ಪಿಪಿಎಫ್‌ಗಿಂತ ಸುಕನ್ಯಾ ಸಮೃದ್ಧಿ ಯೋಜನೆಯೇ ಬೆಸ್ಟ್, ಲಾಭ ಪಡೆಯುವುದು ಹೇಗೆ?
ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಹಾಗೂ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಇವೆರಡೂ ಯೋಜನೆಗಳು ಅತ್ಯಂತ ಸುರಕ್ಷಿತವಾದ ಸಣ್ಣ ಉಳಿತಾಯ ಯೋಜನೆಗಳಾಗಿದ್ದು, ಎರಡರಲ್ಲಿಯೂ ತೆರಿಗೆ ವಿನಾಯಿತಿಯ ಸೌಲಭ್ಯವಿದೆ. ಇವುಗಳಲ್ಲಿನ ಹೂಡಿಕೆಗಳಿಗೆ ಭಾರತ ಸರಕಾರದಿಂದ ಸುರಕ್ಷೆಯ ಖಾತರಿ ಇದ್ದು, ಹಲವಾರು ರೀತಿಯ ತೆರಿಗೆ ವಿನಾಯಿತಿ ನೀಡಲಾಗಿದೆ.
ಈ ಯೋಜನೆಗಳಲ್ಲಿ ಪ್ರತಿವರ್ಷ ತೊಡಗಿಸುವ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ ೮೦ಸಿ ಅನ್ವಯ ತೆರಿಗೆ ವಿನಾಯಿತಿ ಇದ್ದು, ಹೂಡಿಕೆ ಮಾಡಲಾದ ಮೊತ್ತಕ್ಕೆ ಸಿಗುವ ಬಡ್ಡಿ ಹಾಗೂ ಪಕ್ವತಾ ಮೊತ್ತಗಳು ಸಹ ತೆರಿಗೆಯಿಂದ ಮುಕ್ತವಾಗಿವೆ. ಅಂದರೆ ಎರಡೂ ಯೋಜನೆಗಳು ಮೂರು ರೀತಿಯ ತೆರಿಗೆ ವಿನಾಯಿತಿಗೆ ಒಳಪಟ್ಟಿವೆ.
ಹೂಡಿದ ಬಂಡವಾಳಕ್ಕೆ ಸಂಪೂರ್ಣ ಸುರಕ್ಷತೆ ಹಾಗೂ ತೆರಿಗೆ ವಿನಾಯಿತಿ ಅಷ್ಟೇ ಅಲ್ಲದೆ ಇವುಗಳಲ್ಲಿ ಸಿಗುವ ಬಡ್ಡಿ ದರ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿದರಗಳಿಗಿಂತಲೂ ಅಧಿಕವಾಗಿದೆ ಎನ್ನುವುದು ವಿಶೇಷ. ಆದರೂ ಪಿಪಿಎಫ್ ಗಿಂತಲೂ ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ರೂಪಿಸಲಾಗಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿನ ಬಡ್ಡಿದರ ಹೆಚ್ಚಾಗಿದೆ. ಪ್ರಸ್ತುತ ಜಾರಿಯಲ್ಲಿರುವಂತೆ ಎಸ್‌ಎಸ್‌ವೈಗೆ ವಾರ್ಷಿಕ ಶೇ. ೮.೫ ಹಾಗೂ ಪಿಪಿಎಫ್‌ಗೆ ಶೇ. 8 ಬಡ್ಡಿದರ ನಿಗದಿಪಡಿಸಲಾಗಿದೆ.
ಪ್ಯಾನ್ ಕಾರ್ಡ್ ಹೊಂದಿರುವ ಯಾರೇ ಆದರೂ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು. ಆದರೆ ಹೆಣ್ಣು ಮಗುವಿನ ಪಾಲಕರು ಅಥವಾ ಅಧಿಕೃತ ಪೋಷಕರು ಮಾತ್ರ ತಮ್ಮ ಹೆಣ್ಣು ಮಗುವಿನ ಹೆಸರಲ್ಲಿ ಎಸ್‌ಎಸ್‌ವೈನಲ್ಲಿ ಹೂಡಿಕೆ ಮಾಡಬಹುದು.

ಖಾತೆ ಆರಂಭ
ಹೆಣ್ಣು ಮಗುವಿನ ಪಾಲಕರು ಅಥವಾ ಕಾನೂನಾತ್ಮಕ ಪೋಷಕರು ಮಗುವಿನ ಹೆಸರಲ್ಲಿ ಯಾವುದೇ ಅಂಚೆ ಕಚೇರಿ ಶಾಖೆಯಲ್ಲಿ ಅಥವಾ ವಾಣಿಜ್ಯ ಬ್ಯಾಂಕ್ ಶಾಖೆಯಲ್ಲಿ ಎಸ್‌ಎಸ್‌ವೈ ಖಾತೆ ತೆರೆಯಬಹುದು. ಮಗುವಿಗೆ 10 ವರ್ಷ ಪೂರ್ಣಗೊಳ್ಳುವ ಮುಂಚೆ ಮಗುವಿನ ಜನನ ನೋಂದಣಿ ದಾಖಲೆಯನ್ನು ಹಾಜರುಪಡಿಸಿ ಖಾತೆ ಆರಂಭಿಸಬಹುದು. ಮಗುವಿನ ನೈಸರ್ಗಿಕ ಪಾಲಕರು ಗರಿಷ್ಠ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಪ್ರತ್ಯೇಕವಾಗಿ ಖಾತೆ ತೆರೆಯಬಹುದು. ಮೊದಲ ಹೆಣ್ಣು ಮಗುವಿನ ನಂತರ ಎರಡನೇ ಬಾರಿ ಅವಳಿ ಹೆಣ್ಣು ಮಕ್ಕಳು ಜನಿಸಿದ ಸಂದರ್ಭಕ್ಕೆ ಈ ನಿಯಮ ಅನ್ವಯಿಸುವುದಿಲ್ಲ. ಒಂದು ವೇಳೆ ಖಾತೆ ಇರುವ ಬ್ಯಾಂಕ್ ಅಥವಾ ಅಂಚೆ ಕಚೇರಿ ಶಾಖೆಯ ಸೇವೆಯು ತೃಪ್ತಿಕರವಾಗಿರದಿದ್ದರೆ ಖಾತೆಯನ್ನು ಬೇರೆ ಶಾಖೆಗೆ ವರ್ಗಾವಣೆ ಮಾಡಬಹುದು. ಹಾಗೆಯೇ ಬ್ಯಾಂಕಿನಿಂದ ಅಂಚೆ ಕಚೇರಿಗೆ ಮತ್ತು ಅಂಚೆ ಕಚೇರಿಯಿಂದ ಬ್ಯಾಂಕ್ ಶಾಖೆಗೆ ಸಹ ಖಾತೆ ವರ್ಗಾವಣೆಗೆ ಅವಕಾಶವಿದೆ.

ಮೊತ್ತ ಜಮೆ, ದಂಡ ಪ್ರಮಾಣ
ವರ್ಷಕ್ಕೆ ಕನಿಷ್ಠ 250 ರೂಪಾಯಿಗಳನ್ನು (ಈ ಮುನ್ನ ಇದು 1000 ರೂ. ಇತ್ತು) ಖಾತೆಗೆ ಜಮೆ ಮಾಡಬಹುದು. ಒಂದು ವೇಳೆ ಕನಿಷ್ಠ ಮೊತ್ತವನ್ನು ಜಮಾ ಮಾಡದಿದ್ದರೆ ವರ್ಷಕ್ಕೆ ೫೦ ರೂ. ದಂಡ ವಿಧಿಸಲಾಗುತ್ತದೆ. ನೂರರ ಗುಣಕಗಳಲ್ಲಿ ಮೊತ್ತವನ್ನು ಪಾವತಿ ಮಾಡಬಹುದು. ಒಂದು ನಿರ್ದಿಷ್ಟ ತಿಂಗಳಲ್ಲಿ ಅಥವಾ ಒಂದು ಆರ್ಥಿಕ ವರ್ಷದಲ್ಲಿ ಏಕಗಂಟಿನಲ್ಲಿ ಅಥವಾ ಕಂತುಗಳಲ್ಲಿ ಗರಿಷ್ಠ 1 ಲಕ್ಷ 50 ಸಾವಿರ ರೂಪಾಯಿ ಜಮಾ ಮಾಡಲು ಅವಕಾಶವಿದೆ. ಇದಕ್ಕೆ ಕಂತುಗಳ ಸಂಖ್ಯೆಯ ಮಿತಿಯನ್ನು ವಿಧಿಸಲಾಗಿಲ್ಲ.

ಡಿಫಾಲ್ಟ್ ಖಾತೆ
ಒಂದು ವೇಳೆ ಯಾವುದೇ ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಕನಿಷ್ಠ 250 ರೂ. ಕಂತು ಪಾವತಿ ಮಾಡದಿದ್ದರೆ ಅಂಥ ಖಾತೆಯನ್ನು 'ಡಿಫಾಲ್ಟ್ ಖಾತೆ' (ನಿಷ್ಕ್ರಿಯ ಖಾತೆ) ಎಂದು ಪರಿಗಣಿಸಲಾಗುತ್ತದೆ. ಕಂತು ಕಟ್ಟದ ಪ್ರತಿ ವರ್ಷಕ್ಕೆ 50 ರೂ. ದಂಡದೊಂದಿಗೆ ಆಯಾ ವರ್ಷದ ಕನಿಷ್ಠ ಕಂತುಗಳ ಮೊತ್ತವನ್ನು ಪಾವತಿಸಿ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಿಕೊಳ್ಳಬಹುದು. ಒಂದೊಮ್ಮೆ 15 ವರ್ಷಗಳ ಒಳಗೆ ನಿಷ್ಕ್ರಿಯ ಖಾತೆಯನ್ನು ಸಕ್ರಿಯಗೊಳಿಸದಿದ್ದರೆ ಮ್ಯಾಚುರಿಟಿ ಸಂದರ್ಭದಲ್ಲಿ ಜಾರಿಯಲ್ಲಿರುವ ಅಂಚೆ ಕಚೇರಿ ಉಳಿತಾಯ ಖಾತೆಯ ಬಡ್ಡಿದರದಂತೆ ಬಡ್ಡಿಯನ್ನು ಸೇರಿಸಿ ಮೊತ್ತವನ್ನು ಹಿಂದಿರುಗಿಸಲಾಗುವುದು. ಆದಾಗ್ಯೂ ಒಂದು ವೇಳೆ ಹೆಣ್ಣು ಮಗುವಿನ ಪಾಲಕರು ಅಥವಾ ಪೋಷಕರ ಅನಾರೋಗ್ಯದಿಂದ ಖಾತೆ ನಿಷ್ಕ್ರಿಯವಾಗಿದ್ದರೆ ಎಸ್‌ಎಸ್‌ವೈ ಯೋಜನೆಯಲ್ಲಿನ ಬಡ್ಡಿದರವನ್ನೇ ನೀಡಲಾಗುತ್ತದೆ.

ಖಾತೆ ಚಾಲ್ತಿ, ಕಂತು ಪಾವತಿ
ಎಸ್‌ಎಸ್‌ವೈ ಖಾತೆಯು 21 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ ಹಾಗೂ 15 ವರ್ಷಗಳವರೆಗೆ ಈ ಖಾತೆಗೆ ಕಂತುಗಳನ್ನು ಪಾವತಿ ಮಾಡಬಹುದು. ಯಾವುದೇ ಆರ್ಥಿಕ ವರ್ಷದಲ್ಲಿ ಗರಿಷ್ಠ ಮಿತಿಯಾದ 1 ಲಕ್ಷ 50 ರೂ. ಗಿಂತಲೂ ಅಧಿಕ ಮೊತ್ತವನ್ನು ಜಮೆ ಮಾಡಿದಲ್ಲಿ, ಹೆಚ್ಚುವರಿ ಮೊತ್ತಕ್ಕೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. ಯಾವುದೇ ಸಮಯದಲ್ಲಿಯೂ ಹೆಚ್ಚುವರಿ ಮೊತ್ತವನ್ನು ಖಾತೆದಾರರು ಹಿಂಪಡೆದುಕೊಳ್ಳಬಹುದು. ಹಾಗೆಯೇ ಖಾತೆಯಲ್ಲಿನ ಹಣವನ್ನು 21 ವರ್ಷಗಳ ನಂತರವೂ ಹಿಂಪಡೆಯದಿದ್ದರೆ, ಮುಂದಿನ ಅವಧಿಗೆ ಯಾವುದೇ ಬಡ್ಡಿಯನ್ನು ಸೇರಿಸಲಾಗುವುದಿಲ್ಲ.

ಮೊತ್ತ ಹಿಂಪಡೆಯುವಿಕೆ
ಹೆಣ್ಣು ಮಗುವಿಗೆ 18 ವರ್ಷಗಳಾದ ಸಂದರ್ಭದಲ್ಲಿ ಅದರ ಹಿಂದಿನ ಆರ್ಥಿಕ ವರ್ಷದ ಕೊನೆಯಲ್ಲಿ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇ. 50 ರಷ್ಟನ್ನು ಮರಳಿ ಪಡೆಯಬಹುದು. ಒಂದೊಮ್ಮೆ 18 ವರ್ಷಗಳಾದ ನಂತರ ಹೆಣ್ಣು ಮಗುವಿನ ವಿವಾಹವಾದಲ್ಲಿ ಸಹಜ ರೀತಿಯಲ್ಲಿಯೇ ಖಾತೆಯನ್ನು ಅವಧಿಪೂರ್ವ ಕೊನೆಗೊಳಿಸಬಹುದು. ಹೆಣ್ಣು ಮಗು ತಾನು ವಿವಾಹವಾಗುವ ಒಂದು ತಿಂಗಳ ಮುಂಚೆ ಅಥವಾ ವಿವಾಹದ ಮೂರು ತಿಂಗಳೊಳಗೆ ಖಾತೆಯಲ್ಲಿನ ಹಣವನ್ನು ಹಿಂಪಡೆಯಬಹುದು.
