ಪಾನ್ ಜತೆ ಆಧಾರ್ ಲಿಂಕ್ ಕಡ್ಡಾಯ, ಇಲ್ಲವಾದರೆ ಪಾನ್ ನಿಷ್ಕ್ರೀಯ: ಐಟಿ ಇಲಾಖೆ ಎಚ್ಚರಿಕೆ
ಬೆಂಗಳೂರು, ಡಿಸೆಂಬರ್ 11: ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಸಾರ್ವಜನಿಕರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. 2023ರ ಮಾರ್ಚ್ 31ರೊಳಗೆ ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಪಾನ್ ಲಿಂಕ್ ಮಾಡಿಕೊಳ್ಳಿಎಂದು ಆದಾಯ ತೆರಿಗೆ ಇಲಾಖೆ ಕಟ್ಟುನಿಟ್ಟಾಗಿ ಸೂಚಿಸಿದೆ.
ಅದಾಯ ತೆರಿಗೆ ಇಲಾಖೆ ಕಾಯ್ದೆ 1961ರ ಅನ್ವಯ ಆಧಾರ್ ಜೊತೆಗೆ ಪಾನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದರೆ ಈವರೆಗೆ ಸರ್ಕಾರ ಹಲವು ಬಾರಿ ಅವಕಾಶ ನೀಡಿದರೂ ಸಹ ಸಾಕಷ್ಟು ಸಂಖ್ಯೆಯ ಜನರು ಆಧಾರ್ ಜೊತೆಗೆ ಪಾನ್ ಲಿಂಕ್ ಮಾಡಿಕೊಂಡಿಲ್ಲ. ಈ ಕಾರಣಕ್ಕೆ ಇದೀಗ ಮತ್ತೊಮ್ಮೆ ಆದಾಯ ತೆರಿಗೆ ಇಲಾಖೆ ಗಡುವು ವಿಸ್ತರಿಸಿ ಮಹತ್ವದ ಸೂಚನೆ ನೀಡಿದೆ.
2023ರ ಮಾರ್ಚ್ 31ರ ಅಂತಿಮ ದಿನಾಂಕದೊಳಗೆ ನೀವು ಆಧಾರ್ ಮತ್ತು ಪಾನ್ ಲಿಂಕ್ ಮಾಡಿಕೊಳ್ಳದಿದ್ದರೆ ಅವಧಿ ಮುಗಿದ ಬಳಿಕ ಏಪ್ರಿಲ್ 1ರಿಂದ ಪಾನ್ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ. ಈಗಾಗಲೇ ಹಲವು ಬಾರಿ ಗಡುವು ನೀಡಿದ್ದ ಆದಾಯ ತೆರಿಗೆ ಇಲಾಖೆ ಇದೀಗ ಒಂದು ಸಾವಿರ ಪಾವತಿಸಿ ಆಧಾರ್ ಜೊತೆ ಪಾನ್ ಕಾರ್ಡ್ ಲಿಂಗ್ ಮಾಡಲು ಅವಕಾಶ ನೀಡಿದೆ.

ಇ-ಪೋರ್ಟಲ್ ನಲ್ಲಿ ಸ್ವತಃ ಲಿಂಕ್ ಮಾಡಿಕೊಳ್ಳಿ
ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳದಿದ್ದರೆ ಪಾನ್ ಕಾರ್ಡ್ ನಿಷ್ಕ್ರೀಯಗೊಳಿಸಲು ಇಲಾಖೆ ನಿರ್ಧರಿಸಿದೆ. ಪಾನ್ ಕಾರ್ಡ್ ನಿಷ್ಕ್ರೀಯಗೊಂಡರೆ ಬ್ಯಾಂಕ್ ಜೊತೆಗೆ ವಹೀವಾಟು ನಡೆಸುವುದು ಸೇರಿದಂತೆ ಎಲ್ಲ ಹಣಕಾಸು ನಿರ್ವಹಣೆ ಕಾರ್ಯಗಳಿಗೆ ತೊಂದರೆ ಆಗಲಿದೆ.

ಒಂದು ವೇಳೆ ನೀವು ಆಧಾರ್ ಜೊತೆಗೆ ಪಾನ್ ಲಿಂಕ್ ಮಾಡಿಕೊಳ್ಳಲು ಆದಾಯ ತೆರಿಗೆ ಇಲಾಖೆ ಅಧಿಕೃತ ಜಾಲತಾಣವಾಗಿರುವ (ಇಪೋರ್ಟಲ್)ಈ www.eportal.incometax.gov.in ವೆಬ್‌ಸೈಟ್ ಭೇಟಿ ನೀಡಿ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಪಾನ್ ನಂಬರ್ ನಮೂದಿಸಿ ಅಲ್ಲಿನ ಪ್ರಕ್ರಿಯೆ ಪೂರ್ಣಗೊಳಿಸುವ ಮೂಲಕ ಸ್ವತಃ ನೀವೆ ಮೊಬೈಲ್ ನಲ್ಲಿ ಲಿಂಕ್ ಮಾಡಿಕೊಳ್ಳಬಹುದು.