ಖ್ಯಾತ ಕ್ರಿಕೇಟಿಗ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಕ್ರಿಕೆಟ್ ಮಾತ್ರವಲ್ಲದೆ ಉದ್ಯಮ, ವ್ಯಾಪಾರ ಲೋಕಕ್ಕೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಈಗ ಮುರಳೀಧರನ್ ಕ್ರಿಕೆಟ್‌ಗೆ ನಿವೃತ್ತಿ ಪಡೆದಿದ್ದರೂ ಕೂಡಾ ನಿರುದ್ಯೋಗಗಳಿಗೆ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ತಾವಾಗಿಯೇ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಉತ್ತರ ಕರ್ನಾಟಕ ಭಾಗದಲ್ಲಿ ಇರುವ ನಿರುದ್ಯೋಗ ಸಮಸ್ಯೆಯ ನಿವಾರಣೆ ಕೊಂಚ ತನ್ನ ಕೊಡುಗೆಯನ್ನು ನೀಡಲು ಮುಂದಾಗಿದ್ದಾರೆ. ಹಾಗೆಯೇ ತನ್ನ ಮುಂದಿನ ಉದ್ಯಮವನ್ನು ಆರಂಭ ಮಾಡಲು ಮುಂದಾಗಿದ್ದಾರೆ. ತನ್ನ ಮುಂದಿನ ಉದ್ಯಮಕ್ಕೆ ಧಾರವಾಡ ಜಿಲ್ಲೆಯನ್ನು ಅಯ್ಕೆ ಮಾಡಿಕೊಂಡಿದ್ದಾರೆ.

ಮುತ್ತಯ್ಯ ಮುರಳೀಧರನ್ ಈಗಾಗಲೇ ಶ್ರೀಲಂಕಾದಲ್ಲಿ ತಂಪು ಪಾನೀಯ ಉತ್ಪಾದನಾ ಘಟಕವನ್ನು ಹೊಂದಿದ್ದಾರೆ. ಈಗ ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯಲ್ಲೂ ತನ್ನ ಉದ್ಯಮವನ್ನು ವಿಸ್ತರಣೆ ಮಾಡುವ ಚಿಂತನೆಯನ್ನು ಹೊಂದಿದ್ದಾರೆ. ಇನ್ನು ಈಗಾಗಲೇ ಇದಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಅನುಮೋದನೆಯನ್ನು ನೀಡಿದೆ.
ಇತ್ತೀಚೆಗೆ ಉದ್ಯಮ ಸ್ಥಾಪನೆಗೆ ಬೇಕಾಗುವ ಜಮೀನು ಪರಿಶೀಲಿಸಲು ಮುಮ್ಮಿಗಟ್ಟಿಗೆ ಮುತ್ತಯ್ಯ ಮುರಳೀಧರನ್ ಭೇಟಿ ನೀಡಿದ್ದರು. ಈ ಹಿಂದೆಯೂ ಎರಡು ಬಾರಿ ಮುರಳೀಧರನ್ ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಾಗೆಯೇ ಪ್ರಸ್ತುತ ಈ ಜಮೀನು ಬಹುತೇಕ ಫೈನಲ್ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊದಲ ಹಂತದಲ್ಲಿ 200 ಉದ್ಯೋಗ ಸೃಷ್ಟಿ
ಮುರಳೀಧರನ್ ಫಾಸ್ಟ್ ಮೂವಿಂಗ್ ಕಂನ್ಸೂಮರ್ ಗೂಡ್ಸ್ (ಎಫ್‌ಎಂಸಿಜಿ) ಕ್ಲಸ್ಟರ್ ಅಡಿಯಲ್ಲಿ ಸುಮಾರು 900 ಕೋಟಿ ರೂಪಾಯಿಗಳಷ್ಟು ಹೂಡಿಕೆಗೆ ಚಿಂತನೆ ನಡೆಸಿದ್ದಾರೆ. ಮೊದಲ ಹಂತದಲ್ಲಿ 256.30 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದಾರೆ. ಇದರಿಂದಾಗಿ ಇಲ್ಲಿ ಸುಮಾರು 200 ಉದ್ಯೋಗ ಸೃಷ್ಟಿಯಾಗಲಿದೆ," ಎಂದು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹೊಸಮನಿ ತಿಳಿಸಿದ್ದಾರೆ.
"ಸಿಲೋನ್ ಬೆವರೇಜಸ್ ಕ್ಯಾನ್ ಪ್ರೈ. ಲಿ. ಹೆಸರಿನಲ್ಲಿ ತಂಪು ಪಾನೀಯ ಉತ್ಪಾದನಾ ಘಟಕ ಆರಂಭಿಸಲಾಗುತ್ತಿದೆ. ಆರಂಭಿಕವಾಗಿ 15 ಎಕರೆ ಭೂಮಿಯಲ್ಲಿ ಘಟಕ ಸ್ಥಾಪಿಸಲಾಗುತ್ತದೆ. ಹಾಗೆಯೇ ಒಟ್ಟು ಮೂರು ಹಂತಗಳಲ್ಲಿ ಉದ್ಯಮ ವಿಸ್ತರಿಸಲು ಕಂಪನಿ ನಿರ್ಧಾರ ಮಾಡಿದೆ. ಇದಕ್ಕಾಗಿ 32-36 ಎಕರೆ ಭೂಮಿಯ ಅಗತ್ಯವಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮುಮ್ಮಿಗಟ್ಟಿಯಲ್ಲಿ ಭೂಮಿ ಒದಗಿಸಲಾಗುತ್ತಿದೆ," ಎಂದು ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಅಭಿವೃದ್ಧಿ ಅಧಿಕಾರಿ ಬಿ.ಟಿ. ಪಾಟೀಲ ಮಾಹಿತಿ ನೀಡಿದ್ದಾರೆ.
ರಿಟೇಲ್ ಉದ್ಯಮದಲ್ಲಿ ಹೆಸರು ಮಾಡಿರುವ ದೇಶದ ಅತಿ ದೊಡ್ಡ ಕಾರ್ಪೊರೇಟ್ ಕಂಪನಿಯ ಮಾರ್ಕೆಟಿಂಗ್ ಸಹಭಾಗಿತ್ವದಲ್ಲಿ ಮುರಳೀಧರನ್ ಈ ಘಟಕ ಆರಂಭಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಲೋನ್ ಬೆವರೇಜಸ್ ಕಂಪನಿಗೆ ರಾಜ್ಯ ಸರಕಾರವು ಜ. 24, 2023ರಂದು ಅನುಮೋದನೆ ನೀಡಿದೆ.


Click it and Unblock the Notifications