ಇವರ ಮುಖ ತೆರೆ ಮೇಲೆ ಕಂಡರೆ ಸಾಕು, ಮುಖದ ಮೇಲೊಂದು ನಗು ತುಳುಕುತ್ತದೆ. ಅಷ್ಟೇ ಏಕೆ, ಧ್ವನಿ ಕೇಳಿದರೂ ಸಾಕು ಎಂಥ ಬಿಗುವಿನ ವಾತಾವರಣದಲ್ಲೂ ಖಿಲ್ಲನೆ ನಗು. ಆದರೆ ನೀವು ಕನ್ನಡ ಸಿನಿಮಾ ನೋಡುವಂಥವರಾಗಿರಬೇಕು ಮತ್ತು ಕನ್ನಡ ಅರ್ಥ ಆಗುವಂತಿರಬೇಕು. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ದುಬಾರಿ ಸಂಭಾವನೆ ಪಡೆಯುವ ಕಾಮಿಡಿ ಕಿಲಾಡಿಗಳು ಯಾರು ಎಂದು ತಿಳಿದುಕೊಳ್ಳುವ ಕುತೂಹಲಕ್ಕೆ ಇಲ್ಲಿ ಉತ್ತರ ಇದೆ.
ಐದಾರು ಮಂದಿಯ ಬಗ್ಗೆ ಮಾತ್ರ ಬರೆಯುವುದು ನಮ್ಮ ಉದ್ದೇಶ ಆಗಿತ್ತು. ಆದ್ದರಿಂದ ಕಾಮಿಡಿ ಪಾತ್ರಗಳಲ್ಲಿ ಮಿಂಚುವ ಟಾಪ್ ಆರು ನಟರ ಬಗ್ಗೆ ಇಲ್ಲಿ ವಿವರ ಇದೆ. ಈ ನಟರು ಇನ್ನೂ ಹೆಚ್ಚೆಚ್ಚು ಸಂಭಾವನೆ ಪಡೆಯುವಂತಾಗಲಿ. ರಾಷ್ಟ್ರ ಮಟ್ಟದಲ್ಲಿ ಇವರ ಹೆಸರು ಮಿಂಚುವಂತಾಗಲಿ.
ಸಾಧು ಕೋಕಿಲ
ಕನ್ನಡದ ಕಾಮಿಡಿ ಕಿಲಾಡಿ, ನಿರ್ದೇಶಕ, ಸಂಗೀತ ನಿರ್ದೇಶಕ, ಗಾಯಕ... ಹೀಗೆ ಬಹುಮುಖ ಪ್ರತಿಭೆಯ ಸಾಧು ಕೋಕಿಲ ಅಲಿಯಾಸ್ ಸಾಧು ಮಹಾರಾಜ್ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಇವರ ಕಾಲ್ ಶೀಟ್ ದಿನದ ಲೆಕ್ಕದಲ್ಲಿ ಪಡೆಯಲಾಗುತ್ತದೆ. ಮೂಲಗಳ ಪ್ರಕಾರ, ದಿನಕ್ಕೆ ಎರಡರಿಂದ ಮೂರು ಲಕ್ಷ ರುಪಾಯಿ ಇದೆ. ಸಾಮಾನ್ಯವಾಗಿ ಎಲ್ಲ ಹಾಸ್ಯ ನಟರಿಗೂ ವರ್ಷದಲ್ಲಿ ನೂರಾ ಇಪ್ಪತ್ತರಿಂದ ನೂರೈವತ್ತು ದಿನ ಕೆಲಸ ಇರುತ್ತದೆ. ಆ ಲೆಕ್ಕದಲ್ಲೂ ಸಾಧು ಮಹಾರಾಜ್ ಬಹು ಬೇಡಿಕೆಯ ಬಹುಮುಖ ಪ್ರತಿಭೆ.
ರವಿಶಂಕರ್
'ಇದು ಆರ್ಮುಗಂ ಕೋಟೆ ಕಣೋ' ಎಂದು ಗುಡುಗಿದರೆ ಥಿಯೇಟರ್ ನಲ್ಲಿ ಕೂತಿರುವ ಪ್ರೇಕ್ಷಕರ ಕಿವಿಯಲ್ಲಿ ಗುಂಯ್ ಎಂದು ಶಬ್ದ ಬರುವಂಥ ಧ್ವನಿ ಇವರದು. ನಿರ್ದೇಶಕ, ಗಾಯಕ, ಖಳನಾಯಕ, ಹಾಸ್ಯ ನಟರಾಗಿಯೂ ಬೇಡಿಕೆಯಲ್ಲಿ ಇರುವ ರವಿಶಂಕರ್ ಬಹುಬೇಡಿಕೆಯ ಡಬ್ಬಿಂಗ್ ಕಲಾವಿದರು. ತೆಲುಗಿನ ಅರುಂಧತಿ ಸಿನಿಮಾದಲ್ಲಿ ಖಳನಾಯಕನಿಗೆ ಧ್ವನಿಯಾಗಿ, 'ಬೊಮ್ಮಾಲಿ...ನಿನ್ನೊದಲ' ಎಂದು ಅಬ್ಬರಿಸಿದ್ದು ಮರೆಯುವುದುಂಟಾ? ಆದರೆ ಕನ್ನಡದಲ್ಲಿ ಈಚೆಗೆ ಹಾಸ್ಯ ನಟರಾಗಿಯೂ ಮಿಂಚುತ್ತಿದ್ದಾರೆ. ಅವರಿಗೆ ದಿನಕ್ಕೆ ಎರಡರಿಂದ ಮೂರು ಲಕ್ಷ ರುಪಾಯಿ ಸಂಭಾವನೆ ಇದೆಯಂತೆ.
ಚಿಕ್ಕಣ್ಣ
ಸದ್ಯಕ್ಕೆ ಕನ್ನಡದಲ್ಲಿ ಕಾಮಿಡಿ ಕಲಾವಿದರ 'ಅಧ್ಯಕ್ಷ'ರಂತೆ ಇರುವವರು ಚಿಕ್ಕಣ್ಣ. ಗ್ರಾಮ್ಯ ಸೊಗಡಿನ ಡೈಲಾಗ್ ಡೆಲಿವರಿಯನ್ನು ಚಿಕ್ಕಣ್ಣ ಹೇಳುವುದೇ ಚಂದ. ಕನ್ನಡದ ಬಹುತೇಕ ಪ್ರಮುಖ ನಾಯಕ ನಟರ ಜತೆ ನಟಿಸಿರುವ ಚಿಕ್ಕಣ್ಣ ಅವರ ಕಾಮಿಡಿ ಟೈಮಿಂಗ್ ಹೊಸ ತಲೆಮಾರಿನ ಪ್ರೇಕ್ಷಕರಿಗೆ ವಿಪರೀತ ಇಷ್ಟವಾಗುತ್ತದೆ. ಚಿಕ್ಕಣ್ಣ ಕೂಡ ಒಂದು ದಿನಕ್ಕೆ ಎರಡರಿಂದ ಮೂರು ಲಕ್ಷ ರುಪಾಯಿ ಸಂಭಾವನೆ ಪಡೆಯುತ್ತಾರೆ. ವರ್ಷಕ್ಕೆ ನೂರಿಪ್ಪತ್ತಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ನಲ್ಲಿ ಬಿಜಿಯಾಗಿರುತ್ತಾರೆ.
ರಂಗಾಯಣ ರಘು
ಕನ್ನಡ ಚಿತ್ರರಂಗಕ್ಕೆ ಸಿಕ್ಕಂಥ ವಿಶಿಷ್ಟ ಕಲಾವಿದ ರಂಗಾಯಣ ರಘು. ಎಂಥ ಪಾತ್ರಕ್ಕೂ ಜೀವ ತುಂಬಬಲ್ಲಂಥ ತಾಕತ್ತಿರುವ ನಟ ಇವರು. ಸೀರಿಯಸ್ ಆಗಿರಲಿ ಅಥವಾ ಕಾಮಿಡಿ ಇರಲಿ, ಅಲ್ಲಿ ರಘು ಇರಲಿ ಅಂದುಕೊಳ್ಳುವ ಮಟ್ಟಿಗೆ ಬೇಡಿಕೆ ಇರುವಂಥ ರಂಗಾಯಣ ರಘು ದಿನಕ್ಕೆ ಒಂದು ಲಕ್ಷ ರುಪಾಯಿ ಪಡೆಯುತ್ತಾರೆ. ಕನ್ನಡದ ಬಹುತೇಕ ಪ್ರಮುಖ ನಾಯಕ ನಟರ ಜತೆಗೆ ತೆರೆ ಮೇಲೆ ಮಿಂಚಿರುವ ರಂಗಾಯಣ ರಘು ಅವರು, ರಂಗಭೂಮಿ ಹಿನ್ನೆಲೆ ಇರುವವರು.
ತಬಲಾ ನಾಣಿ
ಚಿತ್ರಕಥೆ- ಸಂಭಾಷಣೆ ಮೇಲೂ ಹಿಡಿತ ಹೊಂದಿರುವ ತಬಲಾ ನಾಣಿ ಕೂಡ ರಂಗಭೂಮಿ ಹಿನ್ನೆಲೆಯಿಂದ ಸಿನಿಮಾ ರಂಗಕ್ಕೆ ಬಂದವರು. ಕುಡುಕನ ಪಾತ್ರದಲ್ಲಿ ನಾಣಿ ಕಾಣಿಸಿಕೊಂಡರೆ ಅವರಿಗೆ ಅವರೇ ಸಾಟಿ. ಗಂಭೀರ ಪಾತ್ರಗಳಲ್ಲೂ ಸೈ ಎನಿಸಿಕೊಂಡಿರುವ ತಬಲಾ ನಾಣಿ ಅವರ ಅಭಿನಯ ಸಾಮರ್ಥ್ಯ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರ ಮುಂದೆ ಬಂದಿಲ್ಲ. ಒಂದು ದಿನಕ್ಕೆ ಎಪ್ಪತ್ತೈದು ಸಾವಿರದಿಂದ ಒಂದು ಲಕ್ಷ ರುಪಾಯಿ ಸಂಭಾವನೆ ಪಡೆಯುತ್ತಾರೆ.
ಕುರಿ ಪ್ರತಾಪ್
ಬಿಗ್ ಬಾಸ್ ಕನ್ನಡದ ಮೂಲಕ ಮನೆ ಮನೆ ಮಾತಾಗಿರುವ ಕುರಿ ಪ್ರತಾಪ್, ಕಿರಿ ತೆರೆಯಿಂದ ಹೆಚ್ಚು ಪ್ರಚಾರಕ್ಕೆ ಬಂದವರು. 'ಮಜಾ ಟಾಕೀಸ್' ಕುರಿ ಪ್ರತಾಪ್ ಕಾಮಿಡಿಯನ್ನು ನೋಡುವ ಸಲುವಾಗಿ ಕಾಯುತ್ತಿದ್ದ ಪ್ರೇಕ್ಷಕರು ಉಂಟು. ಸಿನಿಮಾ ರಂಗದಲ್ಲೂ ಕುರಿ ಪ್ರತಾಪ್ ಗೆ ಬೇಡಿಕೆ ಇದ್ದೇ ಇದೆ. ದಿನಕ್ಕೆ ಎಪ್ಪತ್ತೈದು ಸಾವಿರದಿಂದ ಒಂದು ಲಕ್ಷ ರುಪಾಯಿ ತನಕ ಸಂಭಾವನೆ ಪಡೆಯುತ್ತಾರೆ ಕುರಿ ಪ್ರತಾಪ್.


Click it and Unblock the Notifications