Vande Bharat Express: ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಿಗುವ ಸಾಧ್ಯತೆಯಿದೆ. ವಾರಾಂತ್ಯದಲ್ಲಿ ವಿಪರೀತ ದಟ್ಟಣೆ ಆಗುತ್ತಿರುವುದರಿಂದ ಬೆಂಗಳೂರು ಹಾಗೂ ಕೇರಳ ನಡುವೆ ವಂದೇ ಭಾರತ್ ರೈಲನ್ನು ಓಡಿಸಲು ದಕ್ಷಿಣ ರೈಲ್ವೆ ಪ್ರಸ್ತಾಪಿಸಿದೆ. ಮುಂಬರುವ ದಿನಗಳಲ್ಲಿ ವಿಪರೀತ ದಟ್ಟಣೆ ಇರಲಿದ್ದು, ಇದನ್ನು ಕಡಿಮೆ ಮಾಡಿಮೆ ಮಾಡುವ ದೃಷ್ಟಿಯಿಂದ ವಾರಾಂತ್ಯದಲ್ಲಿ ರೈಲನ್ನು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ಶನಿವಾರ ಹಾಗೂ ಭಾನುವಾರಗಳಂದು ಬೆಂಗಳೂರು ಮತ್ತು ಎರ್ನಾಕುಲಂ ನಡುವೆ ವಂದೇ ಭಾರತ್ ರೈಲನ್ನು ಓಡಿಸುವ ಪ್ರಸ್ತಾಪವನ್ನು ದಕ್ಷಿಣ ರೈಲ್ವೆ ಇರಿಸಿದೆ. ಇದು ಬೆಂಗಳೂರು - ಚೆನ್ನೈ ಮತ್ತು ಚೆನ್ನೈ - ಬೆಂಗಳೂರು ಸೇವೆಗಳ ವಿಸ್ತರಣೆಯಾಗಿದೆ ಎಂಬ ಮಾಹಿತಿಯನ್ನು ಭಾರತೀಯ ರೈಲ್ವೇ ನೀಡಿದೆ.

ಭಾರತೀಯ ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ, ರೈಲು ಶುಕ್ರವಾರ ಬೆಳಿಗ್ಗೆ 4 ಗಂಟೆಗೆ ಬೆಂಗಳೂರಿನಿಂದ ಎರ್ನಾಕುಲಂಗೆ ಹೊರಡಲಿದೆ. ರೈಲು ಮಧ್ಯಾಹ್ನ 1.30 ಕ್ಕೆ ಎರ್ನಾಕುಲಂ ಜಂಕ್ಷನ್‌ಗೆ ತಲುಪುತ್ತದೆ. ಅದು 2 ಗಂಟೆಗೆ ಎರ್ನಾಕುಲಂನಿಂದ ಹಿಂತಿರುಗುತ್ತದೆ. ಅದೇ ದಿನ ರಾತ್ರಿ 10 ಗಂಟೆಗೆ ರೈಲು ಬೆಂಗಳೂರು ತಲುಪಲಿದೆ. ಉನ್ನತ ಅಧಿಕಾರಿಗಳಿಂದ ಅನುಮತಿ ದೊರೆತರೆ ಶನಿವಾರ ಮತ್ತು ಭಾನುವಾರವೂ ವಂದೇ ಭಾರತ್ ರೈಲಿನ ಸೇವೆ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ತಮಿಳುನಾಡು ರಾಜಧಾನಿ ಚೆನ್ನೈನಲ್ಲಿರುವ ವಂದೇ ಭಾರತ್ ಸ್ಪೇರ್ ರೇಕ್ ಬಳಸಿ ಈ ಸೇವೆಯನ್ನು ನಡೆಸಲಾಗುವುದು. ಇದು ಎಂಟು ಕೋಚ್‌ಗಳನ್ನು ಹೊಂದಿರುತ್ತದೆ. ದಕ್ಷಿಣ ರೈಲ್ವೆ ನೀಡಿರುವ ಶಿಫಾರಸನ್ನು ನೈಋತ್ಯ ರೈಲ್ವೆ ಪರಿಗಣಿಸುತ್ತಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.
ಇದೇ ವೇಳೆ, ವಂದೇ ಭಾರತ್ ಸೇವೆಗಳಿಂದಾಗಿ ಇತರ ರೈಲುಗಳು ವಿಳಂಬವಾಗುತ್ತಿವೆ ಎಂಬ ಆರೋಪಗಳ ಬಗ್ಗೆ ದಕ್ಷಿಣ ರೈಲ್ವೆ ಸ್ಪಷ್ಟನೆ ನೀಡಿದೆ. 'ಕೇರಳದಲ್ಲಿ ವಂದೇ ಭಾರತ್ ರೈಲುಗಳು ರಾಜ್ಯದಲ್ಲಿ ಚಲಿಸುವ ಇತರ ರೈಲುಗಳ ಸಮಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ' ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದಲ್ಲಿ ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದಾಗ, ವಾಯನಾಡು ಎಕ್ಸ್‌ಪ್ರೆಸ್ ಮತ್ತು ಇತರ ರೈಲುಗಳ ವೇಗವನ್ನು ಹೆಚ್ಚಿಸಲಾಯಿತು. ವಂದೇ ಭಾರತ್ ಎಕ್ಸ್‌ಪ್ರೆಸ್ ಎರ್ನಾಕುಲಂ ಮತ್ತು ಅಂಬಲಪುಳ (69 ಕಿಮೀ) ನಡುವಿನ ವಿಭಾಗದ ಮೂಲಕ ಚಲಿಸುತ್ತದೆ. ಅಲಪ್ಪುಳ-ಎರ್ನಾಕುಲಂ ಜೆಎನ್ ಪ್ಯಾಸೆಂಜರ್ ಮತ್ತು ಎರ್ನಾಕುಲಂ ಜೆಎನ್-ಕಾಯಂಕುಲಂ ಪ್ಯಾಸೆಂಜರ್‌ಗೆ ನಿಗದಿತ ಕ್ರಾಸಿಂಗ್ ಅನ್ನು ನೀಡಲಾಗಿದೆ. ಅವುಗಳನ್ನು ವೇಗವನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇರಳದ ಕೋಝಿಕ್ಕೋಡ್-ತಿರುವನಂತಪುರಂ ಜನಶತಾಬ್ದಿ ಎಕ್ಸ್‌ಪ್ರೆಸ್ ಚೆರ್ಟಾಲೈನಲ್ಲಿ ನಿಗದಿತ ಕ್ರಾಸಿಂಗ್ ಅನ್ನು ಹೊಂದಿದೆ. ಆದರೂ ಅದು ರಾತ್ರಿ 9.25 ರ ನಿಗದಿತ ಆಗಮನದ ಸಮಯದಲ್ಲಿ ತಿರುವನಂತಪುರವನ್ನು ತಲುಪುತ್ತದೆ. ಹೀಗಾಗಿ, ವಂದೇ ಭಾರತ್ ನಿಮಿತ್ತ ಈ ರೈಲು ಓಡಾಟಕ್ಕೆ ಯಾವುದೇ ವಿಳಂಬವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಕರಾವಳಿಯ ಮಂಗಳೂರು ಮತ್ತು ಗೋವಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭವಾಗಿದೆ. ಬೆಂಗಳೂರಿಂದ ಈಗ ಚೆನ್ನೈ, ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ಹೈದರಾಬಾದ್‌ಗೆ ವಂದೇ ಭಾರತ್ ರೈಲುಗಳಿವೆ.
ಬೆಳಗಾವಿಗೆ ವಿಸ್ತರಿಸಿದ ವಂದೇ ಭಾರತ್
ಬೆಂಗಳೂರು - ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರಿಗೆ ವಿಸ್ತರಿಸಲಾಗಿದೆ. ಇದು ಭಾರತದ 21 ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಾಗಿದೆ. ಇದು ಬೆಂಗಳೂರು ನಗರವನ್ನು ಹುಬ್ಬಳ್ಳಿ- ಧಾರವಾಡ ನಗರಗಳೊಂದಿಗೆ ಸಂಪರ್ಕಿಸುತ್ತದೆ.


Click it and Unblock the Notifications