Englishहिन्दी മലയാളം தமிழ் తెలుగు

ಭಾರತದ ಮಾರುಕಟ್ಟೆಯಲ್ಲಿ ಪತಂಜಲಿಯ ಯಶಸ್ಸಿನ ನಾಗಾಲೋಟಕ್ಕೆ ಕಾರಣಗಳೇನು ಗೊತ್ತೆ?

Written By: Siddu
Subscribe to GoodReturns Kannada

ಸುಮಾರು ಹತ್ತು ವರ್ಷಗಳ ಹಿಂದೆ ಭಾರತದ ಮಾರುಕಟ್ಟೆಗೆ ಕಾಲಿಟ್ಟ ಇ-ಕಾಮರ್ಸ್ ಭಾರತೀಯರ ಕೊಳ್ಳುವ ರೀತಿಯನ್ನು ಬದಲಾಯಿಸಿತು. ಇ-ಕಾಮರ್ಸ್ ವಲಯ ವಸ್ತುಗಳನ್ನು, ಸೇವೆಗಳನ್ನು ಮನೆಯಲ್ಲಿದ್ದುಕೊಂಡೇ ಕೊಳ್ಳಲು ನೆರವಾಗಿತ್ತು.

ವಿಶೇಷವಾಗಿ ವೇಗದ ಚಲಿಸುವ ಗ್ರಾಹಕ ಸರಕುಗಳು (fast moving consumer goods- FMCG) ವಿಭಾಗದಲ್ಲಿ ಬರುವ ಸೌಂದರ್ಯ, ಸ್ವಚ್ಛತಾ ಹಾಗೂ ಆರೋಗ್ಯ ಸಂಬಂಧಿ ಉತ್ಪನ್ನಗಳು ಇದುವರೆಗೂ ಕೆಲವೇ ಸಂಸ್ಥೆಗಳ ಹಿಡಿದತಲ್ಲಿದ್ದು ಈಗ ಈ ವಿಭಾಗಕ್ಕೆ ಕಾಲಿಟ್ಟಿರುವ ಪತಂಜಲಿ ಸಂಸ್ಥೆ ನಾಗಾಲೋಟದಲ್ಲಿ ಮುನ್ನುಗ್ಗುತ್ತಾ ಎಲ್ಲಾ ಆರ್ಥಿಕ ತಜ್ಞರ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡುತ್ತಿದೆ. ಈ ಸಂಸ್ಥೆಯ ಜನಪ್ರಿಯತೆ ಹಾಗೂ ಹೆಸರಿನ ಮಹತ್ವ ಉಳಿದ ಸಂಸ್ಥೆಗಳಿಗೆ ಪರೋಕ್ಷವಾಗಿ ಕೆಲವು ಪಾಠಗಳನ್ನು ಹೇಳಿಕೊಡುತ್ತಿದೆ.
ಇವು ಯಾವುವು ನೋಡೋಣ..  2017ರ ವಿಶ್ವದ ಟಾಪ್ 10 ಐಟಿ ಕಂಪನಿಗಳು

ಬ್ರಾಂಡ್ ಮೌಲ್ಯ- ಏನಿದು?

ಸಾಮಾನ್ಯವಾಗಿ ಒಂದು ಸಂಸ್ಥೆಗೆ ಸೇರಿದ ಉತ್ಪನ್ನ ಒಳ್ಳೆಯದಿದ್ದರೆ ಆ ಸಂಸ್ಥೆಯ ಎಲ್ಲಾ ಉತ್ಪನ್ನಗಳು ಒಳ್ಳೆಯದೇ ಇರುತ್ತದೆ ಎಂಬ ಭಾವನೆಯನ್ನು ಗ್ರಾಹಕರು ಹೊಂದಿರುತ್ತಾರೆ. ಆದರೆ ಜನಪ್ರಿಯತೆ ಪಡೆದುಕೊಳ್ಳಲು ಕೇವಲ ಹೆಸರು ಮಾತ್ರವೇ ಇದ್ದರೆ ಸಾಲದು. ಪತಂಜಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರಕುವ ಇತರ ಸಂಸ್ಥೆಗಳ ಉತ್ಪನ್ನಗಳಿಗೂ ಕಡಿಮೆ ಬೆಲೆಯುಳ್ಳದ್ದಾಗಿವೆ. "ನಮ್ಮ ಬ್ರಾಂಡ್ ಗೆ ಸೇರಿದ ಯಾವುದೇ ಉತ್ಪನ್ನವನ್ನು ಪರಿಗಣಿಸಿದರೂ ಇದಕ್ಕೆ ಸರಿಸಮನಾದ ಉತ್ಪನ್ನದ ಬೆಲೆಗೂ ಇದರ ಬೆಲೆ ಕಡಿಮೆ ಇರುವುದು ಹಾಗೂ ಉಳಿದ ಸಂಸ್ಥೆಗಳು ಭಾರೀ ಜಾಹೀರಾತಿನ ಮೊತ್ತವನ್ನು ತಮ್ಮ ಉತ್ಪನ್ನಗಳಿಗೆ ಸೇರಿಸಿ ಮಾರಾಟ ಮಾಡುವ ಮೂಲಕ ದುಬಾರಿಯಾಗಿರುವುದೇ ಈ ಉತ್ಪನ್ನಗಳು ಭಾರೀ ಯಶಸ್ಸಿಗೆ ಕಾರಣ" ಎಂದು ಇನ್ಕ್ರಿಯೇಟ್ ವ್ಯಾಲ್ಯೂ ಅಡ್ವೈಸರ್ಸ್ ಸಂಸ್ಥೆಯ ನಿಕಟಪೂರ್ವ CFO ಮಿಲಿಂದ್ ಸರ್ವಟೆಯವರು ತಿಳಿಸುತ್ತಾರೆ.

ಉತ್ಪನ್ನದ ಫಲಪ್ರದತೆ- ಉತ್ಪನ್ನ ಬಿಕರಿಯಾಗಲು ಇರುವ ಕಡ್ಡಾಯ ಅರ್ಹತೆ

ಹಿಂದೊಮ್ಮೆ ಭಾರತದಲ್ಲಿ ರಾಮಾಯಣ ಧಾರಾವಾಹಿ ಪ್ರಕಟವಾಗುತ್ತಿದ್ದಾಗ ಜನರ ಧಾರ್ಮಿಕ ಶೃದ್ದೆಯನ್ನು ಲಾಭವಾಗಿಸಿಕೊಳ್ಳಲು ಸಂಸ್ಥೆಯೊಂದು ಗಂಗಾ ಎಂಬ ಸೋಪನ್ನು ಬಿಡುಗಡೆಗೊಳಿಸಿತ್ತು. ಹಾಗೂ ಈ ಸೋಪನ್ನು ತಯಾರಿಸಲು ಗಂಗಾಜಲವನ್ನು ಬಳಸಿದ್ದೇವೆ ಎಂದು ಹೇಳಿಕೆ ನೀಡಿ ಅಂದಿನ ಕ್ರಿಕೆಟ್ ಆಟಗಾರ ಗಾವಸ್ಕರ್ ರನ್ನು ಜಾಹೀರಾತಿಗೆ ಬಳಸಿಕೊಂಡಿತ್ತು. ಆದರೆ ಹತ್ತು ರೂಪಾಯಿ ಬೆಲೆಯ ಈ ಉತ್ಪನ್ನ ನಾಲ್ಕಾಣೆಗೂ ಪ್ರಯೋಜನವಿಲ್ಲ ಎಂದು ಗ್ರಾಹಕ ಕಂಡುಕೊಳ್ಳುವ ಸಮಯದಲ್ಲಿ ಕೋಟ್ಯಂತರ ಜನರು ಖರೀದಿಸಿದ ಒಂದೇ ಸೋಪಿನಿಂದ ಸಂಸ್ಥೆ ಕೋಟ್ಯಂತರ ರೂ. ಗಳಿಸಿ ಆಗಿತ್ತು. ಆದರೆ ಯಾವುದೇ ಉತ್ಪನ್ನ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಬೇಕಾದರೆ ಇದರ ಗುಣಮಟ್ಟ ಉತ್ತಮವೇ ಆಗಿರಬೇಕು. ಇಲ್ಲದಿದ್ದರೆ ಗ್ರಾಹಕ ಎರಡನೆಯ ಬಾರಿ ಕೊಳ್ಳುವುದಿಲ್ಲ. ಗ್ರಾಹಕನ ಬಳಿ ತಲುಪಲು ಜಾಹೀರಾತು ಅನಿವಾರ್ಯವಾಗಿದ್ದು, ಈ ಖರ್ಚನ್ನು ಮೀರಿಯೂ ಉತ್ಪನ್ನ ಗ್ರಾಹಕನ ಕೈಗೆಟುಕುವಂತಿರಬೇಕು. ತುಪ್ಪ ಹಾಗೂ ಹಲ್ಲುಜ್ಜುವ ಪೇಸ್ಟ್ ಪತಂಜಲಿಯ ಜನಪ್ರಿಯ ಉತ್ಪನ್ನಗಳಾಗಿದ್ದು, ಮಾರುಕಟ್ಟೆಯಲ್ಲಿ ಭಾರೀ ಸಂಸ್ಥೆಗಳ ಉತ್ಪನ್ನಗಳನ್ನು ಎದುರಿಸಿ ಪೈಪೋಟಿ ನೀಡಬೇಕಾಗಿತ್ತು. ಆದರೆ ಇಂದಿಗೂ ಇವು ಭರ್ಜರಿ ಮಾರಾಟವಾಗುತ್ತಿರಲು ಇವುಗಳ ಗುಣಮಟ್ಟವೇ ಕಾರಣವಾಗಿದೆ ಎಂದು ಸ್ಪಾರ್ಕ್ ಕ್ಯಾಪಿಟಲ್ ತಿಳಿಸಿದೆ.

ಬಲಶಾಲಿ ಬ್ರಾಂಡ್ ಅಂಬಾಸಿಡರ್

ಯಾವುದೇ ಉತ್ಪನ್ನ ಚೆನ್ನಾಗಿದೆ ಎಂದು ನಾವು ನೀವು ಹೇಳಿದರೆ ಜನ ನಂಬುವುದಿಲ್ಲ. ಹಿಂದೊಮ್ಮೆ ಪೆಪ್ಸಿ ಕೋಲಾದಲ್ಲಿ ಬಳಸಿದ ನೀರಿನಲ್ಲಿ ವಿಷವಿದೆ ಎಂದು ಗುಲ್ಲೆದ್ದಿದ್ದೇ ತಡ ಇದರ ಮಾರಾಟ ಸ್ಥಗಿತಗೊಂಡಿತ್ತು. ಜನಪ್ರಿಯ ನಾಯಕ ಶಾರೂಖ್ ಖಾನ್ ಬಂದು ಇದು ಸುರಕ್ಷಿತ ಎಂದು ಹೇಳಿದ್ದೇ ತಡ ಮತ್ತೆ ಮಾರಾಟ ನಾಗಾಲೋಟಕ್ಕೇರಿತ್ತು. ನಾವು ಜನಸಾಮಾನ್ಯರು, ಖ್ಯಾತರು ಹೇಳಿದ ಮಾತನ್ನು ಸಾರಾಸಗಟಾಗಿ ನಂಬಿ ಬಿಡುತ್ತೇವೆ. ಪತಂಜಲಿ ಉತ್ಪನ್ನಗಳಲ್ಲಿ ಸ್ವತಃ ಯೋಗ ಗುರುವೇ ಆಗಿರುವ ಬಾಬಾ ರಾಮದೇವ್ ರವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಬಳಸಲಾಗಿದೆ. ಇವರು ಹೇಳಿದ ಮಾತೇ ವೇದವಾಕ್ಯ ಎಂದು ಜನತೆ ಪರಿಗಣಿಸಿರುವ ಕಾರಣ ಈ ಉತ್ಪನ್ನಗಳು ಹೆಚ್ಚು ಮಾರಾಟವಾಗುತ್ತಿವೆ. ಕಳೆದ ವರ್ಷ ನಿಷೇಧಕ್ಕೆ ಒಳಪಟ್ಟಿದ್ದ ಮ್ಯಾಗಿಯನ್ನು ಮತ್ತೆ ಮಾರುಕಟ್ಟೆಯಲ್ಲಿ ಕೂರಿಸಲು ಸಹಾ ಬ್ರಾಂಡ್ ಅಂಬಾಸಿಡರ್ ರೇ ಪ್ರಮುಖ ಕಾರಣರು.

ಗ್ರಾಹಕನ ಆಯ್ಕೆಯೇ ಇಲ್ಲಿ ಅಂತಿಮ

ಗ್ರಾಹಕರ ಆಯ್ಕೆಯನ್ನು ಅರಿತು ಅಗ್ಗದ ದರದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ತಮ್ಮ ಸ್ಪರ್ಧಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸುವಂತೆ ಮಾಡಿರುವುದೇ ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಉತ್ತಮ ಗುಣಮಟ್ಟ ದುಬಾರಿ ಬೆಲೆಯಲ್ಲಿ ಮಾತ್ರವೇ ಸಿಗುತ್ತದೆ ಎಂದು ಇದುವರೆಗೆ ಭಾರತೀಯ ಗ್ರಾಹಕರ ಮನದಲ್ಲಿ ಅಚ್ಚು ಮೂಡಿಸಿದ್ದ ಭಾವನೆ ಈಗ ಮಾಯವಾಗಿದ್ದು ಸದಾ ಗ್ರಾಹಕನನ್ನು ಸೋಗಿನಲ್ಲಿರಿಸಲು ಸಾಧ್ಯವಿಲ್ಲ ಎಂಬ ಪಾಠ ಕಲಿಸಿದೆ.

ಹೊಸತನ ಅಥವಾ ಬದಲಾವಣೆಗೆ ಹೆಚ್ಚಿನ ಆದ್ಯತೆ

ಯಾವುದೇ ಸಂಸ್ಥೆಯ ಒಂದೇ ಉತ್ಪನ್ನವನ್ನೇ ನೆಚ್ಚಿಕೊಳ್ಳದೇ ತನ್ನ ಉತ್ಪನ್ನಗಳನ್ನು ಉನ್ನತೀಕರಿಸುತ್ತಾ, ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಲೇ ಮುಂದುವರೆಯಬೇಕು. ಭಾರತದ ಒಂದು ಕಾಲದ ಜನಪ್ರಿಯ ಕಾರು ಅಂಬಾಸಿಡರ್ ಈ ಪಾಠ ಕಲಿತುಕೊಳ್ಳದೇ ಇದ್ದುದೇ ಇದರ ಅವನತಿಗೆ ಸ್ಪಷ್ಟ ಕಾರಣ. ಇಂದು ಮಾರುಕಟ್ಟೆಯಲ್ಲಿ ಸಾವಿರಾರು ಉತ್ಪನ್ನಗಳಿದ್ದು ಗ್ರಾಹಕರ ಬೇಡಿಕೆಯನ್ನು ಸಾವಿರ ರೂಪದಲ್ಲಿ ಪೂರೈಸುತ್ತಿದ್ದಾಗ ಇದೇ ಪರಿಯಲ್ಲಿ ಪತಂಜಲಿ ಸಹಾ ತನ್ನ ಉತ್ಪನ್ನಗಳಲ್ಲಿ ವೈವಿಧ್ಯತೆಯನ್ನು ತೋರಿಸಿದೆ. ಈ ವೈವಿಧ್ಯತೆಯನ್ನು ನಕಲು ಮಾಡಲು ಅಥವಾ ಸ್ಪರ್ಧಿಸಲು ಇತರರಿಗೆ ಕಷ್ಟವಾಗಿದೆ ಎಂದು ಈ ವಿಭಾಗದ ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಆಧುನಿಕ ಸಾಂಪ್ರಾದಾಯಿಕ ನಿರ್ವಹಣೆ

ವೇಗದ ಚಲಿಸುವ ಗ್ರಾಹಕ ಸರಕುಗಳು ವಿಭಾಗದಲ್ಲಿ ಕೇವಲ ಮೂರು ವರ್ಷಗಳಲ್ಲಿ 5 ಸಾವಿರ ಕೋಟಿ ರೂಪಾಯಿ ವಹಿವಾಟಿನ ಸಂಸ್ಥೆಯಾಗಿ ಬೆಳೆಯಲು ಇದರ ಸಾಂಪ್ರಾದಾಯಿಕ ಮಾಲಿಕತ್ವ/ನಿರ್ವಹಣೆ ಕಾರಣವಾಗಿದೆ. ಬಹುತೇಕ ಸಂಸ್ಥೆಗಳು ಈ ಎತ್ತರಕ್ಕೆ ಏರಲು ಹಲವಾರು ವರ್ಷಗಳನ್ನೇ ಸವೆಸಬೇಕಾಗುತ್ತದೆ. 'ಕೆಲವೊಮ್ಮೆ ಸಾಂಪ್ರಾದಾಯಿಕ ಮಾಲಿಕತ್ವ ಅತಿ ಹೆಚ್ಚಿನ ಸಂಕೀರ್ಣತೆಯಿಂದಾಗಿ ವಹಿವಾಟಿನ ಏರುಗತಿಯಲ್ಲಿ ಹಿನ್ನಡೆ ಪಡೆಯಲೂಬಹುದು' ಎಂದು ಸರ್ವಟೆ ತಿಳಿಸುತ್ತಾರೆ.

Read more about: patanjali, finance news, money, business
English summary

What are the causes of Patanjali's success in the market in India?

Patanjali Ayurveda - the latest force to disrupt the branded consumer goods sector. Its raging popularity and strong brand resonance have some incisive lessons for the Indian fast moving consumer goods (FMCG) sector.
Story first published: Tuesday, December 5, 2017, 15:44 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns