ನಿಮಗೆಲ್ಲ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಗ್ಗೆ ಗೊತ್ತಲ್ವಾ? ರೈತರಿಗೆ 2 ಸಾವಿರ ರುಪಾಯಿಯಂತೆ ಮೂರು ಬಾರಿ, ವರ್ಷಕ್ಕೆ 6 ಸಾವಿರ ರುಪಾಯಿಯನ್ನು ನೇರವಾಗಿ ರೈತರ ಖಾತೆಗೇ ಸರ್ಕಾರ ಹಣ ಜಮೆ ಮಾಡುವ ಯೋಜನೆ ಇದು. ಈ ಯೋಜನೆ ಬಗ್ಗೆ ಆಸಕ್ತಿಕರ ಸಂಗತಿಯೊಂದನ್ನು ನಿಮ್ಮ ಮುಂದೆ ಇಡಲಾಗುತ್ತಿದೆ.
ಅದೇನೆಂದರೆ, ಫೆಬ್ರವರಿ 6, 2020ರ ತನಕ ಸಿಕ್ಕಿಂನ 11 ರೈತರು ಮಾತ್ರ PM-KISAN ಯೋಜನೆ ಅಡಿ ಅನುಕೂಲ ಪಡೆದಿದ್ದಾರೆ. 11 ಸಾವಿರ ರೈತರು ಸಿಕ್ಕಿಂನಲ್ಲಿ ಈ ಯೋಜನೆ ಅಡಿಯಲ್ಲಿ 'ಯಶಸ್ವಿಯಾಗಿ ನೋಂದಣಿ' ಮಾಡಿದ್ದಾರೆ ಎಂಬ ಸಂಗತಿಯನ್ನು ಕೇಂದ್ರ ಸರ್ಕಾರವೇ ಸಂಸತ್ ನಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಅತಿ ಹೆಚ್ಚು ಫಲಾನುಭವಿಗಳು ಇರುವುದು ಉತ್ತರಪ್ರದೇಶದಲ್ಲಿ 1.83 ಕೋಟಿ ರೈತರು ಫಲಾನುಭವಿಗಳಾಗಿದ್ದಾರೆ. ಇನ್ನು ನೋಂದಣಿ ಮಾಡಿರುವ ಒಟ್ಟು ರೈತರ ಸಂಖ್ಯೆ 2.30 ಕೋಟಿ.

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನೀಡಿರುವ ಮಾಹಿತಿಯಂತೆ, 9.60 ಕೋಟಿ ರೈತ ಕುಟುಂಬಗಳು ಯಶಸ್ವಿಯಾಗಿ ನೋಂದಣಿ ಮಾಡಿವೆ. ಅದರಲ್ಲಿ 8.44 ಕೋಟಿ ಫಲಾನುಭವಿಗಳು ಈ ಯೋಜನೆ ಅಡಿ ಅನುಕೂಲ ಪಡೆದಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಯೋಜನೆ ಅನುಕೂಲ ಪಡೆಯುವುದಕ್ಕೆ ಭೂಮಿ ಇರುವುದರ ದಾಖಲೆ, ಹಳ್ಳಿ, ಬ್ಯಾಂಕ್ ಮಾಹಿತಿಗಳು, ಆಧಾರ್ ಕಾರ್ಡ್ ಸಂಖ್ಯೆ ಇತ್ಯಾದಿಯನ್ನು ನೀಡಬೇಕು. ಈ ಮಾಹಿತಿಗಳು PM-KISAN ಪೋರ್ಟಲ್ ನಲ್ಲಿ ಪರಿಶೀಲನೆ ಆಗಬೇಕು. ಆ ನಂತರ ಪಬ್ಲಿಕ್ ಫೈನಾನ್ಸ್ ಮ್ಯಾನೇಜ್ ಮೆಂಟ್ ಸಿಸ್ಟಮ್ (PFMS) ನಿಂದ ಮೊದಲಿಗೆ ಖಾತೆಯ ವ್ಯಾಲಿಡೇಷನ್ ಆಗುತ್ತದೆ.


Click it and Unblock the Notifications