ಪ್ರಧಾನ ಮಂತ್ರಿ ಜನ ಧನ ಖಾತೆ ಠೇವಣಿ 1 ಲಕ್ಷ ಕೋಟಿ ದಾಟಲಿದೆ
ದೇಶದ ಪ್ರತಿಯೊಬ್ಬ ಪ್ರಜೆಗೂ ಬ್ಯಾಂಕಿಂಗ್ ಸೇವೆ ಸಿಗುವಂತಾಗಬೇಕು ಎಂಬ ಧ್ಯೇಯದೊಂದಿಗೆ 2014 ರ ಆಗಸ್ಟ್ 28 ರಂದು ಪ್ರಧಾನ ಮಂತ್ರಿ ಜನ ಧನ ಯೋಜನೆಯನ್ನು ಆರಂಭಿಸಲಾಗಿತ್ತು.

ಪ್ರಧಾನ ಮಂತ್ರಿ ಜನ ಧನ ಯೋಜನೆಯಡಿ ತೆರೆಯಲಾದ ಬ್ಯಾಂಕು ಖಾತೆಗಳಲ್ಲಿ ಜಮೆಯಾದ ಠೇವಣಿ ಮೊತ್ತ ಶೀಘ್ರದಲ್ಲೇ ರೂ. 1 ಲಕ್ಷ ಕೋಟಿ ಗಡಿ ದಾಟಲಿದೆ. ದೇಶದಾದ್ಯಂತ ಒಟ್ಟು 35.39 ಕೋಟಿ ಜನ ಧನ ಖಾತೆಗಳಿದ್ದು, 27.89 ಕೋಟಿ ಖಾತೆದಾರರಿಗೆ ರುಪೇ ಡೆಬಿಟ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ. 'ಪ್ರಧಾನ ಮಂತ್ರಿ ಜನ ಧನ ಖಾತೆ' ಯಾಕೆ ತೆರೆಯಬೇಕು?
2018 ರ ಆಗಸ್ಟ್ ತಿಂಗಳಲ್ಲಿ ಅಪಘಾತ ವಿಮೆಯನ್ನು ರೂ. 1 ಲಕ್ಷದಿಂದ ರೂ. 2 ಲಕ್ಷಗಳಿಗೆ ಏರಿಕೆ ಮಾಡಲಾಗಿದೆ. ಓವರ್ ಡ್ರಾಫ್ಟ್ ಸೌಲಭ್ಯವನ್ನು ರೂ. 10,000ಕ್ಕೆ ಹೆಚ್ಚಿಸಲಾಗಿದೆ. ವಿಶೇಷವೆಂದರೆ ಶೇ. 50 ಕ್ಕೂ ಹೆಚ್ಚು ಜನ ಧನ ಖಾತೆದಾರರು ಮಹಿಳೆಯರಾಗಿದ್ದಾರೆ. ಶೇ. 59 ರಷ್ಟು ಖಾತೆಗಳು ಗ್ರಾಮಾಂತರ ಪ್ರದೇಶದ ಜನರಿಗೆ ಸೇರಿವೆ ಎಂಬುದು ವಿಶೇಷ.
ಜನ ಧನ ಖಾತೆ ತೆರೆದ ಗ್ರಾಹಕರು ಹೆಚ್ಚು ಉಳಿತಾಯ ಮಾಡತೊಡಗಿದ್ದಾರೆ ಎಂದು ಎಸ್ಬಿಐ ಆರ್ಥಿಕ ಸಂಶೋಧನಾ ವಿಭಾಗದ ಅಧ್ಯಯನ ಹೇಳಿದೆ. ಇತ್ತೀಚಿನ ಸರ್ಕಾರದ ಮಾಹಿತಿಯ ಪ್ರಕಾರ, ಜನ ಧನ ಖಾತೆಗಳ ಪ್ರಮಾಣ ಕ್ರಮೇಣವಾಗಿ ಏರುತ್ತಿದ್ದು, ಏಪ್ರಿಲ್ 3 ರ ವೇಳೆಗೆ ಒಟ್ಟು ಮೊತ್ತ 97,665.66 ಕೋಟಿ ರೂಪಾಯಿಗಳಷ್ಟಿತ್ತು.