For Quick Alerts
ALLOW NOTIFICATIONS  
For Daily Alerts

2020ನೇ ಇಸವಿ ಬಂತು; ಕೆಲಸ ಉಳಿಯುವ, ಸಂಬಳ ಹೆಚ್ಚುವ ಹೊಸ ಮಂತ್ರಗಳು ಇಲ್ಲುಂಟು

By Sushma Chatra
|

ಬಕೆಟ್ ಹಿಡ್ಕೊಂಡು ಓಡಾಡುವರಿಗೆ ಯಾವ ಆಫೀಸ್ ಕೂಡ ಮುಂದಿನ ದಿನಗಳಲ್ಲಿ ಬೆಲೆ ಕೊಡುವುದಿಲ್ಲ. ಸಿಂಟೆಕ್ಸ್ ಟ್ಯಾಂಕ್ ಅಂತೂ ಕೆಲಸಕ್ಕೆ ಬರೋದಿಲ್ಲ. ಕೆಲಸದ ಅಚ್ಚುಕಟ್ಟುತನ, ಸಾಮರ್ಥ್ಯ, ಸ್ಮಾರ್ಟ್ ವರ್ಕ್ ಮಾತ್ರವೇ ಒಂದು ಆಫೀಸ್ ವ್ಯವಸ್ಥೆಯಲ್ಲಿ ಮುಂದುವರಿಯಲು ಅನುಕೂಲ ಮಾಡಿಕೊಡುತ್ತದೆ ಅಷ್ಟೇ!

ಬಾಸ್ ಜೊತೆ ಕ್ಲೋಸ್ ಆಗಿದ್ರೆ ಪ್ರಮೋಷನ್ ಸಿಗುತ್ತದೆ ಎಂದು ಯಾರಾದರೂ ಭಾವಿಸುತ್ತಿದ್ದರೆ ಖಂಡಿತ ಮುಂದಿನ ದಿನಗಳಲ್ಲಿ ನಡೆಯದ ಮಾತು. ಮೂವತ್ತು ವರ್ಷದಿಂದ ಇರುವ ಟ್ರೆಂಡ್ ಗೂ ಇನ್ನು ಮುಂದಿನ ದಿನಗಳಿಗೂ ವ್ಯತ್ಯಾಸ ಸ್ಪಷ್ಟವಾಗಲಿದೆ. ಕಾರ್ಪೊರೇಟ್ ವಲಯದಲ್ಲಿ ಕೆಲಸದಲ್ಲಿ ಇರುವವರು ಮುಂದಿನ ವರ್ಷದಿಂದ ತಮ್ಮ ಕೆಲಸದ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳದೇ ಇದ್ದರೆ ಕೆಲಸ ಕಳೆದುಕೊಂಡು, ಮನೇಲಿ ಕುಳಿತುಕೊಳ್ಳಬೇಕಾದ ಅನಿವಾರ್ಯ ಎದುರಾಗಬಹುದು.

ಅರೇ ಇದ್ಯಾಕೆ ಹೀಗೆ ಹೇಳ್ತಿದ್ದಾರೆ ಎಂದು ನೀವು ಅಂದುಕೊಳ್ತಿರಬಹುದು. ನಾವು ಹೀಗೆ ಹೇಳುತ್ತಿರುವುದಕ್ಕೆ ಕೆಲವು ನಿರ್ದಿಷ್ಟ ಕಾರಣವಿದೆ.

ಪೀಟರ್ ಡ್ರೂಕರ್ ನಿಯಮ ಮಾಯ

ಪೀಟರ್ ಡ್ರೂಕರ್ ನಿಯಮ ಮಾಯ

ಆಧುನಿಕ ಮ್ಯಾನೇಜ್ ಮೆಂಟ್ ನ ಪಿತಾಮಹ ಎಂದು ಕರೆಯುವ ಪೀಟರ್ ಡ್ರೂಕರ್ ಒಂದು ಆಫೀಸಿನ ಮ್ಯಾನೇಜ್ ಮೆಂಟ್ ವ್ಯವಸ್ಥೆಯ ಬಗ್ಗೆ ಕೆಲವು ನಿಯಮಾವಳಿಗಳನ್ನು ಹೇಳಿದ್ದರು. ಅದನ್ನು ಎಂಬಿಒ (ಮ್ಯಾನೇಜ್ ಮೆಂಟ್ ಬೈ ಆಬ್ಜೆಕ್ಟಿವ್ಸ್) ಎಂದು ಹೇಳಲಾಗುತ್ತದೆ. ಮ್ಯಾನೇಜ್ ಮೆಂಟ್ ಬೈ ಆಬ್ಜೆಕ್ಟಿವ್ ಎಂಬುದು ಇದರ ಹಿಂದಿರುವ ಅರ್ಥ. ಅಂದರೆ ಒಂದು ಸಂಸ್ಥೆಯು ತನ್ನ ಗುರಿಯನ್ನು ಸಾಧಿಸಬೇಕಾದರೆ ಪಿರಮಿಡ್ ವ್ಯವಸ್ಥೆಯಂತೆ ಅದನ್ನು ಸಣ್ಣಸಣ್ಣ ಗುರಿಯನ್ನಾಗಿ ಪರಿವರ್ತಿಸಿ ಸಾಧಿಸಬೇಕು ಎಂಬುದು ಇವರ ನಿಯಮದಲ್ಲಿತ್ತು. ಉದಾಹರಣೆಗೆ ಆಹಾರ ಸರಪಳಿಯಲ್ಲಿ ನಡೆಯುವ ಪ್ರಕೃತಿ ನಿಯಮವನ್ನು ನೀವು ಮನಸ್ಸಿಗೆ ತೆಗೆದುಕೊಳ್ಳಬಹುದು. ನಿಮಗೊಬ್ಬ ಬಾಸ್, ಆ ಬಾಸ್ ಗೆ ಮತ್ತೊಬ್ಬ ಬಾಸ್, ಮತ್ತೊಬ್ಬ ಬಾಸ್ ಗೆ ಇನ್ನೊಬ್ಬ ಬಾಸ್ ಅನ್ನೋ ತತ್ವದಲ್ಲಿ ಸದ್ಯ ನಡೆಯುವ ಆಫೀಸ್ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ಇರಲಿಕ್ಕಿಲ್ಲ. ಸದ್ಯದ ಆಫೀಸ್ ವ್ಯವಸ್ಥೆಯಲ್ಲಿ ಪ್ರಮುಖ ಫಲಿತಾಂಶದ ವಿಭಾಗ (ಕೆಆರ್ ಒ) ಎಂದು ವರ್ಗೀಕರಿಸಿ, ಒಬ್ಬ ವ್ಯಕ್ತಿಯನ್ನು ಒಂದು ವಿಭಾಗದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಿ, ಟಾರ್ಗೆಟ್ ತಲುಪುವುದಕ್ಕೆ ಹೇಳಲಾಗುತ್ತದೆ. ಆತ ಎಷ್ಟು ಟಾರ್ಗೆಟ್ ರೀಚ್ ಆಗುತ್ತಾನೆ ಎಂಬುದರ ಆಧಾರದಲ್ಲಿ ಆತನ ಸಾಮರ್ಥ್ಯವನ್ನು ವರ್ಷಾಂತ್ಯದಲ್ಲಿ ಅಳೆಯಲಾಗುತ್ತದೆ.

ವಾರ್ಷಿಕ ಪರ್ಫಾರ್ಮೆನ್ಸ್ ಅಪ್ರೈಸಲ್ ಹೇಗೆ ಮಾಡಲಾಗುತ್ತದೆ?

ವಾರ್ಷಿಕ ಪರ್ಫಾರ್ಮೆನ್ಸ್ ಅಪ್ರೈಸಲ್ ಹೇಗೆ ಮಾಡಲಾಗುತ್ತದೆ?

ಲ್ಯಾಂಡ್ ಮಾರ್ಕ್ 1954 ದಿ ಪ್ರಾಕ್ಟೀಸ್ ಆಫ್ ಮ್ಯಾನೇಜ್ ಮೆಂಟ್ ಪುಸ್ತಕದಲ್ಲಿ ಎಂಬಿಒ (ಮ್ಯಾನೇಜ್ ಮೆಂಟ್ ಬೈ ಅಬ್ಜೆಕ್ಟಿವ್ಸ್) ಮತ್ತು ಕೆಆರ್ ಎ(ಕೀ ರಿಸಲ್ಟ್ ಏರಿಯಾ) ಪದ್ಧತಿಯ ಬಗ್ಗೆ ಡ್ರೂಕರ್ ಪರಿಚಯಿಸಿದರು. ವಿಶ್ವದಾದ್ಯಂತ ಈ ಪದ್ಧತಿ ಬಹಳ ಬೇಗನೆ ಪ್ರಚಲಿತವಾಯಿತು. ಇಷ್ಟು ಕಾಲವೂ ಒಂದು ಆಫೀಸ್ ವ್ಯವಸ್ಥೆಯು ಇದೇ ಪರಿಕಲ್ಪನೆಯಲ್ಲಿ ನಡೆಯುತ್ತಿದ್ದದ್ದೂ ಕೂಡ ಸತ್ಯವೇ. ಆದರೆ ಮುಂದಿನ ದಿನಗಳಲ್ಲಿ ಹೀಗಾಗುವುದಿಲ್ಲ. ಯು.ಎಸ್. ಮೂಲದ ಕನ್ಸಲ್ಟೆನ್ಸಿ ನಡೆಸುತ್ತಿರುವ ವ್ಯಕ್ತಿಯೊಬ್ಬರು ಈ ಪದ್ಧತಿ ಮುಂದಿನ ದಿನಗಳಲ್ಲಿ ಜಾರಿಯಲ್ಲಿ ಇರುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಹಾಗಾದರೆ ಕಂಪೆನಿಗಳು ನೌಕರರ ವಾರ್ಷಿಕ ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಹೇಗೆ ಮಾಡುತ್ತವೆ? ಹಳೆಯ ರೀತಿಯ ಮೌಲ್ಯಮಾಪನ ಪ್ರಕ್ರಿಯೆಗಳು ಅಳಿದುಹೋಗುತ್ತಿವೆ. ಹೆಚ್ಚಿನ ಕಂಪೆನಿಗಳು ಇದೀಗ ಒಕೆಆರ್ ಪದ್ಧತಿಯ ಮೂಲಕ ಒಬ್ಬ ಸಿಬ್ಬಂದಿಯನ್ನು ಅಳೆಯುವ ಕೆಲಸವನ್ನು ಮಾಡಲು ಪ್ರಾರಂಭಿಸಿವೆ. ಅದಕ್ಕಾಗಿ ದೊಡ್ಡ ದೊಡ್ಡ ಸಂಸ್ಥೆಗಳು ಅಂದರೆ ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಇಂತಹ ಹಲವು ಸಂಸ್ಥೆಗಳ ಸಹಾಯವನ್ನು ಪಡೆಯಲಾಗುತ್ತಿದೆ.

ಜ್ಯಾಕ್ ವೆಲ್ಚ್ ಮಾರ್ಗಗಳು ಸಾಯುತ್ತಿವೆ

ಜ್ಯಾಕ್ ವೆಲ್ಚ್ ಮಾರ್ಗಗಳು ಸಾಯುತ್ತಿವೆ

ಒಂದು ಆಫೀಸ್ ವ್ಯವಸ್ಥೆಯಲ್ಲಿ ಇದೀಗ ಜ್ಯಾಕ್ ವೆಲ್ಚ್ ಮಾರ್ಗಗಳು ಸಾಯುತ್ತಿವೆ. ಜ್ಯಾಕ್ ವೆಲ್ಚ್ ಅವರನ್ನು 1999ರಲ್ಲಿ '20ನೇ ಶತಮಾನದ ಮ್ಯಾನೇಜ್ ಮೆಂಟ್ ಗುರು' ಎಂದು ಫಾರ್ಚೂನ್ ನಿಯತಕಾಲಿಕೆಯು ಪದವಿ ನೀಡಿತ್ತು. 1981ರಿಂದ 2001ರ ವರೆಗೆ ಏರೋಸ್ಪೇಸ್ ಟು ಮೀಡಿಯಾ ಸಂಘಟಿತ ಜನರಲ್ ಎಲೆಕ್ಟ್ರಿಕ್ ಕಂಪೆನಿ(ಜಿಇ)ಯನ್ನು ಮುನ್ನಡೆಸಿದ ಜ್ಯಾಕ್ ವೆಲ್ಚ್ ಅವರ ಪರಂಪರೆಯನ್ನು ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇವರ ಅವಧಿಯಲ್ಲಿ ಜಿ.ಇ. ಮೌಲ್ಯವು 4,000% ಅಧಿಕವಾಗಿತ್ತು ಮತ್ತು ವಿಶ್ವದ ಅಮೂಲ್ಯ ಕಂಪೆನಿ ಎಂದು ಗುರುತಿಸಿಕೊಂಡಿತ್ತು. ಇವರ ಮ್ಯಾನೇಜ್ ಮೆಂಟ್ ನ ಪ್ರಮಖ ಸೂತ್ರವೆಂದರೆ ಪ್ರತಿ ವರ್ಷ ನೌಕರರ 'ವೈಟಾಲಿಟಿ ಕರ್ವ್' ನಡೆಸುವುದು. ಅಂದರೆ ನೌಕರರು ಹೇಗೆ ಕೆಲಸ ನಿರ್ವಹಿಸಿದ್ದಾರೆ ಎಂಬುದರ ಗ್ರಾಫ್ ತಯಾರಿಸಿ, ಕೆಳಭಾಗದಲ್ಲಿರುವ 10% ನೌಕರರನ್ನು ತೆಗೆದುಹಾಕುವುದು. ಅವರ ಒಟ್ಟಾರೆ ಸ್ಕೋರ್ ಇಲ್ಲಿ ಗಣನೆಗೆ ಬರುವುದಿಲ್ಲ. ಕೇವಲ ಅವರ ಶ್ರೇಣಿ ಇತರರಿಗಿಂತ ಕಡಿಮೆ ಇದೆ ಎಂಬುದಷ್ಟೇ ಮುಖ್ಯವಾಗುತ್ತಿತ್ತು. ಈ ಅಭ್ಯಾಸವನ್ನು ಹಲವು ಕಂಪೆನಿಗಳು 2015ರ ವರೆಗೂ ಕೂಡ ಅಳವಡಿಸಿಕೊಂಡಿದ್ದಿದೆ. ಪಾಶ್ಚಾತ್ಯ ವ್ಯವಹಾರಗಳು ಭಯಾನಕ ಒತ್ತಡವನ್ನು ಎದುರಿಸುತ್ತಿದ್ದ ಕಾಲದಲ್ಲಿ ವೆಲ್ಚ್ ಕಾರ್ಯ ನಿರ್ವಹಿಸಿದರು. ತಮ್ಮದೇ ಆದ ಕ್ರೂರ ಶೈಲಿಯಲ್ಲಿ ವೆಚ್ಚವನ್ನು ಕಡಿತಗೊಳಿಸುವ ಕೆಲಸವನ್ನು ಇವರು ಮಾಡಿದ್ದರು.

ಐಟಿ ಉದ್ಯಮ ವ್ಯವಹಾರ 181 ಬಿಲಿಯನ್ ಡಾಲರ್ ನಷ್ಟು ಏರಿಕೆ

ಐಟಿ ಉದ್ಯಮ ವ್ಯವಹಾರ 181 ಬಿಲಿಯನ್ ಡಾಲರ್ ನಷ್ಟು ಏರಿಕೆ

ಆದರೆ, ನಂತರದ ದಿನಗಳಲ್ಲಿ ಜಗತ್ತಿನ ವ್ಯಾಪಾರದ ವಾತಾವರಣ ಬದಲಾಗುತ್ತಾ ಸಾಗಿದೆ. ಇದೀಗ ನೀವು ಪೂರೈಕೆ ಸರಪಳಿಯನ್ನು ಪ್ರತ್ಯೇಕಿಸಿ, ಅದನ್ನು ಪ್ರಪಂಚದಾದ್ಯಂತ ಹರಡಬಹುದು ಮತ್ತು ವೆಚ್ಚದ ದಕ್ಷತೆಗೆ ಅನುಗುಣವಾಗಿ ನಿಮಗೆ ಬೇಕಾದುದನ್ನು ಉತ್ಪಾದಿಸಬಹುದು. ಟೆಲಿಕಾಂ ಸೇವಾ ವ್ಯವಹಾರದಲ್ಲೂ ಕ್ರಾಂತಿ ಆಗಿದೆ. ಆಮದು, ರಫ್ತು, ಹೊರಗುತ್ತಿಗೆ ಇತ್ಯಾದಿಗಳು ಪ್ರವರ್ಧಮಾನಕ್ಕೆ ಬಂದಿದೆ. ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮ ವ್ಯವಹಾರವು 1991ರಲ್ಲಿ 60 ಮಿಲಿಯನ್ ಡಾಲರ್ ಇದ್ದದ್ದು, ಇದೀಗ 2018-19ನೇ ಇಸವಿಯಲ್ಲಿ 181 ಬಿಲಿಯನ್ ಡಾಲರ್ ನಷ್ಟು ಏರಿಕೆ ಕಂಡಿದೆ. ಇದೀಗ ಡ್ರೂಕರ್ ಮತ್ತು ವೆಲ್ಚ್ ಇಬ್ಬರ ಮ್ಯಾನೇಜ್ ಮೆಂಟ್ ತತ್ವಗಳೂ ಇತಿಹಾಸದ ಪುಟ ಸೇರುವ ಕಾಲ ಸನ್ನಿಹಿತವಾಗಿದೆ. ಕಂಪೆನಿಗಳ ಗಮನವು ವೆಚ್ಚದಿಂದ ಆದಾಯಕ್ಕೆ ಬದಲಾಗಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಉತ್ಪನ್ನಗಳನ್ನು ತಯಾರಿಸುವುದು ಈಗ ನಡೆಯುತ್ತಿರುವ ಟ್ರೆಂಡ್ ಆಗಿದೆ. ನಿರಂತರವಾಗಿ ಹಳೆಯ ವಸ್ತುವನ್ನೇ ಅಭಿವೃದ್ಧಿ ಪಡಿಸುವ ಪ್ರಕ್ರಿಯೆಗೆ ಗುಡ್ ಬೈ ಹೇಳಿ, ನಾವೀನ್ಯತೆ ಮತ್ತು ಹೊಸ ವಸ್ತುಗಳ ತಯಾರಿಕೆಗೆ ಹೆಚ್ಚು ಒತ್ತು ನೀಡುವುದು ಕಂಪೆನಿಗಳ ಉದ್ದೇಶವಾಗಿದೆ. ಯಾಕೆಂದರೆ ಜಗತ್ತನ್ನು ಊಹಿಸುವುದಕ್ಕೆ ಸಾಧ್ಯವಿಲ್ಲ. ಹಳೆಯ ಸಾಧನೆಗಳಿಗೆ ಭವಿಷ್ಯದಲ್ಲಿ ಬೆಲೆ ಇದೆ ಎಂದು ಹೇಳಲಾಗುವುದಿಲ್ಲ. ಪ್ರತಿಯೊಬ್ಬರಲ್ಲೂ ಸದ್ಯ ಇರುವ ತಾಕತ್ತು, ಪ್ರತಿಕ್ರಿಯಿಸುವ ವೇಗ ಮತ್ತು ಹೊಸತನ್ನು ಹೇಗೆ ಅಳವಡಿಸಿಕೊಳ್ಳುತ್ತಾರೆ ಎಂಬ ಗುಣಗಳಷ್ಟೇ ಬದುಕಲು ಮತ್ತು ಅಭಿವೃದ್ಧಿ ಹೊಂದಲು ನೆರವು ನೀಡುತ್ತದೆ.

ವಿಯುಸಿಎ ಜಗತ್ತು

ವಿಯುಸಿಎ ಜಗತ್ತು

ಹಾಗಾದರೆ 2020 ರಲ್ಲಿ ಮ್ಯಾನೇಜ್ ಮೆಂಟ್ ವ್ಯವಸ್ಥೆ ಹೇಗಿರುತ್ತದೆ? ಹಳೆಯ ವ್ಯವಸ್ಥೆಗಳು ಹೋಗುತ್ತವೆ ಎಂದಾದಲ್ಲಿ ಹೊಸ ವ್ಯವಸ್ಥೆ ಹೇಗಿರುತ್ತದೆ ಎಂಬ ಪ್ರಶ್ನೆ ಹುಟ್ಟುವುದು ಸಹಜವೇ ಅಲ್ಲವೇ? ಅದಕ್ಕೆ ಉತ್ತರವೇ ವಿಯುಸಿಎ-( volatile, uncertain, complex ಮತ್ತು ambiguous) ಅಂದರೆ ಬಾಷ್ಪಶೀಲ, ಅನಿಶ್ಚಿತ, ಸಂಕೀರ್ಣ ಮತ್ತು ಅಸ್ಪಷ್ಟ. ಹೊಸ ಸಮಯವು ಹೊಸ ನಿಯಮವನ್ನು ಅಳವಡಿಸಿಕೊಳ್ಳುತ್ತದೆ. ಸಮಸ್ಯೆ ಏನೆಂದರೆ ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ. ನಾಳೆ ಬೆಳಗಾಗುವುದರ ಒಳಗೆ ಇವತ್ತಿನ ನಿಯಮಗಳಿಗೆ ಬೆಲೆಯೇ ಇಲ್ಲದಂತಾಗಬಹುದು. ಉದಾಹರಣೆಗೆ ಒಂದು ರಾತ್ರಿಯಲ್ಲಿ 150 ರುಪಾಯಿಗೆ ಏರಿಕೆಯಾಗಿದ್ದ ಕೆ.ಜಿ. ಈರುಳ್ಳಿ ಬೆಲೆ ಅದೇ ಒಂದು ರಾತ್ರಿಯಲ್ಲಿ 25 ರುಪಾಯಿಗೆ ಇಳಿಕೆ ಕಂಡಿರಲಿಲ್ಲವೇ ಹಾಗೆ ಅಷ್ಟೇ! 2009ರಲ್ಲಿ ಟಾಪ್ ಲಿಸ್ಟ್ ನಲ್ಲಿದ್ದ ಜಗತ್ತಿನ 5 ಪ್ರಮುಖ ಕಂಪೆನಿಗಳಲ್ಲಿ ಮೈಕ್ರೋಸಾಫ್ಟ್ ಮಾತ್ರವೇ ಸದ್ಯ ಲಿಸ್ಟ್ ನಲ್ಲಿದೆ. Exxon ಮೊಬೈಲ್ ಕಂಪೆನಿ 17 ನೇ ಸ್ಥಾನದಲ್ಲಿದ್ದು, ಮಾರುಕಟ್ಟೆಯ ಕೆಳಕ್ರಮಾಂಕದಲ್ಲಿ ಕುಳಿತಿದೆ. ವಿಯುಸಿಎಯಲ್ಲಿ ಅವಧಿ ಮುಗಿಯುವ ದಿನಾಂಕ ಇರುತ್ತದೆಯಂತೆ. ಅಂದರೆ ಒಂದು ಆಹಾರದ ಪ್ಯಾಕೆಟ್ ಗೆ ಹೇಗೆ ಎಕ್ಸ್ ಪೈರಿ ಡೇಟ್ ಇರುತ್ತದೆಯೋ ಹಾಗೆ ಒಬ್ಬ ಕಾರ್ಮಿಕನಿಗೂ ಎಕ್ಸ್ ಪೈರಿ ಡೇಟ್ ಇರುತ್ತದೆ. ಹಾಗಂತ ಅದು ರಿಟೈರ್ ಆಗುವವರೆಗೆ, ಸಾಯುವವರೆಗೆ ಎಂದೆಲ್ಲಾ ಅಂದುಕೊಳ್ಳಬೇಡಿ. ಬದಲಾಗಿ ಸಾಮರ್ಥ್ಯವೇ ಇಲ್ಲಿ ಎಕ್ಸ್ ಪೈರಿ ಡೇಟ್ ನಿರ್ಧರಿಸುವ ಮಾನದಂಡ. ಸಾಮರ್ಥ್ಯ ಕಂಪೆನಿಯೊಂದಕ್ಕೆ ಸಾಕಾಗುತ್ತಿಲ್ಲವೆಂದಾದರೆ ನಿಮ್ಮ ಅವಧಿ ಮುಗಿದಿದೆ ಎಂದರ್ಥ.

ಕಂಪೆನಿಯಲ್ಲಿ ಕೆಲಸ ಮಾಡುವವರೆಲ್ಲರೂ ಬಾಸೇ!

ಕಂಪೆನಿಯಲ್ಲಿ ಕೆಲಸ ಮಾಡುವವರೆಲ್ಲರೂ ಬಾಸೇ!

ಕ್ರಮಾನುಗತ (Hierarchy) ಎಂದು ಕರೆಯಲಾಗುವ ವ್ಯವಸ್ಥೆ ಇರುವುದಿಲ್ಲ. ಮ್ಯಾನೇಜರ್, ಮ್ಯಾನೇಜರ್ ಗೆ ಮತ್ತೊಬ್ಬ ಮ್ಯಾನೇಜರ್, ಅವರ ನಿರ್ವಹಣೆಗೆ ಮತ್ತೊಬ್ಬ ಮ್ಯಾನೇಜರ್ ಹೀಗಿರುವ ವ್ಯವಸ್ಥೆ ಮುಂದಿನ ದಿನಗಳಲ್ಲಿ ಮಾಯವಾಗುತ್ತದೆ. ಹೊಸ ವ್ಯವಸ್ಥೆಗೆ ಒಕೆಆರ್ ಎನ್ನಲಾಗುತ್ತದೆ. ಹಲವು ರೀತಿಯಲ್ಲಿ ಎಬಿಒಗಿಂತ ಒಕೆಆರ್ ಭಿನ್ನವಾಗಿದೆ. ಒಕೆಆರ್ ಮಾಸಿಕವಾಗಿ ಅಥವಾ ಅರ್ಧ ವಾರ್ಷಿಕವಾಗಿ ನಡೆಯುತ್ತದೆ. ಎಂಬಿಒ ಕೇವಲ ವಾರ್ಷಿಕವಾಗಿ ಮಾತ್ರವೇ ನಡೆಯುತ್ತದೆ. ಎಂಬಿಒ ಮೇಲಿನಿಂದ ಕೆಳಕ್ಕೆ ಇರುವ ಗ್ರಾಫ್. ಒಕೆಆರ್ ಹಾಗಲ್ಲ ಕೆಳಭಾಗದಿಂದ ಮೇಲ್ಭಾಗಕ್ಕೆ ಮತ್ತು ಅಡ್ಡವಾಗಿ ಇರುವ ಗ್ರಾಫ್ ಆಗಿರುತ್ತದೆ. ಒಕೆಆರ್ ನಲ್ಲಿ ನೌಕರರನ್ನು ಧೈರ್ಯವಾಗುವಂತೆ, ಆಕ್ರಮಣಕಾರಿಯಾಗುವಂತೆ, ಮಹತ್ವಾಕಾಂಕ್ಷೆಯಾಗುವಂತೆ ಗುರಿಗಳನ್ನು ಹೊಂದಿಸಲು ಪ್ರೊತ್ಸಾಹಿಸಲಾಗುತ್ತದೆ. ಆದರೆ ಎಂಬಿಒನಲ್ಲಿ ಪ್ರಾಯೋಗಿಕವಾಗಿ ಮಾತ್ರವೇ ನಡೆಯುತ್ತದೆ. ಒಕೆಆರ್ ನಲ್ಲಿ ವಿಫಲವಾಗುವುದಕ್ಕೆ ಅವಕಾಶವಿದ್ದು, ಗುರಿಯೆಡೆಗಿನ ಪಾರದರ್ಶಕತೆ ಹೇಗಿರಬೇಕು ಎಂಬುದಷ್ಟೇ ಮುಖ್ಯವಾಗುತ್ತದೆ.

ಕಂಪೆನಿ ಅಲ್ಲ, ಕಂಪೆನಿಯ ಪರಿಸರ ವ್ಯವಸ್ಥೆ ಬದಲಾಗುತ್ತದೆ

ಕಂಪೆನಿ ಅಲ್ಲ, ಕಂಪೆನಿಯ ಪರಿಸರ ವ್ಯವಸ್ಥೆ ಬದಲಾಗುತ್ತದೆ

ನಾಲ್ಕು ಹಂತದ ಮಂತ್ರವನ್ನು ಕಂಪೆನಿಗಳು ಪಾಲಿಸುತ್ತವೆ. ದೊಡ್ಡದಾಗಿ ಯೋಚಿಸಿ, ಸಣ್ಣದಾಗಿ ಪರೀಕ್ಷಿಸಿ, ವೇಗವಾಗಿ ವಿಫಲಗೊಳ್ಳಿ ಮತ್ತು ಯಾವಾಗಲೂ ಕಲಿಯಿರಿ. ಉತ್ಪನ್ನದ ಭವಿಷ್ಯ ಏನೇ ಆಗಿದ್ದರೂ ಜೊತೆಗಾರರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಬೇಕು. ಯಾವುದು ಕಾರ್ಯಕ್ಕೆ ಬಂತು, ಯಾವುದು ಕಾರ್ಯಗತವಾಗಿಲ್ಲ ಎಂಬುದರ ಕುರಿತು ಚರ್ಚೆಯಾಗಬೇಕು. ಮ್ಯಾನೇಜರ್ ಆಗಿರುವ ವ್ಯಕ್ತಿ ತನ್ನ ಕುರ್ಚಿಯ ಬಲ ತೋರಿಸುತ್ತಿರುವುದಲ್ಲ ಅಂದರೆ ಅಧಿಕಾರದ ಮದದಲ್ಲಿ ಹಾರಾಡುವುದಲ್ಲ. ಬದಲಾಗಿ ತನ್ನ ನೌಕರರಿಗೆ ಜ್ಞಾನ, ಸಾಮರ್ಥ್ಯ ಮತ್ತು ಪರಿಣಾಮಕಾರಿಯಾಗಿ ಹೇಗೆ ಕೆಲಸ ಮಾಡುವುದು ಎಂಬ ಬಗ್ಗೆ ತಿಳಿಸಬೇಕು. ಇದಕ್ಕಾಗಿ ಖಂಡಿತ ಪ್ರತಿಯೊಬ್ಬರಲ್ಲೂ ಮಾನಸಿಕ ಬದಲಾವಣೆಯ ಅಗತ್ಯವಿದೆ. ಮುಂದಿನ ದಿನಗಳಲ್ಲಿ ನಾವು ದೊಡ್ಡ ದೊಡ್ಡ ಸಮಸ್ಯೆಗಳಿಗೆ ಗುರಿಯಾಗುವ ಸಾಧ್ಯತೆ ಇದೆ. ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಕೆಯು ಆಳವಾಗುತ್ತಿರುವ ಈ ಸಂದರ್ಭದಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ರೋಬೋಟ್ ಗಳ ಪ್ರವೇಶ ಇತ್ಯಾದಿಗಳು ಹಲವು ರೀತಿಯ ಸವಾಲುಗಳನ್ನು ಒಡ್ಡುವ ಸಾಧ್ಯತೆ ಇದೆ. ಅಂತಹ ಕೆಲವು ಸವಾಲುಗಳನ್ನು ಈಗಾಗಲೇ ನಾವು ನೋಡುತ್ತಿದ್ದೇವೆ. ಆ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವಿರುವ ವ್ಯಕ್ತಿ ಮಾತ್ರವೇ ಒಂದು ಆಫೀಸಿನ ವ್ಯವಸ್ಥೆಯಲ್ಲಿ ಮುಂದುವರಿದು ಬದುಕುವುದಕ್ಕೆ ಸಾಧ್ಯವಾಗುತ್ತದೆ.

ಬದಲಾವಣೆ ತಂತ್ರಜ್ಞಾನ ಕ್ಷೇತ್ರಕ್ಕೆ ಮಾತ್ರವಲ್ಲ

ಬದಲಾವಣೆ ತಂತ್ರಜ್ಞಾನ ಕ್ಷೇತ್ರಕ್ಕೆ ಮಾತ್ರವಲ್ಲ

ಇದು ಕೇವಲ ತಂತ್ರಜ್ಞಾನ ಕ್ಷೇತ್ರಕ್ಕೆ ಮಾತ್ರವೇ ಅನ್ವಯಿಸುವುದಿಲ್ಲ. 2020ರಲ್ಲಿ ನಾಟಕೀಯ ಬದಲಾವಣೆಗಳನ್ನು ಸಾಮಾಜಿಕ (ಉದಾಹರಣೆಗೆ ಜನರೇಷನ್ Z ಹೆಚ್ಚು ಸೇವಿಸುವ ವರ್ಗ), ಆರ್ಥಿಕ (ಮುಂದಿನ ಜಾಗತಿಕ ದೊಡ್ಡ ಕುಸಿತವು ಎಷ್ಟು ಸಮಯದ ಮುನ್ನವೇ ಆಗಲಿದೆ?), ರಾಜಕೀಯ (ರಾಷ್ಟ್ರೀಯತೆಯ ಅಲೆಯು ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ), ಪರಿಸರ (ಹವಾಮಾನ ಬದಲಾವಣೆಯ ವಿಚಾರವು ಹೆಚ್ಚು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ) ಮತ್ತು ಜನಸಂಖ್ಯಾಶಾಸ್ತ್ರ (ಚೀನಾ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ವಯಸ್ಕರ ಜನಸಂಖ್ಯೆ) ಸೇರಿದಂತೆ ಹಲವು ವಿಭಾಗಗಳಲ್ಲಿನ ಟ್ರೆಂಡ್ ನಲ್ಲಿ ಬದಲಾವಣೆಯನ್ನು ಕಾಣಬಹುದು. ಜಗತ್ತು 2020 ರ ದಶಕದಲ್ಲಿ ವಿಯುಸಿಎಯನ್ನು ಅಧಿಕವಾಗಿ ಪಡೆಯಲಿದೆ ಮತ್ತು ಅದಕ್ಕಾಗಿ ಈಗಿನ ಮ್ಯಾನೇಜರ್ ಗಳು ಸಿದ್ಧವಾಗಬೇಕಾಗುತ್ತದೆ. ಮಾರುಕಟ್ಟೆಯ ಯಾವುದೇ ರೀತಿಯ ಏರಿಳಿತಗಳಿಗೂ ಈ ಹೊಸ ನಿಯಮಗಳೇ ಅನ್ವಯಿಸುತ್ತದೆ ಮತ್ತು ಅದನ್ನು ಅಳವಡಿಸಿಕೊಳ್ಳುವುದಕ್ಕೆ ಪ್ರತಿಯೊಬ್ಬರೂ ಸಿದ್ಧರಾಗಲೇಬೇಕು. ಇಲ್ಲದೇ ಇದ್ದರೆ ನಿರುದ್ಯೋಗಿಗಳಾಗುವುದು ಖಚಿತ!

English summary

2020 Management Mantras For Success

Here is the modern management mantra for success in 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X