಿಟೆಡ್ ಲಿಕ್ವಿಡಿಟಿ ಫೀಚರ್ಸ್ ಹೊಂದಿದ ಷೇರುಗಳ ಹುಡುಕಾಟವನ್ನು ಮುಂದುವರಿಸಿದ್ದರು. ಆ ಮೂಲಕ ಅಂಥಹ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಇಡೀ ಷೇರು ಮಾರುಕಟ್ಟೆಯನ್ನೇ ಬುಡಮೇಲು ಮಾಡುವ ತಂತ್ರಗಾರಿಕೆಯನ್ನು ಮುಂದುವರಿಸಿದ್ದರು.
ಕೇತನ್ ಪರೇಖ್ ಮುಂಬೈನ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯೊಂದಕ್ಕೆ 137 ಕೋಟಿ ರೂ. ವಂಚಿಸಿರುವ ಆರೋಪ ಕೇಳಿ ಬಂದಾಗ, ಷೇರು ಮಾರುಕಟ್ಟೆಯಲ್ಲಿನ ಅವರ ಒಂದೊಂದು ಅಕ್ರಮಗಳು ಬಯಲಾಗತೊಡಗಿತು. ಅಷ್ಟೊತ್ತಿಗೆ ಷೇರು ಮಾರುಕಟ್ಟೆ ಕೂಡ ಭಾರೀ ಕುಸಿತಕ್ಕೆ ಕಾರಣವಾಯಿತು.
ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಪರೇಖ್ ಅವರ ಮೇಲಿನ ಆರೋಪಗಳ ಬಗ್ಗೆ ತನಿಖೆ ನಡೆಸಿದಾಗ ಷೇರು ಮಾರುಕಟ್ಟೆಯಲ್ಲಿನ ವಂಚನೆ ಕೃತ್ಯ ಬೆಳಕಿಗೆ ಬಂತು. ಆಂತರಿಕ ತನಿಖೆಯಲ್ಲಿ ಪರೇಖ್ ವಿರುದ್ಧದ ಅಕ್ರಮಗಳು ನಿಜವೆಂದು ಗೊತ್ತಾಗುತ್ತಿದ್ದಂತೆ ಸಿಬಿಐ ಅವರನ್ನು ಬಂಧಿಸಿದೆ.
ಪರೇಖ್ ಅವರು ಪ್ರಮುಖವಾಗಿ ಷೇರು ಮಾರುಕಟ್ಟೆಯಲ್ಲಿ ಷೇರುಗಳ ಬೆಲೆಯನ್ನು ತಿರುಚಿದ ಆರೋಪಕ್ಕೆ ಗುರಿಯಾದರು. ಬಳಿಕ ಸಮಗ್ರ ತನಿಖೆ ನಡೆದು ಷೇರು ಮಾರುಕಟ್ಟೆಯಲ್ಲಿ ಅವರ ಭಾಗವಹಿಸುವುದಕ್ಕೆ ನಿಷೇಧ ಹೇರಲಾಯಿತು. ಜತೆಗೆ, ನ್ಯಾಯಾಲಯ ಕೂಡ ಆರೋಪಿ ಪರೇಖ್‌ಗೆ ಜೈಲು ಶಿಕ್ಷೆಯನ್ನು ವಿಧಿಸಿದೆ. ಪರೇಖ್ ಅವರು ಸುಮಾರು 40,000 ಕೋಟಿ ರೂಪಾಯಿ ವಂಚಿಸಿದ ಅತಿದೊಡ್ಡ ಹಗರಣದಲ್ಲಿ ಭಾಗಿಯಾಗಿರುವುದಾಗಿ ಮಾಧ್ಯಮ ವರದಿಗಳು ಹೇಳಿವೆ.


Click it and Unblock the Notifications