ಬೆಂಗಳೂರು, ಆಗಸ್ಟ್ 26: ಸೋಮವಾರ ಇಂದು ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಕೆಲವು ಮಾರ್ಗಗಳಲ್ಲಿ ಬದಲಾವಣೆ ಸಲಹೆ ನೀಡಿದ್ದಾರೆ. ಸಂಚಾರಿ ಇಲಾಖೆಯು ಸುತ್ತೋಲೆಯಲ್ಲಿ ವಾಹನಗಳನ್ನು ನಿಷೇಧಿಸುವ ಪ್ರಮುಖ ರಸ್ತೆಗಳು ಮತ್ತು ಪ್ರಯಾಣಿಕರು ಪ್ರಯಾಣಿಸಬಹುದಾದ ಪರ್ಯಾಯ ಮಾರ್ಗಗಳನ್ನು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿ ರಸ್ತೆಗಳಲ್ಲಿ ಸುಗಮ ವಾಹನ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದು ಆಗಸ್ಟ್ 26 ರ ಬೆಳಿಗ್ಗೆ 8 ರಿಂದ ಆಗಸ್ಟ್ 27 ರ ಬೆಳಿಗ್ಗೆ 6 ರವರೆಗೆ ಜಾರಿಯಲ್ಲಿರುತ್ತದೆ.

ಬೆಂಗಳೂರಿನ ಪೂರ್ವ ವಿಭಾಗದ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಕುಲದೀಪ್ ಕುಮಾರ್ ಆರ್. ಜೈನ್ ಅವರು ನೀಡಿರುವ ಸಲಹೆಯಂತೆ, ಕೆಆರ್ ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರ ಮುಖ್ಯರಸ್ತೆ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಉತ್ಸವದ ನಿಮಿತ್ತ , ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಸಂಚಾರ ವ್ಯವಸ್ಥೆಗಳನ್ನು ಮಾಡಲಾಗಿದೆ.
ದೇವಸಂದ್ರ ಮುಖ್ಯರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ. ಸಂಚಾರ ಇಲಾಖೆಯಿಂದ ಪರ್ಯಾಯ ಮಾರ್ಗ ವ್ಯವಸ್ಥೆಗಳನ್ನು ಸಹ ಸೂಚಿಸಲಾಗಿದೆ.
ಕೊಡಿಗೇಹಳ್ಳಿ ಮತ್ತು ಹೂಡಿ ಮುಖ್ಯರಸ್ತೆಯಿಂದ ದೇವಸಂದ್ರ ಮತ್ತು ಕೆಆರ್ ಪುರ ಮಾರುಕಟ್ಟೆ ಕಡೆಗೆ ಹೋಗುವ ವಾಹನಗಳು ಜೈ ಭುವನೇಶ್ವರಿ ಜಂಕ್ಷನ್‌ನಲ್ಲಿರುವ ಲುಲು ಬೇಕರಿ ಬಳಿ ಬಲ ತಿರುವು ಪಡೆದು ಅಯ್ಯಪ್ಪನಗರ ಮುಖ್ಯರಸ್ತೆ-ಬಸವನಪುರ ಮುಖ್ಯರಸ್ತೆ-ಭಟ್ಟರಹಳ್ಳಿ ಜಂಕ್ಷನ್ ಮೂಲಕ ಕೆಆರ್ ಪುರ ಮಾರುಕಟ್ಟೆ ಕಡೆಗೆ ಸಾಗಬೇಕು.
ಕೆಆರ್ ಪುರ ಮಾರುಕಟ್ಟೆ ಕಡೆಯಿಂದ ಕೊಡಿಗೇಹಳ್ಳಿ ಮತ್ತು ಹೂಡಿ ಮುಖ್ಯರಸ್ತೆ ಕಡೆಗೆ ಸಾಗುವ ವಾಹನಗಳು ಜಿಆರ್‌ಟಿ ಬಳಿ ಬಲ ತಿರುವು ಪಡೆದು ಬಸವನಪುರ ಮುಖ್ಯರಸ್ತೆ (ಕೃಷ್ಣಾ ಟಾಕೀಸ್ ರಸ್ತೆ) ಮೂಲಕ ಭಟ್ಟರಹಳ್ಳಿ ಜಂಕ್ಷನ್ ಮೂಲಕ ಸಾಗಬೇಕು.
ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಸಲಹೆ ನೀಡಿದರು. ಈ ವರ್ಷದ ಜನ್ಮಾಷ್ಟಮಿ ಆಚರಣೆಗಳು ಶ್ರೀಕೃಷ್ಣನ 5251 ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ.


Click it and Unblock the Notifications