2020ರಲ್ಲಿ ನಡೆಯಲಿರುವ ಐಪಿಎಲ್ 13ನೇ ಆವೃತ್ತಿಗೆ ಮೊದಲ ಹೆಜ್ಜೆಯಾಗಿ ಗುರುವಾರ (ಡಿಸೆಂಬರ್ 19)ರಂದು ಕೊಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. 8 ಫ್ರಾಂಚೈಸಿಗಳು ಭರ್ಜರಿ ಮೊತ್ತದ ಬಿಡ್ ನಡೆಸಿದ್ದಲ್ಲದೆ ಕೋಟಿ, ಕೋಟಿ ಹಣ ಕೊಟ್ಟು ಆಟಗಾರರನ್ನು ಖರೀದಿಸಿವೆ.
ಐಪಿಎಲ್ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 332 ಆಟಗಾರರು ಬಿಡ್ ನ ಪಟ್ಟಿಯಲ್ಲಿದರು. 8 ಫ್ರಾಂಚೈಸಿಗಳು ಒಟ್ಟಾರೆ 140 ಕೋಟಿ, 30 ಲಕ್ಷ ರುಪಾಯಿಗಳನ್ನು ವ್ಯಯಿಸಿ ಒಟ್ಟು 62 ಆಟಗಾರರನ್ನು ಖರೀದಿಸಿವೆ. ಬಿಕರಿಯಾದ ಒಟ್ಟಾರೆ ಆಟಗಾರರಲ್ಲಿ 29 ವಿದೇಶಿ ಆಟಗಾರರಿದ್ದಾರೆ.
ಐಪಿಎಲ್ 2020ರ ಸೀಸನ್‌ಗೆ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರರು ಯಾರು? ಎಷ್ಟು ಹಣಕ್ಕೆ, ಯಾವ ತಂಡಕ್ಕೆ ಮಾರಾಟವಾದರು ಎಂಬುದರ ವಿವರ ಈ ಕೆಳಗಿದೆ
1. ಪ್ಯಾಟ್ ಕಮಿನ್ಸ್
ಬಿಡ್ ಮೊತ್ತ : 15.50 ಕೋಟಿ ರುಪಾಯಿ
ತಂಡ : ಕೊಲ್ಕತ್ತಾ ನೈಟ್ ರೈಡರ್ಸ್
ದೇಶ : ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಕ್ರಿಕೆಟಿಗ, ಆಲ್‌ರೌಂಡರ್ ಪ್ಯಾಟ್ಸ್ ಕಮಿನ್ಸ್ ಐಪಿಎಲ್ 13ನೇ ಆವೃತ್ತಿಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರನಾಗಿ ದಾಖಲೆ ಬರೆದಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಪ್ಯಾಟ್ ಕಮಿನ್ಸ್‌ಗೆ 15.50 ಕೋಟಿ ರುಪಾಯಿಗಳನ್ನು ನೀಡುವ ಮೂಲಕ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಮೂಲಕ ವಿದೇಶಿ ಆಟಗಾರನೊಬ್ಬ ಇಷ್ಟು ಮೊತ್ತಕ್ಕೆ ಹರಾಜಾಗಿದ್ದು ಇದೇ ಮೊದಲಾಗಿದೆ. ಇದಕ್ಕೂ ಮೊದಲು ಇಂಗ್ಲೆಂಡ್ ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ 2017ರಲ್ಲಿ 14.5 ಕೋಟಿ ರುಪಾಯಿಗೆ ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ತಂಡದ ಪಾಲಾಗಿದ್ದರು.
ಪ್ಯಾಟ್ ಕಮಿನ್ಸ್ ಅತಿ ಹೆಚ್ಚು ಬೆಲೆಗೆ ಹರಾಜಾದ ವಿದೇಶಿ ಆಟಗಾರ ಎಂಬ ಬಿರುದಿನ ಜೊತೆಗೆ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ 2ನೇ ಆಟಗಾರ ಎಂಬ ಕೀರ್ತಿ ಸಂಪಾದಿಸಿದ್ದಾರೆ. 2015ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಯುವರಾಜ್ ಸಿಂಗ್ ರನ್ನು 16 ಕೋಟಿ ರುಪಾಯಿ ಕೊಟ್ಟು ಖರೀದಿಸಿತ್ತು.
ಐಸಿಸಿ ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲಿರುವ ಪ್ಯಾಟ್ ಕಮಿನ್ಸ್ ಸದ್ಯ ಅದ್ಭುತ ಬೌಲಿಂಗ್ ಲಯ ಕಂಡುಕೊಂಡಿದ್ದಾರೆ. ಐಪಿಎಲ್‌ನಲ್ಲಿ 16 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದು, ಬ್ಯಾಟಿಂಗ್ ನಲ್ಲೂ ಕೂಡ ತಂಡಕ್ಕೆ ನೆರವಾಗಬಲ್ಲರು.
2. ಗ್ಲೆನ್ ಮ್ಯಾಕ್ಸ್‌ವೆಲ್
ಬಿಡ್ ಮೊತ್ತ : 10.75 ಕೋಟಿ ರುಪಾಯಿ
ತಂಡ : ಕಿಂಗ್ಸ್ ಇಲೆವೆನ್ ಪಂಜಾಬ್
ದೇಶ : ಆಸ್ಟ್ರೇಲಿಯಾ
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ತನ್ನ ಹಳೆಯ ಟೀಮ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ಮ್ಯಾಕ್ಸಿಗೆ 10.75 ಕೋಟಿ ರುಪಾಯಿ ಕೊಟ್ಟು ಖರೀದಿಸಿದೆ.
2020ರಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಆಗಮಿಸಿದ ವೇಳೆ ಮ್ಯಾಕ್ಸ್‌ವೆಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಆದರೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮೋಡಿ ಮಾಡಿ ಯಶಸ್ವಿಯಾಗಿದ್ದಾರೆ. 69 ಐಪಿಎಲ್ ಪಂದ್ಯಗಳನ್ನಾಡಿರುವ ಮ್ಯಾಕ್ಸ್‌ವೆಲ್ 1,397 ರನ್ ಗಳಿಸಿದ್ದಾರೆ. 91 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿರುವ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಸ್ಟ್ರೈಕ್‌ರೇಟ್ 161.23 ಆಗಿದೆ. ಹೀಗಾಗಿ ಮ್ಯಾಕ್ಸ್‌ವೆಲ್‌ರನ್ನ ಮತ್ತೊಮ್ಮೆ ಕಿಂಗ್ಸ್ ಇಲೆವನ್ ಪಂಜಾಬ್ ಖರೀದಿ ಮಾಡಿದೆ.
3. ಕ್ರಿಸ್ ಮೊರಿಸ್
ಬಿಡ್ ಮೊತ್ತ : 10.00 ಕೋಟಿ ರುಪಾಯಿ
ತಂಡ : ಕಿಂಗ್ಸ್ ಇಲೆವೆನ್ ಪಂಜಾಬ್
ದೇಶ : ದಕ್ಷಿಣ ಆಫ್ರಿಕಾ
ಆರ್‌ಸಿಬಿ ಫ್ರಾಂಚೈಸಿ, ದಕ್ಷಿಣ ಆಫ್ರಿಕಾದ ಸೂಪರ್ ಆಲ್‌ರೌಂಡರ್‌ನನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಡೆತ್ ಬೌಲಿಂಗ್ ಸ್ಪೆಷಲಿಸ್ಟ್ ಹಾಗೂ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯವುಳ್ಳ ಕ್ರಿಸ್ ಮೊರಿಸ್ 10 ಕೋಟಿ ರುಪಾಯಿಗೆ ಬಿಡ್ ಆಗುವು ಮೂಲಕ ಆರ್‌ಸಿಬಿ ತೆಕ್ಕೆಗೆ ಬಿದ್ದಿದ್ದಾರೆ.
2013ರಲ್ಲಿ ಐಪಿಎಲ್ ಪ್ರವೇಶಿಸಿದ ಕ್ರಿಸ್ ಮೊರಿಸ್ 61 ಪಂದ್ಯಗಳಲ್ಲಿ 517 ರನ್ ಸಿಡಿಸಿದ್ದು ಭರ್ಜರಿ 157.62 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಜೊತೆಗೆ 69 ವಿಕೆಟ್ ಕಬಳಿಸುವ ಮೂಲಕ ಬೌಲಿಂಗ್‌ನಲ್ಲೂ ಮಿಂಚಿದ್ದಾರೆ. ಹೀಗಾಗಿ ಆರ್‌ಸಿಬಿ ತನ್ನ ಬೌಲಿಂಗ್ ಬಲವನ್ನು ಹೆಚ್ಚಿಸಿಕೊಳ್ಳುವಲ್ಲಿ ಗಮನ ಹರಿಸಿದ್ದು, ಬ್ಯಾಟಿಂಗ್‌ನಲ್ಲೂ ಬಲ ಹೆಚ್ಚಿಸಿಕೊಂಡಿದೆ.
4. ಶೆಲ್ಡನ್ ಕಾಟ್ರೆಲ್
ಬಿಡ್ ಮೊತ್ತ : 8.50 ಕೋಟಿ ರುಪಾಯಿ
ತಂಡ : ಕಿಂಗ್ಸ್ ಇಲೆವೆನ್ ಪಂಜಾಬ್
ದೇಶ : ವೆಸ್ಟ್ ಇಂಡೀಸ್
ವೆಸ್ಟ್ ಇಂಡೀಸ್ ತಂಡದ ಟಾಪ್ ಬೌಲರ್ ಆಗಿರುವ ಶೆಲ್ಡನ್ ಕಾಟ್ರೆಲ್ ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಈ ಆಟಗಾರನನ್ನು ಖರೀದಿಸಿಲು ಕಿಂಗ್ಸ್ ಇಲೆವೆನ್ ಪಂಜಾಬ್ ಮುಗಿಬಿದ್ದು ಯಶಸ್ವಿಯಾಗಿದೆ. 50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ 30 ವರ್ಷ ವಯಸ್ಸಿನ ಕಾಟ್ರೆಲ್ 8.50 ಕೋಟಿ ರುಪಾಯಿಗೆ ಪಂಜಾಬ್ ಟೀಮ್ ಸೇರಿಕೊಂಡಿದ್ದಾರೆ.
ಶೆಲ್ಡನ್ ಕಾಟ್ರೆಲ್ ಹೆಸರು ಬರುತ್ತಿದ್ದಂತೆ ರಾಜಸ್ತಾನ್ ರಾಯಲ್ಸ್, ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದ್ರೆ ಕೊನೆಯಲ್ಲಿ ಎಡಗೈ ವೇಗಿಯನ್ನು ಖರೀದಿಸುವಲ್ಲಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ಯಶಸ್ವಿಯಾಗಿದೆ. ಇದು ಕಾಟ್ರೆಲ್‌ಗೆ ಚೊಚ್ಚಲ ಐಪಿಎಲ್ ಸೀಸನ್ ಆಗಲಿದೆ.
5. ನೇಥನ್ ಕುಲ್ಟರ್ ನೈಲ್
ಬಿಡ್ ಮೊತ್ತ : 8 ಕೋಟಿ ರುಪಾಯಿ
ತಂಡ : ಮುಂಬೈ ಇಂಡಿಯನ್ಸ್
ದೇಶ : ಆಸ್ಟ್ರೇಲಿಯಾ
ಆಸ್ಟ್ರೇಲಿಯಾದ ಮತ್ತೊಬ್ಬ ಆಲ್‌ರೌಂಡರ್ ಉತ್ತಮ ಬೆಲೆಗೆ ಹರಾಜಾಗಿದ್ದು ನೇಥನ್ ಕುಲ್ಟನ್ ನೈಲ್ ನನ್ನು ಮುಂಬೈ ಇಂಡಿಯನ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ. 26 ಐಪಿಎಲ್ ಪಂದ್ಯವನ್ನಾಡಿರುವ ನೇಥನ್ ಕುಲ್ಟರ್ ನೈಲ್ 36 ವಿಕೆಟ್ ಕಬಳಿಸಿದ್ದು ಐಪಿಎಲ್‌ನಲ್ಲಿ ಪರಿಣಾಮಕಾರಿ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಆಸ್ಟ್ರೇಲಿಯಾ ಆಲ್‌ರೌಂಡರ್‌ಗೆ 8 ಕೋಟಿ ರುಪಾಯಿಗಳನ್ನು ಬಿಡ್ ಮಾಡುವ ಮೂಲಕ ತನ್ನ ತಂಡದ ಬೌಲಿಂಗ್ ಬಲ ಹೆಚ್ಚಿಸಿಕೊಂಡಿದೆ.
6. ಶಿಮ್ರೊನ್ ಹೆಟ್ಮೈರ್
ಬಿಡ್ ಮೊತ್ತ : 7.75 ಕೋಟಿ ರುಪಾಯಿ
ತಂಡ : ಡೆಲ್ಲಿ ಕ್ಯಾಪಿಟಲ್ಸ್
ದೇಶ : ವೆಸ್ಟ್ ಇಂಡೀಸ್
ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್ ಆಗಿರುವ ಶಿಮ್ರೊನ್ ಹೆಟ್ಮೈರ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಪರ ಆಡಿದ್ದ ಶಿಮ್ರೊನ್‌ರನ್ನು ಡೆಲ್ಲಿ ಕ್ಯಾಪಿಟಲ್ಸ್ 7.75 ಕೋಟಿ ರುಪಾಯಿ ಕೊಟ್ಟು ಖರೀದಿಸಿದೆ.
2019ರಲ್ಲಿ ಐಪಿಎಲ್ ಗೆ ಎಂಟ್ರಿ ನೀಡಿದ ಹೆಟ್ಮೈರ್ ಆರ್‌ಸಿಬಿ ಪರ ಕೇವಲ 1 ಅರ್ಧಶತಕ ದಾಖಲಿಸಿದ್ರು. ಈ ಮೂಲಕ ಇವರ ಐಪಿಎಲ್ ಎಂಟ್ರಿ ಅಷ್ಟೇನು ಉತ್ತಮವಾಗಿರಲಿಲ್ಲ. ಆದರೆ ಈ ಬಾರಿ ಭಾರತ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಹೆಟ್ಮೈರ್ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದ್ರು.
7. ಪಿಯೂಶ್ ಚಾವ್ಲಾ
ಬಿಡ್ ಮೊತ್ತ : 6.75 ಕೋಟಿ ರುಪಾಯಿ
ತಂಡ :ಚೆನ್ನೈ ಸೂಪರ್ ಕಿಂಗ್ಸ್
ದೇಶ : ಭಾರತ
ಲೆಗ್ ಸ್ಪಿನ್ ಆಲ್‌ರೌಂಡರ್ ಆಗಿರುವ ಪಿಯೂಶ್ ಚಾವ್ಲಾರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಪ್ರೈಸ್ ಪಿಕ್ ಮಾಡಿದೆ. ಕೆಕೆಆರ್ ತಂಡದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಪಿಯೂಶ್ 157 ಐಪಿಎಲ್ ಪಂದ್ಯಗಳನ್ನಾಡಿದ್ದು 150 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಿರುವ ಪಿಯೂಶ್ 584 ರನ್ ಕಲೆಹಾಕಿದ್ದಾರೆ.
8. ಸ್ಯಾಮ್ ಕರನ್
ಬಿಡ್ ಮೊತ್ತ : 5.50 ಕೋಟಿ ರುಪಾಯಿ
ತಂಡ : ಚೆನ್ನೈ ಸೂಪರ್ ಕಿಂಗ್ಸ್
ದೇಶ : ಇಂಗ್ಲೆಂಡ್
ಇಂಗ್ಲೆಂಡ್ ಮೂಲದ ಯುವ ಬೌಲರ್ ಸ್ಯಾಮ್ ಕರನ್‌ರನ್ನು ಚೆನ್ನೈ ಸೂಪರ್ ಕಿಂಗ್ಸ್ 5.50 ಕೋಟಿ ರುಪಾಯಿ ಕೊಟ್ಟು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಐಪಿಎಲ್ 12ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ಸ್ಯಾಮ್ ಕರನ್ 2020ರ ಐಪಿಎಲ್ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ಐಪಿಎಲ್‌ನಲ್ಲಿ 9 ಪಂದ್ಯಗಳನ್ನ ಆಡಿರುವ ಸ್ಯಾಮ್ ಕರನ್ 10 ವಿಕೆಟ್ ಕಬಳಿಸಿದ್ದಾರೆ.
9. ಇಯಾನ್ ಮಾರ್ಗನ್
ಬಿಡ್ ಮೊತ್ತ : 5.25 ಕೋಟಿ ರುಪಾಯಿ
ತಂಡ : ಕೊಲ್ಕತ್ತಾ ನೈಟ್ ರೈಡರ್ಸ್
ದೇಶ : ಇಂಗ್ಲೆಂಡ್
ಐಸಿಸಿ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ, ಇಂಗ್ಲೆಂಡ್‌ನ ಇಯಾನ್ ಮಾರ್ಗನ್‌ರನ್ನು ಶಾರೂಖ್ ಖಾನ್ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ಖರೀದಿಸಿದೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವ ಸಾಮರ್ಥ್ಯವುಲ್ಲ ಇಯಾನ್ ಮಾರ್ಗನ್ ಸನ್‌ರೈಸರ್ಸ್ ಹೈದ್ರಾಬಾದ್ ಟೀಮ್‌ನಲ್ಲಿ ಯಶಸ್ವಿ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದರು.
121.13 ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ನಲ್ಲಿ ರನ್ ಕಲೆಹಾಕಿರುವ ಇಯಾನ್ ಮಾರ್ಗನ್ 52 ಐಪಿಎಲ್ ಪಂದ್ಯಗಳಲ್ಲಿ ಒಟ್ಟಾರೆ 854 ರನ್ ಕಲೆಹಾಕಿದ್ದಾರೆ. ಇವರ ಬ್ಯಾಟ್‌ನಿಂದ 34 ಬಾರಿ ಸಿಕ್ಸರ್ ಸಿಡಿದಿದೆ.
10. ಮಾರ್ಕಸ್ ಸ್ಟೋಯ್ನಿಸ್
ಬಿಡ್ ಮೊತ್ತ : 4.80 ಕೋಟಿ ರುಪಾಯಿ
ತಂಡ : ಡೆಲ್ಲಿ ಕ್ಯಾಪಿಟಲ್ಸ್
ದೇಶ : ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಮೂಲದ ಮತ್ತೊಬ್ಬ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಐಪಿಎಲ್ 13ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ. ಡೆಲ್ಲಿ ಫ್ರಾಂಚೈಸಿಯು 4.80 ಕೋಟಿ ರುಪಾಯಿಗಳನ್ನು ಬಿಡ್ ಮಾಡುವ ಮೂಲಕ ಆಸೀಸ್ ಆಲ್‌ರೌಂಡರ್‌ನನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
29 ಐಪಿಎಲ್ ಪಂದ್ಯಗಳನ್ನಾಡಿರುವ ಮಾರ್ಕಸ್ ಸ್ಟೋಯ್ನಿಸ್ 15 ವಿಕೆಟ್ ಕಬಳಿಸಿದ್ದು, 129.94 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. 18 ಸಿಕ್ಸರ್ ಸಿಡಿಸಿರುವ ಮಾರ್ಕಸ್ ಸ್ಟೋಯ್ನಿಸ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲರು.


Click it and Unblock the Notifications