ಹಲೋ ಟ್ಯಾಕ್ಸಿ ಕಂಪೆನಿ ಹೆಸರಲ್ಲಿ 250 ಕೋಟಿ ವಂಚನೆ; ಮಹಿಳೆಯನ್ನು ವಶಕ್ಕೆ ಪಡೆದ ಗೋವಾ ಪೊಲೀಸರು
ಆಪ್ ಆಧಾರಿತ ಟ್ಯಾಕ್ಸಿ ಕಂಪೆನಿಯಲ್ಲಿ ಭಾರೀ ರಿಟರ್ನ್ಸ್ ನೀಡುವುದಾಗಿ ನಂಬಿಸಿ, 900 ಮಂದಿಯನ್ನು ವಂಚಿಸಿ, 250 ಕೋಟಿ ರುಪಾಯಿಯನ್ನು ಮೋಸ ಮಾಡಿದ ಆರೋಪದಲ್ಲಿ 47 ವರ್ಷದ ಮಹಿಳೆಯನ್ನು ದಕ್ಷಿಣ ಗೋವಾದಲ್ಲಿ ಬಂಧಿಸಲಾಗಿದೆ. 2019ರಲ್ಲಿ ದಾಖಲಾದ ಪೊಲೀಸ್ ದೂರಿನ ಪ್ರಕಾರ, ಆ ಮಹಿಳೆ ಹಾಗೂ ಆಕೆಯ ವ್ಯಾಪಾರ ಭಾಗೀದಾರರಾದ ಸರೋಜ್ ಮಹಾಪಾತ್ರ, ರಾಜೇಶ್ ಮಹ್ತೋ, ಸುಂದರ್ ಭಾಟಿ ಹಾಗೂ ಹರೀಶ್ ಭಾಟಿ ಸೇರಿ ವಂಚನೆ ಮಾಡಿದ್ದಾರೆ.
"ಹಲೋ ಟ್ಯಾಕ್ಸಿ" ಎಂಬ ಆ ಮಹಿಳೆಯ ಕಂಪೆನಿ ಹೆಸರಲ್ಲಿ ಜನರಿಂದ ಹೂಡಿಕೆ ಮಾಡಿಸಿದ್ದಾರೆ. ಅವರಿಗೆ ತಿಂಗಳ ಆಧಾರದಲ್ಲಿ 200 ಪರ್ಸೆಂಟ್ ತನಕ ಬಡ್ದಿ ನೀಡುವ ಭರವಸೆ ನೀಡಿದ್ದಾರೆ. ಇವರ ಮಾತನ್ನು ನಂಬಿಕೊಂಡು 900ಕ್ಕೂ ಹೆಚ್ಚು ಮಂದಿ ಹೂಡಿಕೆ ಮಾಡಿದ್ದಾರೆ. ಈ ಕಂಪೆನಿಗೆ ಮಹಿಳೆಯ ಜತೆಗೆ ಇತರ ನಾಲ್ವರು ಸಹ ನಿರ್ದೇಶಕರು ಇದ್ದವರು 250 ಕೋಟಿ ರುಪಾಯಿಯೊಂದಿಗೆ ಪರಾರಿ ಆಗಿದ್ದರು.
ಹಣ ಹೂಡಿಕೆಗೂ ಮುನ್ನ ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ 8 ಪ್ರಶ್ನೆಗಳು
ಜಂಟಿ ಪೊಲೀಸ್ ಕಮಿಷನರ್ ಒ.ಪಿ. ಮಿಶ್ರಾ ಮಾತನಾಡಿ, ತನಿಖೆ ವೇಳೆ ಗೊತ್ತಾಗಿದ್ದೇನೆಂದರೆ, ಕಂಪೆನಿಯ ನಿರ್ದೇಶಕರು ಈ ಸಂತ್ರಸ್ತರಿಗೆ ದೊಡ್ಡ ಮಟ್ಟದ ರಿಟರ್ನ್ಸ್ ಆಸೆ ತೋರಿಸಿ, ಹಲೋ ಟ್ಯಾಕ್ಸಿ ಕಂಪೆನಿಯಲ್ಲಿ ಹೂಡಿಕೆ ಮಾಡಿಸುತ್ತಿದ್ದರು. ಆರಂಭದಲ್ಲಿ ವಿಶ್ವಾಸ ಗಳಿಸಬೇಕು ಎಂಬ ಕಾರಣಕ್ಕೆ ರಿಟರ್ನ್ಸ್ ನೀಡಿದ್ದಾರೆ. ಆ ನಂತರ ಯಾವಾಗ ದೊಡ್ಡ ಮೊತ್ತ ಸಂಗ್ರಹವಾಯಿತೋ ಹಣ ಪಾವತಿಯನ್ನು ನಿಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಆರೋಪಿಗಳು ಪದೇಪದೇ ತಮ್ಮ ಕಚೇರಿ ಬದಲಾಯಿಸಿದ್ದಾರೆ. ಆರಂಭದಲ್ಲಿ ಕಂಪೆನಿಯು ಗಾಜಿಯಾಬಾದ್ ನಲ್ಲಿ ಇತ್ತು. ಕೆಲವು ತಿಂಗಳ ನಂತರ ಪ್ರತಾಪ್ ಗಂಜ್ ನ ಕೈಗಾರಿಕಾ ಪ್ರದೇಶ ಹಾಗೂ ಅಲ್ಲಿಂದ ರೋಹಿಣಿ, ಸೆಕ್ಟರ್ 16ಕ್ಕೆ ಸ್ಥಳಾಂತರ ಮಾಡಿದ್ದಾರೆ ಎಂದು ಮಿಶ್ರಾ ತಿಳಿಸಿದ್ದಾರೆ.
ಇನ್ನು ಕಂಪೆನಿಯ ಬ್ಯಾಂಕ್ ಖಾತೆಯಲ್ಲಿ ಇದ್ದ 3,27,48,495 ರುಪಾಯಿಯನ್ನು ಸ್ಥಗಿತ ಮಾಡಲಾಗಿದೆ. ಇನ್ನು ವಂಚನೆ ಮಾಡಿದ್ದ ಹಣದಲ್ಲಿ ಖರೀದಿಸಿದ್ದ 3.5 ಕೋಟಿ ಮೌಲ್ಯದ 60 ಕಾರುಗಳನ್ನು ನೋಯ್ಡಾದಲ್ಲಿ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಮಹಿಳೆಯ ಗುರುತನ್ನು ಪೊಲೀಸರು ಬಹಿರಂಗ ಮಾಡಿಲ್ಲ. ಕಂಪೆನಿಯ ನಾಲ್ವರು ನಿರ್ದೇಶಕರಲ್ಲಿ ಒಬ್ಬನಾದ ಮಹ್ತೋನನ್ನು ಆಗಸ್ಟ್ 23ರಂದು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಶೋಧ ಮುಂದುವರಿದಿದೆ.