ಕಷ್ಟಪಟ್ಟು ಹಣ ಉಳಿತಾಯ ಮಾಡಿ, ಭವಿಷ್ಯಕ್ಕೆ ಉಪಯೋಗಕ್ಕೆ ಬರಬಹುದು ಎಂದು ಹಣವನ್ನು ನಿಶ್ಚಿತ ಠೇವಣಿ(ಫಿಕ್ಸೆಡ್ ಡೆಪಾಸಿಟ್) ಮಾಡುವುದು ಸಾಮಾನ್ಯ. ಅದರಲ್ಲೂ ಹಿರಿಯ ನಾಗರೀಕರು ತಮ್ಮ ಹಣವನ್ನು ಸುರಕ್ಷಿತವಾಗಿ ಆದಾಯ ಬರುವಂತೆ ಹೂಡಿಕೆ ಮಾಡುವುದು ನಿಶ್ಚಿತ ಠೇವಣಿಗಳಲ್ಲಿ.
ಭಾರತದ ಬಹುತೇಕ ಎಲ್ಲಾ ಬ್ಯಾಂಕುಗಳು ನಿಶ್ಚಿತ ಠೇವಣಿ ಮೇಲೆ ನೀಡುವ ಬಡ್ಡಿ ದರವು ಸಾಮಾನ್ಯ ಗ್ರಾಹಕರಿಗಿಂತ ಸ್ವಲ್ಪ ಹೆಚ್ಚು ಎಂಬಂತೆ ಹಿರಿಯ ನಾಗರೀಕರಿಗೆ ಹೆಚ್ಚುವರಿ 0.50 ಪರ್ಸೆಂಡ್ ಬಡ್ಡಿ ದರವನ್ನು ಹೊಂದಿವೆ. ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇತರೆ ಬ್ಯಾಂಕುಗಳು ಹಿರಿಯ ನಾಗರೀಕರಿಗೆ 0.50 ಪರ್ಸೆಂಟ್ ಹೆಚ್ಚುವರಿ ಬಡ್ಡಿ ಕೊಡುವುದು ಸಾಮಾನ್ಯ.
ಆದರೆ ಸಣ್ಣ ಹಣಕಾಸು ಸಂಸ್ಥೆಗಳು ನಿಶ್ಚಿತ ಠೇವಣಿ ಮೇಲೆ ಬೃಹತ್ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ಹೊಂದಿವೆ. ಹಿರಿಯ ನಾಗರೀಕರಿಗೆ ಹೆಚ್ಚುವರಿ ಬಡ್ಡಿದರವನ್ನು ನೀಡುತ್ತವೆ. ಆ ಬ್ಯಾಂಕುಗಳ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ವಿವರಣೆ ಓದಿ.
ಫಿನ್‌ಕೇರ್ ಸಣ್ಣ ಹಣಕಾಸು ಬ್ಯಾಂಕ್
ಫಿನ್‌ಕೇರ್ ಸಣ್ಣ ಹಣಕಾಸು ಬ್ಯಾಂಕ್ ಹಿರಿಯ ನಾಗರೀಕರಿಗೆ 7 ದಿನಗಳಿಂದ ವರ್ಷಗಳವರೆಗಿನ ಠೇವಣಿಗೆ 4.5 ಪರ್ಸೆಂಟ್ ರಿಂದ 9.5 ಪರ್ಸೆಂಟ್ ವರೆಗೆ ಬಡ್ಡಿ ದರವನ್ನು ಹೊಂದಿವೆ. ಆದ್ರೆ ಅದೇ ಸಾಮಾನ್ಯ ಗ್ರಾಹಕರಿಗೆ ನಿಶ್ಚಿತ ಠೇವಣಿ ಮೇಲೆ 4 ರಿಂದ 9 ಪರ್ಸೆಂಟ್ ಬಡ್ಡಿ ದರವನ್ನು ನೀಡುತ್ತದೆ.
ಈ ಬ್ಯಾಂಕ್‌ನ ಅತಿ ಹೆಚ್ಚಿನ ಬಡ್ಡಿ ದರವು 9.5 ಪರ್ಸೆಂಟ್ ಆಗಿದ್ದು 24 ತಿಂಗಳು 1 ದಿನ 36 ತಿಂಗಳು ಅವಧಿಯ ನಿಶ್ಚಿತ ಠೇವಣಿಗೆ ಈ ಬಡ್ಡಿ ದರ ಅನ್ವಯವಾಗಿದೆ. ಇನ್ನು 21 ತಿಂಗಳು 1 ದಿನದಿಂದ 24 ತಿಂಗಳುಗಳ ವರೆಗಿನ ಅವಧಿಯ ಠೇವಣಿಗೆ 9 ಪರ್ಸೆಂಡ್ ಬಡ್ಡಿ ದರವಿದೆ.
21 ತಿಂಗಳು 1 ದಿನದಿಂದ 24 ತಿಂಗಳುಗವರೆಗಿನ ಅವಧಿಗೆ - 9 ಪರ್ಸೆಂಟ್ ಬಡ್ಡಿ ದರ
24 ತಿಂಗಳು 1 ದಿನದಿಂದ 36 ತಿಂಗಳುವರೆಗಿನ ಅವಧಿಗೆ - 9.50 ಪರ್ಸೆಂಟ್ ಬಡ್ಡಿ ದರ
ಈಕ್ವಿಟಾಸ್ ಸಣ್ಣ ಹಣಕಾಸು ಬ್ಯಾಂಕ್
ಈಕ್ವಿಟಾಸ್ ಸಣ್ಣ ಹಣಕಾಸು ಬ್ಯಾಂಕ್‌ನಲ್ಲಿ 7 ದಿನದಿಂದ 10 ವರ್ಷಗಳ ಅವಧಿಯ ನಿಶ್ಚಿತ ಠೇವಣಿ ಲಭ್ಯವಿದೆ. ಹಿರಿಯ ನಾಗರೀಕರಿಗೆ ಇಲ್ಲಿ ಹೆಚ್ಚುವರಿ 0.60 ಪರ್ಸೆಂಟ್ ಬಡ್ಡಿ ದರವನ್ನು ಹೊಂದಿದೆ. ಹಿರಿಯ ನಾಗರೀಕರು ನಿಶ್ಚಿತ ಠೇವಣಿಗೆ 5.65 ಪರ್ಸೆಂಟ್ ನಿಂದ 8.85 ಪರ್ಸೆಂಟ್ ವರೆಗೂ ಠೇವಣಿ ಮೇಲೆ ಬಡ್ಡಿಯನ್ನು ಪಡೆಯಬಹುದಾಗಿದೆ. ಈಕ್ವಿಟಾಸ್ ಸಣ್ಣ ಹಣಕಾಸು ಬ್ಯಾಂಕ್‌ನಲ್ಲಿ ಅತಿ ಹೆಚ್ಚಿನ ಬಡ್ಡಿ ದರವು 8.85 ಪರ್ಸೆಂಟ್ ಆಗಿದ್ದು 888 ದಿನಗಳ ಅವಧಿಯ ಠೇವಣಿಗೆ ಈ ಬಡ್ಡಿ ದರವನ್ನು ನೀಡಲಾಗುವುದು. 1 ವರ್ಷ 18 ತಿಂಗಳು ಅವಧಿಯ ನಿಶ್ಚಿತ ಠೇವಣಿಗೆ ಬ್ಯಾಂಕ್ 8.60 ಪರ್ಸೆಂಟ್ ದರದಲ್ಲಿ ಬಡ್ಡಿಯನ್ನು ನೀಡುತ್ತದೆ
1 ವರ್ಷದಿಂದ 18 ತಿಂಗಳು ಅವಧಿಗೆ - 8.60 ಪರ್ಸೆಂಟ್
888 ದಿನಗಳ ಅವಧಿಗೆ - 8.85 ಪರ್ಸೆಂಟ್
ಜನ ಸಣ್ಣ ಹಣಕಾಸು ಬ್ಯಾಂಕ್
7 ದಿನದಿಂದ 10 ವರ್ಷಗಳವರೆಗಿನ ನಿಶ್ಚಿತ ಠೇವಣಿಗೆ 5.10 ಪರ್ಸೆಂಟ್ ನಿಂದ 9.10 ಪರ್ಸೆಂಟ್ ಬಡ್ಡಿ ದರವನ್ನು ಈ ಬ್ಯಾಂಕ್ ಹಿರಿಯ ನಾಗರೀಕರ ನಿಶ್ಚಿತ ಠೇವಣಿಗೆ ಹೊಂದಿದೆ. 499 ದಿನಗಳ ನಿಶ್ಚಿತ ಠೇವಣಿಗೆ ಅತಿ ಹೆಚ್ಚಿನ ಬಡ್ಡಿದರವನ್ನು ಈ ಬ್ಯಾಂಕ್ ಹೊಂದಿದ್ದು 9.10 ಪರ್ಸೆಂಟ್ ದರದಲ್ಲಿ ಬಡ್ಡಿ ನೀಡುತ್ತದೆ. 3 ವರ್ಷಗಳ ಅವಧಿಯ ಠೇವಣಿಗೆ 9 ಪರ್ಸೆಂಟ್ ಬಡ್ಡಿ ದರ ಹೊಂದಿದೆ. ಅದೇ ಸಾಮಾನ್ಯ ನಾಗರೀಕರಿಗೆ 4.5 ಪರ್ಸೆಂಟ್ ನಿಂದ 8.5 ಪರ್ಸೆಂಟ್ ವರೆಗೂ ಬಡ್ಡಿದರವನ್ನು ಈ ಬ್ಯಾಂಕ್ ಯೋಜನೆ ಒಳಗೊಂಡಿದೆ.
499 ದಿನಗಳು ಅವಧಿಗೆ - 9.10 ಪರ್ಸೆಂಟ್
3 ವರ್ಷ (1095 ದಿನಗಳು) ಅವಧಿಗೆ - 9.00 ಪರ್ಸೆಂಟ್
ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್
ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್ ಹಿರಿಯ ನಾಗರೀಕರಿಗೆ 5.25 ನಿಂದ 9 ಪರ್ಸೆಂಟ್ ವರೆಗೆ ಬಡ್ಡಿ ದರವನ್ನು ಹೊಂದಿದೆ. ಇದು ೭ ದಿನಗಳಿಂದ ೧೦ ವರ್ಷಗಳ ಅವಧಿಯ ಠೇವಣಿ ಆಗಿದೆ. ಈ ಬ್ಯಾಂಕ್ ಅತಿ ಹೆಚ್ಚು ಬಡ್ಡಿ ದರವನ್ನು ನೀಡುವ ಠೇವಣಿ ಅವಧಿ 456 ದಿನಗಳಿಂದ 2 ವರ್ಷದೊಳಗಿನ ನಿಶ್ಚಿತ ಠೇವಣಿಗಳಾಗಿವೆ.
ಈ ಠೇವಣಿಗೆ ಹಿರಿಯ ನಾಗರೀಕರಿಗೆ 9 ಪರ್ಸೆಂಟ್ ಬಡ್ಡಿ ದರವನ್ನು ಹೊಂದಿದೆ. ಅದೇ ಸಾಮಾನ್ಯ ಗ್ರಾಹಕರಿಗೆ 4.75 ನಿಂದ 8.50 ಪರ್ಸೆಂಟ್ ಬಡ್ಡಿ ದರವನ್ನು ಹೊಂದಿದೆ.
456 ದಿನಗಳಿಂದ 2 ವರ್ಷದೊಳಗಿನ ಅವಧಿಗೆ - 9 ಪರ್ಸೆಂಟ್


Click it and Unblock the Notifications