ರೈಲಿನಲ್ಲಿ ನಿರಂತರ ಪ್ರಯಾಣಿಸುವ ಹಿರಿಯ ನಾಗರಿಕರಿಗಾಗಿ ಇಲ್ಲಿದೆ ಒಂದು ಒಳ್ಳೆಯ ಸುದ್ದಿ. ಕೊರೊನಾ ಸಾಂಕ್ರಾಮಿಕ ಆರಂಭಕ್ಕೂ ಮೊದಲು ರೈಲ್ವೆಯು ಅವರಿಗೆ ನೀಡಿದ್ದ ಪ್ರಯಾಣ ದರದ ರಿಯಾಯಿತಿಯನ್ನು ಪುನರಾರಂಭಿಸುವಂತೆ ಸಂಸದೀಯ ಸ್ಥಾಯಿ ಸಮಿತಿಯು ಸೋಮವಾರ ಶಿಫಾರಸು ಮಾಡಿದೆ. ಈ ಹಿಂದೆ ಭಾರತೀಯ ರೈಲ್ವೆಯು 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಪುರುಷರಿಗೆ ಶೇ.40 ಹಾಗೂ ಕನಿಷ್ಠ 58 ವರ್ಷವಾಗಿರುವ ಮಹಿಳೆಯರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು.
ರೈಲು ಟಿಕೆಟ್‌ಗಳಲ್ಲಿನ ಈ ರಿಯಾಯಿತಿಯನ್ನು ಎಲ್ಲ ವರ್ಗದ ಮೇಲ್/ ಎಕ್ಸ್‌ಪ್ರೆಸ್ /ರಾಜಧಾನಿ /ಶತಾಬ್ಧಿ/ ದುರಂತೊ ಗ್ರೂಪ್ ರೈಲುಗಳಿಗೆ ನೀಡಲಾಗಿತ್ತು. ಆದರೆ, 2020ರ ಮಾ.20ರಿಂದ ಇದನ್ನು ಹಿಂಪಡೆಯಲಾಗಿತ್ತು. ಬಿಜೆಪಿ ಸಂಸದ ರಾಧಾ ಮೋಹನ್ ಸಿಂಗ್ ನೇತೃತ್ವದ ರೈಲ್ವೆ ಸ್ಥಾಯಿ ಸಮಿತಿಯು ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿದ ಅನುದಾನದ ಬೇಡಿಕೆಯ ವರದಿಯಲ್ಲಿ ಈ ಶಿಫಾರಸು ಮಾಡಿದೆ. ಈ ಹಿಂದಿನ ವರದಿಯಲ್ಲಿಯೂ ಇದೇ ಶಿಫಾರಸನ್ನು ಮಾಡಿತ್ತು.

ರೈಲ್ವೆ ಒದಗಿಸಿರುವ ಮಾಹಿತಿಯಂತೆ ಕೊರೊನಾ ಪರಿಸ್ಥಿತಿಯು ಈಗ ಸಹಜ ಸ್ಥಿತಿಗೆ ಬಂದಿದ್ದು, ಈ ರಾಷ್ಟ್ರೀಯ ಸಾರಿಗೆ ವ್ಯವಸ್ಥೆಯು ಸಾಮಾನ್ಯ ಬೆಳವಣಿಗೆಯನ್ನು ಸಾಧಿಸಿರುವುದಾಗಿ ಸಮಿತಿ ಹೇಳಿದೆ.
"ಈ ಸಮಿತಿಯು ತನ್ನ 12ರ ಕ್ರಮ ಕೈಗೊಂಡ ವರದಿಯಲ್ಲಿ(17ನೇ ಲೋಕಸಭೆ) ಪ್ರಯಾಣಿಕರ ರಿಸರ್ವೇಷನ್ ವ್ಯವಸ್ಥೆಯಲ್ಲಿ ಹಿರಿಯ ನಾಗರಿಕರಿಗೆ ಪೂರ್ವ ಕೋವಿಡ್ ಸಮಯದಲ್ಲಿ ಲಭ್ಯವಿದ್ದ ರಿಯಾಯಿತಿಗಳನ್ನು ಪರಿಶೀಲಿಸಬಹುದು ಹಾಗೂ ದುರ್ಬಲ ಮತ್ತು ನಿಜವಾಗಿಯೂ ಅಗತ್ಯವಿರುವ ನಾಗರಿಕರಿಗೆ ಕನಿಷ್ಠ ಸ್ಲೀಪರ್ ಕ್ಲಾಸ್ ಮತ್ತು 3A ಕ್ಲಾಸ್‌ನಲ್ಲಿ ಈ ಸೌಲಭ್ಯಗಳನ್ನು ಪರಿಗಣಿಸಬಹುದು" ಎಂದು ಹೇಳಿದೆ.
"ಆದ್ದರಿಂದ ಸಮಿತಿಯು ತಮ್ಮ ಹಿಂದಿನ ಶಿಫಾರಸನ್ನು ಮೇಲಿನ ವರದಿಯಲ್ಲಿ ಪುನರುಚ್ಚರಿಸಿದೆ. ಆ ಮೂಲಕ ಹಿರಿಯ ನಾಗರಿಕರಿಗೆ ವಿಶೇಷವಾಗಿ ಸ್ಲೀಪರ್ ಕ್ಲಾಸ್ ಮತ್ತು 3A ಕ್ಲಾಸ್‌ನಲ್ಲಿ ರಿಯಾಯಿತಿಗಳನ್ನು ಪುನರಾರಂಭಿಸಲು ಸಹಾನುಭೂತಿಯಿಂದ ಪರಿಗಣಿಸಲು ರೈಲ್ವೆಯನ್ನು ಒತ್ತಾಯಿಸುತ್ತದೆ" ಎಂದು ವರದಿ ಹೇಳಿದೆ.
ಈ ನಡುವೆ, ಹಿರಿಯ ನಾಗರಿಕರಿಗೆ ರಿಯಾಯಿತಿ ಸೇವೆ ಪುನರಾರಂಭಿಸುವ ಯೋಜನೆ ಸದ್ಯಕ್ಕೆ ಇಲ್ಲ ಎಂದು ರೈಲ್ವೆ ಹೇಳಿದೆ. ಎಲ್ಲ ಪ್ರಯಾಣಿಕರಿಗೆ ಈಗಾಗಲೇ ಶೇ.50-55ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಅದು ಸಮರ್ಥನೆ ನೀಡಿದೆ.


Click it and Unblock the Notifications