For Quick Alerts
ALLOW NOTIFICATIONS  
For Daily Alerts

ಆಸ್ತಿ ಮೇಲೆ ಸಾಲ ಪಡೆಯುವುದು ಹೇಗೆ?

ಯಾವುದೇ ವ್ಯಾಜ್ಯ ಇಲ್ಲದ ಹಾಗೂ ಸಮರ್ಪಕ ದಾಖಲಾತಿಗಳನ್ನು ಹೊಂದಿದ ವಾಸದ ಮನೆ ಅಥವಾ ವಾಣಿಜ್ಯ ಆಸ್ತಿಯನ್ನು (ಸ್ಥಿರಾಸ್ತಿ) ಅಡಮಾನವಿಟ್ಟು ಪಡೆಯುವ ಸಾಲವನ್ನು ಮನೆ ಅಡಮಾನ ಸಾಲ ಎಂದು ಕರೆಯಲಾಗುತ್ತದೆ.

By Siddu
|

ಯಾವುದಾದರೂ ಹಣಕಾಸು ಅಗತ್ಯ ಪೂರೈಸಲು ಸಾಲ ಪಡೆಯಲು ಯೋಚಿಸುತ್ತಿದ್ದರೆ ಮನೆ ಅಡಮಾನ ಸಾಲ (Home Equity Loan) ಅತ್ಯಂತ ಸೂಕ್ತವಾಗಿದೆ. ಯಾವುದೇ ವ್ಯಾಜ್ಯ ಇಲ್ಲದ ಹಾಗೂ ಸಮರ್ಪಕ ದಾಖಲಾತಿಗಳನ್ನು ಹೊಂದಿದ ವಾಸದ ಮನೆ ಅಥವಾ ವಾಣಿಜ್ಯ ಆಸ್ತಿಯನ್ನು (ಸ್ಥಿರಾಸ್ತಿ) ಅಡಮಾನವಿಟ್ಟು ಪಡೆಯುವ ಸಾಲವನ್ನು ಮನೆ ಅಡಮಾನ ಸಾಲ ಎಂದು ಕರೆಯಲಾಗುತ್ತದೆ. ಮಕ್ಕಳ ಮದುವೆ ಖರ್ಚು, ಶಿಕ್ಷಣ ಅಥವಾ ಮತ್ತೊಂದು ಆಸ್ತಿ ಖರೀದಿ ಸೇರಿದಂತೆ ಹಲವಾರು ಹಣಕಾಸು ಅಗತ್ಯಗಳ ಪೂರೈಕೆಗೆ ಮನೆ ಅಡಮಾನ ಸಾಲ ಪಡೆಯಬಹುದಾಗಿದೆ. ಸಾಲ ನೀಡುವ ಸಂಸ್ಥೆಯು ಮನೆಯ ಮಾರುಕಟ್ಟೆ ಮೌಲ್ಯವನ್ನು ಆಧರಿಸಿ ಮನೆಯನ್ನು ಭದ್ರತೆಯಾಗಿಟ್ಟುಕೊಂಡು ಸಾಲ ನೀಡುತ್ತದೆ. ಸ್ವಂತಮನೆ ಕಟ್ಟುವುದು ಈಗ ಸುಲಭ! ಇಲ್ಲಿವೆ ವಿವಿಧ ಬಗೆಯ ಗೃಹಸಾಲ ಸೌಲಭ್ಯಗಳು

ಸಾರ್ವಜನಿಕ, ಖಾಸಗಿ ವಲಯದ ಬ್ಯಾಂಕುಗಳು ಸೇರಿದಂತೆ ಗೃಹ ಸಾಲದ ಸಂಸ್ಥೆಗಳು ಮನೆ ಅಡಮಾನ ಸಾಲ ನೀಡುತ್ತವೆ. ಮನೆಯ ವಾಸ್ತವಿಕ ಮಾರುಕಟ್ಟೆ ಮೌಲ್ಯದ ಶೇ. ೬೦ರಷ್ಟು ಸಾಲವನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಆದರೂ ಸಾಲ ನೀಡುವ ಸಂಸ್ಥೆಗಳು ತಾವು ಅಳವಡಿಸಿಕೊಂಡಿರುವ ನೀತಿ, ನಿಯಮಾಳಿಗಳ ಆಧಾರದಲ್ಲಿ ಸಾಲದ ಮೊತ್ತ ಹೆಚ್ಚು ಕಡಿಮೆಯಾಗಬಹುದು.

ಮನೆ ಅಡಮಾನ ಸಾಲದ ಲೆಕ್ಕಾಚಾರ

ಮನೆ ಅಡಮಾನ ಸಾಲದ ಲೆಕ್ಕಾಚಾರ

ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯದಲ್ಲಿ ಆಸ್ತಿಯ ಮೇಲೆ ಯಾವುದಾದರೂ ಸಾಲ ಈಗಾಗಲೇ ಇದ್ದರೆ ಅದನ್ನು ಕಳೆದು ಸಾಲದ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಮಂಜೂರಾಗುವ ಸಾಲದ ಮೊತ್ತವನ್ನು ಸಾಲಗಾರನ ಪಾಲು ಎಂದು ಪರಿಗಣಿಸಲಾಗುತ್ತದೆ. ಸಾಲಕ್ಕೆ ಭದ್ರತೆಯಾಗಿ ಮನೆಯನ್ನು ಅಡಮಾನವಾಗಿಟ್ಟುಕೊಳ್ಳುವ ಬ್ಯಾಂಕಿಗೆ ಇದು ಭದ್ರತಾ ಸಾಲವಾಗುತ್ತದೆ.
ಸಾಮಾನ್ಯವಾಗಿ ಪಡೆದುಕೊಳ್ಳುವ ಗೃಹ ಸಾಲಕ್ಕಿಂತ ಈ ಅಡಮಾನ ಸಾಲದ ಬಡ್ಡಿ ದರ ತುಸು ಹೆಚ್ಚಾಗಿದ್ದರೂ, ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಡ್ಡಿ ದರಗಳಿಗಿಂತ ಬಹಳಷ್ಟು ಕಡಿಮೆಯಾಗಿರುತ್ತದೆ. ೫ ರಿಂದ ೨೦ ವರ್ಷಗಳ ಅವಧಿಯಲ್ಲಿ ಸಾಲವನ್ನು ಮರುಪಾವತಿಸಬಹುದಾಗಿದ್ದರೂ ಆದಷ್ಟು ಬೇಗ ಸಾಲ ತೀರಿಸುವುದು ಸೂಕ್ತ.
ಸಾಲ ಪಡೆಯುವ ಮನೆಯ ಮೇಲೆ ಈಗಾಗಲೇ ಯಾವುದಾದರೂ ಸಾಲವಿದ್ದಲ್ಲಿ ಅದರ ಮಾಸಿಕ ಕಂತಿನ ಮೇಲೆ ಹೆಚ್ಚುವರಿಯಾಗಿ ಅಡಮಾನ ಸಾಲದ ಕಂತನ್ನು ಕಟ್ಟಬೇಕಾಗುತ್ತದೆ. ಗೃಹ ಸಾಲ ಯೋಜನೆಯಲ್ಲಿ ವಾರ್ಷಿಕ ೨ ಲಕ್ಷ ರೂಪಾಯಿ ಬಡ್ಡಿ ಪಾವತಿ ಹಾಗೂ ೧.೫ ಲಕ್ಷ ರೂಪಾಯಿ ಸಾಲದ ಮೊತ್ತ ಮರುಪಾವತಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ ಮನೆ ಅಡಮಾನ ಸಾಲದಲ್ಲಿ ಇಂಥ ಯಾವುದೇ ವಿನಾಯಿತಿಗಳು ಇರುವುದಿಲ್ಲ.

ಆಸ್ತಿ ಮೌಲ್ಯದ ಮೇಲೆ ಪ್ರಭಾವ ಬೀರುವ ಅಂಶಗಳು

ಆಸ್ತಿ ಮೌಲ್ಯದ ಮೇಲೆ ಪ್ರಭಾವ ಬೀರುವ ಅಂಶಗಳು

ರಿಯಲ್ ಎಸ್ಟೇಟ್ ವಲಯದಲ್ಲಿ ಕಾಲ ಕಾಲಕ್ಕೆ ಆಗುವ ಬೆಲೆಗಳ ಬದಲಾವಣೆಯ ಆಧಾರದಲ್ಲಿ ಆಸ್ತಿಯ ಮಾರುಕಟ್ಟೆ ಮೌಲ್ಯದಲ್ಲಿಯೂ ಬದಲಾವಣೆಗಳಾಗುತ್ತವೆ. ಆರ್ಥಿಕ ಬೆಳವಣಿಗೆ ದರ, ಬೇಡಿಕೆ ಹಾಗೂ ಪೂರೈಕೆ ಮತ್ತು ಸದ್ಯದ ಬಡ್ಡಿ ದರಗಳಿಂದ ರಿಯಲ್ ಎಸ್ಟೇಟ್ ವಲಯದಲ್ಲಿ ಆಗುವ ಬದಲಾವಣೆಗಳನ್ನು ಆಧರಿಸಿ ಮನೆಯ ಮಾರುಕಟ್ಟೆ ಮೌಲ್ಯದಲ್ಲಿಯೂ ಏರಿಳಿತಗಳಾಗುತ್ತವೆ. ಸದ್ಯದ ಮನೆ ಆಸ್ತಿಗಳ ಸ್ಥಿರವಾದ ಮೌಲ್ಯ ಹಾಗೂ ದಾಸ್ತಾನು ಹೆಚ್ಚಳದ ಸಂದರ್ಭದಲ್ಲಿ ಅಡಮಾನ ಮೌಲ್ಯ ಹೆಚ್ಚಳವಾಗುವುದನ್ನು ನಿರೀಕ್ಷಿಸುವಂತಿಲ್ಲ. ಅದರಲ್ಲೂ ಕಳೆದ ೭ ರಿಂದ ೧೦ ವರ್ಷಗಳ ಅವಧಿಯಲ್ಲಿ ಮನೆ ಖರೀದಿಸಿದ್ದರೆ ಅಡಮಾನ ಮೌಲ್ಯ ಕಡಿಮೆಯೇ ಆಗಲಿದೆ.

ಆಸ್ತಿಯ ಸುತ್ತಲಿನ ಪ್ರದೇಶದಲ್ಲಿ ಇರಬಹುದಾದ ಪ್ರಮುಖ ಶಾಲಾ ಕಾಲೇಜುಗಳು, ಪ್ರತಿಷ್ಠಿತ ಆಸ್ಪತ್ರೆಗಳು ಅಥವಾ ಹತ್ತಿರದಲ್ಲಿ ಇರುವ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಮುಂತಾದ ಅಂಶಗಳು ಅಡಮಾನ ಮೊತ್ತವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇದೆಲ್ಲದಕ್ಕೂ ಮೊದಲು ಮನೆಯ ಮಾಲೀಕ ತನ್ನ ಮನೆಯನ್ನು ಸುಸ್ಥಿಯಲ್ಲಿ ಹಾಗೂ ಸುಸಜ್ಜಿತವಾಗಿಟ್ಟಿರಬೇಕಾಗುತ್ತದೆ. ಮನೆಯನ್ನು ಉತ್ತಮವಾಗಿ ನವೀಕರಣ ಮಾಡಿಸಿದ್ದಲ್ಲಿ ಆಸ್ತಿಯ ಮೌಲ್ಯ ಹೆಚ್ಚಾಗುತ್ತದೆ. ಜೊತೆಗೆ ಆಸ್ತಿ ತೆರಿಗೆ ಸೇರಿದಂತೆ ಅನ್ವಯವಾಗುವ ಎಲ್ಲ ಶುಲ್ಕಗಳನ್ನು ಪಾವತಿಸಿದ್ದು, ಆಸ್ತಿ ಯಾವುದೇ ವ್ಯಾಜ್ಯಕ್ಕೆ ಒಳಪಟ್ಟಿರದಂತೆ ಇಟ್ಟುಕೊಂಡಿರುವುದು ಅತಿ ಅವಶ್ಯ.

 

ಸಾಲದ ಷರತ್ತುಗಳು

ಸಾಲದ ಷರತ್ತುಗಳು

ಮನೆ ಇಕ್ವಿಟಿ ಸಾಲ ಯೋಜನೆಯಲ್ಲಿ ಬ್ಯಾಂಕುಗಳು ಏಕಗಂಟಿನಲ್ಲಿ ಸಾಲದ ಮೊತ್ತವನ್ನು ನೀಡಲು ಅವಕಾಶವಿದೆ. ಹಾಗೆಯೇ ಸಾಲಗಾರನ ಅವಶ್ಯಕತೆಗಳಿಗೆ ಅನುಗುಣವಾಗಿ ಕಂತಿನಲ್ಲಿ ಸಾಲದ ಮೊತ್ತವನ್ನು ಬಿಡುಗಡೆ ಮಾಡಲೂಬಹುದು.
ಸಾಲಗಾರನು ಪ್ರತಿ ತಿಂಗಳು ಸಾಲದ ಮರುಪಾವತಿ ಕಂತನ್ನು ಕಟ್ಟಬೇಕಾಗುತ್ತದೆ. ಬಾಕಿ ಸಾಲದ ಒಟ್ಟು ಮೊತ್ತವನ್ನು ನೋಡಿಕೊಂಡು ಭಾಗಶಃ ಸಾಲವನ್ನು ಪೂರ್ವ ಪಾವತಿ ಮಾಡುವ ಅವಕಾಶವೂ ಸಾಲಗಾರರಿಗೆ ಇರುತ್ತದೆ. ಕನಿಷ್ಠ ಎರಡು ತಿಂಗಳ ಇಎಂಐ ಮೊತ್ತವನ್ನು ಪೂರ್ವಪಾವತಿ ಮಾಡಬಹುದಾಗಿದ್ದು, ಬದಲಾಗುವ ಬಡ್ಡಿ ಆಧಾರದಲ್ಲಿ ಸಾಲ ಪಡೆದಿದ್ದರೆ ಬ್ಯಾಂಕುಗಳು ಯಾವುದೇ ಪೂರ್ವಪಾವತಿ ಶುಲ್ಕವನ್ನು ವಿಧಿಸುವುದಿಲ್ಲ. ಸಾಲದ ಮೊದಲ ವರ್ಷದಿಂದಲೇ ಪೂರ್ವಪಾವತಿ ಆರಂಭಿಸುವುದು ಉತ್ತಮ. ನಂತರದ ಅವಧಿಯಲ್ಲಿ ಮಾಡಲಾಗುವ ಪೂರ್ವ ಪಾವತಿಗಳಿಗೆ ಹೆಚ್ಚಿನ ಬಡ್ಡಿ ಉಳಿತಾಯವಾಗುವುದಿಲ್ಲ. ಜೊತೆಗೆ ಮಾಸಿಕ ಸಾಲದ ಕಂತನ್ನು ಹೆಚ್ಚಿಸುವ ಮೂಲಕವೂ ಬೇಗ ಸಾಲ ತೀರಿಸಿ, ಒಟ್ಟಾರೆ ಬಡ್ಡಿ ಪಾವತಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಸಾಲದ ಅವಧಿಯಲ್ಲಿ ಯಾವಾಗ ಬೇಕಾದರೂ ಇಎಂಐ ಹೆಚ್ಚಿಸಿಕೊಳ್ಳಲು ಮನವಿ ಸಲ್ಲಿಸಬಹುದು. ಇದಕ್ಕೆ ಬ್ಯಾಂಕುಗಳು ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ ಹೊಸ ಇಎಂಐ ಮೊತ್ತಕ್ಕೆ ಮತ್ತೊಮ್ಮೆ ಇಸಿಎಸ್ ಅನ್ನು ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ.

ಬೇಕಾಗುವ ದಾಖಲೆಗಳು

ಬೇಕಾಗುವ ದಾಖಲೆಗಳು

ಮಾಸಿಕ ಸಂಬಳ ಪಡೆಯುವವರು ಹಾಗೂ ಸ್ವ ಉದ್ಯೋಗಳಿಬ್ಬರೂ ಹೋಮ್ ಇಕ್ವಿಟಿ ಲೋನ್ ಪಡೆಯಬಹುದಾಗಿದೆ. ಸಾಲ ಪಡೆಯುವವರು ತಮ್ಮ ಗುರುತು ಹಾಗೂ ವಿಳಾಸ ದಾಖಲೆ, ಸಂಬಳ ಪಡೆಯುವವರಾಗಿದ್ದರೆ ಆರು ತಿಂಗಳ ಸ್ಯಾಲರಿ ಸ್ಲಿಪ್, ಸ್ವ ಉದ್ಯೋಗಿಗಳಾಗಿದ್ದರೆ ಕಳೆದ ಎರಡು ವರ್ಷಗಳ ಬ್ಯಾಲೆನ್ಸ್ ಶೀಟ್ ಮತ್ತು ಲಾಭ, ಹಾನಿಯ ದಾಖಲೆಯನ್ನು, ಎರಡು ವರ್ಷಗಳ ಆದಾಯ ತೆರಿಗೆ ಮರುಪಾವತಿ ದಾಖಲೆ, ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟಮೆಂಟ್ ಇವುಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ.
ಆಸ್ತಿಗೆ ಸಂಬಂಧಿಸಿದಂತೆ ನೋಂದಣಿ ಪತ್ರ, ಕಟ್ಟಡ ಕಾಮಗಾರಿ ಸಂಪೂರ್ಣವಾದ ದಾಖಲೆ, ವಾಸದ ದಾಖಲೆ, ಮನೆ ನಕ್ಷೆಯ ದಾಖಲೆ, ಬ್ಯಾಂಕ್‌ನಿಂದ ಮಾನ್ಯತೆ ಪಡೆದ ಮೌಲ್ಯಮಾಪಕರ ವರದಿ ಮತ್ತು ಇತ್ತೀಚಿನ ಆಸ್ತಿ ತೆರಿಗೆ ಸಂದಾಯ ಮಾಡಿದ ದಾಖಲೆಗಳನ್ನು ಅನ್ವಯವಾಗುವ ಸಂಸ್ಕರಣಾ ಶುಲ್ಕಗಳೊಂದಿಗೆ ನೀಡಬೇಕಾಗುತ್ತದೆ. ಒಟ್ಟಾರೆಯಾಗಿ ಸುಲಭವಾಗಿ ಪಡೆಯಬಹುದಾದ ಮನೆ ಅಡಮಾನ ಸಾಲ ಅವಶ್ಯಕ ಸಂದರ್ಭಗಳಲ್ಲಿ ಅತ್ಯಂತ ಉಪಯುಕ್ತವಾಗಿದೆ.

English summary

How to get a loan against Property?

Home equity loans are provided by public and private sector banks and even by housing finance companies.
Story first published: Thursday, August 9, 2018, 10:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X