ಕಳೆದ ಎರಡು ದಿನಗಳ ಹಿಂದೆ ಆರ್‌ಬಿಐ 2000 ರೂಪಾಯಿ ನೋಟನ್ನು ಚಲಾವಣೆಯಿಂದ ವಾಪಾಸ್ ಪಡೆದಿದೆ. ಅದಾದ ಬಳಿಕ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಶನಿವಾರವೇ ಬ್ಯಾಂಕ್‌ಗಳಲ್ಲಿ ಜನಸಂದಣಿ ಕಾಣಿಸಿಕೊಂಡಿದೆ. ಈ ನಡುವೆ ಜನರಿಗೆ ಆತಂಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರ್‌ಬಿಐ ಹೇಳಿಕೆಯನ್ನು ನೀಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಆರ್‌ಬಿಐ 2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುತ್ತಿದೆ. ಆದರೆ ಕಾನೂನುಬದ್ಧವಾಗಿ ಮುಂದುವರಿಯುತ್ತವೆ. ಗಾಬರಿ ಅಥವಾ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 2,000 ರೂಪಾಯಿ ನೋಟುಗಳನ್ನು ಆರಂಭಿಸಿದ ಉದ್ದೇಶ ಈಡೇರಿದೆ ಮತ್ತು ಸಾಕಷ್ಟು ಇತರ ನೋಟುಗಳು ಚಲಾವಣೆಯಲ್ಲಿವೆ ಎಂದು ಕೂಡಾ ಗವರ್ನರ್ ತಿಳಿಸಿದ್ದಾರೆ.

"2000 ರೂಪಾಯಿ ನೋಟು ಕಾನೂನುಬದ್ಧವಾಗಿ ಮುಂದುವರಿಯುತ್ತದೆ. ಈ ಪ್ರಕ್ರಿಯೆಯನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸೆಪ್ಟೆಂಬರ್ 30ರವರೆಗೆ 2000 ರೂಪಾಯಿ ನೋಟನ್ನು ಬದಲಾವಣೆ ಮಾಡಲು ಸಮಯವಕಾಶವನ್ನು ನೀಡಲಾಗಿದೆ," ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.
Rs 2000 Note Exchange: ಯಾವುದೇ ಗುರುತಿನ ಪುರಾವೆಯಿಲ್ಲದೆ ಎಸ್‌ಬಿಐನಲ್ಲಿ 2000 ರೂ. ನೋಟು ಬದಲಾಯಿಸಿ
"2,000 ರೂಪಾಯಿ ನೋಟುಗಳು ಅವುಗಳ ಸಮಯ ಮತ್ತು ಅವಧಿಯನ್ನು ಪೂರ್ಣಗೊಳಿಸಿದೆ. ಈ 2000 ರೂಪಾಯಿ ನೋಟುಗಳನ್ನು ವಾಪಾಸ್ ಪಡೆಯುವುದು ನಮ್ಮ ಕರೆನ್ಸಿ ನಿರ್ವಹಣೆ ಕಾರ್ಯಾಚರಣೆಯ ಭಾಗವಾಗಿದೆ. ನಾವು ನೋಟು ಅಪನಗದೀಕರಣ ಮಾಡಿದ ಬಳಿಕ ಪ್ರಾಥಮಿಕವಾಗಿ 2000 ರೂಪಾಯಿ ನೋಟುಗಳನ್ನು ಪರಿಚಯಿಸಲಾಗಿದೆ," ಎಂದು ಹೇಳಿದ್ದಾರೆ.
"ಸೆಪ್ಟೆಂಬರ್ 30 ರೊಳಗೆ ಹೆಚ್ಚಿನ 2,000 ರೂಪಾಯಿಗಳ ಬ್ಯಾಂಕ್ ನೋಟುಗಳು ಮತ್ತೆ ಬೊಕ್ಕಸಕ್ಕೆ ಬರುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. 2,000 ಬ್ಯಾಂಕ್ ನೋಟುಗಳ ವಿನಿಮಯಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಬ್ಯಾಂಕುಗಳಿಗೆ ಸಲಹೆ ನೀಡಲಾಗಿದೆ," ಎಂದು ಕೂಡಾ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
2,000 ಬ್ಯಾಂಕ್ ನೋಟುಗಳ ವಿನಿಮಯಕ್ಕೆ ಸಂಬಂಧಿಸಿದಂತೆ ಜನರು ಎದುರಿಸುತ್ತಿರುವ ತೊಂದರೆಗಳಿಗೆ ಆರ್‌ಬಿಐ ಸೂಕ್ಷ್ಮವಾಗಿರುತ್ತದೆ ಎಂದು ಕೂಡಾ ಹೇಳಿದೆ. ಇನ್ನು ಮೇ 23, 2023ರಿಂದ 2000 ರೂಪಾಯಿಯ ನೋಟುಗಳನ್ನು ಬದಲಾವಣೆ ಮಾಡಬಹುದಾಗಿದೆ. ಈ ನಡುವೆ ಎಸ್‌ಬಿಐ ಯಾವುದೇ ಮನವಿ ಪತ್ರ ಸಲ್ಲಿಸದೆ, ಗುರುತು ಪುರಾವೆಯನ್ನು ಸಲ್ಲಿಸದೆಯೇ ನೋಟುಗಳನ್ನು ಬದಲಾವಣೆ ಮಾಡಬಹುದು ಎಂದು ಹೇಳಿದೆ.
2000 ರೂಪಾಯಿ ನೋಟು ಬದಲಾವಣೆ ಎಲ್ಲಿ, ಹೇಗೆ ಮಾಡುವುದು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ 19, 2023ರಂದು ಹೊರಡಿಸಿದ ಸುತ್ತೋಲೆಯಲ್ಲಿ, "ಸೆಪ್ಟೆಂಬರ್ 30, 2023ರವರೆಗೆ ಸಾರ್ವಜನಿಕರು 2000 ರೂಪಾಯಿ ನೋಟನ್ನು ಜಮೆ ಮಾಡಲು ಅಥವಾ ಬದಲಾವಣೆ ಮಾಡಲು ಅವಕಾಶವನ್ನು ಹೊಂದಿರುತ್ತಾರೆ," ಎಂದು ಉಲ್ಲೇಖಿಸಲಾಗಿದೆ.
"ಎಲ್ಲಾ ಬ್ಯಾಂಕ್‌ಗಳಲ್ಲಿ ಇರುವ ನಮ್ಮ ಖಾತೆಗಳಿಗೆ ನಾವು 2000 ರೂಪಾಯಿಯ ಬ್ಯಾಂಕ್ ನೋಟುಗಳನ್ನು ಜಮೆ ಮಾಡಬಹುದಾಗಿದೆ. ನಾವು ಸಾಮಾನ್ಯ ರೀತಿಯಲ್ಲಿಯೇ ಅಂದರೆ ಯಾವುದೇ ನಿರ್ಬಂಧಗಳಿಲ್ಲದೆ, ನಾವು ಯಾವಾಗಲೂ ಹೇಗೆ ನಗದನ್ನು ನಮ್ಮ ಖಾತೆಗೆ ಜಮೆ ಮಾಡುತ್ತೇವೆಯೋ ಹಾಗೆಯೆ ಜಮೆ ಮಾಡಬಹುದಾಗಿದೆ," ಎಂದು ಆರ್‌ಬಿಐ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
2000 ರೂಪಾಯಿ ನೋಟು ಮೊದಲು ಜಾರಿ ಮಾಡಿದ್ದು ಯಾವಾಗ?
2000 ರೂಪಾಯಿ ನೋಟುಗಳನ್ನು ಮೊದಲು ನವೆಂಬರ್ 8, 2016 ರಂದು ಪರಿಚಯಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ 500 ರೂಪಾಯಿ ಮತ್ತು 1000 ರೂಪಾಯಿ ನೋಟನ್ನು ಅಮಾನ್ಯೀಕರಣ ಮಾಡಿದ ಬಳಿಕ 2000 ರೂಪಾಯಿ ಮತ್ತು 500 ರೂಪಾಯಿ ನೋಟನ್ನು ಜಾರಿ ಮಾಡಲಾಗಿದೆ. ಆದರೆ ಜಾರಿ ಮಾಡಿದ 7 ವರ್ಷದಲ್ಲೇ ಈಗ ಈ ನೋಟನ್ನು ಹಿಂಪಡೆಯಲಾಗುತ್ತಿದೆ.


Click it and Unblock the Notifications