ಭಾರತೀಯ ಫುಡ್ ಡೆಲಿವರಿ ಆಪ್ ಜೊಮ್ಯಾಟೊ ಗುರುವಾರ ತನ್ನ ಮೊದಲ ನಿವ್ವಳ ಲಾಭವನ್ನು ಪ್ರಕಟಿಸಿದ್ದು, ಈ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ 2 ಕೋಟಿ ರೂಪಾಯಿ ಲಾಭ ಗಳಿಸಿದೆ. ಕಳೆದ ವರ್ಷ, ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 186 ಕೋಟಿ ರೂಪಾಯಿ ನಷ್ಟವನ್ನು ದಾಖಲಿಸಿತ್ತು.
ಜೊಮ್ಯಾಟೊವನ್ನು ದೀಪೇಂದರ್ ಗೋಯಲ್ ಸ್ಥಾಪಿಸಿದ್ದಾರೆ. ಇದರ ಸಕ್ಸಸ್ ಹಿಂದೆ ಅನೇಕ ಉದ್ಯೋಗಿಗಳು ನಿರ್ಣಾಯಕ ಪಾತ್ರ ವಹಿಸಿದ್ದು, ಈ ಪೈಕಿ ಸುರೋಭಿ ದಾಸ್ ಕೂಡಾ ಒಬ್ಬರಾಗಿದ್ದಾರೆ. ಸುರೋಭಿ ದಾಸ್ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಜೊಮ್ಯಾಟೊ ಒಡೆತನದ ಸಂಸ್ಥೆಯಾದ ಬ್ಲಿಂಕಿಟ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಸುರೋಭಿ ದಾಸ್ ಅವರು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿ ಪಡೆದಿದ್ದು, ಜೊಮ್ಯಾಟೊ ಸಂಸ್ಥೆಗೆ ಸೇರ್ಪಡೆಗೊಳ್ಳುವ ಮೊದಲು ಅವರು 'ಬೇನ್ ಕನ್ಸಲ್ಟಿಂಗ್'ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಅವರು ಜೊಮ್ಯಾಟೊ ಗ್ರೋಥ್ ಟೀಂನ ಸಿಒಒ ಆಗಿ ಬಡ್ತಿ ಹೊಂದಿದರು.
ಬ್ಲಿಂಕಿಟ್‌ನಲ್ಲಿ ಉದಯೋನ್ಮುಖ ಮಾರುಕಟ್ಟೆಯ ಬೆಳವಣಿಗೆ ಮತ್ತು ಹೊಸ ಹಾಗೂ ಪರ್ಯಾಯ ಕೆಟಗರಿಗಳನ್ನು ಬಿಲ್ಡ್ ಮಾಡುವುದು ಅವರ ಜವಾಬ್ದಾರಿಯಾಗಿದೆ. ಸುರೋಭಿ ಅವರು ತಮ್ಮ ವೃತ್ತಿ ಬದುಕಿನಲ್ಲಿ ಸುಮಾರು 2 ವರ್ಷಗಳ ಸುದೀರ್ಘ ವಿರಾಮವನ್ನೂ ತೆಗೆದುಕೊಂಡಿದ್ದರು.
ಈ ಒಂದು ವರ್ಷ ಗೋವಾದಲ್ಲಿ ನೆಲೆಸಿದ್ದು ಮಾತ್ರವಲ್ಲದೇ, ಯುರೋಪಿನಾದ್ಯಂತ ಪ್ರವಾಸ ಕೈಗೊಂಡಿದ್ದರು. "ಕೆಲವು ಮರೆತು ಹೋದ ಹವ್ಯಾಸಗಳನ್ನು ಮರಳಿ ಕಲಿಯಲು, ಹೆಚ್ಚು ಓದಲು, ಬರೆಯಲು ಈ ಸಮಯ ಮೀಸಲಿರಿಸಿದ್ದೆ" ಎಂದು ಅವರು ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
2011 ರಲ್ಲಿ ಝೊಮ್ಯಾಟೊಗೆ ಸೇರ್ಪಡೆಗೊಂಡಿದ್ದು, ತಮ್ಮ ವೃತ್ತಿ ಬದುಕಿನ ಸುದೀರ್ಘ ವಿರಾಮಕ್ಕೂ ಮುಂಚೆ ಸಿಬ್ಬಂದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಐಐಎಂಗಿಂತ ಮೊದಲು, ಅವರು ಸ್ಕೂಲ್ ಆಫ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್‌ನಿಂದ 2001 ಮತ್ತು 2006 ರ ನಡುವೆ ಬಿ ಆರ್ಚ್ ಪದವಿ ಪಡೆದಿದ್ದರು.
2021 ರಲ್ಲಿ, ಜೊಮ್ಯಾಟೊ ಸಾರ್ವಜನಿಕ ಕೊಡುಗೆ (ಐಪಿಓ) ಹೋದಾಗ, ಅವರು ಕಂಪನಿಯ 14,217,400 ಷೇರುಗಳನ್ನು ಹೊಂದಿದ್ದರು. ಈ ಷೇರುಗಳ ಮೌಲ್ಯ 179 ಕೋಟಿ ರೂಪಾಯಿ ಆಗಿದ್ದು ಮಿಲಿಯನೇರ್ ಆದ ಕಂಪನಿಯ ಅನೇಕ ಉದ್ಯೋಗಿಗಳಲ್ಲಿ ಇವರು ಕೂಡಾ ಒಬ್ಬರಾಗಿದ್ದಾರೆ.


Click it and Unblock the Notifications
