ತಕ್ಷಣದಿಂದ ಜಾರಿಗೆ ಬರುವಂತೆ ಗೋಧಿ ರಫ್ತು ನಿಷೇಧ
ದೇಶದ ಒಟ್ಟಾರೆ ಆಹಾರ ಭದ್ರತೆಯನ್ನು ನಿರ್ವಹಿಸಲು ಸರ್ಕಾರವು ಗೋಧಿ ರಫ್ತನ್ನು ಈ ಕೂಡಲೇ ಜಾರಿಗೆ ಬರುವಂತೆ ನಿರ್ಬಂಧಿಸಿದೆ. ದೇಶದಲ್ಲಿ ಆಹಾರ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಪ್ರಯತ್ನದಲ್ಲಿ ಸರ್ಕಾರವು "ನಿಷೇಧಿತ" ವರ್ಗದ ಅಡಿಯಲ್ಲಿ ಗೋಧಿ ರಫ್ತನ್ನು ತಂದಿದೆ.
ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಶುಕ್ರವಾರ ಸಂಜೆ ಈ ಬಗ್ಗೆ ಆದೇಶ ಹೊರಡಿಸಿದೆ. ಮೇ ಅಥವಾ ಅದಕ್ಕೂ ಮೊದಲು ಐಎಲ್‌ಒಸಿ ಅಥವಾ ರಫ್ತಿನ ಒಪ್ಪಂದ ನಡೆದಿದ್ದರೆ ಮಾತ್ರ ಮೇ 13ರ ಒಳಗೆ ರಫ್ತಿಗೆ ಅವಕಾಶ ನೀಡಲಾಗುವುದು. ಇಲ್ಲವಾದರೆ ಗೋಧಿ ರಫ್ತಿಗೆ ಅವಕಾಶವಿಲ್ಲ ಎಂದು ಅಧಿಸೂಚನೆಯಲ್ಲಿ ಉಲ್ಲೇಖ ಮಾಡಲಾಗಿದೆ.
ದೇಶದಲ್ಲಿ ಆಹಾರ ಹಣದುಬ್ಬರ ಹೆಚ್ಚಾಗಲು ಕಾರಣ ಗೊತ್ತಾ?
ಇತರ ದೇಶಗಳಿಗೆ ತಮ್ಮ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು ಮತ್ತು ಅವರ ಸರ್ಕಾರಗಳ ಕೋರಿಕೆಯ ಆಧಾರದ ಮೇಲೆ ಕೇಂದ್ರ ಸರ್ಕಾರವು ನೀಡುವ ಅನುಮತಿಯ ಆಧಾರದ ಮೇಲೆ ರಫ್ತು ಮಾಡಲು ಸಹ ಅನುಮತಿಸಲಾಗುವುದು ಎಂದು ಕೂಡಾ ಉಲ್ಲೇಖಿಸಲಾಗಿದೆ.

ಒಂಬತ್ತು ದೇಶಗಳಿಗೆ ವ್ಯಾಪಾರ ನಿಯೋಗ
ಈ ನಡುವೆ 2022-23ರಲ್ಲಿ 10 ಮಿಲಿಯನ್ ಟನ್ ಧಾನ್ಯವನ್ನು ರಫ್ತು ಮಾಡುವ ಗುರಿಯನ್ನು ಹೊಂದಿರುವುದರಿಂದ ಗೋಧಿ ಸಾಗಣೆಯನ್ನು ಹೆಚ್ಚಿಸುವ ಸಾಧ್ಯತೆಗಳನ್ನು ಪರಿಶೀಲನೆ ಮಾಡಲು ಭಾರತವು ಮೊರಾಕೊ, ಟುನೀಶಿಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಒಂಬತ್ತು ದೇಶಗಳಿಗೆ ವ್ಯಾಪಾರ ನಿಯೋಗಗಳನ್ನು ಕಳುಹಿಸಿದೆ.
ವಾಣಿಜ್ಯ ಸಚಿವಾಲಯವು ವಾಣಿಜ್ಯ, ಹಡಗು ಮತ್ತು ರೈಲ್ವೆ ಸೇರಿದಂತೆ ವಿವಿಧ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಗೋಧಿ ರಫ್ತಿನ ಕಾರ್ಯಪಡೆಯನ್ನು ಸ್ಥಾಪಿಸಿದೆ. ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಈ ಕಾರ್ಯಪಡೆ ಬರಲಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಗೋಧಿಯ ಬೇಡಿಕೆಯಲ್ಲಿ ಏರಿಕೆ ಕಂಡುಬಂದಿದೆ. ಆದರೆ ಗೋಧಿ ಉತ್ಪಾದನೆ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಈಗಾಗಲೇ ಭಾರತದಲ್ಲಿ ಗೋಧಿಗೆ ಅಧಿಕ ಬೇಡಿಕೆ ಇದೆ. ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಅಂದಾಜಿನ ಪ್ರಕಾರ, ಭಾರತವು 2021-22ರಲ್ಲಿ 7 ಮಿಲಿಯನ್ ಟನ್ ಗೋಧಿಯನ್ನು ರಫ್ತು ಮಾಡಿದೆ, ಇದರ ಮೌಲ್ಯ ಯುಎಸ್‌ಡಿ 2.05 ಶತಕೋಟಿ ಆಗಿದೆ. ಒಟ್ಟು ಸಾಗಣೆಯಲ್ಲಿ, ಕಳೆದ ಹಣಕಾಸು ವರ್ಷದಲ್ಲಿ ಸುಮಾರು 50 ಪ್ರತಿಶತ ಗೋಧಿಯನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡಲಾಗಿದೆ.