ಉದ್ಯಮ ಕ್ಷೇತ್ರದಲ್ಲಿ ತಮ್ಮ ಓದು ಹಾಗೂ ಅನುಭವಕ್ಕೆ ತಕ್ಕಂತೆ ಅನೇಕರು ಉನ್ನತ ಹುದ್ದೆಯಲ್ಲಿದ್ದು ಕೈತುಂಬ ಸಂಬಳ ಪಡೆಯುತ್ತಿರುತ್ತಾರೆ. ಆದರೆ, ಕೆಲವರಿಗೆ ಅದನ್ನು ಬಿಟ್ಟು ತಮ್ಮ ಕನಸನ್ನು ನನಸು ಮಾಡಬೇಕೆಂಬ ಆಸೆ, ಛಲವಿರುತ್ತದೆ. ಆದರೆ, ಇರುವ ಹುದ್ದೆಯನ್ನು ತೊರೆದು ರಿಸ್ಕ್ ತೆಗೆದುಕೊಳ್ಳುವುದು ಕೂಡ ಆ ಪೈಕಿ ಕೆಲವರಿಂದಷ್ಟೇ ಸಾಧ್ಯ.
ಅಂಥವರ ಸಾಲಿನಲ್ಲಿ ಉಪಾಸನಾ ಟಕು ಅವರ ಯಶೋಗಾಥೆ ಕೂಡ ಹಲವರಿಗೆ ಸ್ಫೂರ್ತಿಯನ್ನು ನೀಡುವಂತಿದೆ. ಸ್ಟಾನ್‌ಫೋರ್ಡ್‌ನಿಂದ ಪದವಿಯನ್ನು ಪಡೆದುಕೊಂಡಿರುವ ಉಪಾಸನಾ ಅವರು ಮೊಬೈಲ್ ಪೇಮೆಂಟ್ ಕಂಪನಿಯಾಗಿರುವ ಮೊಬಿಕ್ವಿಕ್‌ನ ಮಾಲೀಕರಾಗಿದ್ದಾರೆ.
ಮೊಬಿಕ್ವಿಕ್ ಕಂಪನಿಯು ಮಾರ್ಚ್ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿದ ಲಾಭವನ್ನು ಗಳಿಸಿದ್ದು, ಅದಕ್ಕೆ ಅತಿಹೆಚ್ಚು ಖುಷಿಯಲ್ಲಿರುವ ವ್ಯಕ್ತಿ ಉಪಾಸನಾ ಅವರು.

ಉಪಾಸನಾ ಅವರು ಫಿನ್‌ಟೆಕ್ ಫರ್ಮ್‌ನ ಸಹ ಸ್ಥಾಪಕಿ ಹಾಗೂ ಸಿಒಒ ಆಗಿದ್ದಾರೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಮೊಬಿಕ್ವಿಕ್ ಅನ್ನು ಪೂರ್ಣ ಪ್ರಮಾಣದಲ್ಲಿ ಲಾಭದಾಯಕವಾಗಿಸಲು ಹಾಗೂ ಅದರ ಆದಾಯವನ್ನು 1000 ಕೋಟಿ ರೂಪಾಯಿ ಏರಿಸುವ ಮೂಲಕ ದ್ವಿಗುಣಗೊಳಿಸುವುದಕ್ಕೆ ಸಾಧ್ಯ ಎಂಬುದಾಗಿ ಟಕು ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
2.5 ಲಕ್ಷ ರೂ. ಹೂಡಿಕೆ ಮಾಡಿ 1300 ಕೋಟಿ ರೂ. ಮೌಲ್ಯಕ್ಕೆ ಏರಿದ ಕಂಪನಿಯ ಯಶೋಗಾಥೆಯಿದು
ಮೊಬಿಕ್ವಿಕ್ ಕಂಪನಿಯು ಭಾರತದಲ್ಲಿರುವ ಲಕ್ಷಾಂತರ ಸ್ಟಾರ್ಟಪ್‌ಗಳಿಗೆ ಸ್ಫೂರ್ತಿ ನೀಡುವ ಸಂಸ್ಥೆಯಾಗಿದೆ. ಏಕೆಂದರೆ ಅದರ ಸ್ಥಾಪಕಿ ಉಪಾಸನಾ ಅವರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ರೀತಿ ಸ್ಫೂರ್ತಿದಾಯಕವಾಗಿದೆ. ಗುಜರಾತ್‌ನ ಗಾಂಧಿನಗರದಲ್ಲಿ ಕಾಶ್ಮೀರಿ ಕುಟುಂಬದಲ್ಲಿ ಜನಿಸಿರುವ ಟಕು ಅವರ ಪೋಷಕರು ಪ್ರಾಧ್ಯಾಪಕರಾಗಿದ್ದರು.
ಸೂರತ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ ಬಳಿಕ ಎನ್‌ಐಟಿ ಜಲಂಧರ್‌ನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಮುಗಿಸಿದರು. ಬಳಿಕ ಟಕು ಅವರು ಸ್ಟ್ಯಾನ್‌ಫೋರ್ಡ್ ವಿವಿಯಲ್ಲಿ ಮ್ಯಾನೇಜ್‌ಮೆಂಟ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಸ್ನಾತಕ ಪದವಿ ಅಧ್ಯಯನ ಮಾಡಿದ್ದಾರೆ. ಅಲ್ಲಿ ಅವರು ಉದ್ಯಮ ಶೀಲತೆ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.
ಅಲ್ಲಿಂದ ಪದವಿ ಪಡೆದುಕೊಂಡ ನಂತರ ಟಕು ಅವರು ಎಚ್‌ಎಸ್‌ಬಿಸಿ ಹಾಗೂ ಪೇಪಾಲ್‌ನಲ್ಲಿ ಕೆಲಸ ಮಾಡಿದ್ದರು. ಆದರೆ, ಅವರ ಮನಸ್ಸು ಮಾತ್ರ ತಮ್ಮ ಸ್ವಂತವಾಗಿ ಏನನ್ನಾದರೂ ಮಾಡಬೇಕೆಂದು ತುಡಿಯುತ್ತಿತ್ತು. ಹೀಗಾಗಿ, 2008ರಲ್ಲಿ ಭಾರತಕ್ಕೆ ವಾಪಾಸ್ ಬಂದಿದ್ದರು.
ಇದು ಆಕೆಯ ಪೋಷಕರಿಗೆ ನಿರಾಸೆಯನ್ನು ಉಂಟು ಮಾಡಿತ್ತು.
ಏಕೆಂದರೆ, ಅಮೆರಿಕದಲ್ಲಿ ಅವರು ಆರಾಮದಾಯಕ ಜೀವನ-ಉದ್ಯೋಗವನ್ನು ಬಿಟ್ಟು ಬರುವುದು ಹೆತ್ತವರಿಗೆ ಇಷ್ಟವಿರಲಿಲ್ಲ. ಆದರೆ, ತಮ್ಮ ಗುರಿಯತ್ತ ಗಮನಹರಿಸಿದ ಟಕು ಸರ್ಕಾರೇತರ ದೃಷ್ಟಿ ಎಂಬ ಸಂಸ್ಥೆಗೆ ದುಡಿಯುವುದಕ್ಕೆ ಪ್ರಾರಂಭಿಸಿದ್ದರು. ಭಾರತದಲ್ಲಿ ಎನ್‌ಜಿಒಗಳು ದುರ್ಬಲವಾಗಿರುವ ಕಾರಣ ತಾನು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.
2008ರಲ್ಲಿ ಬಿಬಿನ್ ಸಿಂಗ್ ಎಂಬವರನ್ನು ಭೇಟಿ ಮಾಡಿದ್ದು, ಅವರೊಂದಿಗೆ ಸೇರಿಕೊಂಡು ಮೊಬಿಕ್ವಿಕ್ ಅನ್ನು ಸ್ಥಾಪಿಸಲು ನಿರ್ಧರಿಸಿದರು. 2009ರಲ್ಲಿ ಮೊಬಿಕ್ವಿಕ್ ಅನ್ನು ಟಕು ಅವರೊಂದಿಗೆ ಸೇರಿಕೊಂಡು ಪ್ರಾರಂಭಿಸಿದರು. ಬಳಿಕ ಸಿಂಗ್ ಅವರನ್ನೇ ಟಕು ವಿವಾಹವಾದರು. ಆರಂಭದಲ್ಲಿ ಈ ದಂಪತಿ ಹಲವಾರು ಸವಾಲುಗಳನ್ನು ಎದುರಿಸಿದ್ದರು.
ಆದರೆ, ಮುಂದೆ ಕಂಪನಿಯು ಯಶಸ್ವಿನ ಹಾದಿಯಲ್ಲಿ ಸಾಗಿದ್ದು, 2018ರಲ್ಲಿ ಭಾರತದಲ್ಲಿ ಪೇಮೆಂಟ್ ಸ್ಟಾರ್ಟಪ್ ಮಾಡಿದ ಮೊದಲ ಮಹಿಳೆ ಎಂಬ ಗೌರವವನ್ನು ರಾಷ್ಟ್ರಪತಿ ಅವರಿಂದ ಪಡೆದುಕೊಂಡರು. ಫೋರ್ಬ್ಸ್ ಏಷ್ಯಾದ 2019ರ 25 ಬಿಸಿನೆಸ್ ವುಮೆನ್ ಪಟ್ಟಿಯಲ್ಲಿ ಉಪಾಸನಾ ಟಕು ಅವರು ಸ್ಥಾನ ಪಡೆದು ಯಶಸ್ವಿ ಮಹಿಳಾ ಉದ್ಯಮಿಯಾಗಿ ದೇಶದಲ್ಲಿ ಗುರುತಿಸಿಕೊಂಡಿದ್ದಾರೆ.


Click it and Unblock the Notifications