For Quick Alerts
ALLOW NOTIFICATIONS  
For Daily Alerts

ಸಾವಯವ ಬೆಲ್ಲದ ಬಿಜಿನೆಸ್ ಹೇಗಿದೆ, ಎಷ್ಟು ಬೇಕು ಬಂಡವಾಳ?

|

"ಮುಂದಿನ ವರ್ಷಗಳಲ್ಲಿ ಸಕ್ಕರೆ ಮತ್ತು ಮೈದಾ ಹಿಟ್ಟಿನ ಬಳಕೆ ಅದ್ಯಾವ ಪ್ರಮಾಣದಲ್ಲಿ ಕಡಿಮೆ ಆಗಲಿದೆ ನೀವೇ ಗಮನಿಸಿ ನೋಡಿ. ಆಹಾರ (ಸಾವಯವ ಕೃಷಿ) ಮತ್ತು ಔಷಧ ಕ್ಷೇತ್ರ ಇವೆರಡಕ್ಕೆ ಬೇಡಿಕೆ ವಿಪರೀತ ಹೆಚ್ಚಾಗಲಿದೆ. ನಾವು ಆರಿಸಿಕೊಂಡಿರುವುದು ಸಾವಯವ ಬೆಲ್ಲದ ಉತ್ಪಾದನೆಯನ್ನು. 'ಸ್ವೀಟ್ ಸೋಲ್' ಎಂಬುದು ನಮ್ಮ ಬ್ರ್ಯಾಂಡ್ ನ ಹೆಸರು. ಆ ಮೂಲಕ ಸಾವಯವ ಬೆಲ್ಲದ ಮಾರಾಟ ಮಾಡುತ್ತೇವೆ" ಎಂದರು ವೆಂಕಟೇಶ್ ಕುಲಕರ್ಣಿ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ವೆಂಕಟೇಶ್ ಮತ್ತು ಅವರ ಪಾಲುದಾರ ದೀಪಕ್ ಸಿಂಗ್ ಹಜೇರಿ ಸೇರಿ ಸಾವಯವ ಬೆಲ್ಲದ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಗುಡ್ ರಿಟರ್ನ್ಸ್ ಕನ್ನಡದ ಜತೆಗೆ ಮಾತಿಗೆ ಸಿಕ್ಕವರು ವೆಂಕಟೇಶ್ ಕುಲಕರ್ಣಿ. ಬೆಂಗಳೂರಿನ ಅರಕೆರೆ ಮೈಕೋ ಲೇಔಟ್ ನಲ್ಲಿ ಅವರ ಸದ್ಯದ ವಾಸ. ಆದರೆ ಮೂಲತಃ ಅವರು ಬೆಳಗಾವಿಯವರೇ.

 

ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ

ಬೆಂಗಳೂರಿನಲ್ಲಿ ಐದಂಕಿ- ಆರಂಕಿಯ ಸಂಬಳ ಬರುತ್ತಿದ್ದ ವೆಂಕಟೇಶ್ ಅವರಿಗೆ ಆಗಲೂ ಕೃಷಿ ಬಗೆಗಿನ ಸೆಳೆತ ಹಾಗೇ ಇತ್ತು. ತಮ್ಮ ಪಾಲಿನ ಹದಿನೈದು ಎಕರೆ ಜಮೀನಿನ ಜತೆಗೆ ಇಪ್ಪತ್ತು ಎಕರೆ ಜಮೀನನ್ನು ಭೋಗ್ಯಕ್ಕೆ ಪಡೆದು, ಒಟ್ಟಾರೆ ಸಾವಿರ ಟನ್ ಕಬ್ಬು ಬೆಳೆಯುತ್ತಿದ್ದರು. ಆರಂಭದಲ್ಲಿ ಆದಾಯ ಬರುತ್ತಿತ್ತು. ಆದರೆ ಕಬ್ಬು ಬೆಳೆದ ನಂತರ ಮಾರಾಟಕ್ಕೆ ಕಾರ್ಖಾನೆಗಳನ್ನು ಅವಲಂಬಿಸಬೇಕಿತ್ತು. ಬಾಕಿ ವಸೂಲಿ ಆಗುವಷ್ಟರಲ್ಲಿ ಹೈರಾಣಾಗುತ್ತಿದ್ದರು.

ಹೋಟೆಲ್ ಬಿಜಿನೆಸ್ ಪಿನ್ ಟು ಪಿನ್ ಡೀಟೇಲ್ಸ್

ಅದೊಂದು ದಿನ ತಾವೇ ಸಾವಯವ ಬೆಲ್ಲದ ಉತ್ಪಾದನೆಯಲ್ಲಿ ತೊಡಗಲು ನಿರ್ಧರಿಸಿದರು. ಈಗ ಯಾವಾಗ ಬೆಂಗಳೂರು, ಯಾವಾಗ ಬೆಳಗಾವಿ ಎನ್ನದೆ ಪೂರ್ಣ ಪ್ರಮಾಣದಲ್ಲಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಈ ವ್ಯಾಪಾರದ ಬಗ್ಗೆ ಅವರೇನು ಹೇಳುತ್ತಾರೆ ಎಂಬುದನ್ನು ಮುಂದೆ ಓದಿ.

ಕೃಷಿಕರು APEDAದಿಂದ ಅನುಮತಿ ಪಡೆದಿರಬೇಕು

ಕೃಷಿಕರು APEDAದಿಂದ ಅನುಮತಿ ಪಡೆದಿರಬೇಕು

ಸಾವಯವ ಬೆಲ್ಲ ಉತ್ಪಾದಿಸಲು ಕಬ್ಬು ಕೂಡ ಸಾವಯವ ಪದ್ಧತಿಯಲ್ಲೇ ಬೆಳೆದಿರಬೇಕು. APEDAದಿಂದ (Agricultural and Processed Food Products Export Development Authority (India)) ಪ್ರಮಾಣೀಕೃತವಾದ ಲ್ಯಾಬ್ ಗಳ ಮೂಲಕ ಮಣ್ಣಿನ ಪರೀಕ್ಷೆ ಮಾಡಿ, ಸಾವಯವ ಕಬ್ಬು ಎಂಬುದಕ್ಕೆ ಪ್ರಮಾಣಪತ್ರ ನೀಡಲಾಗುತ್ತದೆ. ಒಂದು ವೇಳೆ ಈಗಾಗಲೇ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಲ್ಲಿ ಭೂಮಿಯನ್ನು ಶುದ್ಧಗೊಳಿಸಬೇಕಾಗುತ್ತದೆ. ಅದಕ್ಕೆ ಎರಡರಿಂದ ಮೂರು ವರ್ಷ ಸಮಯ ಹಿಡಿಯುತ್ತದೆ. ಮೂರು ತಿಂಗಳಿಗೆ ಒಮ್ಮೆ ಬಂದು ಸಂಸ್ಥೆಯಿಂದ ಮಾರ್ಗದರ್ಶನ ನೀಡಲಾಗುತ್ತದೆ. ಸಾವಯವ ಬೆಲ್ಲ ತಯಾರಿ ಮಾಡುವುದಕ್ಕೆ ಈ ರೀತಿ APEDAದಿಂದ ಅನುಮತಿ ಪಡೆದ ಕೃಷಿಕರಿಂದಲೇ ಕಬ್ಬನ್ನು ಖರೀದಿಸಬೇಕು. ಅಷ್ಟೇ ಅಲ್ಲ, ಬೆಲ್ಲ ಉತ್ಪಾದನೆ ವೇಳೆಯಲ್ಲೂ ಯಾವುದೇ ರಾಸಾಯನಿಕ ಬಳಸಬಾರದು. ಸಾವಯವ ಪದ್ಧತಿಯಲ್ಲಿ ಬೆಳೆದ ಕಬ್ಬಿನ ಬೆಲೆ ಟನ್ ಗೆ 3,500ರಿಂದ 4000 ರುಪಾಯಿ ಆಗುತ್ತದೆ. ಇನ್ನು 1000 ಟನ್ ಕಬ್ಬಿಗೆ 100 ಟನ್ ಬೆಲ್ಲ ಉತ್ಪಾದನೆಯಾಗುತ್ತದೆ. ಸಾವಯವ ಬೆಲ್ಲದ ಉತ್ಪಾದನೆ ವೆಚ್ಚ ಹೆಚ್ಚಾಗುತ್ತದೆ. ಆ ಕಾರಣಕ್ಕೆ ಮಾರಾಟದ ಬೆಲೆಯೂ ಹೆಚ್ಚಾಗುತ್ತದೆ.

ಗುಜರಾತ್, ಮಹಾರಾಷ್ಟ್ರ, ಬೆಂಗಳೂರು ಮತ್ತಿತರ ಕಡೆ ಬೇಡಿಕೆ
 

ಗುಜರಾತ್, ಮಹಾರಾಷ್ಟ್ರ, ಬೆಂಗಳೂರು ಮತ್ತಿತರ ಕಡೆ ಬೇಡಿಕೆ

ಈಗ ಕಬ್ಬಿನಿಂದ ಸಕ್ಕರೆ ಮಾಡುತ್ತಾರಲ್ಲಾ ಅದರಲ್ಲಿ ಉಪ ಉತ್ಪನ್ನಗಳು ದೊರೆಯುತ್ತವೆ. ಉದಾಹರಣೆ ಮೊಲಾಸಿಸ್. ಅದರಿಂದಲೂ ಹಣ ಸಂಪಾದನೆ ಆಗುತ್ತದೆ. ಆದರೆ ಸಾವಯವ ಬೆಲ್ಲ ಉತ್ಪಾದನೆ ಮಾಡುವಾಗ ಮೊಲಾಸಿಸ್ ದೊರೆಯುವುದಿಲ್ಲ. ಬೆಲ್ಲ ಉತ್ಪಾದಿಸುವ ಫ್ಯಾಕ್ಟರಿ ಜಾಗ ಸ್ವಂತದ್ದಾದರೆ ಬಂಡವಾಳ ಹೆಚ್ಚಿಗೆ ಬೇಕಾಗುತ್ತದೆ. ಜತೆಗೆ ಭಾರತದಲ್ಲಿ ಮಾರಾಟ ಮಾಡುವುದಕ್ಕೆ ಸಿಗುವ ಅನುಮತಿಗೆ NPOP ಎನ್ನಲಾಗುತ್ತದೆ ಮತ್ತು ವಿದೇಶದಲ್ಲಿ ಮಾರಲು ಸಿಗುವ ಅನುಮತಿಗೆ NOP ಎನ್ನಲಾಗುತ್ತದೆ. ಸಾವಯವ ಬೆಲ್ಲಕ್ಕೆ ಅಮೆರಿಕ, ದುಬೈ, ಜರ್ಮನಿ ಸೇರಿದಂತೆ ವಿವಿಧ ದೇಶಗಳಲ್ಲಿ ಬೇಡಿಕೆ ಇದೆ. ಭಾರತದಲ್ಲಿ ಗುಜರಾತ್, ಮಹಾರಾಷ್ಟ್ರ, ಬೆಂಗಳೂರು ಮತ್ತಿತರ ಕಡೆ ಬೇಡಿಕೆಯಿದೆ. ಜರ್ಮನಿಯಲ್ಲಿ ಮಾರಾಟ ಮಾಡುವುದಕ್ಕೆ ಪ್ರತ್ಯೇಕವಾದ ಅನುಮತಿ ಪಡೆದುಕೊಳ್ಳಬೇಕು. ಈಚೆಗೆ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಿದೆ. ಅದರಲ್ಲೂ ಡಯಾಬಿಟೀಸ್ ಹೆಚ್ಚಾಗುತ್ತಿರುವ ಇಂದಿನ ದಿನಮಾನದಲ್ಲಿ ಬೆಲ್ಲದಲ್ಲಿ ತಯಾರಿಸಿದ ಆಹಾರ, ಪಾನೀಯವನ್ನೇ ಬಳಸುವುದಕ್ಕೆ ಜನರು ಬಯಸುತ್ತಿದ್ದಾರೆ. ನಾವು ಮಾರುವ ಬೆಲ್ಲವನ್ನು ಕಾಫಿಯಿಂದ ಮೊದಲುಗೊಂಡು ಹಲವು ಪಾನೀಯ, ಆಹಾರ ಖಾದ್ಯಗಳಲ್ಲಿ ಬಳಸಬಹುದು.

ಕಚ್ಚಾ ಪದಾರ್ಥವೇ ದುಬಾರಿ ಆಗಿಬಿಡುತ್ತದೆ

ಕಚ್ಚಾ ಪದಾರ್ಥವೇ ದುಬಾರಿ ಆಗಿಬಿಡುತ್ತದೆ

ನಮ್ಮ ಫ್ಯಾಕ್ಟರಿಗೆ ಸ್ವಂತ ಟ್ರಾನ್ಸ್ ಪೋರ್ಟೆಷನ್ ಇಟ್ಟುಕೊಂಡಿಲ್ಲ. ನಾವೇ ಅದನ್ನೂ ನಿಭಾಯಿಸಬೇಕು ಅಂದರೆ ದುಬಾರಿ ಬಾಬ್ತು ಮತ್ತು ಸವಾಲು ಕೂಡ ಹೌದು. ಆದ್ದರಿಂದ ಟನ್ ಗೆ ಇಂತಿಷ್ಟು ಅಂತ ಬೆಲೆ ನಿಗದಿ ಮಾಡಿ, ಇನ್ನೊಬ್ಬರಿಗೆ ಜವಾಬ್ದಾರಿ ವಹಿಸುವುದು ಉತ್ತಮ. ನಾವು ನಾಲ್ಕು ವರ್ಷದ ಹಿಂದೆ ಫ್ಯಾಕ್ಟರಿ ಶುರು ಮಾಡಿದಾಗ ಹತ್ತು ಸಾವಿರ ಟನ್ ಸಾವಯವ ಕಬ್ಬು ಸಿಗುವುದು ಕೂಡ ಕಷ್ಟ ಇತ್ತು. ಆದರೆ ಈಗ ಒಂದು ಲಕ್ಷ ಟನ್ ಕಬ್ಬು ದೊರೆಯುತ್ತದೆ. ಇನ್ನು ಬೆಲ್ಲ ತಯಾರಿಯಲ್ಲಿ ಸರಿಯಾದ ವಿಧಾನವನ್ನು ಅನುಸರಿಸಲಾಗುತ್ತಿದೆಯಾ ಎಂಬುದನ್ನು ನಿಯಮಿತವಾಗಿ ಪರಿಶೀಲನೆ ಮಾಡುವ ಸರ್ಕಾರಿ ಸಂಸ್ಥೆಯಿದೆ. ನಮ್ಮಿಂದ ಬೆಲ್ಲ ಖರೀದಿ ಮಾಡಿದವರು ಲ್ಯಾಬೋರೇಟರಿಯಲ್ಲಿ ಪರೀಕ್ಷೆ ಮಾಡುತ್ತಾರೆ. ಇವೆಲ್ಲ ಏಕೆ ಹೇಳುತ್ತಿದ್ದೇನೆಂದರೆ, ಸಾವಯವ ಬೆಲ್ಲಕ್ಕೆ ಬೆಲೆ ಜಾಸ್ತಿ ಎಂಬುದು ಜನರ ಮನಸ್ಸಿನಲ್ಲಿದೆ. ಅದರ ಹಿಂದೆ ಇರುವ ಶ್ರಮ ಯಾರಿಗೂ ಗೊತ್ತಿಲ್ಲ. ಖರ್ಚಿನ ಬಗ್ಗೆಯೂ ತಿಳಿದಿರುವುದಿಲ್ಲ. ಕಚ್ಚಾ ಪದಾರ್ಥವೇ ನಮಗೆ ದುಬಾರಿ ಆಗಿಬಿಡುತ್ತದೆ. ಜತೆಗೆ ಕಡ್ಡಾಯವಾಗಿ ಪಾಲಿಸಲೇ ಬೇಕಾದ ನಿಯಮಗಳಿವೆ.

ಸಾವಯವ ಡೇರಿ ಉತ್ಪನ್ನಗಳಿಗೂ ಭಾರೀ ಬೇಡಿಕೆಯಿದೆ

ಸಾವಯವ ಡೇರಿ ಉತ್ಪನ್ನಗಳಿಗೂ ಭಾರೀ ಬೇಡಿಕೆಯಿದೆ

ಈಚೆಗೆ ಉಡುಪಿ ಕೃಷ್ಣ ಮಠದಲ್ಲಿ ಸಕ್ಕರೆ, ಮೈದಾ ಹಿಟ್ಟು ಬಳಸುವುದನ್ನು ಪೂರ್ಣ ನಿಲ್ಲಿಸಲಾಗಿದೆ. ಈ ಎರಡೂ ಆರೋಗ್ಯಕ್ಕೆ ಹಾನಿಕರ. ಇನ್ನು ಮುಂದಿನ ಎರಡು ದಶಕದೊಳಗೆ ಇಡೀ ದೇಶದಲ್ಲಿ ಸಾವಯವ ಕ್ರಾಂತಿ ಆಗಲಿದೆ. ಸಾವಯವ ಉತ್ಪನ್ನಗಳ ಕ್ಷೇತ್ರಕ್ಕೆ ಕಾಲಿಡಲು ಸರಿಯಾದ ಸಮಯ ಇದು. ಸ್ವಂತ ಬಂಡವಾಳ ಇದ್ದಲ್ಲಿ ಆಗ ಲಾಭದ ಪ್ರಮಾಣವೇ ಬೇರೆ. ಇನ್ನು ಸಾಲ ತಂದು ಉದ್ಯಮದಲ್ಲಿ ಹಣ ತೊಡಗಿಸಿದರೆ ಆಗಿನ ಸನ್ನಿವೇಶ ಬೇರೆ. ಈ ಉದ್ಯಮಕ್ಕೆ ಕಾಲಿರಿಸಿದರೆ ಒಂದು ವರ್ಷಕ್ಕೆ ಆಗುವಷ್ಟು ವರ್ಕಿಂಗ್ ಕ್ಯಾಪಿಟಲ್ ಇರುವಂತೆ ನೋಡಿಕೊಂಡು, ಮುಂದಕ್ಕೆ ಹೆಜ್ಜೆ ಇಡಬೇಕು. ಕಬ್ಬು ಬೆಳೆಯುವ ಪ್ರದೇಶಕ್ಕೆ ಹತ್ತಿರದಲ್ಲಿಯೇ ಫ್ಯಾಕ್ಟರಿ ಇರಬೇಕು. ಇದರ ಜತೆಗೆ ಕಿರು ಧಾನ್ಯ, ಸಾವಯವ ಡೇರಿ ಉತ್ಪನ್ನಗಳ ಮಾರಾಟವನ್ನೂ ಶುರು ಮಾಡಿದರೆ ಮತ್ತೂ ಉತ್ತಮ. ಹಾಲು, ತುಪ್ಪ ಇತ್ಯಾದಿಗೂ ಬಹಳ ಬೇಡಿಕೆ ಇದೆ. ರಿಯಲ್ ಎಸ್ಟೇಟ್ ನಲ್ಲಿ ಇಷ್ಟು ಬಂಡವಾಳ ಹೂಡಿದರೆ ಸುಲಭವಾಗಿ ಹಣ ಮಾಡಬಹುದು ಎನ್ನುವವರಿದ್ದಾರೆ. ನೋಟು ನಿಷೇಧದ ನಂತರ ಆ ವಲಯದ ಸ್ಥಿತಿಯೇ ಬೇರೆ ಆಗಿದೆ. ಈಗ ಈ ಬಿಜಿನೆಸ್ ಗೆ ಬರಲು ಸರಿಯಾದ ಕಾಲ ಎಂಬುದು ನನ್ನ ಅಭಿಪ್ರಾಯ ಎಂದರು ವೆಂಕಟೇಶ್ ಕುಲಕರ್ಣಿ.

English summary

How To Start Organic Jaggery Business? Capital, Profit And Other Details

Organic Jaggery business complete details in Kannada. Capital, profit and other required information explained.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more