ಉದ್ಯೋಗಿಗಳಿಗೆ 80 ಲಕ್ಷ ರೂ ಬೋನಸ್ ಘೋಷಿಸಿದ ಬಾಸ್!
ವಿಶ್ವದ ಹಲವಾರು ದೇಶಗಳಲ್ಲಿ ಹಣದುಬ್ಬರ ಕಾರಣದಿಂದಾಗಿ ಪ್ರಮುಖ ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿದೆ. ಟ್ವಿಟ್ಟರ್‌ನಿಂದ ಹಿಡಿದು ಎಚ್‌ಪಿ ಸಂಸ್ಥೆಯವರೆಗೂ ಸಾವಿರಾರು ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಆದರೆ ಈ ನಡುವೆ ಈ ಲೇಡಿ ಬಾಸ್ ಒಬ್ಬರು ತಮ್ಮ ಉದ್ಯೋಗಿಗಳಿಗೆ 80 ಲಕ್ಷ ರೂಪಾಯಿ ಬೋನಸ್ ಘೋಷಣೆ ಮಾಡಿದ್ದಾರೆ.
ಹೌದು, ಬೇರೆ ಬೇರೆ ದೇಶಗಳಲ್ಲಿ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಬೋನಸ್ ಅನ್ನು ನೀಡಲಾಗುತ್ತದೆ. ಭಾರತದಲ್ಲಿ ದೀಪಾವಳಿ ಸಂದರ್ಭದಲ್ಲಿ ಬೋನಸ್ ಅನ್ನು ನೀಡಿದರೆ, ಇನ್ನು ಕೆಲವು ದೇಶಗಳಲ್ಲಿ ಕ್ರಿಸ್‌ಮಸ್, ಹೊಸ ವರ್ಷ, ಈದ್ ಸಂದರ್ಭದಲ್ಲಿ ಬೋನಸ್ ನೀಡಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಕಂಪನಿಯೊಂದರ ಮುಖ್ಯಸ್ಥೆ ತನ್ನ 10 ಉದ್ಯೋಗಿಗಳಿಗೆ ತಲಾ 80 ಲಕ್ಷ ರೂಪಾಯಿ ಕ್ರಿಸ್ಮಸ್ ಬೋನಸ್ ಅನ್ನು ಘೋಷಿಸಿದ್ದಾರೆ.
ಈ ಬಾಸ್ ಉದ್ಯೋಗಿಗಳಿಗೆ ಭಾರೀ ಪ್ರಮಾಣದಲ್ಲಿ ಬೋನಸ್ ನೀಡುವುದಾಗಿ ಘೋಷಣೆ ಮಾಡಿರುವುದು ವಿಶ್ವದಾದ್ಯಂತ ಸುದ್ದಿಯಾಗುತ್ತಿದೆ. ಪ್ರಮುಖವಾಗಿ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿರುವ ಈ ಬೆಳವಣಿಗೆಯು ಅಧಿಕ ಪ್ರಾಮುಖ್ಯತೆಯನ್ನು ಪಡೆದಿದೆ. ಇನ್ನು ಇತ್ತೀಚೆಗೆ ಬಾಸ್ ಒಬ್ಬರು ತಮ್ಮ ಉದ್ಯೋಗಿಗಳಿಗೆ ಉಚಿತ ಡಿಸ್ನಿ ಟ್ರಿಪ್ ಆಫರ್ ನೀಡಿದ್ದರು ಎಂಬುವುದನ್ನು ನಾವಿಲ್ಲಿ ಸ್ಮರಿಸಬಹುದು.

ಈ ಲೇಡಿ ಬಾಸ್ ಯಾರು?
ಈ ಲೇಡಿ ಬಾಸ್ ಆಸ್ಟ್ರೇಲಿಯಾದ ಬಿಲಿಯನರ್‌ಗಳಲ್ಲಿ ಒಬ್ಬರಾಗಿದ್ದು, ಈಕೆಯ ಹೆಸರು ಜೀನಾ ರೈನ್‌ಹಾರ್ಟ್ ಆಗಿದೆ. ಜೀನಾ ರೈನ್‌ಹಾರ್ಟ್ ಗಣಿಗಾರಿಕೆ ಹಾಗೂ ಕೃಷಿಯ ಸಂಸ್ಥೆಯಾದ ಹಾನ್‌ಕಾಕ್ ಪ್ರಾಸ್ಪೆಕ್ಟಿಂಗ್‌ನ ಚೇರ್‌ಮನ್ ಆಗಿದ್ದಾರೆ. ಈ ಕಂಪನಿಯು ಜೀನಾ ರೈನ್‌ಹಾರ್ಟ್‌ನ ತಂದೆಯ ಸಂಸ್ಥೆಯಾಗಿದೆ.
ವರದಿಯ ಪ್ರಕಾರ, ರೈನ್‌ಹಾರ್ಟ್ ಆಸ್ಟ್ರೇಲಿಯಾದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇವರ ನಿವ್ವಳ ಆದಾಯವು 34 ಬಿಲಿಯನ್ ಡಾಲರ್ ಆಗಿದೆ. ಹಾಗೆಯೇ ಈ ಶ್ರೀಮಂತ ಮಹಿಳೆಯು ಸಂಸ್ಥೆಯ ಸಭೆಯನ್ನು ಕರೆದು ದಿಢೀರ್ ಆಗಿ 10 ಹೆಸರುಗಳನ್ನು ಹೇಳಿದ್ದಾರೆ. ಈ 10 ಮಂದಿಗೆ ಕ್ರಿಸ್ಮಸ್ ಬೋನಸ್ ಆಗಿ 100,000 ಯುಎಸ್ ಡಾಲರ್ (82 ಲಕ್ಷ ರೂಪಾಯಿ) ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಈ ಘೋಷಣೆಯು ಎಲ್ಲ ಉದ್ಯೋಗಿಗಳನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಇನ್ನು 80 ಲಕ್ಷ ರೂಪಾಯಿ ಬೋನಸ್ ಅನ್ನು ಪಡೆದ ಉದ್ಯೋಗಿಗಳ ಪೈಕಿ ಓರ್ವ ಉದ್ಯೋಗಿ ಮೂರು ತಿಂಗಳ ಹಿಂದಷ್ಟೆ ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ. ಇನ್ನು ಮಾಹಿತಿ ಪ್ರಕಾರ ಕಳೆದ 12 ತಿಂಗಳಲ್ಲಿ ಮಾಲಕಿಗೆ ಸುಮಾರು 3.3 ಬಿಲಿಯನ್ ಡಾಲರ್ (190 ಬಿಲಿಯನ್ ರೂಪಾಯಿ) ಲಾಭ ಲಭಿಸಿದೆ. ಅದರಿಂದಾಗಿ ಉದ್ಯೋಗಿಗಳಿಗೆ ಈ ಬೋನಸ್ ಅನ್ನು ನೀಡಿದ್ದಾರೆ. ಈ 10 ಉದ್ಯೋಗಿಗಳು ಸಂಸ್ಥೆಯ ಏಳಿಗೆಗಾಗಿ ಉತ್ತಮ ಸೇವೆಯನ್ನು ನೀಡಿದವರಾಗಿದ್ದಾರೆ.