ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ಆದ ರೈಲ್ವೆ ಯೋಜನೆ ಮತ್ತು ಹೆದ್ದಾರಿ ಯೋಜನೆಗಳು ಜಾರಿಗೆ ಬಂದಿದೆ. ಈ ಮಾಹಿತಿಯನ್ನು ಕೇಂದ್ರ ಸಚಿವರು ನೀಡಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಭಾಗದಲ್ಲಿ ಆಗುತ್ತಿರುವ ಸಾರಿಗೆ ಮೂಲ ಸೌಕರ್ಯಗಳ ಅಭಿವೃದ್ಧಿ ಬಗ್ಗೆ ತಿಳಿಸಿದ್ದಾರೆ.
ಈಶಾನ್ಯ ರಾಜ್ಯಗಳ ಪ್ರದೇಶಗಳಲ್ಲಿ 1,909 ಕಿಮೀ ಉದ್ದದ ರೈಲ್ವೆ ಯೋಜನೆಗಳು 81,941 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಡೆಸಲಾಗುತ್ತಿದೆ. ಇದರೊಂದಿಗೆ ಕಳೆದ ಒಂಬತ್ತು ವರ್ಷಗಳಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಒಟ್ಟು 4,950 ಕಿಮೀ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಿದೆ ಕೆಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

ಕೇಂದ್ರದಲ್ಲಿ ಬಿಜೆಪಿಯು ಅಧಿಕಾರವನ್ನು ಸ್ವೀಕರಿಸಿದ ಬಳಿಕ ಈವರೆಗೆ ಅಂದರೆ ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಏನು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದನ್ನು ಕೇಳಲಾಗಿದೆ. ಈ ಪ್ರಶ್ನೆಗೆ ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ ಲಿಖಿತವಾಗಿ ಉತ್ತರವನ್ನು ನೀಡಿದ್ದಾರೆ.
ರೈಲ್ವೆ ಮತ್ತು ಹೆದ್ದಾರಿ ಅಭಿವೃದ್ಧಿ ವಿವರ
ಇದೇ ವರ್ಷ 2023ರ ಏಪ್ರಿಲ್‌ವರೆಗೆ ಈಶಾನ್ಯ ರಾಜ್ಯಗಳಲ್ಲಿ 19 ರೈಲ್ವೆ ಮೂಲ ಸೌಕರ್ಯ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸುಮಾರು 1909 ಕಿಮೀ ಉದ್ದದ ಅಂದಾಜು 81,941 ಕೋಟಿ ರೂಪಾಯಿಯ ರೈಲ್ವೆ ಯೋಜನೆಯನ್ನು ನಡೆಸಲಾಗುತ್ತಿದೆ. ಇದಕ್ಕೆ ಅಗತ್ಯ ಅನುಮೋದನೆ ಸಹಿತ ಕಾರ್ಯಗತಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ಈ ರೈಲ್ವೆ ಯೋಜನೆ ಪೈಕಿ 482 ಕಿಮೀ ಉದ್ದಕ್ಕೆ ಮಾರ್ಚ್ 2023 ರವರೆಗೆ 37,713 ಕೋಟಿ ರೂಪಾಯಿ ಹಣ ವೆಚ್ಚ ಮಾಡಲಾಗಿದೆ. 2014ರಿಂದ 2023 ರವರೆಗಿನ 9 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಒಟ್ಟು 1,618 ಕಿಮೀ ರೈಲ್ವೆ ಜಾಲ ಅಭಿವೃದ್ಧಿ ಪಡಿಸಿದೆ. ಇದರಲ್ಲಿ 377 ಕಿಮೀ ಹೊಸ ಮಾರ್ಗ ನಿರ್ಮಾಣವಾದರೆ, 972 ಕಿಮೀ ಗೇಜ್ ಪರಿವರ್ತನೆ ಮಾಡಲಾಗಿದೆ. ಜೊತೆಗೆ 269 ಕಿಮೀ ವಿಸ್ತರಣೆ ಮಾಡಲಾಗಿದೆ ಎಂದು ಸಚಿವಾಲಯ ಪ್ರಕಟಣೆ ತಿಳಿಸಿದೆ.
ಇತರೆ ಯೋಜನೆಗಳ ವಿವರ
2014ರಿಂದ 2023 ರವರೆಗಿನ ಈ ಒಂಬತ್ತು ವರ್ಷಗಳಲ್ಲಿ ಭಾರತದ ಈಶಾನ್ಯ ರಾಜ್ಯಗಳಲ್ಲಿ 41,459 ಕೋಟಿ ರೂಪಾಯಿಯಲ್ಲಿ ಒಟ್ಟು 4,950 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ ಎಂದು ಹೆದ್ದಾರಿ ಸಚಿವಾಲಯ ತಿಳಿಸಿದೆ. ಇದಷ್ಟೇ ಅಲ್ಲದೇ ಈಶಾನ್ಯ ರಾಜ್ಯಗಳ ವ್ಯಾಪ್ತಿಯಲ್ಲಿ 'ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆ' (NESIDS) ಮತ್ತು 'ಈಶಾನ್ಯ ರಸ್ತೆ ವಲಯ ಅಭಿವೃದ್ಧಿ ಯೋಜನೆ' (NERSDS) ಅಡಿಯಲ್ಲಿ 77 ರಸ್ತೆ ಯೋಜನೆಗಳಿಗಾಗಿ ಒಟ್ಟು 3372.58 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.
ಸಾರಿಗೆ ಅಭಿವೃದ್ಧಿಯಿಂದ ಸಾಕಷ್ಟು ಪ್ರಯೋಜನ
ಸಾರಿಗೆ ಮೂಲ ಸೌಕರ್ಯ ಅಭಿವೃದ್ಧಿ ಮಾಡುವ ಮೂಲಕ ದೇಶದಲ್ಲಿ ಈಶಾನ್ಯ ರಾಜ್ಯಗಳನ್ನು ಮುಖ್ಯ ವಾಹಿನಿಗೆ ತರುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಈ ಹಿಂದಿನಿಂದಲೂ ಕೇಂದ್ರ ಸರ್ಕಾರವು ಹೇಳುತ್ತಾ ಬಂದಿದೆ. ಅಗತ್ಯ ಸರಕುಗಳು ಮತ್ತು ಕೃಷಿ ಉತ್ಪನ್ನಗಳನ್ನು ಸುಲಭವಾಗಿ ಸರಬರಾಜು ಮಾಡಲು ಈ ಸಾರಿಗೆ ಅಭಿವೃದ್ಧಿ ಅನುಕೂಲವಾಗಿದೆ.
ರಸ್ತೆ, ರೈಲ್ವೆ ಅಭಿವೃದ್ಧಿಯಿಂದ ವ್ಯಾಪಾರವು ಅಧಿಕವಾಗುತ್ತಿದೆ. ಜನರಿಗೆ ಉದ್ಯೋಗಾವಕಾಶವೂ ಅಧಿಕವಾಗುತ್ತಿದೆ. ಅಲ್ಲದ ಈ ಭಾಗದಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ಪ್ರವಾಸೋದ್ಯಮ ಉದ್ಯಮದ ಅಭಿವೃದ್ಧಿಗೆ ವೇಗ ದೊರೆಯುತ್ತದೆ. ಕೈಗಾರಿಕೆಗಳ ಬೆಳವಣಿಗೆಗೂ ಪೂರಕವಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.


Click it and Unblock the Notifications