For Quick Alerts
ALLOW NOTIFICATIONS  
For Daily Alerts

  ಬಜೆಟ್ (Budget) ಕುರಿತಾದ ಈ ಪ್ರಮುಖ ವಿಷಯಗಳು ನಿಮಗೆ ಗೊತ್ತೆ?

  By Siddu
  |

  ಕನ್ನಡ ಗುಡ್ ರಿಟರ್ನ್ಸ್ ಮೂಲಕ ಬಜೆಟ್ (ಆಯವ್ಯಯ) ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ನಮ್ಮ ಓದುಗರಿಗೆ ನೀಡುತ್ತಾ ಬಂದಿದ್ದೇವೆ. ಈ ಲೇಖನದ ಮೂಲಕ ಬಜೆಟ್ ಸಂಬಂಧಿತ ಪ್ರಮುಖ ಟರ್ಮ್ಸ್ (Terms) ಗಳ ಬಗ್ಗೆ ವಿವರಿಸಲಾಗುತ್ತಿದೆ.

  ಇನ್ನೇನು ಬಜೆಟ್ ಮಂಡನೆಯಾಗುವ ದಿನ ಹತ್ತಿರವಾಗುತ್ತಿದೆ. ಬಜೆಟ್ ನ ವಿವರಗಳನ್ನು ಎಳೆ ಎಳೆಯಾಗಿ ವಿವರಿಸುವ ವಿತ್ತಮಂತ್ರಿಗಳು ಕೆಲವು ವಿಶಿಷ್ಟ ಪದಗಳನ್ನು ಬಳಸಲಿದ್ದಾರೆ. ಬಜೆಟ್ ಮಂಡನೆಯ ದಿನ ಸುಮಾರು ಹತ್ತರಿಂದ ಹನ್ನೆರಡು ಪ್ರಮುಖ ಕಡತಗಳನ್ನು ಒಂದಾದ ಮೇಲೊಂದರಂತೆ ಓದಿ ವಿವರಿಸಲಿದ್ದಾರೆ. ಕೇಂದ್ರ ಬಜೆಟ್ ಎಂದರೇನು?

  ಇವುಗಳಲ್ಲಿ ಅತ್ಯಂತ ಪ್ರಮುಖವಾದ ಕಡತವೆಂದರೆ ವಾರ್ಷಿಕ ಹಣಕಾಸು ಹೇಳಿಕೆ (Annual Financial Statement). ಅಂದು ಈ ಪದಗಳೆಂದರೇನು? ಇವುಗಳ ಮಹತ್ವವೇನು ಎಂದೆಲ್ಲಾ ತಿಳಿದುಕೊಳ್ಳಲು ಸಮಯವಿರುವುದಿಲ್ಲ. ಹಾಗಾಗಿ ಬಜೆಟ್ ಗೂ ಮುಂಚಿತವಾಗಿಯೇ ಈ ವಿಷಯಗಳನ್ನು ಅರಿತಿರುವ ಮೂಲಕ ಬಜೆಟ್ ನಲ್ಲಿ ನೀಡಲಾಗುವ ವಿವರಗಳನ್ನು ಇನ್ನಷ್ಟು ಸ್ಪಷ್ಟವಾಗಿ ಅರಿತುಕೊಳ್ಳಲು ಸಾಧ್ಯ.

  ವಾರ್ಷಿಕ ಹಣಕಾಸು ಹೇಳಿಕೆ (Annual Financial Statement)

  ಭಾರತ ಸಂವಿಧಾನದ 112 ನೇ ವಿಧಿಯ ಪ್ರಕಾರ ಪ್ರತಿ ವರ್ಷವೂ ಸರ್ಕಾರ ಹಣಕಾಸು ವರ್ಷದ (ಪ್ರತಿ ಏಪ್ರಿಲ್ ಒಂದರಿಂದ ಮರುವರ್ಷದ ಮಾರ್ಚ್ 31ರವರೆಗೆ) ಆದಾಯ ಮತ್ತು ಖರ್ಚುಗಳ ಲೆಕ್ಕಾಚಾರವನ್ನು ಸಂಸತ್ತಿಗೆ ಒದಗಿಸಬೇಕು. ಒಂದು ವರ್ಷದ ಎಲ್ಲಾ ಖರ್ಚುಗಳ ವಿವರಗಳಿರುವ ಈ ವರದಿಯನ್ನೇ ವಾರ್ಷಿಕ ಆರ್ಥಿಕ ಹೇಳಿಕೆ ಎಂದು ಕರೆಯಲಾಗುತ್ತದೆ.

  ಈ ವರದಿ ಸುಮಾರು ಹತ್ತು ಪುಟಗಳಷ್ಟಿರುತ್ತದೆ. ಒಟ್ಟು ವರದಿಯನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾರುತ್ತದೆ. ಮೊದಲನೆಯದಾಗಿ ಏಕೀಕೃತ ನಿಧಿ, ಎರಡನೆಯದಾಗಿ ಆಕಸ್ಮಿಕ ನಿಧಿ ಹಾಗೂ ಅಂತಿಮವಾಗಿ ಸಾರ್ವಜನಿಕ ನಿಧಿ. ಈ ಮೂರೂ ನಿಧಿಗಳಿಗೆ ಹಿಂದಿನ ವರ್ಷ ಪಡೆದ ಮೊತ್ತ ಮತ್ತು ಈ ಮೊತ್ತವನ್ನು ಹೇಗೆ ಬಳಸಿಕೊಳ್ಳಲಾಯಿತು ಎಂಬುದನ್ನು ವಿತ್ತ ಸಚಿವರು ವಿವರವಾಗಿ ತಿಳಿಸುತ್ತಾರೆ.

  ಏಕೀಕೃತ ನಿಧಿ (Consolidated Fund )

  ಸರ್ಕಾರದ ಎಲ್ಲಾ ನಿಧಿಗಳ ಪೈಕಿ ಈ ನಿಧಿ ಅತ್ಯಂತ ಮುಖ್ಯವಾಗಿದೆ. ಸರ್ಕಾರದ ಒಟ್ಟಾರೆ ಆದಾಯ, ಪಡೆದ ಹಣಸಹಾಯ ಹಾಗೂ ಭಾರತದ ಏಕೀಕೃತ ನಿಧಿಗೆ ಸರ್ಕಾರವೇ ನೀಡಿದ ಸಾಲಗಳ ಪಾವತಿಗಳು ಇದರಲ್ಲಿ ಒಳಗೊಂಡಿರುತ್ತವೆ. ಈ ನಿಧಿಯಿಂದ ಆಕಸ್ಮಿಕ ನಿಧಿ ಅಥವಾ ಸಾರ್ವಜನಿಕ ಖಾತೆಯಿಂದ ಕೆಲವು ವಿನಾಯಿತಿ ಪಡೆದ ವಸ್ತುಗಳಿಗೆ ಭರಿಸುವ ಖರ್ಚುಗಳನ್ನು ಹೊರತುಪಡಿಸಿ ಸರ್ಕಾರದ ಉಳಿದ ಎಲ್ಲಾ ಖರ್ಚುಗಳನ್ನು ಭರಿಸಲಾಗುತ್ತದೆ. ಆದರೆ ಈ ನಿಧಿಯಿಂದ ಖರ್ಚು ಮಾಡುವ ಯಾವುದೇ ಹಣಕ್ಕೆ ಸಂಸತ್ತಿನ ಅನುಮೋದನೆ ಅಗತ್ಯವಾಗಿರುತ್ತದೆ.

  ಆಕಸ್ಮಿಕ ನಿಧಿ (Contingency Fund )

  ಹೆಸರೇ ತಿಳಿಸುವಂತೆ ಈ ನಿಧಿಯನ್ನು ತುರ್ತು, ಆಕಸ್ಮಿಕ ಅಥವಾ ಊಹಿಸದೇ ಎದುರಾಗುವ ಖರ್ಚುಗಳನ್ನು ಭರಿಸಲು ಬಳಸಲಾಗುತ್ತದೆ. ಈ ನಿಧಿಯಲ್ಲಿ ಸುಮಾರು ಐನೂರು ಕೋಟಿ ರೂಪಾಯಿಗಳನ್ನು ಸದಾ ಸಿದ್ಧವಾಗಿ ಇರಿಸಿರಲಾಗಿದ್ದು ಕೇವಲ ರಾಷ್ಟ್ರಪತಿಗಳು ಮಾತ್ರ ಈ ನಿಧಿಯನ್ನು ಖರ್ಚು ಮಾಡಲು ಅನುಮತಿ ನೀಡುವ ಅರ್ಹತೆ ಹೊಂದಿದ್ದಾರೆ. ಅಲ್ಲದೇ ಈ ನಿಧಿಯಿಂದ ಹಣವನ್ನು ಬಳಸಿಕೊಳ್ಳುವ ಯೋಜನೆಗಳಿಗೆ ಸಂಸತ್ತಿನ ಅನುಮೋದನೆಯೂ ಅಗತ್ಯವಿರುತ್ತದೆ ಹಾಗೂ ತುರ್ತು ಪರಿಸ್ಥಿತಿ ಸುಧಾರಿಸಿದ ತಕ್ಷಣ ಏಕೀಕೃತ ನಿಧಿಯಿಂದ ಈ ಮೊತ್ತವನ್ನು ಹಿಂದಿರುಗಿಸಿ ಒಟ್ಟು ಮೊತ್ತವನ್ನು ಹಾಗೇ ಉಳಿಸಿಕೊಳ್ಳುವಂತೆ ಮಾಡಲಾಗುತ್ತದೆ.

  ಸಾರ್ವಜನಿಕ ಖಾತೆ (Public Account )

  ಈ ನಿಧಿಯಲ್ಲಿ ಸರ್ಕಾರ ಒಂದು ಬ್ಯಾಂಕಿನಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ಹಲವು ಕಡೆಗಳಿಂದ ಹಣದ ಹರಿವು ಒಳಬರುವಂತೆ ನೋಡಿಕೊಳ್ಳುತ್ತದೆ. ಉದಾಹರಣೆಗೆ ಪ್ರಾವಿಡೆಂಟ್ ಫಂಡ್, ಸಣ್ಣ ಉಳಿತಾಯ ಇತ್ಯಾದಿ. ಈ ನಿಧಿ ವಾಸ್ತವವಾಗಿ ಸರ್ಕಾರದ ಆಧೀನದಲ್ಲಿರುತ್ತದೆಯೋ ಹೊರತು ಇದು ಸರ್ಕಾರದ ಸ್ವತ್ತಲ್ಲ, ಸಾರ್ವಜನಿಕರದ್ದು. ಅಲ್ಲದೇ ಸಮಯಕ್ಕೆ ಸರಿಯಾಗಿ ಸಾರ್ವಜನಿಕರ ಅಗತ್ಯ ಪೂರೈಸಲು ಈ ನಿಧಿಯನ್ನು ಆಯಾ ಮೊತ್ತದ ಮಾಲಿಕರಿಗೆ ಹಿಂದಿರುಗಿಸಲೂಬೇಕಾಗುತ್ತದೆ. ಇದೇ ಕಾರಣಕ್ಕಾಗಿ ಈ ನಿಧಿಯಿಂದ ಹಣವನ್ನು ಖರ್ಚು ಮಾಡಲು ಸಂಸತ್ತಿನ ಅನುಮೋದನೆಯ ಅಗತ್ಯವಿಲ್ಲ.

  ಮೇಲೆ ವಿವರಿಸಿದ ಎಲ್ಲಾ ನಿಧಿಗಳಿಗೂ ಸರ್ಕಾರ ಆಯಾ ವರ್ಷದ ಖರ್ಚುವೆಚ್ಚಗಳ ಲೆಕ್ಕಾಚಾರವನ್ನು ತಿಳಿಸಬೇಕಾಗುತ್ತದೆ. ಈ ಎಲ್ಲಾ ನಿಧಿಗಳಿಗೆ ಸಂದಾಯವಾಗುವ ಮೊತ್ತವನ್ನು ಆದಾಯ (revenue) ಎನ್ನುವ ಬದಲು ಪಾವತಿ (receipts) ಅಥವಾ ನಿಧಿ ಪಾವತಿ (funds received) ಎಂದು ಕರೆಯಲಾಗುತ್ತದೆ. ಬಜೆಟ್ ನಲ್ಲಿ ಆದಾಯ ಎನ್ನುವ ಪದಕ್ಕೆ ಬೇರೆಯೇ ವ್ಯಾಖ್ಯಾನವಿದೆ.

  ಸಂವಿಧಾನದಲ್ಲಿ ತಿಳಿಸಿರುವಂತೆ ಆದಾಯ ಹಾಗೂ ಪಾವತಿಗಳನ್ನು ಅದಾಯ ಖಾತೆ ಹಾಗೂ ಇತರ ಖರ್ಚುಗಳೆಂದು ಬಜೆಟ್ ನಲ್ಲಿ ವಿಂಗಡಿಸಿಯೇ ತೋರಿಸಬೇಕಾಗುತ್ತದೆ. ಆದ್ದರಿಂದ ಎಲ್ಲಾ ಪಾವತಿಗಳನ್ನು, ಉದಾಹರಣೆಗೆ ಏಕೀಕೃತ ನಿಧಿ, ಆದಾಯ ಬಜೆಟ್ (revenue account) ಹಾಗೂ ಕ್ಯಾಪಿಟಲ್ ಬಜೆಟ್ (capital account) ಎಂದು ವರ್ಗೀಕರಿಸಿ ಇವುಗಳಲ್ಲಿ ಆದಾಯರಹಿತ ಪಾವತಿ ಹಾಗೂ ಖರ್ಚುಗಳೂ ಒಳಗೊಂಡಿರುವಂತೆ ನೋಡಿಕೊಳ್ಳಲಾಗುತ್ತದೆ. ಆದಾಯ ಬಜೆಟ್ ಹಾಗೂ ಕ್ಯಾಪಿಟಲ್ ಬಜೆಟ್ ಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಆದಾಯ ಪಾವತಿ, ಆದಾಯದ ಖರ್ಚು, ಕ್ಯಾಪಿಟಲ್ ಪಾವತಿ ಹಾಗೂ ಕ್ಯಾಪಿಟಲ್ ಖರ್ಚುಗಳ ಬಗ್ಗೆ ಸರಿಯಾದ ಮಾಹಿತಿ ಹೊಂದಿರುವುದು ಅವಶ್ಯವಾಗಿದೆ.

   

  ಆದಾಯ ಪಾವತಿ/ವೆಚ್ಚ (Revenue receipt/Expenditure )

  ಸಾಮಾನ್ಯವಾಗಿ ಆದಾಯ ಮತ್ತು ಆಸ್ತಿಗಳ ಸೃಷ್ಟಿಗೆ ಒಳಪಡದ ಎಲ್ಲಾ ಆದಾಯ ಮತ್ತು ವೆಚ್ಚಗಳನ್ನು ಆದಾಯ ಖಾತೆಯಲ್ಲಿ ಸೇರಿಸಲಾಗುತ್ತದೆ. ಪಾವತಿಯ ವಿಷಯ ಬಂದಾಗ ಇದರಲ್ಲಿ ತೆರಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಖರ್ಚುಗಳ ವಿಷಯ ಬಂದಾಗ ಯಾವ ಖರ್ಚಿನಲ್ಲಿ ಆಸ್ತಿಯನ್ನು ಗಳಿಸಲು ಸಾಧ್ಯವಿಲ್ಲವೋ ಈ ಖರ್ಚನ್ನು ಅದಾಯ ವೆಚ್ಚ ಎಂದು ಕರೆಯಲಾಗುತ್ತದೆ. ಸರ್ಕಾರಿ ನೌಕರರ ವೇತನ, ಸಬ್ಸಿಡಿ ಹಾಗೂ ಬಡ್ಡಿಗೆ ನೀಡಲಾಗುವ ಮೊತ್ತ ಎಲ್ಲವನ್ನೂ ಒಟ್ಟಾರೆಯಾಗಿ ಆದಾಯ ವೆಚ್ಚ ಎಂದು ಕರೆಯಲಾಗುತ್ತದೆ.

  ಕ್ಯಾಪಿಟಲ್ ರಸೀದಿ/ವೆಚ್ಚ (Capital receipt/Expenditure)

  ಒಂದು ಆಸ್ತಿಯನ್ನು ಖರೀದಿಸಬಲ್ಲ ಆದಾಯ ಅಥವಾ ಆಸ್ತಿಯನ್ನು ಕರಗಿಸಬಲ್ಲ ವೆಚ್ಚಗಳನ್ನು ಕ್ಯಾಪಿಟಲ್ ಅಥವಾ ಬಂಡವಾಳ ಖಾತೆಗೆ ಸೇರಿಸಲಾಗುತ್ತದೆ. ಉದಾಹರಣೆಗೆ ಹಿಂದೆ ಮಾರುತಿ ಸಂಸ್ಥೆಯಲ್ಲಿ ಹೂಡಿದಂತೆ ಒಂದು ವೇಳೆ ಸರ್ಕಾರವೇ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಲ್ಲಿ ಶೇರುಗಳನ್ನು ಮಾರಿದರೆ (ಕೆಟ್ಟ ಬಂಡವಾಳ) ಇದರ ಪರಿಣಾಮವಾಗಿ ಆಸ್ತಿಯನ್ನು ಮಾರುವ ಪರಿಣಾಮ ಎದುರಿಸಬೇಕಾಗುತ್ತದೆ. ಈ ಮಾರಾಟದಿಂದ ಲಭ್ಯವಾದ ಮೊತ್ತ ಕ್ಯಾಪಿಟಲ್ ಖಾತೆಗೆ ಜಮಾ ಆಗುತ್ತದೆ. ಇನ್ನೊಂದು ಕಡೆಯಿಂದ, ಒಂದು ವೇಳೆ ಸರ್ಕಾರವೇ ಇತರರಿಗೆ ಸಾಲವನ್ನು ನೀಡಿ ಇದಕ್ಕೆ ಬಡ್ಡಿಯನ್ನು ಪಡೆಯುವ ಬಯಕೆ ಹೊಂದಿದ್ದರೆ ಈ ಖರ್ಚು ಸಹಾ ಕ್ಯಾಪಿಟಲ್ ಖಾತೆಯಲ್ಲಿ ಸೇರಿಸಲ್ಪಡುತ್ತದೆ.

  ಈ ಎಲ್ಲಾ ನಿಧಿಗಳ ಕುರಿತು ಸರ್ಕಾರ ಒಂದು ಆದಾಯ ಬಜೆಟ್ (ಆದಾಯ ಪಾವತಿ ಹಾಗೂ ಆದಾಯ ವೆಚ್ಚಗಳ ವಿವರಗಳನ್ನು ಒಳಗೊಂಡಿರುತ್ತದೆ) ಹಾಗೂ ಒಂದು ಕ್ಯಾಪಿಟಲ್ ಬಜೆಟ್ (ಕ್ಯಾಪಿಟಲ್ ಪಾವತಿ ಹಾಗೂ ಕ್ಯಾಪಿಟಲ್ ವೆಚ್ಚ) ಅನ್ನು ತಯಾರಿಸಬೇಕಾಗುತ್ತದೆ. ಇದರಲ್ಲಿ ಅಕಸ್ಮಿಕ ನಿಧಿ, ಇದರ ಹೆಸರೇ ಸೂಚಿಸುವಂತೆ ಬಜೆಟ್ ನಲ್ಲಿ ಇದರ ಪಾತ್ರ ಮುಖ್ಯವಾಗಿಲ್ಲ. ಸಾರ್ವಜನಿಕ ಖಾತೆ ಇಲ್ಲಿ ಅತಿ ಮುಖ್ಯವಾಗಿದ್ದು ಇದರಲ್ಲಿ ಉಳಿತಾಯದ ಎಷ್ಟು ಮೊತ್ತ ಸಂಗ್ರಹವಾಗಿದೆ ಹಾಗೂ ಈ ಮೊತ್ತವನ್ನು ಹೇಗೆ ಬಳಸಬಹುದು ಎಂದು ಪರಿಗಣಿಸಲಾಗುತ್ತದೆ. ಆದರೆ ಬಜೆಟ್ ನ ದೃಷ್ಟಿಯಿಂದಲ್ಲ. ಆದರೆ ಎಲ್ಲಾ ನಿಧಿಗಳ ಒಟ್ಟು ಮೊತ್ತ ಬಜೆಟ್ ಗೆ ಮುಖ್ಯವಾಗಿದೆ.

  ಫ್ರಿಂಜ್ ಲಾಭ ತೆರಿಗೆ (Fringe benefit tax (FBT)

  ಓರ್ವ ಉದ್ಯಮಿ ತನ್ನ ಉದ್ಯೋಗಿಗಳಿಗೆ ವೇತನದ ಹೊರತಾಗಿ ನೀಡುವ ಭಕ್ಷೀಸು ಮೊದಲಾದ ಹೆಚ್ಚುವರಿ ಮೊತ್ತಕ್ಕೆ ವಿಧಿಸುವ ತೆರಿಗೆಯನ್ನು ಫ್ರಿಂಜ್ ಟ್ಯಾಕ್ಸ್ ಎಂದು ಕರೆಯಲಾಗುತ್ತದೆ. ಈ ವೆಚ್ಚವನ್ನು 2005-06 ರ ಬಜೆಟ್ ನಲ್ಲಿ ಪ್ರಸ್ತುತಪಡಿಸಿ ಪ್ರಾರಂಭಿಸಲಾಗಿತ್ತು. ಏಕೆಂದರೆ ಎಷ್ಟೋ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಹೆಚ್ಚುವರಿ ಭಕ್ಷೀಸುಗಳನ್ನು ನೀಡುವ ಹೆಸರಿನಲ್ಲಿ ತಮ್ಮ ಕ್ಲಬ್ ವೆಚ್ಚಗಳನ್ನು ಸಾಮಾನ್ಯವಾದ ವ್ಯಾಪಾರದ ವೆಚ್ಚಗಳು ಎಂದಾಗಿ ಪರಿವರ್ತಿಸಿಕೊಳ್ಳುತ್ತಿದ್ದುದು ಕಂಡುಬಂದಿತ್ತು. ಈ ಮೂಲಕ ತೆರಿಗೆ ನೀಡುವುದರಿಂದ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಈಗ ಈ ಬಗೆಯ ವೆಚ್ಚಗಳಿಗೂ ಸಂಸ್ಥೆಗಳು FBT ಎಂಬ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

  ಭದ್ರತಾ ವ್ಯವಹಾರ ತೆರಿಗೆ (Securities transaction tax)

  ಒಂದು ಆಸ್ತಿ (ಶೇರು ಅಥವಾ ಕಟ್ಟಡ) ಮಾರಿದಾಗ ಇದರಲ್ಲಿ ಲಾಭವೂ ಆಗಬಹುದು, ನಷ್ಟವೂ ಆಗಬಹುದು. ಈ ಆಸ್ತಿಯನ್ನು ಎಷ್ಟು ಕಾಲ ಮಾಲಿಕತ್ವ ವಹಿಸಿದ್ದರು ಎಂಬ ಮಾಹಿತಿಯನ್ನು ಆಧರಿಸಿ ಈ ವಹಿವಾಟಿನಲ್ಲಿ ಲಭಿಸಿದ ಲಾಭ/ನಷ್ಟಗಳನ್ನು ಅಲ್ಪವಾಧಿ ಅಥವಾ ದೀರ್ಘಾವಧಿಯ ಕ್ಯಾಪಿಟಲ್ ಲಾಭ/ನಷ್ಟ ಎಂದು ಕರೆಯಲಾಗುತ್ತದೆ. 2004-05ರ ಬಜೆಟ್ ನಲ್ಲಿ ಸರ್ಕಾರ ದೀರ್ಘಾವಧಿಯ ಕ್ಯಾಪಿಟಲ್ ಆದಾಯ ತೆರಿಗೆಯನ್ನು ರದ್ದು ಮಾಡಿತು (ಈ ಶೇರುಗಳನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಹೊಂದಿರುವುದು ಅವಶ್ಯ) ಆದರೆ ಇದರ ಬದಲಿಗೆ STT ಎಂಬ ತೆರಿಗೆಯನ್ನು ಪ್ರಾರಂಭಿಸಿತು. ಇದೊಂದು ವಹಿವಾಟಿಗೆ ಸಂಬಂಧಿಸಿದ ತೆರಿಗೆಯಾಗಿದ್ದು ಇದರಲ್ಲಿ ಹೂಡಿಕೆದಾರ ತನ್ನ ಶೇರುಗಳ ವಿಲೇವಾರಿಯಲ್ಲಿ ಹೂಡಿದ ಹಣದ ಮೇಲೆ ಚಿಕ್ಕ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

  ಬ್ಯಾಂಕಿಂಗ್ ನಗದು ವಿಲೇವಾರಿ ತೆರಿಗೆ (Banking cash transaction tax)

  2005-06 ರ ಬಜೆಟ್ ನಲ್ಲಿ ಈ ತೆರಿಗೆಯನ್ನು ಪ್ರಾರಂಭಿಸಲಾಯಿತು. ಬ್ಯಾಂಕಿನಿಂದ ಒಂದು ನಿರ್ದಿಷ್ಟ ಮೊತ್ತಕ್ಕೂ ಹೆಚ್ಚಿನ ಹಣವನ್ನು ಒಂದು ದಿನದಲ್ಲಿ ನಗದು ರೂಪದಲ್ಲಿ ಪಡೆಯಬೇಕಾದರೆ ಒಂದು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ತೆರಿಗೆಯ ಉದ್ದೇಶವೆಂದರೆ ಕಪ್ಪು ಹಣವನ್ನು ನಿಯಂತ್ರಿಸುವುದು ಹಾಗೂ ದೊಡ್ಡ ಮೊತ್ತದ ಹಣದ ವಿಲೇವಾರಿಯ ವಿವರಗಳನ್ನು ಕಲೆಹಾಕುವುದಾಗಿದೆ.

  ಕಸ್ಟಮ್ಸ್ (Customs)

  ಇದು ಆಮದುಗಳ ಮೇಲೆ ವಿಧಿಸುವ ತೆರಿಗೆಯಾಗಿದೆ. ಈ ತೆರಿಗೆಯ ಮೂಲಕ ಸರ್ಕಾರಕ್ಕೆ ಆದಾಯ ತರುವುದು ಮೊದಲ ಆದ್ಯತೆಯಾಗಿದೆ. ಆದರೆ ಇದೇ ಸಮಯದಲ್ಲಿ ಸ್ಥಳೀಯ ಕೈಗಾರಿಕೆಗಳನ್ನು ಕಾಪಾಡುವುದೂ ಆಗಿದೆ (ಉದಾಹರಣೆಗೆ ಕೃಷಿ, ವಾಹನ ಉತ್ಪಾದನೆ). ಈ ನಿಟ್ಟಿನಲ್ಲಿ ವಿದೇಶೀಯರು ತಮ್ಮ ಉತ್ಪನ್ನಗಳನ್ನು ನಮ್ಮ ದೇಶದಲ್ಲಿ ಕಡಿಮೆ ಬೆಲೆಯಲ್ಲಿ ಮಾರಲು ಸಾಧ್ಯವಾಗದೇ ಇರುವ ಮೂಲಕ ದೇಸೀ ಕೈಗಾರಿಕೆಗಳಿಗೆ ಬೆಂಬಲ ನೀಡಿದಂತಾಗುತ್ತದೆ.

  ಯೂನಿಯನ್ ಎಕ್ಸೈಸ್ ಡ್ಯೂಟಿ (Union Excise Duty)

  ಇದು ಭಾರತದಲ್ಲಿಯೇ ತಯಾರಾದ ವಸ್ತುಗಳಿಗೆ ಸರ್ಕಾರ ವಿಧಿಸುವ ತೆರಿಗೆಯಾಗಿದೆ.
  ಸೇವಾ ತೆರಿಗೆ (Service Tax)
  ಸೇವೆಗಳ ಮೇಲೆ ವಿಧಿಸುವ ತೆರಿಗೆಯನ್ನು ಸೇವಾ ತೆರಿಗೆ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಟೆಲಿಫೋನ್ ಬಿಲ್ ನ ಮೊತ್ತದಲ್ಲಿ ಈ ತೆರಿಗೆ ಒಳಗೊಂಡಿರುತ್ತದೆ.

  ಪ್ರತ್ಯಕ್ಷ ತೆರಿಗೆ (Direct Tax)

  ಸ್ಪಷ್ಟವಾಗಿ ಹೇಳಬೇಕೆಂದರೆ ಜನತೆಗೆ ಭಾರಿಯಾಗಿ ಪರಿಣಮಿಸುವ ಹಾಗೂ ಇವರ ಆದಾಯದ ಮೇಲೆ ನೇರವಾಗಿ ಅವಲಂಬಿಸಿರುವ ಯಾವುದೇ ತೆರಿಗೆಗಳು ಪ್ರತ್ಯಕ್ಷ ತೆರಿಗೆಗಳಾಗುತ್ತವೆ. ಉದಾಹರಣೆಗೆ ಆದಾಯ ಹಾಗೂ ಆಸ್ತಿ ತೆರಿಗೆ. ಉದ್ಯಮ ಹಾಗೂ ವ್ಯಕ್ತಿಗಳ ವೈಯಕ್ತಿಯ ಆದಾಯದ ಮೇಲೆ ಆದಾಯ ತೆರಿಗೆ ವಿಧಿಸಲಾಗುತ್ತದೆ. ಅಲ್ಲದೇ FBT, STT ಹಾಗೂ BCTT ತೆರಿಗೆಗಳೂ ಪ್ರತ್ಯಕ್ಷ ತೆರಿಗೆಗಳಾಗಿವೆ.

  ಪರೋಕ್ಷ ತೆರಿಗೆ (Indirect Tax)

  ಈ ತೆರಿಗೆಯನ್ನು ವ್ಯಕ್ತಿಯ ಮೇಲೆ ನೇರವಾಗಿ ಹೇರಲಾಗುವುದಿಲ್ಲ. ಬದಲಿಗೆ ಇತರ ರೂಪಗಳಲ್ಲಿ ಸಂಗ್ರಹಿಸಲಾಗುತ್ತದೆ. ಕಸ್ಟಮ್ಸ್, ಅಬಕಾರಿ ಹಾಗೂ ಸೇವಾ ತೆರಿಗೆಗಳು ಪರೋಕ್ಷ ತೆರಿಗೆಗಳಾಗುತ್ತವೆ.
  ಪರೋಕ್ಷ ತೆರಿಗೆಗಳು ಎಲ್ಲರಿಗೂ ಸಮಾನವಾಗಿದ್ದು ಇದರ ಹೊರೆ ಬಡವರೂ ಶ್ರೀಮಂತರೂ ಏಕಸಮಾನವಾಗಿ ಹೊರಬೇಕಾಗುತ್ತದೆ. ಇದೇ ಕಾರಣಕ್ಕೆ ಭಾರತ ಸರ್ಕಾರ ಹೆಚ್ಚಿನ ತೆರಿಗೆಯನ್ನು ಪ್ರತ್ಯಕ್ಷ ತೆರಿಗೆಯ ರೂಪದಲ್ಲಿಯೇ ಪಡೆಯಲು ಹೆಚ್ಚಿನ ಅಸ್ಥೆ ವಹಿಸುತ್ತದೆ.

  English summary

  Budget Glossary: Important terms to know

  On the Budget day, the finance minister tables 10-12 documents. Of these, the main and most important document is the Annual Financial Statement.
  Story first published: Saturday, January 20, 2018, 11:11 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more