ಪಾರ್ಟ್‌ಟೈಮ್ ವರ್ಕ್ ಫ್ರಮ್ ಹೋಮ್ (ಡಬ್ಲ್ಯುಎಫ್‌ಎಚ್) ಕೆಲಸ ನೀಡುವುದಾಗಿ ಜನರನ್ನು ವಂಚಿಸುತ್ತಿದ್ದ ಸೈಬರ್ ಕ್ರಿಮಿನಲ್ ಜಾಲದ ಒಂಬತ್ತು ಮಂದಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಪ್ರತಿದಿನ ಸುಮಾರು 50 ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗುತ್ತಿದ್ದು ಈ ನಡುವೆ ನಗರದಲ್ಲಿ ಈ ವರ್ಷ ವಂಚನೆಗೆ ಸಂಬಂಧಿಸಿ ನಡೆದ ಮೊದಲ ಪ್ರಮುಖ ಬಂಧನ ಇದಾಗಿದೆ.
ಇದು ಸುಮಾರು ಆರು ತಿಂಗಳ ನಿಖರವಾದ ತನಿಖೆಯ ಫಲಿತಾಂಶವಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಹೇಳಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ವರದಿಯಾದ ಸುಮಾರು 135 ಆನ್‌ಲೈನ್ ಉದ್ಯೋಗ ವಂಚನೆ ಪ್ರಕರಣಗಳ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಈ ಗ್ಯಾಂಗ್ ದೇಶಾದ್ಯಂತ 2,143 ಸೈಬರ್ ವಂಚನೆಗಳಲ್ಲಿ ಭಾಗಿಯಾಗಿದೆ. ಸಂತ್ರಸ್ತರಿಗೆ 158 ಕೋಟಿ ರೂಪಾಯಿ ವಂಚಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮುಖ್ಯವಾಗಿ ಹೈದರಾಬಾದ್‌ನಲ್ಲಿ ವಂಚಕರು ತೆರೆದಿದ್ದ 30 ನಕಲಿ ಖಾತೆಗಳಲ್ಲಿದ್ದ 62 ಲಕ್ಷ ರೂಪಾಯಿಗಳನ್ನು ಫ್ರೀಜ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 16 ರಂದು ಕೆಲವು ವರ್ಕ್ ಫ್ರಮ್ ಹೋಮ್ ಉದ್ಯೋಗಗಳನ್ನು ಪಡೆಯಲು ಪ್ರಯತ್ನಿಸುವಾಗ ಹಣವನ್ನು ಕಳೆದುಕೊಂಡ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಬಳಿಕ ಪೊಲೀಸರ ಬಲೆಗೆ ಈ ಗ್ಯಾಂಗ್ ಬೀಳಲು ಆರಂಭವಾಯಿತು. ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಮಹಿಳೆ ಆಗಸ್ಟ್ 18 ರಿಂದ ಸೆಪ್ಟೆಂಬರ್ 15 ರ ನಡುವೆ 18.8 ಲಕ್ಷ ರೂಪಾಯಿ ವಂಚನೆಗೆ ಒಳಗಾಗಿದ್ದಾರೆ.
"ಸಾಮಾನ್ಯವಾಗಿ, ಪೊಲೀಸರು ಹಣದ ಹಾದಿಯನ್ನು ಪ್ರಾರಂಭಿಸುತ್ತಾರೆ. ಹಣವನ್ನು ವರ್ಗಾಯಿಸಿದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವುದರೊಂದಿಗೆ ಎಲ್ಲವೂ ಕೊನೆಯಾಗುತ್ತದೆ. ಆದರೆ ನಾವು ಇದನ್ನು ಮೀರಿ ಹೋಗಿ ವಂಚಕರನ್ನು ಪತ್ತೆಹಚ್ಚಲು ಬಯಸಿದ್ದೇವೆ," ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ಸ್‌ಪೆಕ್ಟರ್ ಹಜಾರೇಶ್ ಕಿಲ್ಲೇದಾರ್ ನೇತೃತ್ವದ ತಂಡ ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈನಿಂದ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರಿನ ಅಮೀರ್ ಸುಹೇಲ್, ಇನಾಯತ್ ಖಾನ್, ನಯಾಜ್ ಅಹ್ಮದ್, ಆದಿಲ್ ಆಗಾ, ಹೈದರಾಬಾದ್‌ನ ಸೈಯದ್ ಅಬ್ಬಾಸ್ ಅಲಿ ಖಾನ್, ಮಿತುಲ್ ಮನೀಷ್ ಶಾ, ಸತೀಶ್ ಕೊಳಂಗಿ, ನೈನಾ ತಾರಾಚಂದ್ ರಾಜ್ ಮತ್ತು ಮಿಹಿರ್ ಶಶಿಕಾಂತ್ ಶಾ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಮುಂಬೈ ಮತ್ತು ಗುಜರಾತ್ ಮೂಲದ ಈ ಜಾಲದ ಇಬ್ಬರು ಮಾಸ್ಟರ್‌ಮೈಂಡ್‌ಗಳನ್ನು ಇನ್ನೂ ಬಂಧಿಸಲಾಗಿಲ್ಲ. 30 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವುದರ ಜೊತೆಗೆ ಪೊಲೀಸರು 11 ಸೆಲ್‌ಫೋನ್‌ಗಳು, ಎರಡು ಲ್ಯಾಪ್‌ಟಾಪ್‌ಗಳು ಮತ್ತು ವಿವಿಧ ಖಾತೆಗಳ ಚೆಕ್ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ. ವಂಚಕರು ಗೃಹಿಣಿಯರು, ನಿರುದ್ಯೋಗಿಗಳು ಮತ್ತು ವೃತ್ತಿಪರರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಬಿ ದಯಾನಂದ ಹೇಳಿದ್ದಾರೆ.


Click it and Unblock the Notifications