ಕೊರೊನಾ ಕೃಪೆಯಿಂದ ತುಂಬಿ ತುಳುಕುತ್ತಿರುವ ಸಿರಿವಂತರ ತಿಜೋರಿ; ಬಡವರ ಬದುಕು ಮತ್ತೂ ಕಷ್ಟ ರೀ
ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್, ಟೆಸ್ಲಾದ ಎಲಾನ್ ಮಸ್ಕ್ ಸೇರಿದಂತೆ ಹಲವು ಶತಕೋಟ್ಯಧಿಪತಿಗಳ ಆಸ್ತಿ ಕೋವಿಡ್ 19 ಬಿಕ್ಕಟ್ಟಿನ ಅವಧಿಯಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇದೇ ವೇಳೆ ವಿಶ್ವದಾದ್ಯಂತ ಬಡವರ ಸ್ಥಿತಿ ಬಹಳ ಕಠಿಣವಾಗಿದೆ. ಈ ಅಸಮಾನತೆ ಸರಿಪಡಿಸಬೇಕಿದೆ ಎಂದು ಆಕ್ಸ್ ಫಾಮ್ ಸೋಮವಾರ ಹೇಳಿದೆ.
5 ವರ್ಷ ಕರ್ನಾಟಕ ನಡೆಸುವಷ್ಟು ಹಣ ಇರುವ ಮಸ್ಕ್ ಈಗ ವಿಶ್ವದ ನಂ. 1 ಶ್ರೀಮಂತ
"ಅಸಮಾನತೆ ವೈರಸ್" ವರದಿ ಪ್ರಕಾರ, ನ್ಯಾಯಸಮ್ಮತ, ಹಸಿರು ಚೇತರಿಕೆ ನಿರ್ಮಾಣಕ್ಕೆ ದೇಶಗಳ ಪಾಲಿಗೆ "ಅವಕಾಶದ ಕಿಟಕಿಯೇ ಕುಗ್ಗುತ್ತಿದೆ". ವಿಶ್ವ ಆರ್ಥಿಕ ಫೋರಂ ವರ್ಚುವಲ್ ದಾವೋಸ್ ಚರ್ಚೆಯಲ್ಲಿ ಜಾಗತಿಕ ನಾಯಕರು ಪಾಲ್ಗೊಳ್ಳಲಿದ್ದು, ಆ ಹಿನ್ನೆಲೆಯಲ್ಲಿ ಈ ವರದಿ ಬಂದಿದೆ.

ದಾಖಲೆ ಪ್ರಮಾಣದಲ್ಲಿ ಅಸಮಾನತೆ
ಆಕ್ಸ್ ಫಾಮ್ ಇಂಟರ್ ನ್ಯಾಷನಲ್ ಕಾರ್ಯನಿರ್ವಾಹಕ ನಿರ್ದೇಶಕರಾದ ಗೇಬ್ರಿಯೆಲಾ ಬುಚರ್ ಮಾತನಾಡಿ, ಈ ದಾಖಲೆಗಳನ್ನು ಆರಂಭಿಸಿದ ಸಮಯದಿಂದ ಇಲ್ಲಿಯ ತನಕದಲ್ಲಿ ಭಾರೀ ಪ್ರಮಾಣದಲ್ಲಿ ಅಸಮಾನತೆಗೆ ಸಾಕ್ಷಿ ಆಗಲಿದ್ದೇವೆ ಎಂದಿದ್ದಾರೆ. ಇನ್ನು ಇದೇ ವೇಳೆ, ಹೆಚ್ಚಿನ ಸಂಪತ್ತಿನ ತೆರಿಗೆ ವಿಧಿಸಬೇಕು ಮತ್ತು ಕಾರ್ಮಿಕರಿಗೆ ಪ್ರಬಲವಾದ ರಕ್ಷಣೆ ಒದಗಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಠಿಣವಾದ ಆರ್ಥಿಕತೆಯ ಸಂದರ್ಭದಲ್ಲಿ ಸಿರಿವಂತರ ಆಸ್ತಿಯಲ್ಲಿ ಮತ್ತಷ್ಟು ಹೆಚ್ಚಳ ಆಗುತ್ತಿದೆ. ಕೊರೊನಾ ಬಿಕ್ಕಟ್ಟಿನ ವೇಳೆ ಮುಂಚೂಣಿಯಲ್ಲಿ ಇರುವ ಮಳಿಗೆ ಸಹಾಯಕರು, ಆರೋಗ್ಯ ರಕ್ಷಣಾ ಕಾರ್ಮಿಕರು, ಮಾರುಕಟ್ಟೆಯಲ್ಲಿನ ಮಾರಾಟಗಾರರು ಬಿಲ್ ಗಳನ್ನು ಪಾವತಿಸಲು ಸಹ ಪರದಾಡುತ್ತಿದ್ದಾರೆ ಎನ್ನಲಾಗಿದೆ.

ಜಗತ್ತಿನ ಸಿರಿವಂತರ ಆಸ್ತಿ 3.9 ಲಕ್ಷ ಕೋಟಿ ಅಮೆರಿಕನ್ ಡಾಲರ್ ಹೆಚ್ಚಳ
ಬಡವರು, ದುರ್ಬಲರ ಮೇಲೆ ಕೋವಿಡ್ 19 ಪರಿಣಾಮ ಭಾರೀ ಪ್ರಮಾಣದಲ್ಲಿ ಆಗಿದೆ. ಮಹಿಳೆಯರು, ಸಣ್ಣ ವಲಯಗಳಲ್ಲಿನ ಕಾರ್ಮಿಕರು ಉದ್ಯೋಗ ನಷ್ಟದಂಥ ಸಮಸ್ಯೆ ಎದುರಿಸುತ್ತಿದ್ದಾರೆ. ವಿಶ್ವ ಬ್ಯಾಂಕ್ ಎಚ್ಚರಿಸಿರುವ ಪ್ರಕಾರ, ಹತ್ತು ಕೋಟಿ ಜನ ವಿಪರೀತ ಬಡತನಕ್ಕೆ ದೂಡಲ್ಪಡುತ್ತಾರೆ. ಬಡತನದಿಂದ ಕೊರೊನಾ ಹಿಂದಿನ ಹಂತಕ್ಕೆ ವಾಪಸ್ ಕರೆತರುವುದಕ್ಕೆ ದಶಕಗಳ ಸಮಯ ಬೇಕಾಗಬಹುದು ಎಂದು ಆಕ್ಸ್ ಫಾಮ್ ಹೇಳಿದೆ. ಈ ಮಧ್ಯೆ 2020ರ ಮಾರ್ಚ್ ನಿಂದ ಡಿಸೆಂಬರ್ ನಲ್ಲಿ ವಿಶ್ವದ ಶತಕೋಟ್ಯಧಿಪತಿಗಳ ಆಸ್ತಿ 3.9 ಲಕ್ಷ ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಗಿ, ಒಟ್ಟಾರೆ ಆಸ್ತಿ ಪ್ರಮಾಣ 11.95 ಲಕ್ಷ ಕೋಟಿ ಯುಎಸ್ ಡಿ ತಲುಪಿದೆ. ಒಂದು ಲಕ್ಷ ಕೋಟಿ ಡಾಲರ್ ಅಂದರೆ, ಭಾರತದ ರುಪಾಯಿ ಲೆಕ್ಕದಲ್ಲಿ 71 ಲಕ್ಷ ಕೋಟಿ.

ಇಪ್ಪತ್ತು ವರ್ಷ ಭಾರತವನ್ನು ನಡೆಸಿಬಿಡಬಹುದು
2020- 21ರ ಬಜೆಟ್ ನಲ್ಲಿ ಆಗಿರುವ ಅಂದಾಜು ಖರ್ಚು 30,42,230 ಕೋಟಿ ರುಪಾಯಿ. ಈ ಶ್ರೀಮಂತರ ಆಸ್ತಿಯೆಲ್ಲ ಒಟ್ಟುಗೂಡಿಸಿಕೊಂಡರೆ 135 ಕೋಟಿ ಜನಸಂಖ್ಯೆಯ ಭಾರತವನ್ನು ಇಪ್ಪತ್ತು ವರ್ಷ ನಡೆಸಿಬಿಡಬಹುದು. ಇನ್ನು ವಿಶ್ವದ ಟಾಪ್ ಟೆನ್ ಸಿರಿವಂತರ ಪಟ್ಟಿಯಲ್ಲಿ ಇರುವ ಮಸ್ಕ್, ಬೆಜೋಸ್, ಬರ್ನಾರ್ಡ್ ಅರ್ನಾಲ್ಟ್, ಬಿಲ್ ಗೇಟ್ಸ್, ಝುಕರ್ ಬರ್ಗ್ ಈ ಐವರ ನಿವ್ವಳ ಆಸ್ತಿಯಲ್ಲೇ ಕಳೆದ ವರ್ಷದ ಒಂಬತ್ತು ತಿಂಗಳ ಅವಧಿಯಲ್ಲಿ 54,000 ಕೋಟಿ ಯುಎಸ್ ಡಿ ಹೆಚ್ಚಾಗಿದೆ ಎಂದು ಅಕ್ಸ್ ಫಾಮ್ ಹೇಳಿದೆ. ಈ ಹಣದ ಮೂಲಕ ಕೋವಿಡ್ ನಿಂದ ಯಾರೂ ಬಡತನಕ್ಕೆ ಸಿಲುಕದಂತೆ ತಡೆಯಬಹುದು. ಈ ಭೂಮಿ ಮೇಲಿರುವ ಪ್ರತಿಯೊಬ್ಬರಿಗೂ ಲಸಿಕೆಗೆ ಹಣ ನೀಡಬಹುದು ಎಂದು ಸಂಶೋಧಕರು ಲೆಕ್ಕ ನೀಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜಾಗತಿಕ 32 ಕಾರ್ಪೊರೇಷನ್ ಗಳು ಮಾಡಿರುವ ಹೆಚ್ಚುವರಿ ಲಾಭದ ಮೇಲಿನ ತಾತ್ಕಾಲಿಕ ತೆರಿಗೆಯು 10,400 ಕೋಟಿ ಅಮೆರಿಕನ್ ಡಾಲರ್ ಆಗುತ್ತದೆ ಎಂದು ಆಕ್ಸ್ ಫಾಮ್ ಹೇಳಿದೆ.