ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ಎಲ್ಲಿ ಹೂಡಿಕೆ ಮಾಡಿದರೆ ಅಧಿಕ ರಿಟರ್ನ್ ಪಡೆಯಲು ಸಾಧ್ಯ ಎಂದು ನೋಡುತ್ತೇವೆ. ಹಾಗಿದ್ದಾಗ, ನಮ್ಮ ಮುಂದೆ ಬರುವ ಆಯ್ಕೆಗಳು ಬ್ಯಾಂಕ್ ಎಫ್‌ಡಿ, ಅಂಚೆ ಕಚೇರಿ ಹೂಡಿಕೆಗಳು ಆಗಿದೆ.
ಅಂಚೆ ಕಚೇರಿ ಡೆಪಾಸಿಟ್ ಸೇರಿದಂತೆ ಹೆಚ್ಚಿನ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಸರ್ಕಾರವು ಇತ್ತೀಚೆಗೆ ಪರಿಷ್ಕರಿಸಿದೆ. ಆರ್‌ಬಿಐ ತನ್ನ ರೆಪೋ ದರವನ್ನು ಸತತವಾಗಿ ಮೂರು ಬಾರಿ ಸ್ಥಿರವಾಗಿರಿಸಿದೆ. ಇದಾದರೂ ಬ್ಯಾಂಕುಗಳು ತಮ್ಮ ಬಡ್ಡಿದರಗಳನ್ನು ಸ್ವಲ್ಪ ಸಮಯದವರೆಗೆ ಸ್ಥಿರವಾಗಿರಿಸಿದೆ. ಬ್ಯಾಂಕ್ ಎಫ್‌ಡಿ, ಅಂಚೆ ಕಚೇರಿ ಟರ್ಮ್ ಡೆಪಾಸಿಟ್ ಬಡ್ಡಿದರದ ಹೋಲಿಕೆ ನಾವಿಲ್ಲಿ ಮಾಡಿದ್ದೇವೆ, ಮುಂದೆ ಓದಿ....

ಬ್ಯಾಂಕ್ ಎಫ್‌ಡಿ, ಅಂಚೆ ಕಚೇರಿ ಡೆಪಾಸಿಟ್ ಬಡ್ಡಿದರ ಹೋಲಿಕೆ
ಅಂಚೆ ಕಚೇರಿಗಳು ಡೆಪಾಸಿಟ್‌ಗಳ ಅವಧಿಯ ಆಧಾರದ ಮೇಲೆ ಶೇಕಡ 7.5 ರವರೆಗಿನ ಟರ್ಮ್ ಡೆಪಾಸಿಟ್ ಬಡ್ಡಿದರವನ್ನು ನೀಡುತ್ತದೆ. ಒಂದು ವರ್ಷದ ಅಂಚೆ ಕಚೇರಿ ಟರ್ಮ್ ಡೆಪಾಸಿಟ್‌ಗಳು ಪ್ರಸ್ತುತ ಶೇಕಡ 6.9 ಆಗಿದೆ. 2 ವರ್ಷಗಳ ಅಂಚೆ ಕಚೇರಿ ಟರ್ಮ್ ಡೆಪಾಸಿಟ್‌ಗೆ ಶೇಕಡ 7.0, 3 ವರ್ಷಗಳ ಅಂಚೆ ಕಚೇರಿ ಟರ್ಮ್ ಡೆಪಾಸಿಟ್‌ಗಳ ಮೇಲೆ ಶೇಕಡ 7 ಮತ್ತು 5 ವರ್ಷಗಳ ಅಂಚೆ ಕಚೇರಿ ಟರ್ಮ್ ಡೆಪಾಸಿಟ್‌ಗಳು ಶೇಕಡ 7.5 ರಷ್ಟಿದೆ.
ಮತ್ತೊಂದೆಡೆ, ಎಚ್‌ಡಿಎಫ್‌ಸಿ ಬ್ಯಾಂಕ್ ಡೆಪಾಸಿಟ್ ಅವಧಿ ಮತ್ತು ಡೆಪಾಸಿಟ್‌ದಾರರ ವಯಸ್ಸನ್ನು ಅವಲಂಬಿಸಿ ಎಫ್‌ಡಿಯಲ್ಲಿ ಶೇಕಡ 7.75 ರಷ್ಟು ಬಡ್ಡಿದರಗಳನ್ನು ನೀಡುತ್ತಿದೆ. ಎಸ್‌ಬಿಐ ವಾರ್ಷಿಕವಾಗಿ ಶೇಕಡ 7.50 ರವರೆಗೆ ಎಫ್‌ಡಿ ದರಗಳನ್ನು ನೀಡುತ್ತಿದೆ. ಪಿಎನ್‌ಬಿ ವರ್ಷಕ್ಕೆ ಶೇಕಡ 7.75 ವರೆಗೆ ಬಡ್ಡಿದರ ನೀಡುತ್ತಿದೆ. ಐಸಿಐಸಿಐ ಬ್ಯಾಂಕ್ ವಾರ್ಷಿಕವಾಗಿ ಶೇಕಡ 7.60 ರವರೆಗೆ ಎಫ್‌ಡಿ ದರಗಳನ್ನು ನೀಡುತ್ತಿದೆ.
ಬ್ಯಾಂಕ್ ಎಫ್‌ಡಿ ದರ ಪರಿಷ್ಕರಣೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಇತ್ತೀಚೆಗೆ ತನ್ನ ದ್ವೈಮಾಸಿಕ ಹಣಕಾಸು ನೀತಿ ಘೋಷಣೆ ಮಾಡುವಾಗ ರೆಪೋ ದರವನ್ನು ಸ್ಥಿರವಾಗಿರಿಸಿದೆ. ಆದರೆ ಭವಿಷ್ಯದಲ್ಲಿ ರೆಪೋ ದರ ಪರಿಷ್ಕರಣೆ ಮಾಡಬಹುದು. ರೆಪೋ ಹೆಚ್ಚಾದರೆ, ಬಡ್ಡಿದರವೂ ಕೂಡಾ ಹೆಚ್ಚಳವಾಗಬಹುದು.
ಈ ತಿಂಗಳ ಆರಂಭದಲ್ಲಿ ದ್ವೈಮಾಸಿಕ ಹಣಕಾಸು ನೀತಿಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, "ರೆಪೋ ದರ ಏರಿಕೆ ಇನ್ನೂ ಅಪೂರ್ಣವಾಗಿದೆ. ನಾವು ರೆಪೋ ದರವನ್ನು 250 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದ್ದೇವೆ. ಆದರೆ ಅದಕ್ಕೆ ಅನುಗುಣವಾಗಿ ಡೆಪಾಸಿಟ್ ಅಥವಾ ಬ್ಯಾಂಕ್ ಸಾಲದ ದರ ಏರಿಕೆ ಮಾಡಲಾಗಿಲ್ಲ. ಇನ್ನೂ ವ್ಯತ್ಯಾಸಗಳಿದೆ," ಎಂದು ತಿಳಿಸಿದರು.
ಮೇ 2022 ರಲ್ಲಿ ಅನಿಗದಿತ ಸಭೆಯನ್ನು ನಡೆಸಿ ಆರ್‌ಬಿಐ 40 ಬಿಪಿಎಸ್‌ನಷ್ಟು ರೆಪೋ ದರವನ್ನು ಹೆಚ್ಚಿಸಿದೆ. ಅದಾದ ಬಳಿಕ ಒಟ್ಟಾಗಿ ಆರು ಬಾರಿ ರೆಪೋ ದರವನ್ನು ಏರಿಸಿದೆ.


Click it and Unblock the Notifications