ಜಗತ್ತಿನಲ್ಲಿ ಕೊರೊನಾ ಸಾಂಕ್ರಾಮಿಕ ಕಾಣಿಸಿಕೊಳ್ಳುವ ಮುನ್ನ ಭಾರತದಲ್ಲಿನ ಹಿರಿಯ ನಾಗರಿಕರು ತಮ್ಮ ರೈಲು ಟಿಕೆಟ್‌ಗಳಲ್ಲಿ ಸಬ್ಸಿಡಿಯನ್ನು ಪಡೆಯಬಹುದಾಗಿತ್ತು. ಆದರೆ ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ರೈಲ್ವೆ ಸಬ್ಸಿಡಿಯನ್ನು ಸ್ಥಗಿತಗೊಳಿಸಿದೆ. ಆದರೆ ಈಗ ಮತ್ತೆ ಸಬ್ಸಿಡಿ ಆರಂಭ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಈಗ ಸಾಂಕ್ರಾಮಿಕ ರೋಗವು ಕೊನೆಗೊಂಡಿದೆ. ಆದರೆ ಸಬ್ಸಿಡಿಯನ್ನು ಮಾತ್ರ ಸರ್ಕಾರವು ಮತ್ತೆ ಆರಂಭ ಮಾಡಿಲ್ಲ. ಸಬ್ಸಿಡಿಯನ್ನು ಮತ್ತೆ ಆರಂಭ ಮಾಡಬೇಕು ಎಂಬ ಬೇಡಿಕೆ ಪದೇ ಪದೇ ಕೇಳಿ ಬರುತ್ತಿದೆ. ಮಂಗಳವಾರ ನಡೆಯುತ್ತಿರುವ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ಬೇಡಿಕೆಯನ್ನು ಪ್ರಸ್ತಾಪಿಸಲಾಗಿದೆ.

ಈ ನಡುವೆ "ಪ್ರತಿ ಪ್ರಯಾಣಿಕರು ಈಗಾಗಲೇ ತಮ್ಮ ರೈಲು ಟಿಕೆಟ್‌ಗಳಲ್ಲಿ ಶೇಕಡ 53 ರಷ್ಟು ಸಬ್ಸಿಡಿಯನ್ನು ಪಡೆಯುತ್ತಿದ್ದಾರೆ. ಆದ್ದರಿಂದಾಗಿ ಟಿಕೆಟ್ ಸಬ್ಸಿಡಿಯನ್ನು ಮತ್ತೆ ಆರಂಭಿಸುವ ಯಾವುದೇ ಪ್ರಸ್ತಾಪವನ್ನು ಸರ್ಕಾರ ಹೊಂದಿಲ್ಲ," ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸದನದ ಶೂನ್ಯ ವೇಳೆಯಲ್ಲಿ, ಜನತಾ ದಳ (ಯುನೈಟೆಡ್) ಸಂಸದ ಕೌಶಲೇಂದ್ರ ಕುಮಾರ್, ಕೋವಿಡ್‌ಗಿಂತ ಮೊದಲು ಹಿರಿಯ ನಾಗರಿಕರು ರೈಲು ದರಗಳಲ್ಲಿ ರಿಯಾಯಿತಿಯನ್ನು ಪಡೆಯುತ್ತಿದ್ದರು. ಆದರೆ ಈಗ ಕೋವಿಡ್ ಮುಗಿದಿದೆ. ಆದರೆ ಸರ್ಕಾರವು ಹಿರಿಯ ನಾಗರಿಕರಿಗೆ ರೈಲು ಟಿಕೆಟ್‌ಗಳಲ್ಲಿ ಸಬ್ಸಿಡಿ ನೀಡುತ್ತಿಲ್ಲ. ಮತ್ತೆ ಸಬ್ಸಿಡಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಎಲ್ಲಾ ವರ್ಗಗಳಿಗೆ ಇಕಾನಮಿಕಲ್ ರೈಲು ಸೇವೆಯನ್ನು ಒದಗಿಸಲು ರೈಲ್ವೆ ಪ್ರಯತ್ನಿಸುತ್ತಿದೆ ಎಂದು ವೈಷ್ಣವ್ ಈಗಾಗಲೇ ಲೋಕಸಭೆಗೆ ತಿಳಿಸಿದ್ದಾರೆ. 2019-20ರ ನಡುವೆ ರೈಲ್ವೇ ಪ್ರಯಾಣಿಕರ ಟಿಕೆಟ್‌ಗೆ 59,837 ಕೋಟಿ ರೂಪಾಯಿ ಸಬ್ಸಿಡಿ ನೀಡಿದೆ. ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ವ್ಯಕ್ತಿಗೆ ರೈಲ್ವೇ ಸರಾಸರಿ ಶೇಕಡ 53 ರಷ್ಟು ಸಬ್ಸಿಡಿ ನೀಡುತ್ತದೆ. ಈ ಸಬ್ಸಿಡಿಯನ್ನು ಎಲ್ಲ ಪ್ರಯಾಣಿಕರಿಗೆ ನಿರಂತರವಾಗಿ ನೀಡಲಾಗುತ್ತಿದೆ ಎಂದರು.
ರೈಲ್ವೆಯು ಅನೇಕ ವಿಶೇಷ ವರ್ಗದ ಪ್ರಯಾಣಿಕರಿಗೆ ರೈಲು ಟಿಕೆಟ್‌ಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತದೆ. ಉದಾಹರಣೆಗೆ, 4 ವರ್ಗದ ಅಂಗವಿಕಲರಿಗೆ (ದಿವ್ಯಾಂಗಜನ), 11 ವರ್ಗದ ರೋಗಿಗಳಿಗೆ ಮತ್ತು 8 ವರ್ಗದ ವಿದ್ಯಾರ್ಥಿಗಳಿಗೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
2022-23ರ ಅವಧಿಯಲ್ಲಿ ಸರಿಸುಮಾರು 18 ಲಕ್ಷ ರೋಗಿಗಳು ಮತ್ತು ಅವರ ಸಹಚರರು ಈ ವಿಶೇಷ ರಿಯಾಯಿತಿಯಿಂದ ಪ್ರಯೋಜನ ಪಡೆದಿದ್ದಾರೆ. ಈ ಹಿಂದೆ ಭಾರತೀಯ ರೈಲ್ವೆಯು 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಪುರುಷರಿಗೆ ಶೇ.40 ಹಾಗೂ ಕನಿಷ್ಠ 58 ವರ್ಷವಾಗಿರುವ ಮಹಿಳೆಯರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು.


Click it and Unblock the Notifications