ಅತಿಹೆಚ್ಚು ಗೇಮರ್‌ಗಳು; ವಿಶ್ವದಲ್ಲೇ ಭಾರತ ನಂಬರ್ 2; ಗೇಮಿಂಗ್ ಕ್ಷೇತ್ರದತ್ತ ಒಂದು ನೋಟ
ವಿಡಿಯೋ ಗೇಮ್ ಯಾರಿಗೆ ಇಷ್ಟವಾಗಲ್ಲ ಹೇಳಿ..! ಸಣ್ಣ ಮಕ್ಕಳಿಗೆ ಮೊಬೈಲ್ ಕೊಟ್ಟರೆ ಮೊದಲು ನೋಡುವುದೇ ಯೂಟ್ಯೂಬ್ ಅಥವಾ ಗೇಮ್. ಕೋವಿಡ್ ಬಂದು ಆನ್‌ಲೈನ್ ಕ್ಲಾಸ್‌ಗಳಿಗೆಂದು ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ಕೊಟ್ಟಿದ್ದೇ ಬಂತು ಗೇಮಿಂಗ್ ಕ್ಷೇತ್ರ ಹುಲುಸಾಗಿ ಬೆಳೆಯತೊಡಗಿದಂತಿದೆ. ಭಾರತ ಈಗ ವಿಶ್ವದ ಪ್ರಮುಖ ಗೇಮಿಂಗ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಭಾರತದಲ್ಲಿ ಈಗ 39.64 ಕೋಟಿ ಗೇಮರ್‌ಗಳಿದ್ದಾರೆ. ಚೀನಾ ಬಿಟ್ಟರೆ ಭಾರತದಲ್ಲೇ ಅತಿ ಹೆಚ್ಚು ಗೇಮರ್‌ಗಳಿರುವುದು.
ಗೇಮಿಂಗ್ ಮಾರುಕಟ್ಟೆಯಾಗಿಯೂ ಭಾರತ ಗಮನ ಸೆಳೆಯತೊಡಗಿದೆ. ನೈಕೋ ಪಾರ್ಟ್ನರ್ಸ್ ವರದಿ ಪ್ರಕಾರ ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಗೇಮಿಂಗ್ ಮಾರ್ಕೆಟ್‌ಗಳಲ್ಲಿ ಒಂದೆನಿಸಿದೆ. ನೈಕೋ ಪಾರ್ಟ್ನರ್ ಎಂಬುದು ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ವಿಡಿಯೋ ಗೇಮ್, ಇಸ್ಪೋರ್ಟ್ಸ್ ಮತ್ತು ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ಅಧ್ಯಯನ ನಡೆಸುವ ಒಂದು ಮಾರ್ಕೆಟ್ ರೀಸರ್ಚ್ ಸಂಸ್ಥೆಯಾಗಿದೆ. ಇದು ಏಷ್ಯಾ-10 ಗೇಮ್ಸ್ ಮಾರ್ಕೆಟ್ ಎಂದು ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಭಾರತದ ಗೇಮಿಂಗ್ ಕ್ಷೇತ್ರದ ಬಗ್ಗೆ ಬೆಳಕು ಚೆಲ್ಲಿದೆ.
ಭಾರತ, ಚೀನೀ ಥೈಪೆ (ತೈವಾನ್), ಇಂಡೋನೇಷ್ಯಾ, ಜಪಾನ್, ಕೊರಿಯಾ ಮಲೇಷ್ಯಾ, ಫಿಲಿಪ್ಪೈನ್ಸ್, ಸಿಂಗಾಪುರ್, ಥಾಯ್ಲೆಂಡ್ ಮತ್ತು ವಿಯೆಟ್ನಾಂ, ಈ 10 ದೇಶಗಳ ಗೇಮಿಂಗ್ ಮಾರುಕಟ್ಟೆ ಬಗ್ಗೆ ನೈಕೋ ಪಾರ್ಟ್ನರ್ಸ್ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ. ಈ ಏಷ್ಯಾ-10 ದೇಶಗಳ ಪೈಕಿ ಭಾರತದಲ್ಲೇ ಗೇಮಿಂಗ್ ಮಾರುಕಟ್ಟೆ ಅತಿವೇಗವಾಗಿ ಬೆಳೆಯುತ್ತಿದೆ. ಈ 10 ದೇಶಗಳಲ್ಲಿರುವ ಒಟ್ಟಾರೆ ಗೇಮರ್‌ಗಳ ಪೈಕಿ ಭಾರತದಲ್ಲೇ ಅರ್ಧದಷ್ಟು ಮಂದಿ ಇದ್ದಾರೆ. ಇದರಲ್ಲಿ ಕಂಪ್ಯೂಟರ್‌ಗಲ್ಲಿ ಗೇಮ್ ಆಡುವವರು ಮತ್ತು ಮೊಬೈಲ್‌ಗಳಲ್ಲಿ ಗೇಮ್ ಆಡುವವರು ಒಳಗೊಂಡಿದ್ದಾರೆ.

ವೇಗವಾಗಿ ಬೆಳೆಯುತ್ತಿರುವ ಭಾರತ
ಗೇಮಿಂಗ್ ಉದ್ಯಮಕ್ಕೆ ಭಾರತ ಬಹಳ ದೊಡ್ಡ ಮಾರುಕಟ್ಟೆಯಾದರೂ ಆದಾಯದ ವಿಚಾರದಲ್ಲಿ ಇನ್ನೂ ಆರಂಭಿಕ ಹಂತ ಇದೆ. ನೈಕೋ ಪಾರ್ಟ್ನರ್ಸ್‌ನ ಏಷ್ಯಾ-10 ದೇಶಗಳ ಗೇಮಿಂಗ್ ಮಾರುಕಟ್ಟೆಯಿಂದ ದೊರಕುವ ಒಟ್ಟಾರೆ ಆದಾಯದ ಪೈಕಿ ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳೆರಡರಿಂದಲೇ ಶೇ. 77ರಷ್ಟು ಆದಾಯ ಬರುತ್ತದೆ. ಆದರೆ, ಆದಾಯದ ವಿಚಾರದಲ್ಲಿ ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ. 2021-22ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಗೇಮಿಂಗ್ ಉದ್ಯಮಕ್ಕೆ ಬಂದಿರುವ ಆದಾಯ ಶೇ. 31.9ರಷ್ಟು ಹೆಚ್ಚಿರುವುದು ತಿಳಿದುಬಂದಿದೆ.
ನೈಕೋ ಪಾರ್ಟ್ನರ್ಸ್ ವರದಿ ಪ್ರಕಾರ ಈ 10 ದೇಶಗಳಲ್ಲಿ ಗೇಮಿಂಗ್ ಉದ್ಯಮಕ್ಕೆ 2022ರ ಕ್ಯಾಲೆಂಡರ್ ವರ್ಷದಲ್ಲಿ 35.9 ಬಿಲಿಯನ್ ಡಾಲರ್ (ಸುಮಾರು 2.93 ಲಕ್ಷ ಕೋಟಿ ರೂ) ಆದಾಯ ಬಂದಿದೆ. ಮುಂದಿನ ಐದು ವರ್ಷದೊಳಗೆ ಈ 10 ದೇಶಗಳಲ್ಲಿ ಗೇಮಿಂಗ್ ಉದ್ಯಮ ವರ್ಷಕ್ಕೆ 41.4 ಬಿಲಿಯನ್ ಡಾಲರ್ ಆದಾಯ ಪಡೆದುಕೊಳ್ಳುವ ಸಂಭಾವ್ಯತೆ ಇದೆ. ಸದ್ಯ ಭಾರತದಲ್ಲಿನ 50 ಕೋಟಿ ಗೇಮರ್ ಸೇರಿ ಈ 10 ದೇಶಗಳಲ್ಲಿ ಒಟ್ಟು 78.87 ಕೋಟಿ ಗೇಮರ್ಸ್ ಇದ್ದಾರೆ. 2026ರಷ್ಟರಲ್ಲಿ ಇವರ ಸಂಖ್ಯೆ 106.36 ಕೋಟಿ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.
ಚೀನಾ, ಅಮೆರಿಕಾ ಪಾತ್ರ
ಗೇಮರ್‌ಗಳ ಸಂಖ್ಯೆ, ಗೇಮಿಂಗ್ ಮಾರುಕಟ್ಟೆ ವಿಷಯದಲ್ಲಿ ಚೀನಾ ವಿಶ್ವದಲ್ಲೇ ನಂಬರ್ ಒನ್ ಎನಿಸಿದೆ. ಆದರೆ, ನೈಕೋ ಪಾರ್ಟ್ನರ್ಸ್ ಸಂಸ್ಥೆ ತನ್ನ ಸಮೀಕ್ಷೆ ಮತ್ತು ಅಧ್ಯಯನದಲ್ಲಿ ಚೀನಾವನ್ನು ಒಳಗೊಂಡಿಲ್ಲ. ಚೀನಾವನ್ನೂ ಅದರ ವ್ಯಾಪ್ತಿಗೆ ತೆಗೆದುಕೊಂಡರೆ ಏಷ್ಯಾದ ಗೇಮಿಂಗ್ ಮಾರುಕಟ್ಟೆ ಬಹಳ ಅಗಾಧ ಎನಿಸುತ್ತದೆ.

ಇನ್ನು, ವಿಶ್ವದ ಅತಿದೊಡ್ಡ ಗೇಮಿಂಗ್ ಉದ್ಯಮ ನೆಲಸಿರುವುದು ಅಮೆರಿಕದಲ್ಲೇ. 2 ಸಾವಿರಕ್ಕೂ ಹೆಚ್ಚು ಕಂಪನಿಗಳು ಈ ಉದ್ಯಮದಲ್ಲಿವೆ. 2,20,000 ಉದ್ಯೋಗಿಗಳಿದ್ದಾರೆಂದು ವಿಕಿಪೀಡಿಯಾದಲ್ಲಿ ಮಾಹಿತಿ ಇದೆ.
ಏನಿದು ಗೇಮಿಂಗ್ ಕ್ಷೇತ್ರ?
ವಿಡಿಯೋ ಗೇಮ್‌ಗಳ ಲೋಕ ಇದು. ಹಲವು ಕಂಪನಿಗಳು ಗೇಮ್ ಕನ್ಸೋಲ್‌ಗಳ ಮೂಲಕ ವಿಡಿಯೋ ಗೇಮ್‌ಗಳನ್ನು ಮಾರುತ್ತವೆ. ಕಂಪ್ಯೂಟರುಗಳಲ್ಲಿ ಈ ಗೇಮ್‌ಗಳನ್ನು ಆಡುವಾಗ ಸಿಗುವ ಅನುಭವವೇ ಅದ್ಭುತ. ಅಂತೆಯೇ ಪಿಸಿಗಳಲ್ಲಿ ಪ್ಲೇಸ್ಟೇಷನ್ ಮೂಲಕ ಆಡಲಾಗುವ ಗೇಮ್‌ಗಳ ಜನಪ್ರಿಯತೆ ಬಹಳ ಹೆಚ್ಚಾಗಿ ಹೋಗಿದೆ. ಹೊಸ ಹೊಸ ಆವಿಷ್ಕಾರಗಳು ಗೇಮಿಂಗ್ ಅನುಭವವನ್ನು ಹಲವು ಪಟ್ಟು ಹೆಚ್ಚಿಸಿವೆ. 4ಜಿ, 5ಜಿ ಬಂದ ಬಳಿಕ ಗೇಮರ್‌ಗಳಿಗೆ ಕಿಚ್ಚು ಇನ್ನಷ್ಟು ಹೆಚ್ಚಿದೆ.
ಸ್ಮಾರ್ಟ್‌ಫೋನ್ ಉದ್ಯಮ ಬೆಳೆದಂತೆಲ್ಲಾ ಗೇಮಿಂಗ್ ಉದ್ಯಮವೂ ಬೆಳೆಯುತ್ತಿದೆ. ಸೇರ್ಪಡೆಯಾಗುತ್ತಿರುವ ಹೊಸ ಹೊಸ ಗೇಮರ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಸ್ಮಾರ್ಟ್‌ಫೋನ್‌ಗಳ ಮೂಲಕವೂ ಗೇಮಿಂಗ್ ಉದ್ಯಮಕ್ಕೆ ಬಹಳಷ್ಟು ಆದಾಯ ಬರುತ್ತಿದೆ.
ವಿಆರ್ ಗೇಮ್‌ಗಳು
ಚೀನಾದ ವೀಚ್ಯಾಟ್ ಆ ದೇಶದಲ್ಲಿ ಮಲ್ಟಿಪ್ಲಾಟ್‌ಫಾರ್ಮ್ ತಾಣವಾಗಿ ರೂಪುಗೊಂಡಿದೆ. ಅದರಲ್ಲಿ ವಿಡಿಯೋ ಗೇಮ್‌ಗಳು ಬಹಳ ಜನರನ್ನು ಸೆಳೆದಿವೆ. ವೀಚ್ಯಾಟ್‌ನಲ್ಲಿ 100 ಕೋಟಿ ಚೀನೀಯರು ಗೇಮ್ ಆಡುತ್ತಾರೆ. ಕಾಲ್ ಆಫ್ ಡ್ಯೂಟಿ ಇತ್ಯಾದಿ ಜನಪ್ರಿಯ ಗೇಮ್‌ಗಳನ್ನು ತಯಾರಿಸಿದ ಟೆನ್ಸೆಂಟ್ ಹೋಲ್ಡಿಂಗ್ಸ್ ಚೀನಾದ ಅತಿದೊಡ್ಡ ಗೇಮ್ ತಯಾರಕ ಸಂಸ್ಥೆಯಾಗಿದೆ.
ಅಮೆರಿಕದ ಮೈಕ್ರೋಸಾಫ್ಟ್, ನಿಂಟೆಂಡೋ, ಸೋನಿ, ಎನ್‌ವಿಡಿಯಾ ಕಾರ್ಪೊರೇಷನ್, ರೋವಿಯೋ ಎಂಟರ್ಟೈನ್ಮೆಂಟ್ ಕಾರ್ಪೊರೇಶನ್, ವಾಲ್ವ್ ಕಾರ್ಪೊರೇಷನ್ ಮೊದಲಾದ ಸಂಸ್ಥೆಗಳು ವರ್ಚುವಲ್ ರಿಯಾಲಿಟಿ ಗೇಮ್‌ಗಳ ಆವಿಷ್ಕಾರಕ್ಕೆ ತೊಡಗಿವೆ. ಈಗಾಗಲೇ ಬಹಳಷ್ಟು ವರ್ಚುವಲ್ ರಿಯಾಲಿಟಿ ಗೇಮ್‌ಗಳು ಜನಪ್ರಿಯತೆ ಗಳಿಸಿವೆ. ಫೇಸ್‌ಬುಕ್ ಮಾಲೀಕ ಮೆಟಾ ಪ್ಲಾಟ್‌ಫಾರ್ಮ್ಸ್ ಕೂಡ ವಿಆರ್ ಗೇಮ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ.