For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್ ಕಪೂರ್ ಕುಟುಂಬದ 101 ಕಂಪೆನಿ, 168 ಬ್ಯಾಂಕ್ ಅಕೌಂಟ್: ಸಮುದ್ರ ಮಹಲ್ ರಹಸ್ಯ

By ಅನಿಲ್ ಆಚಾರ್
|

ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿದ್ದ ಯೆಸ್ ಬ್ಯಾಂಕ್ ನಲ್ಲಿ ಅಲ್ಲೋಲ ಕಲ್ಲೋಲ ಶುರುವಾದಾಗ ದೇಶದ ದೊಡ್ಡ ದೊಡ್ಡ ದೇವಸ್ಥಾನವೇ ಅದರಲ್ಲಿ ದುಡ್ಡು ಇಟ್ಟಿದ್ದವು ಎಂಬುದು ಗೊತ್ತಾಗಿದ್ದು. ಏಕೆಂದರೆ ರಾಷ್ಟ್ರೀಯ ಬ್ಯಾಂಕ್ ಗಳಿಗಿಂತ ಹೆಚ್ಚಿನ ಬಡ್ಡಿ ನೀಡುತ್ತಿತ್ತು ಯೆಸ್ ಬ್ಯಾಂಕ್. ಜನರಿಗೂ ಬ್ಯಾಂಕ್ ಬಗ್ಗೆ ಸಿಕ್ಕಾಪಟ್ಟೆ ವಿಶ್ವಾಸ ಇತ್ತು. ಆದರೆ ಆ ಬ್ಯಾಂಕ್ ನಿಂದ ರಾಣಾ ಕಪೂರ್ ಹೊರಗೆ ಬರುತ್ತಿದ್ದಂತೆ ಒಂದೊಂದಾಗಿ ರಂಕಲುಗಳು ಹೊರಬಂದವು.

ಈ ವರದಿ ಮನಿಕಂಟ್ರೋಲ್ ವೆಬ್ ಸೈಟ್ ನಲ್ಲಿ ಪ್ರಕಟವಾಗಿದೆ. ಜಾರಿ ನಿರ್ದೇಶನಾಲಯದಿಂದ ಹೊರಬಂದಿರುವ ರಾಣಾ ಕಪೂರ್ ಕುಟುಂಬದ ಬಗೆಗಿನ ಸ್ಫೋಟಕ ಸಂಗತಿಗಳು ಇಲ್ಲಿವೆ.

***
ಮುಂಬೈನ ವೊರ್ಲಿಯಲ್ಲಿ ಇರುವ ಸಮುದ್ರ ಮಹಲ್ ಅಂದರೆ ಜನ ಕಣ್ಣರಳಸಿ ನೋಡ್ತಾರೆ. ಅದೊಂದು ಬಗೆಯ ಬೆರಗು. ಬರೀ ಮುಂಬೈ ಅಷ್ಟೇ ಅಲ್ಲ, ಸಮುದ್ರ ಮಹಲ್ ಅಂದರೆ ದೇಶದ ನಾನಾ ಭಾಗಗಳಲ್ಲಿ ಅದರದೇ ಹವಾ ಇದೆ. ಭಾರತದ ಅತ್ಯತ ಪ್ರಭಾವಿ, ಶ್ರೀಮಂತ ಹಾಗೂ ಪ್ರಖ್ಯಾತ ಉದ್ಯಮಿಗಳ ಪಾಲಿಗೆ ಈ ಅಪಾರ್ಟ್ ಮೆಂಟ್ ನಲ್ಲಿ ಇರುವುದೇ ಪ್ರತಿಷ್ಠೆಯ ವಿಚಾರ.

ದೇಶ ಬಿಟ್ಟು ಓಡಿಹೋಗಿರುವ ನೀರವ್ ಮೋದಿ ಕೂಡ ಒಂದು ಕಾಲಕ್ಕೆ ಇದೇ ಅಪಾರ್ಟ್ ಮೆಂಟ್ ನಲ್ಲಿ ಇದ್ದ. ಈಗ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಲ್ಲಿ ಇರುವ ಯೆಸ್ ಬ್ಯಾಂಕ್ ನ ಸಹ ಸಂಸ್ಥಾಪಕ ಹಾಗೂ ಮಾಜಿ ಸಿಇಒ ರಾಣಾ ಕಪೂರ್ ಕೂಡ ಇದೇ ಅಪಾರ್ಟ್ ಮೆಂಟ್ ನಲ್ಲಿ ಇದ್ದವರು.

ನಿಮಗೆ ಗೊತ್ತಾ? ರಾಣಾ ಕಪೂರ್ ಬಾಡಿಗೆಗೆ ಇದ್ದ ವಿಲಾಸಿ ಡೂಪ್ಲೆಕ್ಸ್ ಬಂಗಲೆಯ ಮಾಲೀಕರು, ಈಗಿನ ಬಿಜೆಪಿ ನಾಯಕರಾದ ಜ್ಯೋತಿರಾದಿತ್ಯ ಸಿಂಧ್ಯಾ. ಯೆಸ್ ಬ್ಯಾಂಕ್ ನಿಂದ ಕಪೂರ್ ಹೊರಬೀಳುವ ತನಕ ಈ ಮನೆ ಬ್ಯಾಂಕ್ ಗೆ ಅಘೋಷಿತ ಮುಖ್ಯ ಕಚೇರಿ ಎಂಬಂತೆ ಇತ್ತು. ಕಪೂರ್ ಸಾಹೇಬರು ಅದೆಂಥ ಉದಾರಿ ಅಂದರೆ, ಆತಿಥ್ಯ ನೀಡುವುದೆಂದರೆ ಅವರಿಗೆ ಬಲು ಪ್ರೀತಿ.

ವಿಶೇಷ ಅತಿಥಿಗಳು ಸಾಲುಗಟ್ಟಿ ನಿಂತಿರುತ್ತಿದ್ದರು. ದೊಡ್ಡ ಮೊತ್ತದ ಕಾರ್ಪೊರೇಟ್ ಸಾಲದ ವ್ಯವಹಾರ ಒಂದು ಔತಣ ಕೂಟ ಪೂರ್ತಿ ಆಗುವುದರೊಳಗೆ ಮುಗಿದುಹೋಗುತ್ತಿತ್ತು. ಈ ಹಿಂದೆ ಯೆಸ್ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರಾಗಿದ್ದವರು ಈ ಬಗ್ಗೆ ಹೇಳಿಕೊಂಡಿದ್ದಾರೆ: "ಸಮುದ್ರ ಮಹಲ್ ಅನ್ನೋದು ಯೆಸ್ ಬ್ಯಾಂಕ್ ನ ಅನಧಿಕೃತ ಹೆಡ್ ಆಫೀಸ್ ಆಗಿತ್ತು. ಒಂದು ಹಂತದಲ್ಲಿ ಪ್ರಮುಖರ ಭೇಟಿ ಅಲ್ಲಿಯೇ ನಡೆಯುತ್ತಿತ್ತು" ಎಂದಿದ್ದಾರೆ.

ಯೆಸ್ ಬ್ಯಾಂಕ್ ಸ್ಥಾಪಕರ ಶೆಲ್ ಕಂಪೆನಿಗಳು, 2,000 ಕೋಟಿ ಮೌಲ್ಯದ ಆಸ್ತಿಯೆಸ್ ಬ್ಯಾಂಕ್ ಸ್ಥಾಪಕರ ಶೆಲ್ ಕಂಪೆನಿಗಳು, 2,000 ಕೋಟಿ ಮೌಲ್ಯದ ಆಸ್ತಿ

ಸಾಲದ ಭಾರದಲ್ಲಿ ಕುಸಿದುಹೋಗಿರುವ ಯೆಸ್ ಬ್ಯಾಂಕ್ ನ ಇಂದಿನ ದುಸ್ಥಿತಿ ಬಗ್ಗೆ ಭಾರತದ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುತ್ತಿವೆ. ಇದರಲ್ಲಿ ಕಪೂರ್ ಪಾತ್ರವೇನು ಎಂಬ ಬಗ್ಗೆ ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಒಂದು ಕಡೆ ಯೆಸ್ ಬ್ಯಾಂಕ್ ಕುಸಿಯುತ್ತಿದ್ದರೆ, ಮತ್ತೊಂದು ಕಡೆ ಕಪೂರ್ ಕುಟುಂಬ ದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿಕೊಂಡಿತ್ತು. ಇದನ್ನು ಜಾರಿ ನಿರ್ದೇಶನಾಲಯವೇ ಹೇಳಿದೆ.

ಎಕೋ ಟೂರಿಸಂನಿಂದ ಲಾಂಡ್ರಿ ಡ್ರೈ ಕ್ಲೀನಿಂಗ್ ತನಕ

ಎಕೋ ಟೂರಿಸಂನಿಂದ ಲಾಂಡ್ರಿ ಡ್ರೈ ಕ್ಲೀನಿಂಗ್ ತನಕ

ಕಪೂರ್ ಕುಟುಂಬ ಮೂರು ಹೋಲ್ಡಿಂಗ್ ಸಂಸ್ಥೆಯನ್ನು ಆರಂಭಿಸಿ, ಅದಕ್ಕೆ ಮೋರ್ಗನ್ ಕ್ರೆಡಿಟ್ಸ್ (MCPL), ಯೆಸ್ ಕ್ಯಾಪಿಟಲ್ ಇಂಡಿಯಾ (YCPL) ಹಾಗೂ RAB ಎಂಟರ್ ಪ್ರೈಸಸ್ ಎಂದು ಹೆಸರಿಟ್ಟು, ಅದರ ಮೂಲಕ 101 ಕಂಪೆನಿಗಳನ್ನು ನಡೆಸುತ್ತಿದ್ದುದು ಇದೇ ಸಮುದ್ರ ಮಹಲ್ ನಿಂದ. ಕಪೂರ್ ಕುಟುಂಬ ಯಾವ ವ್ಯವಹಾರಗಳಲ್ಲಿ ತೊಡಗಿಕೊಂಡಿತ್ತು ಎಂದು ಪರಿಶೀಲಿಸಿದರೆ ತನಿಖಾಧಿಕಾರಿಗಳೇ ಗಾಬರಿ ಆಗ್ತಾರೆ. ರಿಯಲ್ ಎಸ್ಟೇಟ್, ಎಕೋ ಟೂರಿಸಂ, ರಿನೀವಬಲ್ ಎನರ್ಜಿ, ಹಾಲಿನ ಉತ್ಪನ್ನ, ಚಿತ್ರಕಲೆ...ಓಹ್ ಏನಿಲ್ಲ ಹೇಳಿ. ಕೊನೆಗೆ ಡ್ರೈ ಕ್ಲೀನಿಂಗ್, ಲಾಂಡ್ರಿ ಬಿಜಿನೆಸ್ ಕೂಡ ಬಿಟ್ಟಿಲ್ಲ. ರಾಣಾ ಕಪೂರ್, ಆತನ ಪತ್ನಿ ಬಿಂದು ಮತ್ತು ಅವರ ಮಕ್ಕಳಾದ ರೋಶಿನಿ ಕಪೂರ್, ರಾಧಾ ಕಪೂರ್ ಮತ್ತು ರಾಖಿ ಕಪೂರ್ ಇವರೆಲ್ಲರೂ ಸೇರಿ ಒಟ್ಟು 168 ಖಾತೆಗಳನ್ನು ವಿವಿಧ ಬ್ಯಾಂಕ್ ಗಳಲ್ಲಿ ಹೊಂದಿದ್ದರು.

ಕಪೂರ್ ಇಷ್ಟೆಲ್ಲ ಕಂಪೆನಿಗಳನ್ನು ಆರಂಭಿಸಿದ್ದೇಕೆ? ಇಷ್ಟೆಲ್ಲ ಬ್ಯಾಂಕ್ ಖಾತೆ ಬೆಕಿತ್ತಾ? ಹೇಗೆ ಮತ್ತು ಏಕೆ ಕಪೂರ್ ಈ ವ್ಯವಹಾರಗಳನ್ನು ಶುರು ಮಾಡಿ, ನಡೆಸುತ್ತಿದ್ದರು? ನಿಯಮಗಳನ್ನು ಮೀರಿದ್ದು ಹೇಗೆ? ಹೀಗೆ ಪ್ರಶ್ನೆ ಮೂಡುವಂಥ ಹೂಡಿಕೆಗಳು ಮತ್ತು ವ್ಯವಹಾರದಲ್ಲಿನ ಅಸಮರ್ಪಕತೆಗಳೇ ಜಾರಿ ನಿರ್ದೇಶನಾಲಯಕ್ಕೆ ಆ ಕುಟುಂಬದ ವಿರುದ್ಧ ತನಿಖೆಗೆ ಸನ್ನಿವೇಶ ಸೃಷ್ಟಿಸಿದೆ ಹಾಗೂ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳುವ ಪರಿಸ್ಥಿತಿಗೆ ತಂದಿದೆ. ನಾನೇನೂ ತಪ್ಪು ಮಾಡಿಲ್ಲ ಎಂದು ಕೈ ಅಲ್ಲಾಡಿಸಿದ್ದಾರೆ ಕಪೂರ್. ಈ ಕುಟುಂಬದ ಹೋಲ್ಡಿಂಗ್ ಕಂಪೆನಿಗಳು ಹದಿನೈದು ಮ್ಯೂಚುವಲ್ ಫಂಡ್ ಗಳ ಮೇಲೆ ಹೂಡಿಕೆ ಮಾಡಿವೆ. ಇವರ ಬಳಿ ಇರುವ 59 ಕಲಾಕೃತಿಗಳ ಮೌಲ್ಯವೇ 4 ಕೋಟಿ ರುಪಾಯಿ. ಇವುಗಳನ್ನು ಇಡುವುದಕ್ಕೆ ಅಂತಲೇ ಸಮುದ್ರ ಮಹಲ್ ನಲ್ಲಿ ಪ್ರತ್ಯೇಕ ಕೋಣೆ ಇತ್ತು. ಇದರಲ್ಲಿ ಖ್ಯಾತ ಚಿತ್ರಕಾರ ಎಂ.ಎಫ್. ಹುಸೇನ್ ರು ರಚಿಸಿರುವ ರಾಜೀವ್ ಗಾಂಧಿ ಕಲಾಕೃತಿ ಮತ್ತು ಅಸ್ಲಾಮ್ ಶೇಖ್ ಅವರ ಕಲಾಕೃತಿಗಳು ಸಹ ಇವೆ

ಎಲ್ಲಿಂದ ಶುರುವಾಯಿತು?

ಎಲ್ಲಿಂದ ಶುರುವಾಯಿತು?

ಇ.ಡಿ. ತನಿಖೆ ಪ್ರಕಾರ, ಕಪೂರ್ ಕುಟುಂಬ ಕಂಪೆನಿ ಆರಂಭಿಸಲು ಶುರು ಮಾಡಿದ್ದು 1991ರಲ್ಲಿ. ಆಗ MCPL ಆರಂಭಿಸಲಾಯಿತು. ಈ ಹೋಲ್ಡಿಂಗ್ ಕಂಪೆನಿ ಶುರುವಾದ ದಿನದಿಂದ ಹನ್ನೆರಡು ವರ್ಷಗಳ ಕಾಲ ಸಕ್ರಿಯವಾಗಿರಲಿಲ್ಲ. YCPL, ಅದಕ್ಕೂ ಮುಂಚೆ ಅದರ ಹೆಸರು DoIT ಕ್ಯಾಪಿಟಲ್, ಆರಂಭವಾದದ್ದು 2003ರ ಮೇ ತಿಂಗಳಲ್ಲಿ. ಯೆಸ್ ಬ್ಯಾಂಕ್ ಆರಂಭ ಆದದ್ದು 2004ರಲ್ಲಿ. ಈ ಎರಡೂ ಕಂಪೆನಿಗಳು ಇನ್ವೆಸ್ಟ್ ಮೆಂಟ್ ಕಂಪೆನಿಗಳು ಅಂತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಅನುಮತಿ ಪಡೆದಿವೆ. ಯೆಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಕಪೂರ್ ಗೆ ಹಣ ಬಂದಿರುವುದು ರಾಬೊ ಇಂಡಿಯಾ ಫೈನಾನ್ಸ್ ಜಾಯಿಂಟ್ ವೆಂಚರ್ ಷೇರುಗಳನ್ನು ರಾಬೊ ಬ್ಯಾಂಕ್ ಹಾಲೆಂಡ್ ಗೆ ಮಾರಾಟ ಮಾಡಿರುವುದರಿಂದ. ರಾಬೊ ಇಂಡಿಯಾ ಎಂಬುದು ಕಪೂರ್ ಭಾರತದಲ್ಲಿ ಆರಂಭಿಸಿದ ಮೊದಲ ಪ್ರಾಜೆಕ್ಟ್. ಯೆಸ್ ಬ್ಯಾಂಕ್ ಆರಂಭಕ್ಕೆ ಅದೇ ಅಡಿಗಲ್ಲು. ರಾಬೊ ಬ್ಯಾಂಕ್ ಈ ಕಂಪೆನಿಯಲ್ಲಿ ಶೇಕಡಾ 75ರಷ್ಟು ಷೇರು ಹೊಂದಿದ್ದರೆ, ಬಾಕಿ 25 ಪರ್ಸೆಂಟ್ ಮೂವರು ಪಾರ್ಟನರ್ ಗಳ ಮಧ್ಯೆ ಹಂಚಿಕೆ ಆಗಿತ್ತು.

2002-03ರಲ್ಲಿ ರಾಣಾ ಕಪೂರ್ ಮತ್ತು ಆತನ ಪಾರ್ಟ್ ನರ್ ಗಳಾದ ಅಶೋಕ್ ಕಪೂರ್, ಹರ್ ಕಿರತ್ ಸಿಂಗ್ ತಮ್ಮ ಪಾಲನ್ನು ರಾಬೊ ಬ್ಯಾಂಕ್ ಗೆ ಮಾರಿ ನಿರ್ಗಮಿಸಿದ್ದಾರೆ. 2004ರಲ್ಲಿ ರಾಣಾ ಕಪೂರ್ ಹಾಗೂ ಅಶೋಕ್ ಕಪೂರ್ ಸೇರಿ ಯೆಸ್ ಬ್ಯಾಂಕ್ ಆರಂಭಿಸಿದ್ದಾರೆ. 2008ರ ತನಕ ಯೆಸ್ ಬ್ಯಾಂಕ್ ಅದ್ಭುತವಾದ ಬೆಳವಣಿಗೆ ದಾಖಲಿಸಿತು. 26/11 ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಅಶೋಕ್ ಕಪೂರ್ ಸಾವನ್ನಪ್ಪಿದರು. ಅಲ್ಲಿಂದ ಆಚೆಗೆ 2018ರ ತನಕ, ಅಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಲವಂತವಾಗಿ ಹೊರಹಾಕುವ ತನಕ ಯೆಸ್ ಬ್ಯಾಂಕ್ ಮೇಲೆ ಪೂರ್ತಿ ಹಿಡಿತ ಇದ್ದಿದ್ದು ರಾಣಾ ಕಪೂರ್ ಗೆ.

5050 ಕೋಟಿ ರುಪಾಯಿ ಕಿಕ್ ಬ್ಯಾಕ್

5050 ಕೋಟಿ ರುಪಾಯಿ ಕಿಕ್ ಬ್ಯಾಕ್

ಮಾರ್ಚ್ 6, 2020ರ ರಾತ್ರಿ 11 ಗಂಟೆಗೆ ಜಾರಿ ನಿರ್ದೇಶನಾಲಯ ಸಮುದ್ರ ಮಹಲ್ ನ ಡೂಪ್ಲೆಕ್ಸ್ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿತು. ರಾಣಾ ಕಪೂರ್ ಹಾಗೂ ಡಿಎಚ್ ಎಫ್ ಎಲ್ ಹೌಸಿಂಗ್ ಫೈನಾನ್ಸ್ ವಾಧ್ವಾನ್ ಗಳ ಮಧ್ಯೆ ನಡೆದ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವುದು ಉದ್ದೇಶವಾಗಿತ್ತು. ಒಂದು ಕಾಲಕ್ಕೆ ಡಿಎಚ್ ಎಫ್ ಎಲ್ ನಿಂದಲೇ ಸಾಲಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ತಾನೇ ಕುಸಿದುಹೋಗಿದೆ. ಸದ್ಯಕ್ಕೆ ದಿವಾಳಿ ವಿಚಾರಣೆಯನ್ನು ಎದುರಿಸುತ್ತಿರುವ ಡಿಎಚ್ ಎಫ್ ಎಲ್, ಸಾಲಗಾರರಿಗೆ 36 ಸಾವಿರ ಕೋಟಿ ರುಪಾಯಿ ನೀಡಬೇಕಾಗಿದೆ. ಸಿಬಿಐ ಹೇಳುತ್ತಿರುವಂತೆ, ಆರಂಭಿಕ ತನಿಖೆಯಿಂದ ಗೊತ್ತಾಗಿರುವುದು ಏನೆಂದರೆ, ಯೆಸ್ ಬ್ಯಾಂಕ್ ನಿಂದ ವಾಧ್ವಾನ್ ಗಳಿಗೆ ಸಾಲ ನೀಡುವುದಕ್ಕೆ 5050 ಕೋಟಿ ರುಪಾಯಿಯನ್ನು ಕಪೂರ್ ಕಿಕ್ ಬ್ಯಾಕ್ ಪಡೆದಿದ್ದಾರೆ. ಕಪೂರ್ ತಮ್ಮ ಹಲವು ಕಂಪೆನಿಗಳಿಗೆ ವಾಧ್ವಾನ್ ಮೂಲಕ ಅನುಕೂಲ ಮಾಡಿಸಿಕೊಂಡಿದ್ದಾರೆ. ಒಂದು ವೇಳೆ ಈ ಆರೋಪವು ಸಾಬೀತಾಗಿ, ಸಾಲ ಮತ್ತು ಕಿಕ್ ಬ್ಯಾಕ್ ಸಂಬಂಧದಲ್ಲಿ ಕಪೂರ್- ವಾಧ್ವಾನ್ ಒಳಗೊಂಡಿದ್ದರೆ ಇದು ಮತ್ತೊಂದು ಚಂದಾ ಕೊಚ್ಚರ್- ವಿಡಿಯೋಕಾನ್ ಪ್ರಕರಣ ಆಗಲಿದೆ. ವಿಡಿಯೋಕಾನ್ ವೇಣುಗೋಪಾಲ್ ಧೂತ್ ರಿಂದ ಅನುಕೂಲ ಪಡೆದು, ಐಸಿಐಸಿಐ ಬ್ಯಾಂಕ್ ಸಿಇಒ ಆಗಿದ್ದ ಚಂದಾ ಕೊಚ್ಚರ್ 3,250 ಕೋಟಿ ಸಾಲ ಕೊಡಿಸಿದ್ದಾರೆ ಎಂಬ ಆರೋಪ ಇದ್ದು, ಆ ಬಗ್ಗೆ ತನಿಖೆ ನಡೆಯುತ್ತಿದೆ.

ಡಿಎಚ್ ಎಫ್ ಎಲ್ ಗೆ  3700 ಕೋಟಿ ರುಪಾಯಿ ಸಾಲ

ಡಿಎಚ್ ಎಫ್ ಎಲ್ ಗೆ 3700 ಕೋಟಿ ರುಪಾಯಿ ಸಾಲ

ಏಪ್ರಿಲ್ 2018ರಲ್ಲಿ ವಾಧ್ವಾನ್ ರ ಡಿಎಚ್ ಎಫ್ ಎಲ್ ನಿಂದ ಅಲ್ಪಾವಧಿ ಡಿಬೆಂಚರ್ ಪಡೆದು, ಯೆಸ್ ಬ್ಯಾಂಕ್ ನಿಂದ 3700 ಕೋಟಿ ರುಪಾಯಿ ಸಾಲ ನೀಡಲಾಗಿದೆ. ಅದು ಇಲ್ಲಿ ತನಕ ವಾಪಸ್ ಬಂದಿಲ್ಲ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಯೆಸ್ ಬ್ಯಾಂಕ್ ಬ್ಯಾಂಕ್ ನಿಂದ 750 ಕೋಟಿ ರುಪಾಯಿ ಸಾಲವನ್ನು ಬಿಲೀಫ್ ರಿಯಾಲ್ಟಿ (BRPL) ಎಂಬುದಕ್ಕೆ ನೀಡಿದ್ದು, ಅದರಲ್ಲಿ ಡಿಎಚ್ ಎಫ್ ಎಲ್ ಪ್ರಮೋಟರ್ ಗಳಾದ ಕಪಿಲ್ ವಾಧ್ವಾನ್, ಧೀರಜ್ ವಾಧ್ವಾನ್ ಮತ್ತು ಅವರ ಕುಟುಂಬದವರು ಸದಸ್ಯರಾಗಿದ್ದಾರೆ. ಇಡೀ ಮೊತ್ತವನ್ನು ವಾಧ್ವಾನ್ ಗಳ ಶೆಲ್ ಕಂಪೆನಿಗಳ ಮೂಲಕ ವಂಚಿಸಿ, ಯಾವ ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಸಾಲ ಪಡೆಯಲಾಗಿತ್ತೋ ಅದಕ್ಕೆ ನಯಾ ಪೈಸೆ ಬಳಸಿಲ್ಲ. ಆ ನಂತರ ಸಂಪೂರ್ಣ ಮೊತ್ತವನ್ನು ಡಿಎಚ್ ಎಫ್ ಎಲ್ ಗೆ ವರ್ಗಾಯಿಸಲಾಗಿದೆ. ಅಂದ ಹಾಗೆ ಯೆಸ್ ಬ್ಯಾಂಕ್ ನಿಂದ ಆ ಸಾಲ ಪಡೆದದ್ದು ಬಾಂದ್ರಾದಲ್ಲಿ ಒಂದು ಯೋಜನೆ ಹೆಸರಿನಿಂದ. ಅದಕ್ಕೆ ಹಣವನ್ನೇ ಬಳಸಿಯೇ ಇಲ್ಲ. ಈ ಸಾಲ ಪ್ರಸ್ತಾವದ ಅಪಾಯದ ಬಗ್ಗೆ ಯೆಸ್ ಬ್ಯಾಂಕ್ ನ ತಂಡವು ಎಚ್ಚರಿಕೆ ನೀಡಿದೆ. ಆದರೂ ಅದನ್ನು ಮೀರಿ 750 ಕೋಟಿ ಸಾಲ ನೀಡಲಾಗಿದೆ.

ಏನೇನೂ ಬೆಲೆ ಇಲ್ಲದ ಭೂಮಿ ಅಡಮಾನ

ಏನೇನೂ ಬೆಲೆ ಇಲ್ಲದ ಭೂಮಿ ಅಡಮಾನ

ವಾಧ್ವಾನ್ ಗಳ ಡಿಎಚ್ ಎಫ್ ಎಲ್ ಮೂಲಕ ಕಪೂರ್ ಮತ್ತು ಅವರ ಕುಟುಂಬ ಸದಸ್ಯರು 600 ಕೋಟಿ ರುಪಾಯಿ ಕಿಕ್ ಬ್ಯಾಕ್ ಪಡೆದಿದೆ ಎನ್ನುತ್ತಿದೆ ಇ.ಡಿ. ಈ ಸಾಲವನ್ನು ಡಿಎಚ್ ಎಫ್ ಎಲ್ ನಿಂದ ಡಿಒಐಟಿ ಅರ್ಬನ್ ವೆಂಚರ್ಸ್ ಗೆ ನೀಡಲಾಗಿದೆ. ಆ ಕಂಪೆನಿಯು ಸಂಪೂರ್ಣವಾಗಿ ಕಪೂರ್ ಕುಟುಂಬಕ್ಕೆ ಸೇರಿದ್ದು. ಎಂಸಿಪಿಎಲ್ ಮೂಲಕ ಕಪೂರ್ ರ ಮಕ್ಕಳು ಡಿಒಐಟಿಯಲ್ಲಿ ಶೇಕಡಾ ನೂರರಷ್ಟು ಪಾಲು ಹೊಂದಿದ್ದಾರೆ. ಈ ಸಾಲಕ್ಕಾಗಿ ಅಷ್ಟೇನೂ ಮೌಲವಿಲ್ಲದ ಆಲೀಬಾಗ್ ನ 7.79 ಎಕರೆ ಭೂಮಿ ಹಾಗೂ ರಾಯ್ ಗಡ್ ನಲ್ಲಿ 91.63 ಎಕರೆ ಭೂಮಿಯನ್ನು ಅಡಮಾನ ಮಾಡಲಾಗಿದೆ. ಈ ಕೃಷಿ ಭೂಮಿಯನ್ನು ಭವಿಷ್ಯದಲ್ಲಿ ವಸತಿ ಭೂಮಿ ಮಾಡುವುದಾಗಿ ಹೇಳಲಾಗಿದೆ. ಇದರ ಜತೆಗೆ ಕಪೂರ್ ರ ಮಗಳು ರಾಧಾ 1,386 ರುಪಾಯಿ ಆಸ್ತಿಯ ಪರ್ಸನಲ್ ಗ್ಯಾರಂಟಿ ನೀಡಿದ್ದಾರೆ. ಆ 600 ಕೋಟಿ ಸಾಲದಲ್ಲಿ 300 ಕೋಟಿ ರುಪಾಯಿಯನ್ನು ಅದಾಗಲೇ ಪಡೆದಿದ್ದ ಸಾಲ ಹಿಂತಿರುಗಿಸಲು ಬಳಸಿದೆ. ಉಳಿದಿದ್ದನ್ನು ಕಂಪೆನಿಯ ಖರ್ಚಿಗೆ ಬಳಸಲಾಗಿದೆ ಎಂದು ತಿಳಿಸಿದೆ.

ವಾಧ್ವಾನ್ ಗಳ ಜತೆಗೆ ಕಪೂರ್ ಕುಟುಂಬ ನೇರ ವ್ಯವಹಾರ

ವಾಧ್ವಾನ್ ಗಳ ಜತೆಗೆ ಕಪೂರ್ ಕುಟುಂಬ ನೇರ ವ್ಯವಹಾರ

ಈ ಸಾಲಕ್ಕೆ ಡಿಎಚ್ ಎಫ್ ಎಲ್ ಗೆ ಐದು ಆಸ್ತಿಗಳನ್ನು ಅಡಮಾನವಾಗಿ ನೀಡಲಾಗಿದೆ. ಆ ಭೂಮಿಯ ಬೆಲೆಯನ್ನು ವಾಧ್ವಾನ್ ಗಳು ಹೇಳಿದಂತೆಯೇ ಮೌಲ್ಯ ಮಾಪನ ಮಾಡಲಾಗಿದೆ. ಅಂದ ಹಾಗೆ ಈ ಭೂಮಿಯನ್ನು ಖರೀದಿಸಿದ ವೇಳೆ ಇದರ ಮೌಲ್ಯ 39.66 ಕೋಟಿ ಮಾತ್ರ. ಆದರೆ ಡಿಎಚ್ ಎಫ್ ಎಲ್ ನಿಂದ ಇದರ ಮೌಲ್ಯ ಮಾಪನ ಮಾಡಿರುವುದು 735 ಕೋಟಿ ರುಪಾಯಿಗೆ. ಇದು ಕೃಷಿ ಭೂಮಿಯಾಗಿಯೇ ಉಳಿದುಕೊಂಡಿದೆ ಎಂದು ಇ.ಡಿ. ಮಾಹಿತಿ ನೀಡಿದೆ. ಡಿಎಚ್ ಎಫ್ ಎಲ್ ನಿಂದ ಸಾಲ ಪಡೆದದ್ದು 2023ರಲ್ಲೇ ಅಂದರೆ, ಸಾಲ ವಿತರಿಸಿದ 60 ತಿಂಗಳ ನಂತರವೇ ಪಾವತಿಸುವಂತೆ ಇಡೀ ಸಾಲ ನೀಡುವ ಪ್ರಕ್ರಿಯೆ ರೂಪುಗೊಂಡಿದೆ. ಇನ್ನು ರಾಣಾ ಕಪೂರ್ ರ ಹೆಣ್ಣುಮಕ್ಕಳು ಯಾರೂ ಡಿಎಚ್ ಎಫ್ ಎಲ್ ನ ಮೇಲ್ ಸ್ತರದ ಅಧಿಕಾರಿಗಳ ಜತೆ ಮಾತುಕತೆಯೇ ನಡೆಸಿಲ್ಲ. ಅವರ ಚರ್ಚೆ ಏನಿದ್ದರೂ ವಾಧ್ವಾನ್ ಜತೆಗೆ ನಡೆದಿದೆ ಎಂಬುದರ ಕಡೆಗೆ ಇ.ಡಿ. ವಿಚಾರಣೆ ಗಮನ ಸೆಳೆಯುತ್ತದೆ. ಅಂತೂ ಯೆಸ್ ಬ್ಯಾಂಕ್ ನ ಒಂದು ತುದಿಗೆ ಕೈಯಿಟ್ಟು ಬಾಲವನ್ನು ಎಳೆದರೆ ಗಜ ಗಾತ್ರದ ಹಗರಣಗಳು ಬಯಲಿಗೆ ಬಿದ್ದಿವೆ.

English summary

Yes Bank Scam: Rana Kapoor's Family Business Empire

Yes bank scam main accused Rana Kapoor's family business empire and in detail information about transactions, according to ED.
Story first published: Tuesday, May 12, 2020, 15:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X