ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಎಲ್ಲ ವಲಯದಲ್ಲಿಯೂ ಅಭಿವೃದ್ಧಿ ಕಾಣುತ್ತಿದೆ. ಹೊಸ ಹೊಸ ತಂತ್ರಜ್ಞಾನಗಳು ಮುನ್ನಲೆಗೆ ಬರುತ್ತಿದ್ದು, ಜನರು ಕೂಡಾ ಹೊಸ ತಂತ್ರಜ್ಞಾನದ ಬಳಕೆ ಮಾಡುತ್ತಾರೆ. ಹೀಗಿರುವಾಗ ಕೆಲವು ತಂತ್ರಜ್ಞಾನವೇ ನಮ್ಮನ್ನು ವಂಚಕರು ವಂಚಿಸುವ ತಂತ್ರವಾಗುತ್ತಿದೆ. ಪ್ರಸ್ತುತ ಹಲವಾರು ಮಂದಿ ಹೆಚ್ಚಾಗಿ ಬಳಕೆ ಮಾಡುವುದು ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ವ್ಯವಸ್ಥೆಯನ್ನು, ಆದರೆ ಇದರ ಮೂಲಕವೇ ವಂಚನೆ ನಡೆದಿದೆ. ಹೌದು, ಗುರುಗ್ರಾಮ ಮೂಲದ ಸಂಸ್ಥೆಯು ಯುಪಿಐ ಸೈಬರ್ ವಂಚನೆಗೆ ಬಲಿಯಾಗಿದ್ದು, ಒಟ್ಟು ಬರೋಬ್ಬರಿ 35 ಲಕ್ಷ ರೂಪಾಯಿಯನ್ನು ಗುರುಗ್ರಾಮ ಮೂಲದ ಸಂಸ್ಥೆ ಕಳೆದುಕೊಂಡಿದೆ.
ಡಿಜಿಟಲ್ ಪಾವತಿ ವ್ಯವಸ್ಥೆ ಸೇರಿದಂತೆ ತಂತ್ರಜ್ಞಾನದ ಅಭಿವೃದ್ಧಿಯು ಜನರಿಗೆ ಜೀವನವನ್ನು ಸರಳ, ಸುಲಭಗೊಳಿಸಿದೆ. ಕೆಲವೇ ಸೆಕೆಂಡುಗಳಲ್ಲಿ ಹಣಕಾಸು ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ. ಡಿಜಿಟಲ್ ಪಾವತಿ ವ್ಯವಸ್ಥೆ ವಿಚಾರಕ್ಕೆ ಬಂದಾಗ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ತಂತ್ರಜ್ಞಾನದ ಮೂಲಕವೇ ಸಂಸ್ಥೆಯೊಂದರಿಂದ ಬರೋಬ್ಬರಿ 35 ಲಕ್ಷ ರೂಪಾಯಿಯನ್ನು ವಂಚಕರು ಎಗಿರಿಸಿದ್ದಾರೆ. ಹಣವನ್ನು ಕಳೆದುಕೊಂಡ ಸಂಸ್ಥೆಯು ಗುರುಗ್ರಾಮ ಮೂಲದ್ದಾಗಿದೆ.

ವರದಿ ಪ್ರಕಾರ ಇತ್ತೀಚೆಗೆ ಗುರುಗ್ರಾಮ ಮೂಲದ ಸಂಸ್ಥೆಯಾದ ಪರವಿಯಾಮ್ ಟೆಕ್ನಾಲಜೀಸ್ ಯುಪಿಐ ವಂಚನೆಗೆ ಒಳಗಾಗಿದೆ. ಸೈಬರ್ ವಂಚಕರು ಸಂಸ್ಥೆಯ ಪಾವತಿ ಗೇಟ್‌ವೇ ಹ್ಯಾಕ್ ಮಾಡಿಕೊಂಡು ಸುಮಾರು 35 ಲಕ್ಷ ರೂಪಾಯಿ ಹಣ ಎಗರಿಸಿಕೊಂಡಿದ್ದಾರೆ. ಈ ಸಂಬಂಧ ಪರವಿಯಾಮ್ ಟೆಕ್ನಾಲಜೀಸ್ ಸಂಸ್ಥೆಯ ರಾಷ್ಟ್ರೀಯ ಕಾರ್ಯನಿರ್ವಾಹಕ ಮುಖ್ಯಸ್ಥ ಅಂಕಿತ್ ರಾವತ್ ದೂರನ್ನು ದಾಖಲು ಮಾಡಿದ್ದಾರೆ. ಸಂಸ್ಥೆಯು ಕ್ಯಾಶ್‌ಫ್ರೀ ಪಾವತಿ ಗೇಟ್‌ವೇಯನ್ನು ಬಳಸಿಕೊಂಡಿದ್ದು, ಅದನ್ನು ವಂಚಕರು ವಂಚನೆ ಮಾಡಲು ಬಳಸಿಕೊಂಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೇಂದ್ರ ಹಣಕಾಸು ಸಚಿವಾಲಯದ ಸೈಬರ್ ಸೆಲ್ ಪ್ರಕಾರ, 2022-23ರ ಹಣಕಾಸು ವರ್ಷಗಳ ನಡುವೆ ಸೈಬರ್ ಅಪರಾಧಿಗಳು ಸುಮಾರು 95,000 ಯುಪಿಐ ವಹಿವಾಟುಗಳನ್ನು ನಡೆಸಿದ್ದಾರೆ.
ಯುಪಿಐ ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ನೋಡಿ
1. ಮೊಬೈಲ್ ಸಂಖ್ಯೆ, ಅಕೌಂಟ್ ನಂಬರ್, ಒಟಿಪಿ, ಪಿನ್ ಮೊದಲಾದ ವೈಯಕ್ತಿಕ ಮಾಹಿತಿಗಳನ್ನು ಎಂದಿಗೂ ಕೂಡಾ ಹಂಚಿಕೊಳ್ಳಲು ಹೋಗಬೇಡಿ.
2. ಹಣವನ್ನು ನೀವು ಪಡೆಯಬೇಕಾದರೆ ಪಿನ್ ಅನ್ನು ಹಾಕಬೇಕಾಗಿಲ್ಲ. ಹಣವನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಮಾತ್ರ ಪಿನ್ ಬೇಕಾಗುತ್ತದೆ ಎಂಬುವುದು ನೆನಪಿರಲಿ.
3. ಬೇರೆ ಯಾವುದೇ ವ್ಯಕ್ತಿಯ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಆ ಖಾತೆಯನ್ನು ವೆರಿಫೈ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
4. ಯುಪಿಐ ಬಳಕೆ ಮಾಡುವ ಸಂದರ್ಭದಲ್ಲಿ ಸಾರ್ವಜನಿಕ ನೆಟ್‌ವರ್ಕ್ ಅನ್ನು ಬಳಕೆ ಮಾಡುವುದನ್ನು ತಪ್ಪಿಸಿಕೊಳ್ಳಿ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ (ಎನ್‌ಪಿಸಿಐ) ಯುಪಿಐ ವಂಚನೆಯನ್ನು ತಪ್ಪಿಸಿಕೊಳ್ಳಲು ಸಮಯಕ್ಕೆ ಸರಿಯಾಗಿ ನಿಮಗೆ ಟಿಪ್ಸ್‌ಗಳನ್ನು ನೀಡುತ್ತಾ ಬರುತ್ತಿದೆ. ಈ ಹಿಂದೆ ಸೈಬರ್ ಕ್ರಿಮಿನಲ್‌ಗಳು ಸುಮಾರು 81 ಮಂದಿಯನ್ನು ವಂಚನೆ ಮಾಡಿ ಒಟ್ಟಾಗಿ 1 ಕೋಟಿ ರೂಪಾಯಿ ವಂಚನೆಯನ್ನು ಮಾಡಿದ್ದಾರೆ. ಡಿಜಿಟಲ್ ಪಾವತಿ ವ್ಯವಸ್ಥೆಯು ಈ ಆಧುನಿಕ ಸಮಾಜದಲ್ಲಿ ಅತೀ ಮುಖ್ಯವಾಗಿದೆ. ಆದರೆ ಅದರಿಂದ ವಂಚಕರ ಬಲೆಗೆ ನಾವು ಸಿಲುಕದಂತೆ ನಾವೇ ನೋಡಿಕೊಳ್ಳಬೇಕಾಗುತ್ತದೆ. ಬಳಕೆದಾರರು ಎಲ್ಲ ಮಾರ್ಗಸೂಚಿಯನ್ನು ಪಾಲಿಸಿ ಯಾವುದೇ ವಂಚನೆಗೆ ಒಳಗಾಗದಂತೆ ನೋಡುವುದು ಮುಖ್ಯವಾಗುತ್ತದೆ.


Click it and Unblock the Notifications