For Quick Alerts
ALLOW NOTIFICATIONS  
For Daily Alerts

ನಿಮ್ಮ ಹಣಕಾಸು ಹಾಗು ಆರ್ಥಿಕ ನೆರವಿಗಾಗಿ ಸರ್ಕಾರದಿಂದ ಲಭ್ಯವಿರುವ ಯೋಜನೆಗಳು

By Siddu
|

ಭಾರತ ಸರ್ಕಾರ ಕಳೆದ ಹಲವಾರು ವರ್ಷಗಳಿಂದ ಜನಪರ ಯೋಜನೆಗಳನ್ನು ಪರಿಚಯಿಸಿದ್ದು, ಆ ಯೋಜನೆಗಳು ಭಾರತೀಯರಿಗೆ ತಮ್ಮ ಹಣಕಾಸಿನ ಸ್ಥಿತಿಗತಿಗಳನ್ನು ಸುಧಾರಿಸಿಕೊಳ್ಳಲು ಸಹಾಯಕವಾಗಿವೆ. ಅಷ್ಟೇ ಅಲ್ಲದೇ ದೇಶದ ಆರ್ಥಿಕತೆಗೂ ಈ ಯೋಜನೆಗಳು ಸಾಕಷ್ಟು ಕೊಡುಗೆಗಳನ್ನು ಸಲ್ಲಿಸಿವೆ.
ದೇಶವು ಸ್ವಾತಂತ್ರ್ಯಗೊಂಡ ಬಳಿಕ, ಜನರ ಹಣಕಾಸು ಸುಸ್ಥಿರತೆಗಾಗಿ ಹಾಗು ಆರ್ಥಿಕ ಅಭಿವೃದ್ಧಿಗಾಗಿ ಆರಂಭಿಸಿದ ಏಳು ಪ್ರಮುಖ ಯೋಜನೆಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

1. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ)
 

1. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ)

ಸಮಸ್ತ ಭಾರತೀಯರಿಗೆ ಬ್ಯಾಂಕಿಂಗ್ ವ್ಯವಸ್ಥೆಗೆ ತರುವ ಉದ್ದೇಶದಿಂದ ಹಾಗು ಆರ್ಥಿಕವಾಗಿ ಸೇರ್ಪಡೆಗೊಳಿಸಿಕೊಳ್ಳುವ ನಿಟ್ಟಿನಲ್ಲಿ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಒಂದು ರಾಷ್ಟ್ರೀಯ ಅಭಿಯಾನವಾಗಿದೆ.
ನಿರ್ಧಿಷ್ಟವಾಗಿ ಹೇಳಬೇಕೆಂದರೆ, ಉಳಿತಾಯ ಮತ್ತು ಠೇವಣಿ ಖಾತೆಗಳು, ನಗದು ರವಾನೆ (ರೆಮಿಟೆನ್ಸ್), ಸಾಲ ಅಥವಾ ಕ್ರೆಡಿಟ್, ವಿಮೆ, ನಿವೃತ್ತಿ ವೇತನ ಇವೇ ಮೊದಲಾದ ಆರ್ಥಿಕ ಸೇವೆಗಳನ್ನು ಕೈಗೆಟಕುವ ದರಗಳಲ್ಲಿ ಭಾರತೀಯರಿಗೆ ಲಭ್ಯವಾಗುವಂತೆ ಮಾಡುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ. 2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯಂದು ಈ ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಿದರು.

ಯೋಜನೆಯ ಅನುಷ್ಠಾನದ ಬಳಿಕ ಆಗಿರುವ ಬದಲಾವಣೆಗಳೇನೇನು?
- ಯೋಜನೆ ಜಾರಿಗೊಂಡಂದಿನಿಂದ ಇಂದಿನವರೆಗೆ 29.43 ಕೋಟಿ ಬ್ಯಾಂಕ್ ಖಾತೆಗಳು ತೆರೆಯಲ್ಪಟ್ಟಿವೆ.
- ಈ ಖಾತೆಗಳಲ್ಲಿ 65, 532.77 ಕೋಟಿ ರೂಪಾಯಿಗಳಷ್ಟು ಹಣ ಜಮೆಯಾಗಿದೆ.
- ಸಬ್-ಸರ್ವೀಸ್ ಪ್ರದೇಶಗಳಲ್ಲಿ (ಬ್ಯಾಂಕ್ ಶಾಖೆಗಳನ್ನು ತೆರೆಯಲು ಸಾಧ್ಯವಿಲ್ಲದ ಪ್ರದೇಶಗಳು) 1.26 ಲಕ್ಷಗಳಷ್ಟು ಬ್ಯಾಂಕ್ ಮಿತ್ರರು ಶಾಖಾ ರಹಿತವಾದ ಬ್ಯಾಂಕಿಂಗ್ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ ಹಾಗೂ ಈ ಸೇವಾದಾತರ ಸಂಖ್ಯೆಯು ಹೆಚ್ಚುತ್ತಲೇ ಸಾಗಿದೆ.

ಪ್ರಯೋಜನಗಳು
- ಜನವರಿ 26 ರ ಒಳಗಾಗಿ ಖಾತೆ ತೆರೆದವರಿಗಾಗಿ 1 ಲಕ್ಷದವರೆಗೆ ಅಪಘಾತ ವಿಮೆ ಮತ್ತು 30,000 ರೂ.ವರೆಗಿನ ಜೀವ ವಿಮಾ ಸೌಲಭ್ಯ.
- ಖಾತೆಯಲ್ಲಿ ಜಮೆ ಇರಿಸಲಾದ ಹಣಕ್ಕೆ ವಾರ್ಷಿಕವಾಗಿ ಶೇ. 4ರ ದರದಲ್ಲಿ ಬಡ್ಡಿ.
- ಕನಿಷ್ಠ ಬ್ಯಾಲೆನ್ಸ್ ಗೆ(ಖಾತೆಯಲ್ಲಿ ಜಮೆಯಾಗಿಸಿರುವ ಹಣ) ಯಾವುದೇ ಮಾನದಂಡವಿಲ್ಲ.
- ಭಾರತದಲ್ಲಿನ ಯಾವುದೇ ಖಾತೆಗೆ ಹಣವನ್ನು ವರ್ಗಾಯಿಸಬಹುದು.
- ಸರಕಾರಿ ಯೋಜನೆಗಳಿಂದ ಲಭ್ಯವಾಗುವ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಪಡೆದುಕೊಳ್ಳಬಹುದು.
- ಆರು ತಿಂಗಳುಗಳವರೆಗೆ ಬ್ಯಾಂಕ್ ಖಾತೆಯನ್ನು ಬಳಸಿದ ಬಳಿಕ, 5,000 ರೂ.ವರೆಗೆ ಓವರ್ ಡ್ರಾಪ್ಟ್ ಸೌಲಭ್ಯವಿರುತ್ತದೆ.

2. ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ ವೈ)

ಜನವರಿ 22, 2015 ರಂದು ನರೇಂದ್ರ ಮೋದಿಯವರು "ಬೇಟಿ ಬಚಾವೋ, ಬೇಟಿ ಪಡಾವೋ" ಅಭಿಯಾನದ ಅಡಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಗೆ ಚಾಲನೆ ನೀಡಿದರು. ಹೆಣ್ಣು ಮಗುವಿನ ಶಿಕ್ಷಣ ಮತ್ತು ವೈವಾಹಿಕ ಖರ್ಚುವೆಚ್ಚಗಳ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.

ಈ ಯೋಜನೆಯ ಸ್ವರೂಪಗಳೇನೇನು ?
- ಓರ್ವ ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆಯನ್ನು ತೆರೆಯಲು ಈ ಯೋಜನೆಯು ಅನುಮತಿಸುತ್ತದೆ. ಎರಡು ಹೆಣ್ಣು ಮಕ್ಕಳಿದ್ದಲ್ಲಿ, ಕುಟುಂಬವೊಂದು ಗರಿಷ್ಠ ಎರಡು ಖಾತೆಗಳನ್ನು ಹೊಂದಿರಲು ಅವಕಾಶವಿದೆ.
- ಆದಾಗ್ಯೂ, ಮೂರನೆಯ ಖಾತೆಯನ್ನು ತೆರೆಯುವುದಕ್ಕೆ ಅವಕಾಶವಿದೆ. ಆದರೆ ಮೊದಲ ಅಥವಾ ಎರಡನೆಯ ಪ್ರಸವವು ಅವಳಿ ಅಥವಾ ತ್ರಿವಳಿ ಮಕ್ಕಳದ್ದಾಗಿರಬೇಕು.
- ಒಂದು ವಿತ್ತೀಯ ವರ್ಷದಲ್ಲಿ ಕನಿಷ್ಠ ರೂ. 1,000 ಮತ್ತು ಗರಿಷ್ಟ 1.5 ಲಕ್ಷ ರೂ.ಗಳನ್ನು ಖಾತೆಯಲ್ಲಿ ಜಮಾ ಮಾಡಬಹುದು.
- ಖಾತೆಯನ್ನು ತೆರೆಯಲಾದ ದಿನಾಂಕದಿಂದ ಹದಿನಾಲ್ಕು ವರ್ಷಗಳು ಪೂರ್ಣಗೊಳ್ಳುವವರೆಗೂ, ಖಾತೆಯಲ್ಲಿ ಹಣವನ್ನು ಜಮಾ ಮಾಡಬಹುದು.
- ಹುಡುಗಿಯು 21 ವರ್ಷ ವಯಸ್ಸಿನವಳಾದಾಗಲಷ್ಟೇ ಖಾತೆಯನ್ನು ಮುಚ್ಚಬಹುದಾಗಿದೆ. ಒಂದು ವೇಳೆ ಹುಡುಗಿಗೆ 21 ವರ್ಷ ವಯಸ್ಸಾದ ಬಳಿಕವೂ ಖಾತೆಯನ್ನು ಮುಚ್ಚದೇ ಹಣವನ್ನೂ ಪಡೆಯದೇ ಹಾಗೆಯೇ ಬಿಟ್ಟಿದ್ದಲ್ಲಿ, ಆ ಹಣವು ಮುಂದೆಯೂ ಸಹ ಬಡ್ಡಿ ಗಳಿಕೆಯನ್ನು ಮುಂದುವರೆಸುತ್ತದೆ.
- ಖಾತೆಯನ್ನು ತೆರೆಯುವ ವೇಳೆಯಲ್ಲಿ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಪ್ರಯೋಜನಗಳು
- ಹೆಣ್ಣು ಮಗುವು 10 ವರ್ಷ ವಯಸ್ಸಿನವಳಾದೊಡನೆಯೇ ತಂದೆ-ತಾಯಿ ಅಥವಾ ರಕ್ಷಕರು ಹುಡುಗಿಯ ಹೆಸರಿನಲ್ಲಿ ಖಾತೆಯನ್ನು ತೆರೆದು ಹುಡುಗಿಯ ಪರವಾಗಿ ಖಾತೆಯನ್ನು ನಿರ್ವಹಿಸಬಹುದು.
- ಹುಡುಗಿಯು ಹದಿನೆಂಟು ವರ್ಷ ವಯೋಮಾನದವಳಾದಾಗ, ಖಾತೆಯಲ್ಲಿ ಜಮಾವಣೆಯಾದ ಶೇ. 50ರಷ್ಟು ಹಣವನ್ನು ಆಕೆಯ ಶೈಕ್ಷಣಿಕ ಖರ್ಚುವೆಚ್ಚಗಳಿಗಾಗಿ ಖಾತೆಯಿಂದ ಪಡೆದುಕೊಳ್ಳಬಹುದು.
- ಹಣವನ್ನು ಒಂದು ಅಧಿಕೃತ ಬ್ಯಾಂಕ್ ನಿಂದ ಮತ್ತೊಂದಕ್ಕೆ ಅಥವಾ ಅಂಚೆ ಕಛೇರಿಯಿಂದ ಯಾವುದಾದರೊಂದು ಅಧಿಕೃತ ಬ್ಯಾಂಕ್ ಹಾಗೂ ಇದರ ವಿರುದ್ಧ ದಿಕ್ಕಿನಲ್ಲಿಯೂ ಸಹ ವರ್ಗಾಯಿಸಬಹುದು.
- ಶೇ. 8.1ರ ದರದಲ್ಲಿ ಬಡ್ಡಿಯನ್ನು ಕೊಡಮಾಡುತ್ತದೆ ಹಾಗೂ ಆದಾಯ ತೆರಿಗೆ ಪ್ರಯೋಜನಗಳನ್ನೂ ಒದಗಿಸುತ್ತದೆ.

3. ರಾಜೀವ್ ಗಾಂಧಿ ಜೀವನದಾಯಿ ಆರೋಗ್ಯ ಯೋಜನೆ
 

3. ರಾಜೀವ್ ಗಾಂಧಿ ಜೀವನದಾಯಿ ಆರೋಗ್ಯ ಯೋಜನೆ

ಇದು 2012 ರಲ್ಲಿ ಚೊಚ್ಚಲ ಅಭಿಯಾನದ ರೂಪದಲ್ಲಿ ಚಾಲನೆಗೊಂಡಿರುವ ಯೋಜನೆ. ಮಹಾರಾಷ್ಟ್ರ ರಾಜ್ಯದ ಆರ್ಥಿಕವಾಗಿ ಹಿಂದುಳಿದವರಿಗಾಗಿ ಮೀಸಲಾಗಿರುವ ಸಾರ್ವತ್ರಿಕ ಆರೋಗ್ಯ ಯೋಜನೆಯಾಗಿದೆ. ಮಹಾರಾಷ್ಟ್ರ ರಾಜ್ಯ ಸರಕಾರದಿಂದ ಕೊಡಮಾಡಲ್ಪಟ್ಟಿರುವ ಅಂತ್ಯೋದಯ ಕಾರ್ಡ್, ಅನ್ನಪೂರ್ಣ ಕಾರ್ಡ್, ಹಳದಿ ಪಡಿತರ ಚೀಟಿ, ಅಥವಾ ಆರೆಂಜ್ ಪಡಿತರ ಚೀಟಿಯನ್ನು ಹೊಂದಿರುವ ಯಾರೇ ಆದರೂ ಸಹ ಈ ಯೋಜನೆಯ ಫಲಾನುಭವಿಯಾಗಬಹುದು.

ಪ್ರಯೋಜನಗಳು
- 488 ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಆರೈಕೆಯ ಪ್ರಯೋಜನವನ್ನು ಪಡೆಯುವುದಕ್ಕೆ ಅರ್ಹರನ್ನಾಗಿಸುತ್ತದೆ ಈ ಯೋಜನೆ.
- 971 ವಿಧದ ರೋಗಗಳಿಗೆ, ಶಸ್ತ್ರಚಿಕಿತ್ಸೆಗಳಿಗೆ ಮತ್ತು ಥೆರಪಿಗಳಿಗೆ ಉಚಿತ ಚಿಕಿತ್ಸೆಯನ್ನೊದಗಿಸುತ್ತದೆ.
- ಕುಟುಂಬವೊಂದಕ್ಕೆ ವರ್ಷಕ್ಕೆ 1.5 ಲಕ್ಷ ರೂ.ಳವರೆಗಿನ ಚಿಕಿತ್ಸಾ ವೆಚ್ಚಗಳನ್ನು ಉಚಿತವಾಗಿ ಭರಿಸುತ್ತದೆ (ಮೂತ್ರಪಿಂಡ ಮರುಜೋಡಣೆಗಷ್ಟೇ 2.5 ಲಕ್ಷ ರೂ. ವೆಚ್ಚವನ್ನು ಈ ಯೋಜನೆ ಭರಿಸುತ್ತದೆ).

ಯೋಜನೆಯಿಂದಾದ ಬದಲಾವಣೆಗಳೇನೇನು?
- ಜನವರಿ 17, 2016ಕ್ಕೆ ಅನ್ವಯವಾಗುವಂತೆ ಫಲಾನುಭವಿ ಕುಟುಂಬಗಳ ಸಂಖ್ಯೆ 7.13 ಲಕ್ಷ.
- 1827 ಕೋಟಿ ರೂಪಾಯಿಗಳಷ್ಟು ವೆಚ್ಚದ 11.81 ಲಕ್ಷ ವೈದ್ಯಕೀಯ ಪ್ರೊಸೀಜರ್ ಗಳು (ಸೇವೆಗಳು).
- 7.27 ಲಕ್ಷ ಶಸ್ತ್ರಚಿಕಿತ್ಸೆಗಳು ಮತ್ತು ಥೆರಪಿಗಳು.

4. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆವಿವೈ)

2015ನೇ ಆಯವ್ಯಯದ ಅವಧಿಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಘೋಷಿಸಿದ್ದಾರೆ. ಯೋಜನೆಯ ವೈಶಿಷ್ಟ್ಯವೇನೆಂದರೆ, ಇದೊಂದು ನವೀಕರಣಗೊಳಿಸಬಹುದಾದ ವಿಮಾ ಯೋಜನೆಯಾಗಿದ್ದು, ವ್ಯಕ್ತಿಯು ಮರಣ ಹೊಂದಿದಲ್ಲಿ, 2 ಲಕ್ಷ ರೂ.ವರೆಗಿನ ಜೀವ ವಿಮಾ ನೆರವು ಒದಗಿಸುತ್ತದೆ. ಇನ್ನಿತರ ಎರಡು ಯೋಜನೆಗಳಾದ ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಮತ್ತು ಅಟಲ್ ಪಿಂಚಣಿ ವೇತನ ಯೋಜನೆಗಳು ಈ ಯೋಜನೆಯೊಂದಿಗೆ ಪ್ರಾರಂಭಗೊಂಡವು.

ಯೋಜನೆಗೆ ಯಾರು ಅರ್ಹರು ?
- ಯಾವುದೇ ಉಳಿತಾಯ ಖಾತೆಯನ್ನು ಹೊಂದಿರುವ, 18 ಮತ್ತು 50 ವರ್ಷಗಳ ನಡುವಿನ ವಯೋಮಾನದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
- ಈ ಯೋಜನೆಯಿಂದ ಲಭ್ಯವಾಗುವ ಪ್ರಯೋಜನಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ, ಖಾತೆಯೊಂದಿಗೆ ಆಧಾರ್ ಅನ್ನು ಜೋಡಣೆ ಮಾಡಬೇಕು.

ಪ್ರಯೋಜನಗಳು:
- ನಾಮಿನಿಯು ವ್ಯಕ್ತಿಯ ಮರಣದ ಪ್ರಯೋಜನವನ್ನು ಪಡೆಯುವರು.
- ವಿಮಾ ಕವರ್ ಒಂದು ವರ್ಷದ್ದಾಗಿರುತ್ತದೆ (ಜೂನ್ 1 ರಿಂದ ಮೇ 31 ರವರೆಗೆ). ಪ್ರತೀ ವರ್ಷವೂ ವಿಮೆಯನ್ನು ನವೀಕರಿಸಿಕೊಳ್ಳಬಹುದು.
- ಕೇವಲ 330 ರೂ.ಗಳ ವಾರ್ಷಿಕ ಪ್ರೀಮಿಯಂ ಹಣಕ್ಕೆ 2 ಲಕ್ಷ ರೂ.ವರೆಗಿನ ಜೀವ ವಿಮೆಯು ಲಭ್ಯ.

ಏನು ಬದಲಾವಣೆಯಾಗಿದೆ?
ಮೇ 8, 2017 ರ ಅನ್ವಯ, ಸುಮಾರು 3.11 ಕೋಟಿ ಜನರು ಈ ಯೋಜನೆಯಲ್ಲಿ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ ಹಾಗೂ ಸುಮಾರು 65,083 ಕ್ಲೈಮ್ ಗಳನ್ನು ಮಾಡಲಾಗಿದೆ.

 

5. ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ

ಈ ಯೋಜನೆಯನ್ನು 2008 ರಲ್ಲಿ ಪರಿಚಯಿಸಲಾಯಿತು. ಈ ಯೋಜನೆಯ ಮೂಲ ಧ್ಯೇಯೋದ್ದೇಶವು ಬಿ.ಪಿ.ಎಲ್ (ಬಡತನ ರೇಖೆಗಿಂತ ಕೆಳಗಿರುವವರು) ವರ್ಗದವರಿಗೆ ಆರೋಗ್ಯ ವಿಮೆಯನ್ನು ಒದಗಿಸುವುದೇ ಆಗಿದೆ.

ಪ್ರಯೋಜನಗಳು
ಕ್ಷೇಮಾಭಿವೃದ್ಧಿ ನಿಗಮಗಳು, ಬೀದಿಬದಿಯ ವ್ಯಾಪಾರಿಗಳು, ಹಾಗೂ ಪರವಾನಗಿಯುಳ್ಳ ಕೂಲಿಯಾಳುಗಳ ಅಡಿ (ರೈಲ್ವೆ, ಎಂ ನರೇಗಾ ಕಾರ್ಮಿಕರು, ಗಣಿ ಕಾರ್ಮಿಕರು, ಆಟೋ ಅಥವಾ ಟ್ಯಾಕ್ಸಿ ಡ್ರೈವರ್ ಗಳು ಮೊದಲಾದವರು) ನೋಂದಾಯಿತರಾದವರಿಗೆ ಮತ್ತು ನಿರ್ಮಾಣ ಕ್ಷೇತ್ರಗಳಂತಹ ಅಸಂಘಟಿತ ವಲಯಗಳಿಗೆ ಆರೋಗ್ಯ ವಿಮಾ ಸೌಲಭ್ಯವನ್ನು ಈ ಯೋಜನೆಯು ಒದಗಿಸುತ್ತದೆ.

ಐದು ಸದಸ್ಯರುಗಳಿರುವ ಕುಟುಂಬಕ್ಕೆ, ಪ್ಲೋಟರ್ ಆಧಾರದ ಮೇಲೆ 30,000 ರೂ.ವರೆಗೆ ವಿಮಾ ರಕ್ಷಣೆಯನ್ನೊದಗಿಸುತ್ತದೆ.

ಆಸ್ಪತ್ರೆಯ ಒಂದು ಭೇಟಿಗೆ 100 ರೂ.ವರೆಗಿನ ಸಾರಿಗೆ ವೆಚ್ಚವನ್ನು ಭರಿಸುತ್ತದೆ. ಗರಿಷ್ಠ ಮಿತಿಯು 1,000 ರೂಪಾಯಿಗಳಷ್ಟಾಗಿರುತ್ತದೆ.


ಪ್ರೀಮಿಯಂ ಹಣವು ವರ್ಷಕ್ಕೆ ಕೇವಲ 30 ರೂಪಾಯಿಗಳಷ್ಟೇ ಆಗಿದ್ದು, ಜೊತೆಗೆ ಬಿ.ಪಿ.ಎಲ್. ಕುಟುಂಬದವರು ಆರ್.ಎಸ್.ಬಿ.ವೈ. ಸ್ಮಾರ್ಟ್ ಕಾರ್ಡ್ ಅನ್ನೂ ಪಡೆದುಕೊಳ್ಳಬಹುದು. ಈ ಸ್ಮಾರ್ಟ್ ಕಾರ್ಡುದಾರರು, ವರ್ಷಕ್ಕೆ 30,000 ರೂ.ವರೆಗಿನ ವೈದ್ಯಕೀಯ ಖರ್ಚುವೆಚ್ಚಗಳನ್ನು ಕ್ಲೈಮ್ ಮಾಡಬಹುದು.

6. ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ

1995ರಲ್ಲಿ ಚಾಲನೆಗೊಂಡ ಈ ಯೋಜನೆಯು ಕೇಂದ್ರದಿಂದ ಪ್ರಾಯೋಜಿಸಲ್ಪಟ್ಟಿರುವ ಯೋಜನೆಯಾಗಿದೆ. ಹಿರಿಯ ನಾಗರಿಕರಿಗೆ, ವಿಧವೆಯರಿಗೆ, ಹಾಗೂ ಅಂಗವಿಕಲ ವ್ಯಕ್ತಿಗಳಿಗೆ ಸಾಮಾಜಿಕ ನಿವೃತ್ತಿ ವೇತನಗಳ ರೂಪದಲ್ಲಿ ಹಣಕಾಸು ನೆರವನ್ನೊದಗಿಸುವ ಗುರಿಯನ್ನಿಟ್ಟಿಕೊಂಡಿದೆ.

ಈ ಯೋಜನೆಗೆ ಯಾರು ಅರ್ಹರು ?
- 60 ವರ್ಷಗಳಿಗೆ ಮೇಲ್ಪಟ್ಟ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಯಾವುದೇ ವ್ಯಕ್ತಿ (ಬಿ.ಪಿ.ಎಲ್).
- 40 ರಿಂದ 64 ರ ವಯೋಮಾನದವರೆಗಿನ, ಬಿ.ಪಿ.ಎಲ್. ವರ್ಗಕ್ಕೆ ಸೇರಿರುವ ವಿಧವೆಯರು.
- ಶೇ. 80ಕ್ಕಿಂತಲೂ ಹೆಚ್ಚಿನ ಪ್ರಮಾಣದ ಅಂಗವೈಕಲ್ಯವುಳ್ಳ, ಬಿ.ಪಿ.ಎಲ್. ವರ್ಗಕ್ಕೆ ಸೇರಿರುವ ಹಾಗೂ 18 ವರ್ಷಕ್ಕಿಂತಲೂ ಮೇಲ್ಪಟ್ಟ ವಯೋಮಾನದವರು.

7. ಪ್ರಧಾನ ಮಂತ್ರಿ ಮುದ್ರಾ ಯೋಜನೆ

ಮೈಕ್ರೋ ಯುನಿಟ್ಸ್ ಡೆವಲಪ್ಮೆಂಟ್ ಮತ್ತು ರಿಫೈನೆನ್ಸ್ ಏಜೆನ್ಸಿ ಲಿಮಿಟೆಡ್ (ಮುದ್ರಾ) ಎನ್ನುವುದು ಕಾರ್ಪೋರೆಟ್-ಅಲ್ಲದ, ರೂಪಿತ ಕ್ಷೇತ್ರ, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ವಿನ್ಯಾಸಗೊಳಿಸಿದ ಒಂದು ಹೊಸ ಯೋಜನೆಯಾಗಿದೆ. ಈ ಯೋಜನೆಯಡಿ ಶಿಸು, ಕಿಶೋರ ಹಾಗು ತರುಣ ಎಂಬ ಮೂರು ಹಂತದಲ್ಲಿ ಸಾಲಸೌಲಭ್ಯ ಲಭ್ಯವಿರುತ್ತದೆ. ಗರಿಷ್ಠ ರೂ. 10 ಲಕ್ಷದವರೆಗೆ ಸಾಲ ಸಿಗುತ್ತದೆ. ಈ ಯೋಜನೆಯಡಿ ಮೂರು ಹಂತಗಳ ವಿವರ ಇಲ್ಲಿದೆ.

ಶಿಶು:
50,000 ರೂ.ವರೆಗೆ ಸಾಲವನ್ನು ಕೊಡಮಾಡುತ್ತದೆ.
ಕಿಶೋರ್:
ರು. 5 ಲಕ್ಷದವರೆಗೆ ಸಾಲವನ್ನು ಒದಗಿಸುತ್ತದೆ.
ತರುಣ್:
ರು. 10 ಲಕ್ಷಗಳವರೆಗೆ ಸಾಲವನ್ನೊದಗಿಸುತ್ತದೆ.

ಪ್ರಯೋಜನಗಳು:
- ಮುದ್ರಾ ಸಾಲವನ್ನು ವಾಹನಗಳ ಖರೀದಿಗಾಗಿ ಪಡೆದುಕೊಳ್ಳಬಹುದು (ವಾಣಿಜ್ಯೋದ್ದೇಶದ ವಾಹನಕ್ಕಾಗಿ ಲೋನ್, ಕಾರ್ ಲೋನ್ ಮತ್ತು ದ್ವಿಚಕ್ರ ವಾಹನದ ಲೋನ್).
- ವಾಣಿಜ್ಯ ಕಂತು ಸಾಲ ಅಥವಾ ಬ್ಯುಸಿನೆಸ್ ಇನ್ಸ್ಟಾಲ್ಮೆಂಟ್ ಲೋನ್ (ಬಿ.ಐ.ಎಲ್). ಉದ್ದಿಮೆಯೊಂದನ್ನು ಆರಂಭಿಸುವುದಕ್ಕಾಗಿ ಅವಶ್ಯಕವಾದ ಬಂಡವಾಳಕ್ಕಾಗಿ ಸಾಲ, ಪ್ಲಾಂಟ್ ಖರೀದಿ ಮತ್ತು ಯಂತ್ರೋಪಕರಣ, ಕಚೇರಿ ನವೀಕರಣಕ್ಕಾಗಿ ಸಾಲ.
- ಈ ಸಾಲವನ್ನು ತೀರಿಸುವುದಕ್ಕಾಗಿ ಏಳು ವರ್ಷಗಳಷ್ಟು ಸುದೀರ್ಘವಾದ ಕಾಲಾವಕಾಶವಿದೆ.

Read more about: government schemes finance news
English summary

Government schemes to aid economic development and financial stability

These are Government schemes to aid economic development and financial stability
Company Search
Enter the first few characters of the company's name or the NSE symbol or BSE code and click 'Go'

Find IFSC

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more